ಅಭಿಯಾನವಾಗಲಿದೆ ‘ಸೈಕಲ್‌ ಟು ವರ್ಕ್‌’

7

ಅಭಿಯಾನವಾಗಲಿದೆ ‘ಸೈಕಲ್‌ ಟು ವರ್ಕ್‌’

Published:
Updated:
Deccan Herald

‘ಸೈಕಲ್‌ ಟು ವರ್ಕ್‌’ ಬಗ್ಗೆ ಹೇಳಿ?

ಬೆಂಗಳೂರು ಐಟಿ ಹಬ್‌. ಹೆಚ್ಚಿನ ಜನರ ಬಳಿ ದ್ವಿಚಕ್ರ ವಾಹನ ಮತ್ತು ಕಾರುಗಳಿವೆ. ಇವುಗಳ ಬಳಕೆಯಿಂದ ಸಹಜವಾಗಿಯೇ ವಾಯು ಮತ್ತು ಶಬ್ದ ಮಾಲಿನ್ಯ ಆಗುತ್ತದೆ. ಮಾಲಿನ್ಯ ಹೆಚ್ಚಳಕ್ಕೆ ಎಲ್ಲರೂ ಒಂದಲ್ಲ ಒಂದು ರೀತಿ ಕಾರಣರಾಗುತ್ತಿದ್ದೇವೆ. ಮನೆಯಿಂದ ಹೊರಗೆ ಹೇಗೆ ಹೊರಡುತ್ತೇವೆ ಎಂಬುದರ ಮೇಲೆ ಮಾಲಿನ್ಯದ ಪ್ರಮಾಣ ಮತ್ತು ಸಂಚಾರ ದಟ್ಟಣೆ ನಿರ್ಧಾರವಾಗುತ್ತದೆ. ಬೈಕ್‌ ಅಥವಾ ಕಾರು ಬಳಸಿದರೆ ಇದು ಹೆಚ್ಚಾಗುತ್ತದೆ. ಬದಲಿಗೆ ಸಾರ್ವಜನಿಕ ಸಾರಿಗೆ ಬಳಸುವುದು, ಸೈಕಲ್‌ ಉಪಯೋಗಿಸುವುದು, ಸಮೀಪದ ಪ್ರದೇಶಗಳಿಗೆ ನಡೆದು ಹೋಗುವುದರಿಂದ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

ಸಮೀಪದ ಪ್ರದೇಶದಿಂದ ಸುಮಾರು 20 ಕಿ.ಮೀ ವರೆಗಿನ ಪ್ರದೇಶಗಳಿಗೆ ಸೈಕಲ್‌ನಲ್ಲಿ ಸಂಚರಿಸಬಹುದು. ಇದು ಆರೋಗ್ಯಕ್ಕೂ ಉತ್ತಮ. ಪರಿಸರಸ್ನೇಹಿಯೂ ಹೌದು. ಹಾಗಾಗಿ ಕೆಲಸ ಮಾಡುವ ಸ್ಥಳಕ್ಕೆ ಸೈಕಲ್‌ನಲ್ಲಿ ಹೋಗುವುದು ಒಳಿತು. ಇದನ್ನು ಪ್ರೋತ್ಸಾಹಿಸಲು ಈ ವಿನೂತನ ಕಾರ್ಯಕ್ರಮ. ಇದಕ್ಕೆ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗುತ್ತದೆ.

ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ನೋಂದಣಿ ಹೇಗೆ ಮತ್ತು ಯಾವಾಗ?

ಸೆಪ್ಟೆಂಬರ್‌ 22 ರಂದು ‘ವಿಶ್ವ ಕಾರು ರಹಿತ ದಿನ’. ಅಂದಿನಿಂದಲೇ ‘ಸೈಕಲ್‌ ಟು ವರ್ಕ್‌’ ಅಭಿಯಾನಕ್ಕೆ ನೋಂದಣಿ ಆರಂಭ. ಯಾವುದೇ ಕಂಪೆನಿ, ಕಾರ್ಖಾನೆ ಅಥವಾ ಕಚೇರಿ ಅಥವಾ ಅಲ್ಲಿನ ಸಿಬ್ಬಂದಿಯ ಗುಂಪು ವೆಬ್‌ಸೈಟ್‌ನಲ್ಲಿ (Cycletowork.mapunity.in) ನೋಂದಾಯಿಸಿಕೊಳ್ಳಬಹುದು. ಅಕ್ಟೋಬರ್‌ನಿಂದ ಸುಮಾರು 6 ತಿಂಗಳು ಈ ಅಭಿಯಾನ ಚಾಲ್ತಿಯಲ್ಲಿರುತ್ತದೆ. ಆಸಕ್ತರು ಇದನ್ನು ಮುಂದುವರೆಸಿಕೊಂಡು ಹೋಗಬಹುದು. ಸವಾರರು strava app ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇದರಿಂದ ಸೈಕಲ್‌ ಸವಾರರು ದಿನಕ್ಕೆ ಎಷ್ಟು ಬಾರಿ ಮತ್ತು ಎಷ್ಟು ದೂರು ಕ್ರಮಿಸಿದರು ಎಂಬುದರ ಮಾಹಿತಿಯೂ ಸಿಗುತ್ತದೆ.

‘ಸೈಕಲ್‌ ಟು ವರ್ಕ್‌’ನ ಮುಖ್ಯ ಉದ್ದೇಶವೇನು?

ಮಾಲಿನ್ಯ ಕಡಿಮೆ ಮಾಡಲು ಶ್ರಮಿಸುತ್ತಿರುವ ನಗರದ ಸೈಕಲ್‌ ಸವಾರರ ಖಚಿತ ದತ್ತಾಂಶ ಸಂಗ್ರಹಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ. ನಗರದಲ್ಲಿ ಸುಮಾರು 45 ಸಾವಿರ ಜನ ಸೈಕಲ್‌ ಸವಾರರು ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಇದು ಖಚಿತ ಅಂಕಿ ಅಂಶವಲ್ಲ. ಈ ಅಭಿಯಾನದಿಂದ ಬಹುತೇಕ ಖಚಿತ ಮಾಹಿತಿ ದೊರೆಯಬಹುದು.

ನೋಂದಣಿ ಮಾಡಿಕೊಳ್ಳದ ಸವಾರರನ್ನು ಹೇಗೆ ಗುರುತಿಸುತ್ತೀರಿ?

ಸ್ಮಾರ್ಟ್‌ಫೋನ್‌ ಬಳಸದ ಕೆಲವರು ನಗರದ ವಿವಿಧೆಡೆ ಸೈಕಲ್‌ ಬಳಸುತ್ತಿದ್ದಾರೆ. ದಿನಗೂಲಿ ನೌಕರರು, ಕಾರ್ಮಿಕರು, ಶಿಕ್ಷಕರು, ವಿದ್ಯಾರ್ಥಿಗಳು ಸೈಕಲ್‌ ಬಳಸುತ್ತಿದ್ದಾರೆ. ನಗರದ ವಿವಿಧ ಪ್ರದೇಶಗಳಿಗೆ ನಮ್ಮ ಜಾಲದ ಸದಸ್ಯರು ಭೇಟಿ ನೀಡಿ, ಅವರ ನೋಂದಣಿ ಮಾಡಿಸುತ್ತಾರೆ.

ಸೈಕಲ್‌ ಸವಾರರ ದತ್ತಾಂಶ ಸಂಗ್ರಹದಿಂದ ಏನು ಪ್ರಯೋಜನ?

ನಗರದಲ್ಲಿ ಎಷ್ಟು ಸಂಖ್ಯೆಯ ಜನರು ಯಾವ ಯಾವ ಮಾರ್ಗದಲ್ಲಿ ಸೈಕಲ್‌ ಚಲಾಯಿಸುತ್ತಾರೆ ಎಂಬ ದತ್ತಾಂಶ ಸಂಗ್ರಹಿಸಿ ಅದನ್ನು ಪೊಲೀಸರು, ಬಿಬಿಎಂಪಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಈ ಮೂಲಕ ನಗರದ ಸೈಕಲ್‌ ಸವಾರರಿಗೆ ರಸ್ತೆಯಲ್ಲಿ ಪ್ರತ್ಯೇಕ ಪಥ, ಮೂಲ ಸೌಕರ್ಯ ಹಾಗೂ ಸೂಕ್ತ ರಕ್ಷಣೆ ಒದಗಿಸುವಂತೆ ಕೋರುತ್ತೇವೆ.

ಮಕ್ಕಳಲ್ಲಿ ಸೈಕಲ್‌ ಬಳಕೆ ಕುರಿತು ಜಾಗೃತಿ ಮೂಡಿಸಲು ಯಾವ ಕಾರ್ಯಕ್ರಮ ರೂಪಿಸಿದ್ದೀರಿ?

ಶಾಲಾ– ಕಾಲೇಜು ಮಕ್ಕಳಿಗಾಗಿ ‘ಬೈಸಿಕಲ್‌ ಸ್ಕೂಲ್‌’ ಆರಂಭಿಸುವ ಉದ್ದೇಶವಿದೆ. ಭೌತ ವಿಜ್ಞಾನ, ಗಣಿತ ಮತ್ತು ಹ್ಯೂಮನ್‌ ಸೈನ್ಸ್‌ನ ಹಲವು ವಿಷಯಗಳನ್ನು ಸೈಕಲ್‌ ತುಳಿಯುವುದರ ಮೂಲಕ ತಿಳಿಯಬಹುದು. ಇದರಿಂದ ಪ್ರಾಯೋಗಿಕ ಜ್ಞಾನ ವೃದ್ಧಿಸಿಕೊಳ್ಳುವ ಮಕ್ಕಳಿಗೆ ವಿಷಯ ಚೆನ್ನಾಗಿ ಮನದಟ್ಟಾಗುತ್ತದೆ. ವೇಗ, ವೇಗೋತ್ಕರ್ಷ, ಗುರುತ್ವಾಕರ್ಷಣೆ, ಸಮತೋಲನ, ನ್ಯೂಟನ್ಸ್‌ ನಿಯಮಗಳನ್ನು ಸುಲಭವಾಗಿ ಸೈಕಲ್‌ ಮೂಲಕ ಅರಿತುಕೊಳ್ಳಬಹುದು.

6ರಿಂದ 10ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಭೌತ ವಿಜ್ಞಾನದ ಶೇ 35ರಷ್ಟು ಹಾಗೂ ಹ್ಯೂಮನ್‌ ಸೈನ್ಸ್‌ನ ಶೇ 90ರಷ್ಟು ಪಠ್ಯವನ್ನು ಸೈಕಲ್‌ ಮೂಲಕ ಮಕ್ಕಳು ತಿಳಿದುಕೊಳ್ಳಲು ಸಾಧ್ಯವಿದೆ. ಈ ಸಂಬಂಧ ಬೈಸಿಕಲ್‌ ಬೈಕ್‌ ಸ್ಕೂಲ್‌ಗೆ ಒಗ್ಗುವಂತೆ ನಾವು ಕೂಡ ಪಠ್ಯಕ್ರಮ ರಚಿಸುತ್ತಿದ್ದೇವೆ. ಅದು ಅಂತಿಮಗೊಂಡ ನಂತರ ಹೊಸ ಮತ್ತು ವಿಭಿನ್ನ ಶಾಲೆ ಕಾರ್ಯಾರಂಭ ಮಾಡುತ್ತದೆ. ಇದಕ್ಕೆ ಮೂರು– ನಾಲ್ಕು ತಿಂಗಳು ಆಗಬಹುದು.

ಮೋಟಾರು ವಾಹನ ಚಲಾಯಿಸುವವರಲ್ಲಿ ಯಾವ ರೀತಿಯ ಜಾಗೃತಿ ಮೂಡಿಸಲು ಯೋಜಿಸಿದ್ದೀರಿ?

ಪಾದಚಾರಿಗಳು ಮತ್ತು ಸೈಕಲ್‌ ಸವಾರರು ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸುತ್ತಿದ್ದಾರೆ. ಅವರಿಗೆ ಕೊಡಬೇಕಾದ ಗೌರವವನ್ನು ಕೊಡಿ ಎಂದು ಕಾರು ಮತ್ತು ಬೈಕ್‌ ಸವಾರರನ್ನು 
ಕೋರಲು ಎರಡು–ಮೂರು ತಿಂಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಿದ್ದೇವೆ. ಪಾದಚಾರಿಗಳು, ಸೈಕಲ್‌ ಸವಾರರು ರಸ್ತೆ ದಾಟುವಾಗ, ರಸ್ತೆ ಪಕ್ಕದಲ್ಲಿ ಹೋಗುತ್ತಿರುವಾಗ ಅನಗತ್ಯವಾಗಿ ‘ಹಾರ್ನ್’ ಮಾಡಿ ಅವರನ್ನು ಗಾಬರಿಗೊಳಪಡಿಸಬೇಡಿ ಎಂದು ಅಭಿಯಾನದ ವೇಳೆ ಜಾಗೃತಿ ಮೂಡಿಸುತ್ತೇವೆ.

***

ಯಾರಿದು ‘ಬೈಸಿಕಲ್‌ ಮೇಯರ್‌‘?

ಇವರು ಸೈಕಲ್‌ ತುಳಿಯುವವರ ಧ್ವನಿಯಾಗಿ ಕೆಲಸ ಮಾಡುವ ಮೇಯರ್‌. ಜನರಿಂದ ಅಥವಾ ಸೈಕಲ್‌ ಸವಾರರಿಂದ ಇವರ ಆಯ್ಕೆ ಆಗಿಲ್ಲ. ನೆದರ್‌ಲ್ಯಾಂಡ್‌ನ ‘ಬಿವೈಸಿಎಸ್‌’ ಎನ್‌ಜಿಒ ‘ಬೈಸಿಕಲ್‌ ಮೇಯರ್‌’ ಸ್ಥಾನದ ಸೃಷ್ಟಿಕರ್ತ. ಯುರೋಪ್‌, ಅಮೆರಿಕ, ಆಸ್ಟ್ರೇಲಿಯಾದ ಹಲವು ದೇಶಗಳಲ್ಲಿನ ನಗರಗಳಲ್ಲಿ ಸೈಕಲ್‌ ತುಳಿಯುವುದನ್ನು ಪ್ರೋತ್ಸಾಹಿಸಲು ಈ ರೀತಿಯ ಮೇಯರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನ ಮೊದಲ ‘ಬೈಸಿಕಲ್‌ ಮೇಯರ್‌’ ಆಗಿ ಸತ್ಯ ಶಂಕರನ್‌ ಅವರು ಈ ವರ್ಷದ ಮೇ ತಿಂಗಳಲ್ಲಿ ನೇಮಕವಾಗಿದ್ದಾರೆ. ಅವರ ಅಧಿಕಾರಾವಧಿ ಎರಡು ವರ್ಷ.

ಇದೊಂದು ಗೌರವಾರ್ಥ ಸ್ಥಾನವಾಗಿದ್ದು, ಸೈಕ್ಲಿಂಗ್‌ ಪ್ರಸಿದ್ಧಗೊಳಿಸಲು ಅವರು ಶ್ರಮಿಸುತ್ತಾರೆ. ನಗರದ ಸೈಕಲಿಸ್ಟ್‌ಗಳ ಪ್ರತಿನಿಧಿಯಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯಾಗುತ್ತಾರೆ.

ಸಂಜಯ್‌ ನಗರದ ನಿವಾಸಿಯಾಗಿರುವ ಸತ್ಯ ಶಂಕರನ್‌, ಕೆಲಸ ಮಾಡುವ ಕಚೇರಿ (ಮ್ಯಾಪ್‌ ಯುನಿಟ್‌) ಇರುವುದು ಜೆ.ಪಿ.ನಗರದಲ್ಲಿ. ವಾರಕ್ಕೆ ಎರಡು ದಿನ ಕಚೇರಿಗೆ ಸೈಕಲ್‌ನಲ್ಲಿ ಹೋಗುವ ಅವರು ಉಳಿದ ದಿನ ಬಿಎಂಟಿಸಿ ಬಸ್‌ ಬಳಸುತ್ತಾರಂತೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !