ಆಸ್ತಮಾಗೆ ಬಿ.ಟಿ ಚಿಕಿತ್ಸೆ

ಸೋಮವಾರ, ಮಾರ್ಚ್ 25, 2019
31 °C
ನಗರದ ಗಾಳಿಯಲ್ಲಿ ಅತಿಹೆಚ್ಚು ಪ್ರಮಾಣದ ದೂಳಿನ ಕಣಗಳು!

ಆಸ್ತಮಾಗೆ ಬಿ.ಟಿ ಚಿಕಿತ್ಸೆ

Published:
Updated:

ಆಸ್ತಮಾ ಚಿಕಿತ್ಸೆಯಲ್ಲಿ ಅತ್ಯಂತ ಸುಧಾರಿತ ಹಾಗೂ ಸೃಜನಶೀಲ ಚಿಕಿತ್ಸೆಯೆಂದು ಕರೆಸಿಕೊಳ್ಳುವ ‘ಬ್ರಾಂಕಿಯಲ್ ಥರ್ಮೋಪ್ಲಾಸ್ಟಿ’ (ಬಿ.ಟಿ- ಶ್ವಾಸನಾಳದ ಥರ್ಮೋಪ್ಲಾಸ್ಟಿ) ಚಿಕಿತ್ಸೆಯನ್ನು ಜಯನಗರದ ಅಪೊಲೋ ಆಸ್ಪತ್ರೆ ಯಶಸ್ವಿಯಾಗಿಸಿದೆ.

ಆಸ್ಪತ್ರೆಯ ಶ್ವಾಸಕೋಶ ವಿಜ್ಞಾನ ಹಾಗೂ ಗಂಭೀರ ಆರೈಕೆ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಮೆಹ್ತಾ ಅವರು ಈ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.

‘ದೇಶದಲ್ಲಿ ಆಸ್ತಮಾ ತುಂಬ ಜನರನ್ನು ಕಾಡುತ್ತಿರುವ ಕಾಯಿಲೆ. ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ವಾಯುಮಾಲಿನ್ಯವು ಆಸ್ತಮಾ ಹಾಗೂ ಶ್ವಾಸನಾಳ ಸಂಬಂಧಿ ರೋಗಗಳಿಗೆ ಪ್ರಮುಖ ಕಾರಣ. ಅದರಲ್ಲೂ ಬೆಂಗಳೂರಿನಂತಹ ನಗರದಲ್ಲಿನ ಗಾಳಿಯಲ್ಲಿರುವ ಅತಿಹೆಚ್ಚು ಪ್ರಮಾಣದ ಸಣ್ಣ ದೂಳಿನ ಕಣಗಳು ಶ್ವಾಸನಾಳ ಹಾಗೂ ಶ್ವಾಸಕೋಶದ ಆಳಕ್ಕೆ ಹೋಗಿ ಸೇರಿಕೊಳ್ಳುವ ಮೂಲಕ ಆಸ್ತಮಾ ಉಂಟುಮಾಡುತ್ತಿವೆ’ ಎನ್ನುತ್ತಾರೆ ಡಾ. ರವೀಂದ್ರ ಮೆಹ್ತಾ.

‘ಇನ್‍ಹೇಲರ್ ಹಾಗೂ ನೆಬ್ಯುಲೈಸರ್‌ಗಳ ಮೂಲಕ ರೋಗಿಗಳು ಔಷಧ ಸೇವಿಸುತ್ತಿದ್ದರೂ ಹಲವಾರು ವರ್ಷಗಳಿಂದ ಉಸಿರಾಟದ ತೀವ್ರ ಸಮಸ್ಯೆಯನ್ನು ಆಸ್ತಮಾ ರೋಗಿಗಳು ಎದುರಿಸುತ್ತಿದ್ದಾರೆ. ಅವರಲ್ಲಿ ಔಷಧ ಸರಿಯಾಗಿ ಪರಿಣಾಮ ಬೀರುತ್ತಿಲ್ಲ. ಅಂತಹ ಔಷಧ- ಪ್ರತಿರೋಧ ಬೆಳೆಸಿಕೊಂಡ ಆಸ್ತಮಾ ರೋಗಿಗಳು ನಿರಾಸೆ ಹೊಂದಬೇಕಿಲ್ಲ. ಹೊಸದಾಗಿ ಬಂದಿರುವ ‘ಬ್ರಾಂಕಿಯಲ್ ಥರ್ಮೋಪ್ಲಾಸ್ಟಿ’ ಚಿಕಿತ್ಸೆಯು ನೆಮ್ಮದಿಯಿಂದ ಉಸಿರಾಡುವಂತೆ ಮಾಡಲಿದೆ’ ಎನ್ನುವುದು ಅವರ ಅಭಯ.

ಚಿಕಿತ್ಸೆ ಹೇಗೆ:

‘ಜಗತ್ತಿನಾದ್ಯಂತ ಶ್ವಾಸನಾಳದ ಥರ್ಮೋಪ್ಲಾಸ್ಟಿ ಚಿಕಿತ್ಸೆಯನ್ನು ತೀವ್ರತರ ಆಸ್ತಮಾ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿ ಕೆಲ ಸಮಯದಿಂದ ಬಳಸಲಾಗುತ್ತಿದೆ. ಆಸ್ತಮಾ ಕಾಡಿದಾಗ ಶ್ವಾಸಕೋಶಗಳಲ್ಲಿರುವ ಮೃದು ಸ್ನಾಯುಗಳು ಬಿಗಿದುಕೊಳ್ಳುತ್ತವೆ. ಆಗ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಶ್ವಾಸನಾಳದ ಥರ್ಮೋಪ್ಲಾಸ್ಟಿಯಲ್ಲಿ ಈ ಸ್ನಾಯುಗಳನ್ನು ಸರಿಪಡಿಸಲು ಉಷ್ಣತೆಯನ್ನು ಬಳಸಲಾಗುತ್ತದೆ. ಆಗ ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆ ಸರಾಗವಾಗುತ್ತದೆ. ಮೂರು ಭೇಟಿಗಳಲ್ಲಿ ವೈದ್ಯರು ಈ ಚಿಕಿತ್ಸೆಯನ್ನು ನೀಡುತ್ತಾರೆ. ಪ್ರತಿಯೊಂದು ಭೇಟಿಯೂ ಸಾಮಾನ್ಯವಾಗಿ ತಲಾ ಒಂದು ತಾಸಿಗೆ ಮುಗಿಯುತ್ತದೆ. ಪ್ರತಿ ಬಾರಿಯೂ ಶ್ವಾಸಕೋಶದ ಬೇರೆಬೇರೆ ಭಾಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಅವರು ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತಾರೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ವಾಸನಾಳದ ಥರ್ಮೋಪ್ಲಾಸ್ಟಿ ಕುರಿತು ಹಲವಾರು ಅಧ್ಯಯನಗಳು ನಡೆದಿವೆ. ಅವುಗಳ ಪ್ರಕಾರ, ಈ ಚಿಕಿತ್ಸೆ ಪಡೆದ ಆಸ್ತಮಾ ರೋಗಿಗಳು ಮೊದಲಿಗಿಂತ ಸಾಕಷ್ಟು ಉತ್ತಮ ಜೀವನ ನಡೆಸುತ್ತಿದ್ದಾರೆ. ಜತೆಗೆ ಮೊದಲಿನಂತೆ ಕೆಲಸಕ್ಕೆ ಹೋಗಲು ಹಾಗೂ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಶಕ್ತರಾಗುತ್ತಾರೆ’ ಎಂದು ವಿವರಿಸುತ್ತಾರೆ ಅವರು.

**

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಒ) ಪ್ರಕಾರ ಭಾರತದಲ್ಲಿ ಒಂದೂವರೆಯಿಂದ ಎರಡು ಕೋಟಿ ಜನರು ಆಸ್ತಮಾದಿಂದ ಬಳಲುತ್ತಿದ್ದಾರೆ. ಇನ್ನು ಕೆಲ ಅಧ್ಯಯನಗಳ ಪ್ರಕಾರ ಮೂರು ಕೋಟಿ ಆಸ್ತಮಾ ರೋಗಿಗಳು ನಮ್ಮ ದೇಶದಲ್ಲಿದ್ದಾರೆ. ಮಾಲಿನ್ಯ ಕಾರಕಗಳು, ದೂಳು, ಹವಾಮಾನ ಬದಲಾವಣೆ, ಹೂವಿನ ಪರಾಗ ರೇಣುಗಳು, ಕ್ರಿಮಿ ಕೀಟಗಳು ಹಾಗೂ ಮನೆಯ ಒಳಗಿನ ಮತ್ತು ಹೊರಗಿನ ಅಪಾಯಕಾರಿ ಅನಿಲಗಳು ಮುಂತಾದ ಅಲರ್ಜಿಕಾರಕಗಳಿಗೆ ತೆರೆದುಕೊಂಡಾಗ ಸಣ್ಣ ಗಾತ್ರದ ಶ್ವಾಸನಾಳವಿರುವ ಆಸ್ತಮಾ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತದೆ. ಅಂತಹ ಅಪಾಯಕಾರಿ ಸನ್ನಿವೇಶಗಳಲ್ಲಿ ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳಾದ ‘ಶ್ವಾಸನಾಳದ ಥರ್ಮೋಪ್ಲಾಸ್ಟಿ’ ಚಿಕಿತ್ಸೆಗಳು ನೆರವಿಗೆ ಬರುತ್ತವೆ.

Tags: 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !