ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬೀಸುವ ಕಲ್ಲು, ಕೆಂಪಕ್ಕಿ ರವೆ....

ಭವಿಷ್ಯದ ಭರವಸೆಯಲ್ಲಿ ‘ಚೇತನಾ’
Last Updated 21 ಸೆಪ್ಟೆಂಬರ್ 2020, 2:58 IST
ಅಕ್ಷರ ಗಾತ್ರ

ಅಂಗವಿಕಲರು, ಬುದ್ಧಿಮಾಂದ್ಯರ ಬದುಕಿನ ಭರವಸೆಯಾಗಿರುವ ‘ಚೇತನಾ’ ಕೊರೊನಾ ಕಾರಣಕ್ಕೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ‘ಚೇತನಾ’ದ ಅಸ್ಮಿತೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನಕ್ಕೆ ಮಹಿಳೆಯರು ಹೆಗಲು ಕೊಟ್ಟಿದ್ದಾರೆ. ಬೀಸುವ ಕಲ್ಲಿನಲ್ಲಿ ಸಂಸ್ಥೆಯನ್ನು ಮತ್ತೆ ಕಟ್ಟುವ ಕನಸು ಅವರದು. ಕೈಗಳಿಗೆ ಕೆಲಸ ನೀಡುವ ಸಾಂಪ್ರದಾಯಿಕ ಪದ್ಧತಿಯ ಬೀಸುವ ಕಲ್ಲಿನಲ್ಲಿ ‘ಸಾವಯವ ಕೆಂಪಕ್ಕಿ ರವೆ’ ಸಿದ್ಧಪಡಿಸಿ, ಮಾರುಕಟ್ಟೆ ಮಾಡಲು ಅಣಿಯಾಗಿದ್ದಾರೆ. ಈಗ ‘ಚೇತನಾ’ಕ್ಕೆ ಬೇಕಾಗಿದೆ ಸಮುದಾಯದ ಪ್ರೋತ್ಸಾಹ.

ಯಾರೀ ‘ಚೇತನಾ’ ಅಂದುಕೊಂಡಿರಾ ? ಬುದ್ಧಿಮಾಂದ್ಯತೆ, ಕಿವುಡುತನ ಇನ್ನಿತರ ವೈಕಲ್ಯಗಳಿಂದ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳ್ಳಗಾದವರಲ್ಲಿ ಚೈತನ್ಯದ ಸೆಲೆ ತುಂಬುವ ಆಶ್ರಯದಾತೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹೊರವಲಯದ ಕೈಗಾರಿಕಾ ಪ್ರದೇಶದ ಸಾಧಾರಣ ಕಟ್ಟಡವೊಂದರಲ್ಲಿ ‘ಚೇತನಾ’ ‍ಎಂಬ ಸಂಸ್ಥೆ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಪ್ರಶಾಂತಿ ಫೌಂಡೇಷನ್ ಅಡಿಯಲ್ಲಿ 14 ವರ್ಷಗಳ ಹಿಂದೆ ರಚಿತಗೊಂಡಿರುವ ಸಂಸ್ಥೆಯು ಹಲವಾರು ಕುಟುಂಬಗಳ ಬಾಳಿಗೆ ಬೆಳಕಾಗಿದೆ.

ಬುದ್ಧಿಮಾಂದ್ಯರು, ತೀವ್ರತರಹದ ಅಂಗವೈಕಲ್ಯ ಹೊಂದಿರುವವರು ಸಮಾಜಕ್ಕೆ ಮಾತ್ರವಲ್ಲ, ಕುಟುಂಬಕ್ಕೂ ಭಾರವಾಗುತ್ತಾರೆ. ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗುವ ಇವರಲ್ಲಿ ಹರೆಯಕ್ಕೆ ಬಂದಾಗ ಆಕ್ರಮಣಕಾರಿ ಸ್ವಭಾವ ಬೆಳೆಯುವ ಸಂಭವಗಳು ಹೆಚ್ಚಿರುತ್ತವೆ. ಒತ್ತಡರಹಿತ ದೈಹಿಕ ಚಟುವಟಿಕೆಗಳು ಇವರ ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿಡಬಲ್ಲವು. ಗ್ರಾಮೀಣ ಕೂಡು ಕುಟುಂಬದಲ್ಲಿ ಇಂತಹವರನ್ನು ಸಂಭಾಳಿಸಬಹುದು, ಆದರೆ, ನಗರ ಜೀವನದಲ್ಲಿ ನಾಲ್ಕು ಗೋಡೆಯ ನಡುವೆ ಬಂಧಿಯಾಗುವ ಜೀವನದಲ್ಲಿ ಇವರನ್ನು ಸಲಹುವುದು ಬಲು ಕಷ್ಟ.

ಇಂತಹ ಸಮಸ್ಯೆ ಇರುವವರನ್ನು ಚಲನಶೀಲರನ್ನಾಗಿಸುವ ಮಹದಾಸೆಯಿಂದ ಮಾನಸಿಕ ತಜ್ಞ ಡಾ.ಗಿರಿಧರ ಹಾಗೂ ಆಪ್ತ ಸಮಾಲೋಚಕಿ ಮಾಲಾ ಗಿರಿಧರ ಅವರು ‘ಚೇತನಾ’ ಹುಟ್ಟಿಗೆ ಕಾರಣರಾದರು. ಡಾ. ಶಾಂತಿ ಹೆಗಡೆ, ಸಾಮಾಜಿಕ ಕಾರ್ಯಕರ್ತ ಎಸ್‌.ಜಿ.ಹೆಗಡೆ ಊರತೋಟ, ಲೆಕ್ಕ ಪರಿಶೋಧಕ ಎಸ್.ಜಿ.ಹೆಗಡೆ, ಉದ್ಯಮಿ ವಿನಾಯಕ ಜೋಶಿ ಅವರ ಕನಸಿಗೆ ಜೊತೆಯಾದರು.

ಮೊದಲು ಇಬ್ಬರು ಕೇಂದ್ರಕ್ಕೆ ಬರಲಾರಂಭಿಸಿದರು. ದಿನಪತ್ರಿಕೆಯಲ್ಲಿ ಸಣ್ಣ ಸಣ್ಣ ಕವರ್‌ಗಳನ್ನು ಮಾಡಿ, ಔಷಧ ಅಂಗಡಿಗೆ ಕೊಡುವುದರೊಂದಿಗೆ ಸಂಸ್ಥೆಯ ಕಾರ್ಯಚಟುವಟಿಕೆ ಪ್ರಾರಂಭವಾಯಿತು. ಇಬ್ಬರ ಜೊತೆ ಇನ್ನು ಮೂವರು ಸೇರಿದರು. ಆಗ ಪೇಪರ್ ಕವರ್ ಜೊತೆಗೆ ರಾಖಿ ಮತ್ತು ಗ್ರೀಟಿಂಗ್ ಕಾರ್ಡ್‌ಗಳು ಸೇರಿಕೊಂಡವು. ‘ಚೇತನಾ’ದ ಹಿತೈಷಿಯೊಬ್ಬರು ಬಾಳೆ ನಾರಿನ ಉತ್ಪನ್ನ ತಯಾರಿಸುವುದನ್ನು ಕಲಿಸಿಕೊಟ್ಟರು.

ಬಾಳೆ ನಾರಿನಿಂದ ನೋಟ್ ಬುಕ್, ಬಾಕ್ಸ್, ಗಡಿಯಾರ, ಫೋಟೊ ಫ್ರೇಮ್ ಹೀಗೆ 15ಕ್ಕೂ ಹೆಚ್ಚು ವೈವಿಧ್ಯ ಉತ್ಪನ್ನಗಳು ಸಿದ್ಧವಾಗಿ, ಮಹಾನಗರದ ಜನರನ್ನು ಕೂಡ ಸೆಳೆದವು. ಹೀಗೆ ಸಂಸ್ಥೆಯ ಬೆಳವಣಿಗೆ, ಆ ಮೂಲಕ ಬುದ್ಧಿಮಾಂದ್ಯರ ಕಾರ್ಯಚಟುವಟಿಕೆ ಹೆಚ್ಚುತ್ತ ಹೋಯಿತು. ಅತಿ ಹೆಚ್ಚು ಬುದ್ಧಿಮಾಂದ್ಯತೆ ಹೊಂದಿರುವವರಿಂದ ಸಾಮಾನ್ಯ ಮಾನಸಿಕ ವೈಕಲ್ಯ ಇರುವ 30 ಮಂದಿ ಇಲ್ಲಿದ್ದಾರೆ. ವಾರದಲ್ಲಿ ಆರು ದಿನ ನಿತ್ಯ ಬೆಳಿಗ್ಗೆ ಮನೆ ಬಾಗಿಲಿಗೆ ಹೋಗುವ ವಾಹನ ಅವರನ್ನು ಕೇಂದ್ರಕ್ಕೆ ಕರೆತರುತ್ತದೆ. ಬೆಳಿಗ್ಗೆ 11ರಿಂದ 5ರವರೆಗೆ ಕೆಲಸ. ಮಧ್ಯಾಹ್ನ ಬಿಸಿ ಬಿಸಿ ಊಟ, ಒಂದು ತಾಸು ವಿಶ್ರಾಂತಿ, ಸಂಜೆ ಒಂದು ತಾಸು ವ್ಯಾಯಾಮ, ನೃತ್ಯ ಇವನ್ನೆಲ್ಲ ಮುಗಿಸಿ ಮನೆಗೆ ಹೋಗುವ ಚೇತನಾದ ‘ಚೈತನ್ಯರು’ ತುಂಬ ಲವಲವಿಕೆಯಲ್ಲಿದ್ದರು. ಒಬ್ಬೊಬ್ಬರು ಕನಿಷ್ಠ ₹ 1000ದಿಂದ ಗರಿಷ್ಠ ₹ 6000ದವರೆಗೆ ತಿಂಗಳ ದುಡಿಮೆ ಮಾಡುತ್ತಿದ್ದರು.

ನಲುಗಿದ ಸಂಸ್ಥೆ:

ತಿಂಗಳಿಗೆ ಸುಮಾರು ₹ 1 ಲಕ್ಷ ವಹಿವಾಟು ನಡೆಸುವ ಹಂತಕ್ಕೆ ಬಂದ ಮೇಲೆ ಶೇ 80ರಷ್ಟು ವೆಚ್ಚವನ್ನು ಸಂಸ್ಥೆ ಸ್ವ ಆದಾಯದಿಂದಲೇ ಭರಿಸುತಿತ್ತು. ಇನ್ನುಳಿದ ಕೊರತೆಗೆ ದಾನಿಗಳು ಕೈಜೋಡಿಸುತ್ತಿದ್ದರು. ವೀಣಾ ಹೆಗಡೆ, ಉಷಾ ಶಹಾಣಿ, ಸಹನಾ ಜೋಶಿ, ವಿದ್ಯಾ ಖೈರನ್, ಅನಿಲ್ ಬಳ್ಳಾರಿ ಇನ್ನೂ ಹಲವರು ಸಂಸ್ಥೆಯ ಚಟುವಟಿಕೆಗೆ ಅಪೇಕ್ಷೆಯಿಲ್ಲದೇ ದುಡಿದರು.

ಹೀಗೆ ನಡೆಯುತ್ತಿದ್ದ ಲಾಭರಹಿತವಾದ ಈ ಸಂಸ್ಥೆ ಈಗ ಐದು ತಿಂಗಳುಗಳಿಂದ ಬಾಗಿಲು ಮುಚ್ಚಿದೆ. ಕೋವಿಡ್–19 ಲಾಕ್‌ಡೌನ್, ಅನ್‌ಲಾಕ್ ಆಗಿದ್ದರೂ, ಚೇತನಾಕ್ಕೆ ಮರುಜೀವ ಸಿಕ್ಕಿಲ್ಲ. ಸಾಂಕ್ರಾಮಿಕ ಕಾಯಿಲೆ ಮುಂದುವರಿದಿರುವ ಕಾರಣಕ್ಕೆ ಇದರ ಉತ್ಪನ್ನಗಳಿಗೆ ಸದ್ಯ ಮಾರುಕಟ್ಟೆ ಇಲ್ಲದಾಗಿದೆ.

‘ಅತಿ ಹೆಚ್ಚು ಬುದ್ಧಿಮಾಂದ್ಯತೆ ಇರುವ ಮರ್ದನ್ ಎಂಬ ಯುವಕನಿಗೆ ಯಾವಾಗಲೂ ಮೌನವೇ ಮಾತು. ಸದಾ ಸುಮ್ಮನಿರುತ್ತಿದ್ದ ಮರ್ದನ್ ಕೂಡ ಕಾಲ್ ಮಾಡಿ ಯಾವಾಗ ಚೇತನಾ ಶುರುವಾಗುತ್ತದೆ ಕೇಳುತ್ತಿದ್ದಾನೆ. ಎಲ್ಲರಿಗೂ ಕೇಂದ್ರಕ್ಕೆ ಬಂದು ಹಗುರಾಗುವ ತವಕ. ಆದರೆ, ಸದ್ಯಕ್ಕೆ ಸಂಸ್ಥೆಯನ್ನು ನಡೆಸಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಜನರು ಬೆಂಬಲಿಸಿದರೆ ಬೀಸುವ ಕಲ್ಲಿನಿಂದ ಕೈಗಳಿಗೆ ಕೆಲಸ ನೀಡುವ ಯೋಚನೆಯಲ್ಲಿದ್ದೇವೆ’ ಎನ್ನುತ್ತಾರೆ ಟ್ರಸ್ಟಿ ಮಾಲಾ ಗಿರಿಧರ.

ಎಲ್ಲ ಒಡನಾಡಿಗಳ ನೋವನ್ನು ಅರಿತ ತರಬೇತುದಾರ್ತಿಯರಾದ ವಿದ್ಯಾ, ಸುಮಾ, ಸರಸ್ವತಿ, ಲಲಿತಾ, ಯಶೋಧಾ, ಗಾಯತ್ರಿ ಈಗ ಟೊಂಕಕಟ್ಟಿದ್ದಾರೆ. ಸಂಸ್ಥೆಯನ್ನು ಮೇಲೆತ್ತಲು ಬೀಸುವ ಕಲ್ಲು ಹಿಡಿದು, ದೇಸಿ ಕೆಂಪಕ್ಕಿ ರವಾ ಸಿದ್ಧಪಡಿಸುತ್ತಿದ್ದಾರೆ. ಪರಿಸರ ಸ್ನೇಹಿ ಪ್ಯಾಕೆಟ್‌ನಲ್ಲಿ ಅರ್ಧ ಕೆ.ಜಿ, ಮುಕ್ಕಾಲು ಕೆ.ಜಿ ರವಾ ತುಂಬಿ ಮಾರಾಟ ಮಾಡಲು ಹೊರಟಿದ್ದಾರೆ. ಸಾವಯವ ಕೆಂಪಕ್ಕಿ ಆರೋಗ್ಯಕ್ಕೆ ಹಿತಕರ. ಅದನ್ನು ತೊಳೆದು ಸ್ವಚ್ಛಗೊಳಿಸಿ, ಹುರಿದು ತಯಾರಿಸುವ ಕೆಂಪಕ್ಕಿ ರವಾ ಪೌಷ್ಟಿಕ ಆಹಾರ. ಇದರಿಂದ ಏನೆಲ್ಲ (ಇಡ್ಲಿ, ಸಿಹಿ ಕಡಬು, ಖಾರ ಕಡಬು, ಪುಂಡಿ, ತಾಲಿಪಿಟ್ಟು) ಖಾದ್ಯ ತಯಾರಿಸಬಹುದೆಂಬುದನ್ನು ಸಹ ಅವರು ಅದರಲ್ಲಿ ಸೇರಿಸಿದ್ದಾರೆ. 9482163259, 9741116585 ಈ ಸಂಖ್ಯೆ ಸಂಪರ್ಕಿಸಿ ಕೆಂಪಕ್ಕಿ ರವಾ ಪಡೆಯಬಹುದು.

ಅಸಮರ್ಥರೆನಿಸಿಕೊಂಡವರನ್ನು ಸಮರ್ಥರನ್ನಾಗಿಸಿದ ಚೇತನಾ ಉಳಿಸಲು ಕ್ರೌಡ್ ಫಂಡಿಂಗ್ (https://www.ketto.org/fundraiser/a-livelihood-project-for-indivuduals-with-disabilities) ಕೂಡ ಶುರುವಾಗಿದೆ. ಸಮುದಾಯ ಆಸರೆಯಲ್ಲಿ ಮತ್ತೆ ಮೇಲೇಳಬಹುದೆಂಬ ನಿರೀಕ್ಷೆಯಲ್ಲಿದೆ ಈ ಸಂಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT