ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಸ್ಟ್‌ ಯುವ ಬ್ಯುಟಿಷಿಯನ್‌’ ಆಯಿಶಾ

Last Updated 18 ಮೇ 2019, 5:20 IST
ಅಕ್ಷರ ಗಾತ್ರ

ಆಯಿಶಾಗೆ ಚಿಕ್ಕಂದಿನಿಂದಲೂ ತಾನು ಫ್ಯಾಷನ್‌ ಲೋಕದಲ್ಲಿ ಕೊಡುಗೆ ನೀಡಬೇಕೆಂಬುವುದು ಹೆಬ್ಬಯಕೆಯಾಗಿತ್ತು. ಟಿ.ವಿಗಳಲ್ಲಿ ಬರುತ್ತಿದ್ದ ಫ್ಯಾಷನ್‌ ಶೋ, ರ‍್ಯಾಂಪ್‌ ವಾಕ್‌, ಮಾಡಲ್‌ಗಳ ಹೇರ್‌ ಸ್ಟೈಲ್‌ ಅವರ ಡ್ರೆಸ್‌ ಸ್ಟೈಲ್‌ ನೋಡಿ ತಾನು ಹಾಗೆಯೇ ಮಾಡಬೇಕು. ಹೊಸ ಹೊಸ ಸ್ಟೈಲ್‌ಗಳನ್ನು ಪ್ರಯೋಗಿಸಿ ಗುರುತಿಸಿಕೊಳ್ಳಬೇಕೆಂಬ ಹಟ ಅವರಲ್ಲಿ ಬೇರೂರಿತು. ಎಂಟನೇ ತರಗತಿ ಓದುತ್ತಿರುವಾಗಲೇ ಬ್ಯುಟಿಷಿಯನ್‌ ಆಗಬೇಕೆಂಬ ಕನಸು ಆಯಿಶಾಗೆ ಚಿಗುರಿತು. ತನ್ನ ಕನಸಿನ ಬೆನ್ನತ್ತಿದ ಆಯಿಶಾ, ಅದನ್ನು ನನಸು ಮಾಡಿಕೊಂಡಿದ್ದಾರೆ. ಹೀಗಾಗಿ ಅವರುಇಂದು ಉತ್ತಮ ಬ್ಯುಟಿಷಿಯನ್‌ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಈ ಸಾಧನೆಗೆ ಸಾಕ್ಷಿ ಆಗಿ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.

ಆಯಿಶಾ ನಿಜಕ್ಕೂ ಆದರ್ಶ ಮಹಿಳೆ. ಮುಸ್ಲಿಂ ಸಮುದಾಯದಲ್ಲಿನ ಅನೇಕ ಕಟ್ಟುಪಾಡುಗಳನ್ನು ಎದುರಿಸಿ, ತಾನು ಸ್ವತಂತ್ರಳಾಗಿ ಬದುಕು ಕಟ್ಟಿಕೊಳ್ಳುಬೇಕೆಂಬ ಹಂಬಲದಿಂದ ತನ್ನೊಳಗೆ ಹೊಸತನವನ್ನು ಕಂಡಿಕೊಂಡವರು. ಓದಿದ್ದು ಬಿ.ಕಾಂ ಆದರೂ ಐಟಿಬಿಟಿ ಕಂಪೆನಿಗಳ ವ್ಯಾಮೋಹಕ್ಕೆ ಸಿಲುಕದೆ, ಹೊಸ ಟ್ರೆಂಡ್‌ ಆಗಿರುವ ಫ್ಯಾಷನ್‌ ಜಗತ್ತಿನಲ್ಲಿ ತನ್ನ ಛಾಪು ಮೂಡಿಸುವ ಹಕ್ಕಿಯಾಗಿ ಹಾರಾಟ ನಡೆಸುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ಸ್ವತಂತ್ರವಾಗಿ ಬದುಕಬಹುದು ಎಂಬುವುದನ್ನು ಮನದಟ್ಟು ಮಾಡಿದ್ದಾರೆ. ಅಷ್ಟೇ ಯಾಕೆ; ಬದುಕಲು ಕಷ್ಟ, ಕಟ್ಟುಪಾಡಿನಿಂದ ಹೊರಬರುವುದು ಅಸಾಧ್ಯ ಎನ್ನುವವರಿಗೂ ಮಾದರಿಯಾಗಿದ್ದಾರೆ.

ಇವತ್ತಿನ ದಿನಗಳಲ್ಲಿ ಯಾರಿಗೆ ಪಾರ್ಲರ್‌ ಹೋಗುವುದು ಇಷ್ಟ ಇಲ್ಲ ಹೇಳಿ? ಹುಡುಗಿಯಾಗಲಿ, ಹುಡುಗರೇ ಆಗಲಿ ಪ್ರತಿಯೊಬ್ಬರು ಒಂದಲ್ಲ ಒಂದು ಕಾರಣಕ್ಕೆ ಹೋಗಿಯೇ ಹೋಗುತ್ತಾರೆ. ಚಿಕ್ಕಂದಿನಿಂದಲೇ ಫ್ಯಾಷನ್‌ ಜಗತ್ತಿನಲ್ಲಿ ಹೆಸರು ಮಾಡುವ ಕನಸು ಕಂಡಿದ್ದ ಆಯಿಶಾ ಅಂತಹ ಪಾರ್ಲರ್‌ ತೆರೆಯುವ ಕನಸನ್ನು ನನಸಾಗಿಸಿಕೊಂಡರು. ಹಲವು ಮಂದಿ ಬ್ಯುಟಿಷಿಯನ್ತರಬೇತಿ ಪಡೆಯುತ್ತಾರೆ, ಕಲಿಯುತ್ತಾರೆ. ಅದಾದ ಮೇಲೆ ಕಲಿತ ತಕ್ಷಣ ಪಾರ್ಲರ್‌ ಇಟ್ಟುಕೊಂಡು, ಅದೆಷ್ಟೋ ಗ್ರಾಹಕರಿಗೆ ತಮ್ಮದೇ ದಾಟಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ. ಆದರೆ, ಆಯಿಶಾ ಫುಲ್‌ ಡಿಫರೆಂಟ್‌!

‘ಕಲಿಕೆ ಬೇರೆ, ಪರಿಪೂರ್ಣತೆ ಹೊಂದುವುದು ಬೇರೆ. ಯಾವುದೇ ವೃತ್ತಿಯನ್ನು ಕಲಿಯುವಾಗ ಕಲಿಯುವುದಷ್ಟೇನಮ್ಮ ಜಾಯಮಾನ ಆಗಬಾರದು. ಬದಲಾಗಿ ಅದರಲ್ಲಿ ಪರಿಪೂರ್ಣತೆ ಹೊಂದಬೇಕು. ಆಗ ಮಾತ್ರ ಇನ್ನೊಬ್ಬರಿಗೆ ನಾವು ಕಲಿಸುವಂತರಾಗುತ್ತೇವೆ. ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಆಯಿಶಾ.

ವಯಸ್ಸು 30 ಆದರೂ ತನ್ನ ವೃತ್ತಿಯಲ್ಲಿ ಪರಿಪೂರ್ಣ ಹೊಂದಿದ್ದಾರೆ. ಧಾರವಾಡ, ಹಿರೇಕೆರೂರು, ಮಂಗಳೂರು, ಗದಗ ಹೀಗೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬ್ಯುಟಿಷಿಯನ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬೆಸ್ಟ್‌ ಹೇರ್‌ ಸ್ಟೈಲ್‌ ಪ್ರಶಸ್ತಿ, ಬೆಸ್ಟ್‌ ಡ್ರೆಸ್‌ ಸ್ಟೈಲ್‌ ಪ್ರಶಸ್ತಿ, ಅಲ್ಲದೆ, ಇತ್ತೀಚೆಗೆ ಗದಗ ನಲ್ಲಿ ನಡೆದ ರಾಷ್ಟ್ರಮಟ್ಟದ ಬ್ಯುಟಿಷಿಯನ್‌ ಸ್ಪರ್ಧೆಯಲ್ಲಿ ‘ಯುವ ಬ್ಯುಟಿಷಿಯನ್‌’ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಈವರೆಗೂ 11 ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಆಯಿಶಾ, ಕೇವಲ ಬ್ಯುಟಿಷಿಯನ್‌ ಮಾತ್ರ ಆಗಿರದೆ, ಕ್ಯಾಟರಿಂಗ್‌ ಕೂಡ ನಡೆಸುತ್ತಾರೆ. ಸಣ್ಣಪುಟ್ಟ ಪಾರ್ಟಿಗಳಿಗೆ ಕ್ಯಾಟರಿಂಗ್‌ ವ್ಯವಸ್ಥೆ ನಿರ್ವಹಣೆ ಮಾಡುವ ಇವರು, ಬಿರಿಯಾನಿ ಮಾಡುವುದರಲ್ಲಿ ಎತ್ತಿದ
ಕೈ. ತಿಂಗಳಿಗೆ ಸರಿಸುಮಾರು ₹50 ಸಾವಿರ ಆದಾಯ ಪಡೆಯುವ ಈ ಸಾಧಕಿ ಎಷ್ಟೋ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇರ್ಷಾದ್ ಹುಸೇನಪೀರಜಾದೆ ಮತ್ತು ನೂರ್‌ ಜಹಾನ್‌ ಪೀರಜಾದೆ ಎಂಬ ದಂಪತಿಯ ಪುತ್ರಿಆಯಿಶಾ.

‘ಬದುಕು ಕಟ್ಟಿಕೊಳ್ಳಲು ನೂರಾರು ದಾರಿಗಳಿವೆ. ಕಷ್ಟಗಳು ಬರಬಹುದು. ಅವು ನಮ್ಮ ದೌರ್ಬಲ್ಯ ಅಲ್ಲ. ಅವುನಮ್ಮ ಆತ್ಮಸ್ಥೈರ್ಯ ಹೆಚ್ಚಿಸುವ ಶಕ್ತಿ. ಇನ್ನೊಬ್ಬರ ಕೈಕೆಳಗೆ ದುಡಿಯುವ ಆಸೆ ನನಗಿಲ್ಲ. ಮುಂದೆ ಹುಬ್ಬಳ್ಳಿಯಲ್ಲಿ ಐದಾರು ಪಾರ್ಲರ್‌ ಹಾಕುವ ಆಸೆ ಇದೆ. ನನ್ನ ಕೆಲಸಕ್ಕೆ ಒಳ್ಳೆಯ ಪ್ರಶಂಸೆ ಬರುತ್ತಿದೆ. ವಿದೇಶಗಳಿಂದಲೂ ವಿಫುಲ ಅವಕಾಶಗಳು ಬರುತ್ತಿವೆ. ಅಷ್ಟೇ ಅಲ್ಲದೆ, ಸಿನಿಮಾರಂಗಗಳಿಂದಲೂ ಅವಕಾಶ ಬರುತ್ತಿದೆ. ನನ್ನ ಮನಸಿಗೆ ಖುಷಿ ಅನಿಸಿದರೆ ಮುಂದೆ ಹೋಗುತ್ತೇನೆ. ಹಣ ಗಳಿಕೆಗಿಂತಲೂ ಗ್ರಾಹಕರು ನಮ್ಮ ಕೆಲಸವನ್ನು ಮೆಚ್ಚಬೇಕು’ ಎನ್ನುವ ಆಯಿಶಾ ಮಾತು, ಅವರ ಪರಿಪೂರ್ಣತೆಗೆ ಕೈಗನ್ನಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT