ಭ್ರಾತೃತ್ವದ ಪ್ರತೀಕ ಅಂಜುಮನ್‌ ಶಿಕ್ಷಣ ಸಂಸ್ಥೆ

7
ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ಶೇ 50ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳು

ಭ್ರಾತೃತ್ವದ ಪ್ರತೀಕ ಅಂಜುಮನ್‌ ಶಿಕ್ಷಣ ಸಂಸ್ಥೆ

Published:
Updated:
Prajavani

ಸಿಂದಗಿ: ಪಟ್ಟಣದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಅಂಜುಮನ್‌ ಎ ಇಸ್ಲಾಂ ಶಿಕ್ಷಣ ಸಂಸ್ಥೆ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಈ ಸಂಸ್ಥೆ ವಿಜಯಪುರ ಜಿಲ್ಲೆಯಲ್ಲೇ ತನ್ನದೇ ಆದ ಛಾಪು ಮೂಡಿಸಿದೆ. 1937–38ರಲ್ಲಿ ಸಂಸ್ಥೆ ನೋಂದಣಿಯಾಗಿದ್ದರೂ; 1971ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿತು. ಆಗಿನ ಜಿಲ್ಲಾಧಿಕಾರಿ ಓಬೇದುಲ್ಲಾ ಹಾಗೂ ಸಂಸ್ಥೆ ಅಧ್ಯಕ್ಷ ಎ.ಬಿ.ಮುಲ್ಲಾ ಪರಿಶ್ರಮದಿಂದ ಉರ್ದು ಪ್ರೌಢಶಾಲೆ ಆರಂಭವಾಯ್ತು. ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯ ಕೂಡ ಸ್ಥಾಪನೆಯಾಗಿತ್ತು.

ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಆರಂಭಗೊಂಡ ಉರ್ದು ಪ್ರೌಢಶಾಲೆಯಲ್ಲಿ, 1979ರಲ್ಲಿ ಕನ್ನಡ ಮಾಧ್ಯಮವನ್ನು ಪರಿಚಯಿಸಲಾಯಿತು. ಇದರ ಪರಿಣಾಮ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರ ದಾಟಿತ್ತು.

ಈ ಶಾಲೆಗೆ ಹಿಂದೂ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿ ಕಲಿಯುವುದು ವಿಶೇಷ. ಹಿಂದೂ–ಮುಸ್ಲಿಂ ವಿದ್ಯಾರ್ಥಿಗಳ ಸಾಮರಸ್ಯದ ವೇದಿಕೆಯೂ ಇದಾಗಿದೆ. ಇಂದಿಗೂ ಜಿಲ್ಲೆಯಲ್ಲಿ ಭಾವೈಕ್ಯತೆಗೆ ಈ ಶಾಲೆ ಹೆಸರಾಗಿದೆ.

ಗೋದಾಮು ಒಂದರಲ್ಲಿ ಈ ಶಾಲೆ ಆರಂಭಗೊಂಡಿತ್ತು. 1977ರಲ್ಲಿ ಸಂಸ್ಥೆಯ ಕರ್ಣಧಾರತ್ವವನ್ನು ವಕೀಲರಾದ ಐ.ಬಿ.ಅಂಗಡಿ ವಹಿಸಿಕೊಂಡ ಬಳಿಕ, ಪರಿವರ್ತನೆಯ ಪಥದಲ್ಲಿ ಸಾಗಿತು. ಬಸ್ ನಿಲ್ದಾಣದ ಮುಂಭಾಗದ ಸ್ವತಂತ್ರ ಕಟ್ಟಡದಲ್ಲಿ ಮುಂದುವರೆಯಿತು. ಇಂದಿಗೂ ಯಶಸ್ಸಿನ ಪಥ ಸಾಗಿದೆ.

1982ರಲ್ಲಿ ಅರೆಬಿಕ್ ಕಾಲೇಜು, 1983ರಲ್ಲಿ ಪಿಯು ಕಾಲೇಜು, 1984ರಲ್ಲಿ ಐ.ಟಿ.ಐ ಕಾಲೇಜು, ಇಂಡಿ ತಾಲ್ಲೂಕು ತೆಗ್ಗಿಹಳ್ಳಿಯಲ್ಲಿ ಉರ್ದು ಪ್ರಾಥಮಿಕ ಶಾಲೆ, 2009ರಲ್ಲಿ ಆರಂಭಗೊಂಡ ನ್ಯೂ ಇರ್ರಾ ಪೂರ್ವ ಪ್ರಾಥಮಿಕ ಶಾಲೆ ಆರಂಭವಾದವು. 2018ರಲ್ಲಿ ಆರಂಭಗೊಂಡ ಪದವಿ ಕಲಾ, ವಾಣಿಜ್ಯ ಕಾಲೇಜು ಒಳಗೊಂಡು ಇದೀಗ ಈ ಶಿಕ್ಷಣ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನಶೀಲರಾಗಿದ್ದಾರೆ.

ನಜೀರ್‌ಸಾಬ್‌ ಬಾಗವಾನ, ಹೈಯತ್ ಸಾಬ್ ಆಲಮೇಲ, ಎ.ಎ.ದುದನಿ ಕ್ರಮವಾಗಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2004ರಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ.ಪಾಟೀಲ ಗಣಿಹಾರ ನೇಮಕಗೊಂಡ ಬಳಿಕ, ಪ್ರಗತಿ ಪಥ ಇನ್ನಷ್ಟು ಬಿರುಸುಗೊಂಡಿದೆ. ಇವರಿಗೆ ಸಹಕಾರಿಯಾಗಿ ನಿರ್ದೇಶಕ ಮಹಿಬೂಬ್‌ ಹಸರಗುಂಡಗಿ ಒಳಗೊಂಡು ಎಲ್ಲ ನಿರ್ದೇಶಕರು ಅಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ.

ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದ ಎ.ಐ.ಮುಲ್ಲಾ ನಂತರ ಪದೋನ್ನತಿಗೊಂಡು ಪ್ರಾಚಾರ್ಯರಾಗಿ ಶಾಲೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಈಗಿನ ಪ್ರಾಚಾರ್ಯರಾದ ಎಂ.ಡಿ.ಬಳಗಾನೂರ, ಝಾಕೀರ ಅಂಗಡಿ, ಹಾಫೀಜ್ ಗಿರಗಾಂವ, ಎಂ.ಎಂ.ಮುಲ್ಲಾ, ಉಪ ಪ್ರಾಚಾರ್ಯರಾದ ಎಸ್.ಎ.ದೊಡಮನಿ, ಮುಖ್ಯ ಶಿಕ್ಷಕಿ ಲೀಲಾ ನಾಯ್ಕ ಪರಿಶ್ರಮವೂ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ಅಡಕಗೊಂಡಿದೆ.

ಶಿಕ್ಷಣ ಸಂಸ್ಥೆಯಲ್ಲಿನ ಹಲವು ವೈಶಿಷ್ಟ್ಯಗಳು

* ಉರ್ದು ಮಾಧ್ಯಮದ ಜತೆ ಕನ್ನಡ ಮಾಧ್ಯಮದಲ್ಲೂ ಪ್ರೌಢಶಾಲೆ ಆರಂಭಿಸಿದ ವಿಜಯಪುರ ಜಿಲ್ಲೆಯ ಮೊದಲ ಶಿಕ್ಷಣ ಸಂಸ್ಥೆಗೆ ಇದೀಗ 48ರ ಹರೆಯ.

* ಹಿಂದೂ–ಮುಸ್ಲಿಮರ ಸಾಮರಸ್ಯದ ಕೇಂದ್ರವಿದು. ಅರ್ಧಕ್ಕೂ ಹೆಚ್ಚಿನ ಹಿಂದೂ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನಾರ್ಜನೆಯಲ್ಲಿ ತಲ್ಲೀನರಾಗಿದ್ದಾರೆ.

* ಮುಸ್ಲಿಂ ಸಂಸ್ಥೆಯಲ್ಲಿ ಹಿಂದೂಗಳೇ ಹೆಚ್ಚಿನ ನೌಕರರು

* 1996ರಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಿಂಚಿದ್ದ ಶಾಲೆಯ ವಿದ್ಯಾರ್ಥಿಗಳು

* 2015ರಲ್ಲಿ ಒಡಿಶಾದಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಮುಕಬೂಲ ಸೌದಾಗರ ಭಾಗಿ. ಶಾಲೆಯ ಹಳೆಯ ವಿದ್ಯಾರ್ಥಿ ಎಂ.ಕೆ.ರೆಬಿನಾಳ ಈಗ ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಷಯ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

* ವಿದ್ಯಾರ್ಥಿನಿ ಅನುರಾಧಾ ಕುಲಕರ್ಣಿ 1993ರಲ್ಲಿ ರಾಜ್ಯಕ್ಕೆ ಹತ್ತನೇ ರ್‌್ಯಾಂಕ್‌ ಪಡೆಯಲು ಮೂರು ಅಂಕಗಳಿಂದ ವಂಚಿತರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !