ಗುರುವಾರ , ನವೆಂಬರ್ 26, 2020
21 °C
ಬ್ಯಾಂಕ್‌ಗಳ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ * ಐಬಿಪಿಎಸ್ ಮುಖ್ಯ ಪರೀಕ್ಷೆ ನ.28ರಂದು

ಈ ಬಾರಿಯೂ ಇಲ್ಲ ಕನ್ನಡದಲ್ಲಿ ಬರೆಯುವ ಭಾಗ್ಯ

ಪ್ರವೀಣ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ಬ್ಯಾಂಕ್‌ ಸಿಬ್ಬಂದಿ ಆಯ್ಕೆಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಲ್ಲೂ ನಡೆಸಬೇಕು ಎಂಬ ಎಂಟು ವರ್ಷಗಳ ಹೋರಾಟಕ್ಕೆ ಈ ಬಾರಿಯೂ ಸ್ಪಂದನೆ ಸಿಕ್ಕಿಲ್ಲ.

2021–22ನೇ ಸಾಲಿನಲ್ಲಿ ಖಾಲಿಯಾಗಲಿರುವ ಪ್ರೊಬೇಷನರಿ ಅಧಿಕಾರಿಗಳು/ ಮ್ಯಾನೇಜ್‌ಮೆಂಟ್‌ ಟ್ರೈನಿ ಹಾಗೂ ಇದೇ ವೃಂದದ ಇತರ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಐಬಿಪಿಎಸ್‌ ನಡೆಸುತ್ತಿದೆ. ಇದರ ಮುಖ್ಯ ಪರೀಕ್ಷೆಯನ್ನು ನ. 28ರಂದು ನಡೆಸುವುದಾಗಿ ಸಂಸ್ಥೆ ಪ್ರಕಟಿಸಿದೆ. ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ತೇರ್ಗಡೆಯಾಗುವ ಅಭ್ಯರ್ಥಿಗಳ ಸಂದರ್ಶನ ನಡೆಸಿ ಆಯಾ ಬ್ಯಾಂಕ್‌ಗಳೇ ನೇಮಕಾತಿ ಮಾಡಿಕೊಳ್ಳಲಿವೆ. 2021ರ ಜನವರಿಯಲ್ಲಿ ಸಂದರ್ಶನಗಳು ನಡೆಯಲಿದ್ದು, ಏಪ್ರಿಲ್‌ನಲ್ಲಿ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿ ಬಿಡುಗಡೆ ಆಗಲಿದೆ. 

ಈ ಹುದ್ದೆಗಳ ಆಯ್ಕೆಗೆ ನಡೆದ ಪೂರ್ವಭಾವಿ ಪರೀಕ್ಷೆಯನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಬರೆಯಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮುಖ್ಯ ಪರೀಕ್ಷೆಯನ್ನಾದರೂ ಹಿಂದಿಯೇತರ ಭಾಷೆಗಳಲ್ಲೂ ಬರೆಯುವುದಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ಈ ಬಾರಿಯೂ ಐಬಿಪಿಎಸ್‌ ಕಿವಿಗೊಟ್ಟಿಲ್ಲ. ಈ ಬಾರಿಯೂ ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲೇ ಮುಖ್ಯಪರೀಕ್ಷೆ ಎದುರಿಸಬೇಕಿದೆ.

ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಮೂರು ತಾಸುಗಳಲ್ಲಿ 155 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಇದಲ್ಲದೇ ಇಂಗ್ಲಿಷ್‌ನಲ್ಲಿ ಪತ್ರ ಬರೆಯುವ 30 ನಿಮಿಷ ಅವಧಿಯ ಪರೀಕ್ಷೆಯೂ ಇರಲಿದ್ದು, ಇದಕ್ಕೆ 25 ಅಂಕಗಳಿವೆ.

ಭಾಷಾ ಸಂಘಟನೆಗಳ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, 2019ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯುವುದಕ್ಕೆ ಅವಕಾಶ ನೀಡಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕಾತಿಯಲ್ಲೂ ಇದೇ ನೀತಿ ಅನುಸರಿಸಬೇಕು. ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳೆರಡನ್ನೂ ಹಿಂದಿಯೇತರ ಭಾಷೆಗಳಲ್ಲೂ ಬರೆಯಲು ಅವಕಾಶ ನೀಡಬೇಕು ಎಂದು ರಾಜ್ಯದ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಇದಕ್ಕೆ ದನಿಗೂಡಿಸಿದ್ದ ಕೆಲವು ಸಂಸದರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಂಸತ್‌ ಅಧಿವೇಶನದಲ್ಲೂ ಈ ಬೇಡಿಕೆ ಬಗ್ಗೆ ಪ್ರಸ್ತಾಪಿಸಿದ್ದರು. 

‘ಹಿಂದಿ ಭಾಷಿಕರು ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸುತ್ತಾರೆ. ಹಿಂದಿಯೇತರ ಭಾಷಿಕ ಅಭ್ಯರ್ಥಿಗಳಿಗೆ ಈ ಅನುಕೂಲವಿಲ್ಲ. ಅವರಿಗೆ ಅನ್ಯಾಯವಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದಿಯೇತರ ಭಾಷೆಗಳನ್ನು ಹೇಗೆ ಕಡೆಗಣಿಸಲಾಗುತ್ತದೆ ಎಂಬುದಕ್ಕೆ ಇದು ಕನ್ನಡಿ’ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ಬೇಸರ ವ್ಯಕ್ತಪಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು