ನಾಟಕದಿಂದಲೇ ಶುರುವಾಯಿತು ಶಿಕ್ಷಣ...

7

ನಾಟಕದಿಂದಲೇ ಶುರುವಾಯಿತು ಶಿಕ್ಷಣ...

Published:
Updated:
Deccan Herald

ಮನೆಗೆಲಸವೆಲ್ಲ ಒಮ್ಮೆ ಮುಗಿಯಿತೆಂದರೆ ಇವರು ತಯಾರಾಗಿ ಕಾರು ಹತ್ತುತ್ತಾರೆ. ಸ್ವತಃ ಡ್ರೈವ್ ಮಾಡಿಕೊಂಡು ಯಾವುದಾದರೂ ಶಾಲೆಯೊಂದರ ಮುಂದೆ ನಿಲ್ಲಿಸುತ್ತಾರೆ. ಸೀದಾ ಮುಖ್ಯಸ್ಥರ ಬಳಿ ಹೋಗಿ ಮಕ್ಕಳಿಗೆ ಇಂಗ್ಲಿಷ್ ಬೇಸಿಕ್ ಪಾಠಗಳನ್ನು ಹೇಳಿಕೊಡುವುದಾಗಿ ಹೇಳುತ್ತಾರೆ. ಇವರ ಪರಿಚಯ ಗೊತ್ತಿದ್ದವರಾರೂ ಇಂಥ ಅವಕಾಶವನ್ನು ಬೇಡ ಎನ್ನಲು ಹೋಗುವುದಿಲ್ಲ. ಕಾರಣ ಇವರ ಪಾಠದ ರೀತಿಯೇ ಅಷ್ಟು ಆಕರ್ಷಕ.

ಶಾಲೆಯೊಂದು ಇವರ ಕಣ್ಣಿಗೆ ಬಿತ್ತೆಂದರೆ ಮುಗಿಯಿತು. ಅಲ್ಲಿ ಹೋಗಿ ಒಂದು ಪಾಠವನ್ನಾದರೂ ಹೇಳದಿದ್ದರೆ ಇವರಿಗೆ ನಿದ್ದೆ ಬರುವುದಿಲ್ಲ. ಅದೂ ಮಕ್ಕಳಿಗೆ ಏಕತಾನತೆ ಬರಿಸುವಂಥ ಬೋಧನೆಯಲ್ಲ. ಇಂಗ್ಲಿಷ್ ಡೈಲಾಗ್‌ಗಳನ್ನು ಹೇಳುತ್ತ, ಕಥೆಗಳನ್ನು ಕೇಳುತ್ತ, ಸಂವಾದ ನಡೆಸುತ್ತ, ಶಬ್ದ-ವಾಕ್ಯಗಳನ್ನು ಬರೆಯುತ್ತ ಸುಲಲಿತವಾಗಿ ಇಂಗ್ಲಿಷ್ ಕಲಿಯುವ ಆಟ.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಆರ್. ಪೂರ್ಣಿಮಾ 2016ರ ಮಾರ್ಚ್‌ನಲ್ಲಿ ನಿವೃತ್ತರಾದರು. ಆದರೆ, ಅಂದಿನಿಂದ ಅವರ ಇನ್ನೊಂದು ಸೇವೆಯ ಅವಧಿ ಆರಂಭವಾಯಿತು. ಮಕ್ಕಳಿಗೆ ಇಂಗ್ಲಿಷ್ ಬೇಸಿಕ್ ಕಲಿಸುವ ಅವರ ಕಾರ್ಯ ವೇಗವನ್ನು ಪಡೆದುಕೊಂಡಿತು. ಈಗ ದಿನವೂ ಅವರು ಬಿಡುವಿಲ್ಲದಂತೆ ಶಾಲೆಗಳನ್ನು ಹುಡುಕಿಕೊಂಡು ಹೋಗಿ ಉಚಿತವಾಗಿ ಪಾಠ ಮಾಡುತ್ತಾರೆ. ಬಡವ-ಬಲ್ಲಿದ ಎನ್ನದೇ ಎಲ್ಲರಿಗೂ ಕಲಿಸುತ್ತಾರೆ. ಮಕ್ಕಳಿಗೆ ಕಬ್ಬಿಣದ ಕಡಲೆಯೆನಿಸಿದ ಇಂಗ್ಲಿಷ್ ಬಗ್ಗೆ ಉತ್ಸಾಹವನ್ನು ಸೃಷ್ಟಿಸುತ್ತಾರೆ. ಒಂದು ಚಿಕ್ಕ ಇಂಗ್ಲಿಷ್ ನಾಟಕದಲ್ಲಾದರೂ ಮಕ್ಕಳು ಡೈಲಾಗ್ ಹೇಳುವ ಮಟ್ಟಕ್ಕೆ ಅವರ ಆತ್ಮವಿಶ್ವಾಸವನ್ನು ಬೆಳೆಸುತ್ತಾರೆ.

ಕುಕ್ಕರಹಳ್ಳಿಯ ಸರ್ಕಾರಿ ಶಾಲೆ, ಅನಾಥ ಮಕ್ಕಳಿಗೆ ಆಶ್ರಯ ನೀಡುವ ಬಾಲಕಿಯರ ಬಾಲಮಂದಿರ, ಪಡುವಾರಹಳ್ಳಿ, ಒಂಟಿಕೊಪ್ಪಲು ಸರ್ಕಾರಿ ಶಾಲೆಯಿಂದ ಹಿಡಿದು ದೂರದ ಉತ್ತರ ಕನ್ನಡ ಜಿಲ್ಲೆಯ ಡೇರಿಯಾದಂಥ ಕಾಡಿನ ಶಾಲೆಗಳಲ್ಲೂ ಮಕ್ಕಳಿಗೆ ಅವರು ಇಂಗ್ಲಿಷ್ ನಾಟಕಗಳನ್ನು ಹೇಳಿಕೊಟ್ಟು ಮಾಡಿಸಿದ್ದಾರೆ. ಇಂಗ್ಲಿಷ್‌ನ ಪ್ರಾಥಮಿಕ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಪ್ರಾಧ್ಯಾಪಕ ವೃತ್ತಿಯ ಅವರ ರಜೆಯೆಲ್ಲವೂ ಇಂಥ ಪಾಠ ಹೇಳಿಕೊಡುವುದಕ್ಕೇ ವ್ಯಯವಾಗಿದೆ. ಈಗಂತೂ ಅವರಿಗೆ ಹಗಲಿರುಳೂ ಮಕ್ಕಳಿಗೆ ನಾಟಕ-ಪಾಠಗಳನ್ನು ಹೇಳುವುದೇ ಧ್ಯಾನ.

28 ವರ್ಷಗಳ ಹಿಂದೆ ತಮ್ಮ ಅಕ್ಕನ ಮಗಳು ಶ್ರುತಿ ಚಿಕ್ಕವಳಿದ್ದಾಗ ರಜೆಯಲ್ಲಿ ಇಡೀ ದಿನ ಅಡುಗೆಯ ಆಟ ಆಡುವುದನ್ನು ಕಂಡ ಪೂರ್ಣಿಮಾ ಅವರಿಗೆ ಏನಾದರೂ ಕ್ರಿಯೆಟಿವಿಟಿ ಹೇಳಿಕೊಡೋಣ ಎಂದೆನಿಸಿತು. ಅಂದಿನಿಂದ ‘ಚಿಲ್ಟ್ರನ್ಸ್ ಲಿಟರರಿ ಕ್ಲಬ್’ ಆರಂಭಿಸಿದರು. ಅಕ್ಕಪಕ್ಕದ ಮಕ್ಕಳನ್ನು ಸೇರಿಸಿಕೊಂಡರು. ನಂತರ ಮೈಸೂರಿನ ಹಲವು ಮಕ್ಕಳು ಬರತೊಡಗಿದರು. ಈ ಕ್ಲಬ್ಬಿನ ಚಟುವಟಿಕೆಗಳೇ ವಿಶೇಷವಾದವು. ಕ್ವಿಜ್‌ನಿಂದ ಆರಂಭವಾದ ಚಟುವಟಿಕೆಗಳು ವಿಸ್ತಾರವಾಗಿ ಹರಡಿಕೊಂಡವು. ಸ್ಪರ್ಧೆಗಳು ಇದ್ದರೂ ಅಲ್ಲಿ ಬಹುಮಾನವಿರುವುದಿಲ್ಲ. ಕಥೆ-ಕಾದಂಬರಿ, ಕವಿ, ಲೇಖಕರ ಬಗ್ಗೆ ಓದು ಇರುತ್ತದೆ. ಅವುಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಅವುಗಳಿಗೆ ಉತ್ತಮವಾಗಿ ಉತ್ತರಿಸಿದವರಿಗೆ ಅವರಾಡಿಸುವ ನಾಟಕದಲ್ಲಿ ಪಾತ್ರವೊಂದು ಸಿಗುತ್ತದೆ.

‘ಈ ಕ್ಲಬ್‌ಗೆ ಸದಸ್ಯರಾಗಲು ಶುಲ್ಕವಿಲ್ಲ. ಮನೆಯ ಆವರಣವೇ ಚಟುವಟಿಕೆಗಳಿಗೆಲ್ಲ ತಾಣ. ನಾಟಕ-ಕ್ವಿಜ್‌ಗಳ ಮೂಲಕ ಇಂಗ್ಲಿಷ್ ಪ್ರಾಥಮಿಕ ಜ್ಞಾನ, ಸ್ಪೋಕನ್ ಇಂಗ್ಲಿಷ್ ಅನ್ನು ಮಕ್ಕಳು ಅವರಿಗೇ ಗೊತ್ತಿಲ್ಲದಂತೆ ಕಲಿಯುತ್ತಿರುತ್ತಾರೆ. ಆಟವಾಡುತ್ತ ಪಾಠ ಕಲಿತಂತೆ. ಬಹುಮಾನದ ಹಂಗಿಲ್ಲದಿರುವುದರಿಂದ ಮಕ್ಕಳಲ್ಲಿ ಬಹುಮಾನ ಸಿಗದ ಬಗ್ಗೆ ಅಸಮಾಧಾನವೂ ಇರುವುದಿಲ್ಲ. ಮಕ್ಕಳಲ್ಲಿ ಸಮಾನತೆಯೂ ಉಳಿದುಕೊಳ್ಳುತ್ತದೆ’ ಎನ್ನುವುದು ಇವರ ಆಶಯ.

ವಾಕ್‌ನಲ್ಲಿ ಹುಟ್ಟಿಕೊಳ್ಳುವ ಹೊಸ ಐಡಿಯಾ: ದಿನವೂ ವಾಕ್ ಹೋಗುವಾಗ ಪೂರ್ಣಿಮಾ ಅವರ ಮನಸ್ಸಿನಲ್ಲಿ ಹೊಸ ಆಲೋಚನೆಗಳು, ನಾಟಕಗಳ ವಿಷಯಗಳ ಉಗಮವಾಗುತ್ತವೆ. ಅನಂತರ ಅವುಗಳ ಬಗ್ಗೆ ಅಧ್ಯಯನ ಮಾಡಿ ನಾಟಕಗಳನ್ನು ರಚಿಸುತ್ತಾರೆ. ಮಕ್ಕಳೊಂದಿಗೆ ಸ್ವತಃ ಅಭಿನಯಿಸುವ ಅವರು ತಮ್ಮ ರಂಗ ಚಟುವಟಿಕೆಗಳಲ್ಲೂ ನಿರಂತರತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಂಗ್ಲಿಷ್ ಪಾಠ-ಇಂಗ್ಲಿಷ್ ನಾಟಕ-ಸಾಹಿತ್ಯ ಚಟುವಟಿಕೆ - ಈ ಮೂರು ಪ್ರಧಾನ ಅಂಶಗಳನ್ನು ಅವರು ತಮ್ಮ ಕಾರ್ಯಸೂಚಿಯಾಗಿ ಆರಿಸಿಕೊಂಡಿದ್ದಾರೆ.

ಈಚೆಗೆ ಅವರು ಸಿದ್ಧಪಡಿಸಿರುವ ‘ಸ್ಟೇಜ್ ಕೆಮಿಸ್ಟ್ರಿ: ನ್ಯೂರೋ ಸೈಕಿಯಾಟ್ರಿಕ್ ಡಿಸಾರ್ಡರ್ ಆನ್ ಸ್ಟೆಜ್’ ಎಂಬ ಇಂಗ್ಲಿಷ್ ನಾಟಕ ಕ್ಲಿಷ್ಟಕರ ವಿಷಯದ್ದು. ನರಸಂಬಂಧಿತ ಮಾನಸಿಕ ರೋಗಿಗಳ ಬಗ್ಗೆ ರಂಗಕಲೆಯ ಮೂಲಕ ಮಾತನಾಡುವ ಈ ಯತ್ನಕ್ಕೆ ಯಶಸ್ಸು ದೊರಕಿದೆ. 140 ದಿನಗಳಲ್ಲಿ ರಾಜ್ಯದಾದ್ಯಂತ 66 ಪ್ರದರ್ಶನಗಳನ್ನು ಪೂರೈಸಿದೆ. ಮೈಸೂರಿನ ಹಲವು ಶಾಲೆ-ಕಾಲೇಜು, ಸಂಘ-ಸಂಸ್ಥೆಗಳು, ಮಹಾರಾಷ್ಟ್ರದ ವಾರ್ಧಾದ ಮಹಾತ್ಮಾಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ನಾಟಕಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಏಳು ವರ್ಷದ ಬಾಲಕಿಯಿಂದ ಹಿಡಿದು 80 ವರ್ಷದವರೆಗಿನವರೂ ಇದರಲ್ಲಿ ಪಾತ್ರಧಾರಿಗಳಾಗಿರುವುದು ವಿಶೇಷ. ಗರಿಷ್ಠ 14 ಪಾತ್ರಗಳಿರುತ್ತವೆ; ಒಮ್ಮೊಮ್ಮೆ ಎಲ್ಲ ಪಾತ್ರಗಳಲ್ಲೂ ಮಹಿಳೆಯರೇ ಅಭಿನಯಿಸಿದ್ದಾರೆ. ಕೆಲವು ಬಾರಿ ಏಕವ್ಯಕ್ತಿ ನಾಟಕವಾಗಿಯೂ ಪ್ರದರ್ಶಿತವಾಗಿದೆ. ಹಲವಾರು ದೃಶ್ಯಗಳನ್ನು ಒಂದು ಗುಚ್ಛವಾಗಿ ಜೋಡಿಸಿದ್ದಾರೆ. ಆರಂಭಿಕ ದೃಶ್ಯ. ಮೇರಿ ಲ್ಯಾಂಬ್ ದೃಶ್ಯ, ದಿ ಯಲ್ಲೋ ಪೇಪರ್ ದೃಶ್ಯ, ಸಿಲ್ವಿಯಾ ಪ್ಲಾಥ್ ದೃಶ್ಯ, ಮಸ್ಕ್ಯುಲರ್ ಅಟ್ರೋಫ್ ದೃಶ್ಯ, ಗಲ್ಲಿಯನ ಬರ್ರೆ ಸಿಂಡ್ರೋಮ್ ದೃಶ್ಯ, ಅಲ್ಝೈಮರ್ ದೃಶ್ಯಗಳು ಈ ನಾಟಕದಲ್ಲಿವೆ.

ಒಮ್ಮೆ ಪೂರ್ಣಿಮಾ ಅವರು ವಾಕಿಂಗ್ ಹೋಗಿದ್ದರು. ಆಗ ಮಗುವೊಂದು ಓಡುತ್ತ ಬರುವ ಶಬ್ದ ಕೇಳಿ ಬಂತು. ಮಗು ಕೂಗುತ್ತಿತ್ತು.. ‘ಮಿಸ್ ಮಿಸ್.. ನಾನು ಚಿಟ್ಟೆ ಮನುಷ್ಯ ಮಿಸ್..’ ಎಂದು. ಓಡಿ ಬಂದು ಕಾಲಿಗೆ ತಬ್ಬಿಕೊಂಡಿತು. ‘ಚಿಟ್ಟೆ ಮನುಷ್ಯ’ ಎಂಬ ಕನ್ನಡ ನಾಟಕವೊಂದನ್ನು ಅವರು ಬಾಲಕಿಯರ ಬಾಲಮಂದಿರದಲ್ಲಿ ಕೆಲ ವರ್ಷಗಳ ಹಿಂದೆ ಹೇಳಿಕೊಟ್ಟಿದ್ದರು. ಅದರಲ್ಲಿ ಚಿಟ್ಟೆ ಮನುಷ್ಯ ಪಾತ್ರಧಾರಿಯಾಗಿದ್ದ ಮಗು ಕಲಿಸಿದವರ ನೆನಪನ್ನು ಹಸಿರಾಗಿಟ್ಟುಕೊಂಡಿತ್ತು. ನಾಟಕ ಹಾಗೂ ಇಂಗ್ಲಿಷ್ ಕಲಿತ ಮಕ್ಕಳ ಖುಷಿಯ ಇಂಥ ನೂರಾರು ನೆನಪುಗಳೇ ಪೂರ್ಣಿಮಾ ಅವರ ಉಚಿತ ಕಲಿಸುವ ಅಭಿಯಾನದ ಯಶಸ್ಸಿನ ಹೆಗ್ಗುರುತುಗಳು.

ಒಮ್ಮೆ ಅನಾಥ ಮಕ್ಕಳಿಗೆ ಆಶ್ರಯ ನೀಡುವ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಅವರು 10 ದಿನಗಳ ಕಲಿಕಾ ಶಿಬಿರವೊಂದನ್ನು ಹಮ್ಮಿಕೊಂಡಿದ್ದರು. ಅದು ಮುಗಿಯುತ್ತಲೇ ಯುರೋಪ್ ಖಂಡಕ್ಕೆ ಭೇಟಿ ನೀಡಿ ಹಲವು ದೇಶಗಳನ್ನು ಸುತ್ತುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಶಿಬಿರದ ದಿನಗಳು ಮುಗಿದಾಗ ಮಕ್ಕಳು ಇನ್ನಷ್ಟು ದಿನ ಕಲಿಸುವಂತೆ ದುಂಬಾಲು ಬಿದ್ದರು. ಕಣ್ಣೀರುಗರೆಯತೊಡಗಿದರು. ಆ ಮಕ್ಕಳ ಖುಷಿಗಾಗಿ ಮೇಡಂ ತಮ್ಮ ಯುರೋಪ್ ಪ್ರವಾಸವನ್ನು ರದ್ದು ಮಾಡಿದರು. ಶಿಬಿರ 32 ದಿನಗಳ ಕಾಲ ಮುಂದುವರೆಯಿತು.

ಹಲವು ನಾಟಕಗಳ ನಿರ್ದೇಶಕಿ

ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಹಲವು ನಾಟಕಗಳನ್ನು ಪೂರ್ಣಿಮಾ ನಿರ್ದೇಶಿಸಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ದೂರದರ್ಶನಗಳ ಸಹಯೋಗದಲ್ಲಿ ಅವರು ‘ದಿ ಒಪನಿಂಗ್ ಸೀನ್ ಆಫ್ ದಿ ಟೆಂಪೆಸ್ಟ್’ ತಯಾರಿಸಿ ಕೊಟ್ಟಿದ್ದಾರೆ. ಮ್ಯಾಕ್‌ಬೆಥ್‌, ಹ್ಯಾಮ್ಲೆಟ್, ಅಗಮೆಮ್ನೋನ್, ಅವೋನ್ ಟು ಕಾವೇರಿ, ಸ್ತ್ರೀ ಶಕ್ತಿ, ಇನ್ ಸರ್ಚ್‌ ಆಫ್ ಶೇಕ್ಸ್‌ಪಿಯರ್ ಆ್ಯಂಡ್ ಕುವೆಂಪು, ಡ್ರೀಮ್ಸ್ ಆಂಡ್ ಡ್ರೀಮರ್ಸ್‌, ಎಕ್ಸ್‌ಪ್ಲಾಯ್ಟೇಶನ್‌ ಆ್ಯಂಡ್ ಟುವರ್ಡ್ಸ್‌ ಎಂಪವರ್ಮೆಂಟ್‌ ಗಳನ್ನೂ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಮುಕ್ತ ವಿದ್ಯೆ, ಕುರುಡು ನಾಯಿ ನಾಟಕಗಳನ್ನು ಯಶಸ್ವಿಯಾಗಿ ಸಿದ್ಧ ಪಡಿಸಿದ್ದಾರೆ.


ಆರ್‌. ಪೂರ್ಣಿಮಾ,
ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರು

600ಕ್ಕೂ ಹೆಚ್ಚು ಕಾರ್ಯಕ್ರಮಗಳು

‘ಮಕ್ಕಳಿಗೆ ತುಂಬಾ ಶಕ್ತಿ ಇರುತ್ತದೆ. ಅವರಿಗೆ ಜ್ಞಾನವನ್ನು ಯಾವ ರೀತಿಯಲ್ಲಿ ನೀಡುತ್ತೇವೆ ಎನ್ನುವುದು ಮುಖ್ಯ. ರಂಗಭೂಮಿ ಮಾಧ್ಯಮ ತುಂಬಾ ಪರಿಣಾಮಕಾರಿ. ಎಷ್ಟೇ ಕಷ್ಟವಾದ ವಿಷಯವಾದರೂ ನಾಟಕವೊಂದರ ಮೂಲಕ ಮನದಟ್ಟು ಮಾಡಿಸಬಹುದು. ಸಮಾಜಕ್ಕಾಗಿ ಏನಾದರೂ ಮಾಡಬೇಕೆನ್ನುವ ನನ್ನ ತುಡಿತಕ್ಕೆ ನಾಟಕವೇ ಸರಿ ದಾರಿ ಎನಿಸಿತು. ಇದರ ಮೂಲಕ ಶಿಕ್ಷಣ ನೀಡುವ ಅಭಿಯಾನವನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದ್ದೇನೆ. ‘ಚಿಲ್ಡ್ರನ್ಸ್ ಲಿಟರರಿ ಕ್ಲಬ್‌’ ಮೂಲಕ 600ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ.  ಕಲಿಸುವಿಕೆಯಲ್ಲಿ ನಿರಂತರತೆ ಕಾಯ್ದುಕೊಂಡು ಬಂದಾಗ ಉತ್ತಮ ಪರಿಣಾಮ ಕಾಣಲು ಸಾಧ್ಯ’

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !