ಮಂಗಳವಾರ, ಜನವರಿ 28, 2020
19 °C

ಸಾಕುಪ್ರಾಣಿಗಳು ಇಷ್ಟವೇ?‘ಪೆಟ್‌ ಗ್ರೂಮರ್‌’ ಆಗಬಹುದು!

ಸಂಜು Updated:

ಅಕ್ಷರ ಗಾತ್ರ : | |

Prajavani

ಸಾಕುಪ್ರಾಣಿಗಳ ಬಗ್ಗೆ ನಿಮಗೆ ಪ್ರೀತಿ ಇದ್ದರೆ ಅಥವಾ ಅವುಗಳನ್ನು ನೋಡಿಕೊಳ್ಳುವ ಹಾಗೂ ಪ್ರಾಣಿಗಳೊಂದಿಗೆ ಸಮಯ ಕಳೆಯವ ಹವ್ಯಾಸ ನಿಮ್ಮದಾಗಿದ್ದರೆ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಬಹುದು. ಹೌದು, ನಗರಗಳಲ್ಲಿ ಇತ್ತೀಚೆಗೆ ಸಾಕುಪ್ರಾಣಿಗಳ ಅಂದ, ಸ್ವಚ್ಛತೆಯನ್ನು ನಿರ್ವಹಿಸುವ, ಅವುಗಳಿಗೆ ಸಣ್ಣಪುಟ್ಟ ತರಬೇತಿ ನೀಡುವ ‘ಪೆಟ್‌ ಗ್ರೂಮರ್‌‘ (ಪ್ರಾಣಿಗಳ ಸೌಂದರ್ಯತಜ್ಞ ಎನ್ನಬಹುದು) ಗಳಿಗೆ ಸಾಕಷ್ಟು ಅವಕಾಶಗಳಿವೆ.

ಸಾಕುಪ್ರಾಣಿಗಳನ್ನು ಆರೈಕೆ ಮಾಡುವ ಹಾಗೂ ಅವುಗಳ ಸೌಂದರ್ಯ ಹೆಚ್ಚಿಸುವ ಕೆಲಸ ಈಗ ಹೊಸ ವೃತ್ತಿಯಾಗಿ ಬೆಳೆಯುತ್ತಿದೆ. ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳ ಮೊದಲಾದ ಪ್ರಾಣಿ– ಪಕ್ಷಿಗಳನ್ನು ಸಾಕುವ ಪ್ರಾಣಿಪ್ರಿಯರು ಅವುಗಳನ್ನು ಹೊಸ ಹೊಸ ರೂಪದಲ್ಲಿ ನೋಡಲು ಬಯಸುತ್ತಾರೆ. ಕೆಲವರು ಬೇರೆ ಸ್ಥಳಕ್ಕೆ ಹೋಗುವಾಗ ಅವುಗಳನ್ನು ಕೆಲವು ದಿನಗಳವರೆಗೆ ಆರೈಕೆ ಕೇಂದ್ರಗಳಲ್ಲಿ ಬಿಟ್ಟು ಹೋಗುತ್ತಾರೆ. ಹೀಗಾಗಿ ಸಾಕುಪ್ರಾಣಿಗಳ ಆರೈಕೆ ಕೇಂದ್ರಗಳೂ ಹೊಸ ಉದ್ಯಮವಾಗಿ ಬೆಳೆಯುತ್ತಿವೆ.

ನಿಮಗೆ ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೆ ಅವುಗಳನ್ನು ಹೇಗೆ ಸಾಕಬೇಕು; ಆರೈಕೆ, ಆಹಾರ ಹೇಗಿರಬೇಕು; ಅವುಗಳ ಸೌಂದರ್ಯ ಹೆಚ್ಚಿಸುವುದು ಹೇಗೆ; ಪ್ರೀತಿಯಿಂದ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ಪಡೆದು ಸಾಕುಪ್ರಾಣಿ ಆರೈಕೆ ಕೇಂದ್ರಗಳನ್ನು ಆರಂಭಿಸಬಹುದು.

ಸಾಕುಪ್ರಾಣಿಗಳನ್ನು ಪಳಗಿಸಲು ಹಾಗೂ ಆರೈಕೆ ಮಾಡಲು ಕೆಲವು ಆನ್‌ಲೈನ್ ಕೋರ್ಸ್‌ಗಳನ್ನು ಮಾಡಬಹುದು. ಈ ಕೋರ್ಸ್ ಮೂಲಕ ಹಾಗೂ ಎರಡು ತಿಂಗಳು ಸಾಕುಪ್ರಾಣಿ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಮೂಲಕ ವೃತ್ತಿ ಜೀವನ ಆರಂಭಿಸಬಹುದು. ನಿಮಗೆ ಸಾಕುಪ್ರಾಣಿ ಬಗ್ಗೆ ಹೆಚ್ಚಿನ ಜ್ಞಾನ, ಅನುಭವವಿದ್ದರೆ ಪರವಾನಗಿ ಪಡೆದು ಆರೈಕೆ ಕೇಂದ್ರ ಆರಂಭಿಸಬಹುದು.

ಕೌಶಲಗಳು

ಸಾಕುಪ್ರಾಣಿಗಳ ಬಗ್ಗೆ ಹೆಚ್ಚು ಪ್ರೀತಿ ಇರಬೇಕು. ಕೆಲವು ಪ್ರಾಣಿಗಳು ಇತರರೊಂದಿಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಹೆಚ್ಚಿನ ತಾಳ್ಮೆ ಮೂಲಕ ಅವುಗಳೊಂದಿಗೆ ಬೆರೆಯಬೇಕಾಗುತ್ತದೆ. ಅವುಗಳಿಗೆ ತೊಂದರೆಯಾಗದಂತೆ ಪ್ರೀತಿಯಿಂದ ಪಳಗಿಸುವ ಕಲೆ ಅಗತ್ಯ. ಜೊತೆಗೆ ಪ್ರಾಣಿಗಳನ್ನು ಮೇಲಕ್ಕೆ ಎತ್ತುವಷ್ಟು ದೈಹಿಕವಾಗಿ ಸದೃಢರಾಗಿರಬೇಕು ಹಾಗೂ ಸಮಯ ಪ್ರಜ್ಞೆ ಕೂಡ ಮುಖ್ಯ.

ಪ್ರಾಣಿಗಳ ನಡವಳಿಕೆ, ನಿಯಂತ್ರಣ ಮತ್ತು ಸುರಕ್ಷತೆ ಬಗ್ಗೆ ತಿಳಿದಿರಬೇಕು. ಸಾಕುಪ್ರಾಣಿಗಳಿಗೆ ಯಾವ ಕಾಯಿಲೆಗಳು ಮತ್ತು ರೋಗಗಳು ಬರುತ್ತವೆ ಎಂಬುದು ತಿಳಿದಿರಬೇಕು. ಅವುಗಳ ಚರ್ಮವನ್ನು ಗಮನಿಸಿ ಸ್ವಚ್ಛತೆ ಬಗ್ಗೆ ತಿಳಿಯಬೇಕು. ಅದಕ್ಕೆ ತಕ್ಕಂತೆ ಔಷಧಿಗಳನ್ನು ನೀಡುವುದು ಹಾಗೂ ಪಶುವೈದ್ಯರ ಗಮನಕ್ಕೆ ತರುವಂತಹ ಕೌಶಲಗಳು ಅತ್ಯಗತ್ಯ. ಜೊತೆಗೆ ಸಾಕುಪ್ರಾಣಿಗಳಿಗೆ ಸ್ನಾನ ಮಾಡಿಸುವ ವಿಧಾನಗಳು, ಅವುಗಳ ಕೂದಲು ವಿನ್ಯಾಸಗೊಳಿಸುವ ಕಲೆ ತಿಳಿದಿರಬೇಕು.

ಅಗತ್ಯ ವಸ್ತುಗಳು

ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಮೊದಲು ಕೆಲವು ಅಗತ್ಯ ವಸ್ತುಗಳನ್ನು ಹೊಂದಿರಬೇಕು. ಸಾಕುಪ್ರಾಣಿಗಳ ಆರೈಕೆಗೆ ಕೇಂದ್ರದಲ್ಲಿ ಇರಬೇಕಾದ ಕೆಲವು ಉಪಕರಣಗಳು:

ಪ್ರಾಣಿಗಳನ್ನು ಕೂರಿಸಿ ಸೌಂದರ್ಯ ಚಿಕಿತ್ಸೆ ಕೊಡುವ ಟೇಬಲ್‌

ಸ್ನಾನಕ್ಕೆ ಷವರ್‌, ಶಾಂಪೂ, ಸೋಪ್‌

ಕತ್ತರಿ, ಎಲೆಕ್ಟ್ರಿಕ್‌ ಹೇರ್‌ ಕಟ್‌ ಮಷಿನ್‌ ಹಾಗೂ ಬಾಚಣಿಕೆ

ಉಗುರು ಕತ್ತರಿಸುವ ಕಟರ್‌‌ಗಳು

ಆಯಾ ಪ್ರಾಣಿಗಳಿಗೆ ತಕ್ಕಂತೆ ಕೊಠಡಿಗಳು

ಬೆಲ್ಟ್‌ ಹಾಗೂ ಸರಪಣಿ

ಆಹಾರ ನೀಡುವ ತಟ್ಟೆಗಳು

ರೋಗ ನಿರೋಧಕ ಔಷಧಿಗಳು ಹಾಗೂ ಚುಚ್ಚು ಮದ್ದುಗಳು

ಆಹಾರ ಹಾಗೂ ಇತರ ಅಗತ್ಯ ವಸ್ತುಗಳು

ಆರೈಕೆ ಕೇಂದ್ರ ಹೇಗಿರಬೇಕು?

ಪ್ರಾಣಿಗಳಿಗೆ ಹೊಂದುವಂತಹ ಸರಿಯಾದ ಸ್ಥಳವಿರಬೇಕು. ಸುರಕ್ಷಿತವಾದ ಮಳಿಗೆ ಜೊತೆಗೆ ವಿದ್ಯುತ್‌ ಹೊಂದಿರಬೇಕು. ಸ್ನಾನ ಮಾಡಿಸಲು ಅಗತ್ಯ ಸ್ಥಳವಿರಬೇಕು. ಆಯಾ ಪ್ರಾಣಿಗಳಿಗೆ ತಕ್ಕಂತೆ ಪ್ರತ್ಯೇಕ ಕೊಠಡಿಗಳು ಹಾಗೂ ಅವುಗಳ ವಸ್ತುಗಳು ಇರಬೇಕು. ಅವುಗಳಿಗೆ ನೀಡಬೇಕಾದ ಆಹಾರದ ಬಗ್ಗೆಯೂ ಗಮನ ನೀಡಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು