ಜಾಗತಿಕ ಸಮಸ್ಯೆ, ಸ್ಥಳೀಯ ಪರಿಹಾರ

7

ಜಾಗತಿಕ ಸಮಸ್ಯೆ, ಸ್ಥಳೀಯ ಪರಿಹಾರ

Published:
Updated:
Deccan Herald

ಮಾದಕ ವಸ್ತು ಮತ್ತು ಅ‍ಪರಾಧ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆ ಜಾಗತಿಕ ಮಟ್ಟದಲ್ಲಿ  ‘ಎಜುಕೇಷನ್ ಫಾರ್‌ ಜಸ್ಟೀಸ್‌’ ಎಂಬ ಕಾರ್ಯಕ್ರಮ ನಡೆಸುತ್ತಿದೆ. ಭಾರತದಲ್ಲಿ ‘ವರ್ಲ್ಡ್‌ವೀವ್‌ ಎಜುಕೇಷನ್‌’ ಇದರ ಸಹಯೋಗ ವಹಿಸಿಕೊಂಡಿದೆ. ಸೆಪ್ಟೆಂಬರ್ 3ರಿಂದ 7ರವರೆಗೆ ವಿಶ್ವಸಂಸ್ಥೆ ಮತ್ತು ವರ್ಲ್ಡ್‌ವೀವ್‌ ಎಜುಕೇಷನ್‌ ಭಾರತದ ನಾಲ್ಕು ನಗರಗಳಾದ ದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆಗಳನ್ನು ನಡೆಸಿತ್ತು.

ನವೆಂಬರ್‌ 22ರಿಂದ 25ರವರೆಗೆ ನಗರದ ವೈಟ್‌ಫೀಲ್ಡ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ‘ಐವಿ ಲೀಗ್ ಮಾಡೆಲ್ ಯುನೈಟೆಡ್‌ ನೇಷನ್ಸ್‌ ಕಾನ್ಫರೆನ್ಸ್‌’ನ ಪೂರ್ವಭಾವಿಯಾಗಿ ಈ ಸಭೆಗಳು ನಡೆದವು. ನಗರದಲ್ಲಿ ಸೆ.6ರಂದು ನಡೆದ ದುಂಡು ಮೇಜಿನ ಸಭೆಯಲ್ಲಿ ವರ್ಲ್ಡ್‌ವೀವ್‌ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯನಿರ್ವಹಣಾಧಿಕಾರಿ ಸಂಪ್ರೀತ್‌ ರೆಡ್ಡಿ ಸಮಲ ಅವರು ತಮ್ಮ ಕಾರ್ಯಕ್ರಮದ ಉದ್ದೇಶಗಳ ಕುರಿತು ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.

ಎಜುಕೇಷನ್‌ ಫಾರ್‌ ಜಸ್ಟಿಸ್‌ ಕಾರ್ಯಕ್ರಮದ ಉದ್ದೇಶವೇನು?

ಮಕ್ಕಳಲ್ಲಿ ನಿಯಮಗಳು ಮತ್ತು ಕಾನೂನನ್ನು ಗೌರವಿಸುವ ಸಂಸ್ಕೃತಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಈ ಕಾರ್ಯಕ್ರಮ 10ರಿಂದ 12 ವರ್ಷದೊಳಗಿನ ಶಾಲಾ ಮಕ್ಕಳನ್ನು ಗುರಿಯಾಗಿರಿಸಿ ರೂಪಿಸಲಾಗಿದೆ. ಮಾದಕ ವಸ್ತು, ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರ ರಕ್ಷಣೆ, ಇಂಧನ ಉಳಿತಾಯ, ತ್ಯಾಜ್ಯ ನಿರ್ವಹಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಧ್ಯೇಯ. ಈ ವಯಸ್ಸಿನಲ್ಲಿ ಅರಿವು ಮೂಡಿದರೆ ಮುಂದೆ ಹದಿಹರೆಯದಲ್ಲಿ ಜಾಗೃತರಾಗಿರುತ್ತಾರೆ. 18 ವರ್ಷಕ್ಕೆ ಬರುವಾಗ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಮಕ್ಕಳನ್ನು ತಯಾರಿಗೊಳಿಸುವುದು ಇಂದಿನ ಅಗತ್ಯ.

ಮಕ್ಕಳನ್ನು ಸಮಾಜಮುಖಿಯಾಗಿಸುವುದು ಹೇಗೆ?

ಮಕ್ಕಳ ಕಳ್ಳಸಾಗಣೆ, ಹಸಿರು ನಾಶ, ಕೆರೆಗಳ ಮಲಿನ, ಇಂಧನ ಸಮಸ್ಯೆ, ಪರಿಸರ ನಾಶ ಮುಂತಾದ ಸಮಸ್ಯೆಗಳ ಕಡೆಗೆ ಮಕ್ಕಳನ್ನು ಸೆಳೆಯಬೇಕಾಗಿದೆ. ಸಮಸ್ಯೆಯನ್ನು ಅರಿತರೆ ಅದರ ಬಗ್ಗೆ ಜಾಗೃತರಾಗಲು ಹೆಜ್ಜೆ ಇಟ್ಟಂತಾಗುತ್ತದೆ. ಶಿಕ್ಷಣದ ಮೂಲಕವೇ ಇವುಗಳನ್ನು ಪರಿಹರಿಸಬೇಕಾಗಿದೆ. ಅದಕ್ಕಾಗಿ ಶಾಲಾ ಮಕ್ಕಳನ್ನು ಮತ್ತು ಶಿಕ್ಷಕರನ್ನು ಈ ಸಮಸ್ಯೆಯ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ.

ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ನೀಗಿಸುವಷ್ಟು ಸಣ್ಣ ಸಮಸ್ಯೆಗಳೇನು ನಮ್ಮ ಮುಂದಿರುವುದು?

ಪ್ರತಿಯೊಂದು ಸಮಸ್ಯೆಯೂ ದೇಶದ ಅಥವಾ ಜಾಗತಿಕ ಸಮಸ್ಯೆ. ಆದರೆ ಅವುಗಳಿಗೆ ಸ್ಥಳೀಯ ಮಟ್ಟದಲ್ಲಿ ಪರಿಹಾರಗಳಿವೆ. ತ್ಯಾಜ್ಯ ಸಮಸ್ಯೆಯನ್ನೇ ಗಮನಿಸಿ. ಅದು ಒಂದು ವಾರ್ಡ್‌ನ ಸಮಸ್ಯೆ ಮಾತ್ರವಲ್ಲ, ಇಡೀ ನಗರದ ಸಮಸ್ಯೆ. ಆದರೆ, ಆ ತ್ಯಾಜ್ಯ ಪ್ರತಿ ಮನೆಗಳಿಂದ ಬರುತ್ತದೆ. ಹಾಗಾಗಿ ವಾರ್ಡ್‌ನ ಕಸದ ಸಮಸ್ಯೆಗೆ ಪ್ರತಿ ಮನೆಯ ಕೊಡುಗೆ ಇದೆ. ಹಾಗೆಯೇ ಪರಿಹಾರವೂ ಪ್ರತಿ ಮನೆಯಲ್ಲೇ ಇರುತ್ತದೆ. ತ್ಯಾಜ್ಯ ನಿರ್ವಹಣೆ ಮನೆಯ ಮಟ್ಟದಲ್ಲಿಯೇ ಆಗಬೇಕು. ಕೆರೆಗಳ ಮಲಿನ, ಪರಿಸರ ನಾಶ ಸ್ಥಳೀಯ ಮಟ್ಟದಲ್ಲಿ ಜರುಗುವ, ಜಾಗತಿಕ ಸಮಸ್ಯೆ. ಹಾಗಾಗಿ ಪರಿಹಾರವೂ ಸ್ಥಳೀಯ ಮಟ್ಟದಲ್ಲಿಯೇ ಇದೆ.

ಜಾಗತಿಕ ಸಮಸ್ಯೆಗಳಿಗೆ ಮಕ್ಕಳಲ್ಲಿ ಪರಿಹಾರ ಸಿಗುತ್ತದೆಯೇ?

ಇದು ಡಿಸಿಷನ್‌ ಮೇಕಿಂಗ್‌ ಜನರೇಷನ್. ಹೆತ್ತವರಿಗೆ ಮಕ್ಕಳು ಬುದ್ಧಿ ಹೇಳುವ ಕಾಲ ಬಂದಿದೆ. ಎಲ್ಲ ಸಮಸ್ಯೆಗಳಿಗೆ ಮನೆಯಿಂದಲೇ ಪರಿಹಾರ ಹುಡುಕುವುದು ನಮ್ಮ ಕಾರ್ಯಕ್ರಮದ ಮುಖ್ಯ ಧ್ಯೇಯ. ಇಂಧನ ಸಮಸ್ಯೆ ಲೋಕಲ್‌ ಸಮಸ್ಯೆ ಅಲ್ಲ. ಆದರೆ, ಅದರ ಉಳಿತಾಯ, ಮಿತ ಬಳಕೆ ಸ್ಥಳೀಯ ಮಟ್ಟದಲ್ಲಿ ಸಾಧ್ಯ. ಈ ಬಗ್ಗೆ ನಿರ್ಲಕ್ಷ್ಯವಿರುವುದು ದೊಡ್ಡವರಲ್ಲಿ. ಮಕ್ಕಳೂ ಮುಂದೆ ದೊಡ್ಡವರಾಗುತ್ತಾರೆ. ಈಗಲೇ ಅರಿವು ಮೂಡಿಸಿದರೆ ಮುಂದೆ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. 

ಹಾಗಿದ್ದರೆ ಜಾಗತಿಕ ಸಮಸ್ಯೆ ಎಂದರೇನು?

ಎಲ್ಲ ಸಮಸ್ಯೆಗಳೂ ಜಾಗತಿಕ ಸಮಸ್ಯೆಗಳೇ. ಆದರೆ, ಸಮಸ್ಯೆಯನ್ನು ಜಾಗತಿಕ ಮಟ್ಟದಲ್ಲಿ ನೋಡಿದರೆ ಪರಿಹಾರ ಸಿಗದು. ಸ್ಥಳೀಯ ಸಮಸ್ಯೆ ಎಂದು ಪರಿಗಣಿಸಿದರೆ ಜಾಗತಿಕವಾಗಿ ಪರಿಹರಿಸಲು ಸಾಧ್ಯ. ಮಕ್ಕಳನ್ನು ಜಾಗತಿಕ ಸಮಸ್ಯೆಗಳ ಕಡೆಗೆ ಎಂಗೇಜ್‌ ಮಾಡುವುದು, ಬಹಳ ಚಿಕ್ಕ ವಯಸ್ಸಿನಲ್ಲಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಚಿಂತಿಸಲು ತೊಡಗುವಂತೆ ಮಾಡುವುದು ನಮ್ಮ ಗುರಿ.

ಖಾಸಗಿ ಶಾಲಾ ಮಕ್ಕಳೇ ನಿಮ್ಮ ಗುರಿ ಏಕೆ?

ದೊಡ್ಡದೊಡ್ಡ ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದೇ ನಗರ ಪ್ರದೇಶಗಳಲ್ಲಿ. ಹಾಗಾಗಿ ಅಲ್ಲಿಯೇ ಹೆಚ್ಚು ಜಾಗೃತಿ ಮೂಡಿಸಬೇಕು. ಕೆರೆಗಳ ನಾಶ, ಮರಗಳ ನಾಶ, ತ್ಯಾಜ್ಯ ಸಮಸ್ಯೆ ನಗರಗಳಲ್ಲಿಯೇ ಹೆಚ್ಚು ಇದೆ. ಈ ಸಮಸ್ಯೆಗಳು ನೇರವಾಗಿ ನಗರದ ಮಕ್ಕಳ ಮೇಲಾಗುತ್ತಿದೆ. ನಗರದಲ್ಲಿ ಹೆಚ್ಚು ಮಕ್ಕಳೂ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ನಗರ ಪ್ರದೇಶದಲ್ಲಿ ಜಾಗೃತಿ ಮೂಡಿದರೆ ಗ್ರಾಮೀಣ ಪ್ರದೇಶದಲ್ಲೂ ಅರಿವು ಮೂಡಿಸುವುದು ಸಾಧ್ಯ.

***

ಎಲ್ಲ ಸಮಸ್ಯೆಗಳೂ ಜಾಗತಿಕ ಸಮಸ್ಯೆಗಳೇ. ಆದರೆ ಅವುಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಹುಡುಕಬೇಕು

– ಸಂಪ್ರೀತ್ ರೆಡ್ಡಿ ಸಮಲ, ವರ್ಲ್ಡ್‌ ವೀವ್‌ ಸಂಸ್ಥೆಯ ಸಿಇಒ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !