ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಜಿಬಿಟಿಕ್ಯು: ‘ರೈಸ್‌’ ಉದ್ಯೋಗ ಮೇಳ

ಎಲ್‌ಜಿಬಿಟಿ ಮೊದಲ ಉದ್ಯೋಗಮೇಳ ‘ರೈಸ್’
Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿರುವ ಬೆಂಗಳೂರುಇದೇ ಜುಲೈ 12ರಂದು ವಿಶೇಷ ಉದ್ಯೋಗ ಮೇಳವೊಂದಕ್ಕೂ ಸಾಕ್ಷಿಯಾಗಲಿದೆ. ಸಮಾಜದ ಮುಖ್ಯವಾಹಿನಿಂದ ದೂರ ಉಳಿದ ಸಲಿಂಗಿ, ಲಿಂಗಪರಿವರ್ತಿತರರು, ತೃತೀಯ ಲಿಂಗಿಗಳಿಗಾಗಿಪ್ರೈಡ್‌ ಸರ್ಕಲ್‌ ಕಂಪನಿ ‘ರೈಸ್‌’ ಉದ್ಯೋಗ ಮೇಳ ಆಯೋಜಿಸಿದೆ.

ಸಲಿಂಗಿ, ತೃತೀಯ ಲಿಂಗಿ, ಲಿಂಗಪರಿವರ್ತಿತ (ಎಲ್‌ಜಿಬಿಟಿಕ್ಯು) ಸಮುದಾಯಕ್ಕಾಗಿಯೇ ಉದ್ಯೋಗ ಮೇಳವೊಂದು ನಡೆಯುತ್ತಿರುವುದುದೇಶದಲ್ಲಿ ಇದೇ ಮೊದಲು.ಸಾಮಾಜಿಕ ಸಮಾನತೆ, ಎಲ್ಲರನ್ನೂ ಒಳಗೊಳ್ಳುವಿಕೆ ಪ್ರತಿಪಾದಿಸುವ ‘ರೈಸ್‌’ ಉದ್ಯೋಗ ಮೇಳ ಉಳಿದ ಉದ್ಯೋಗ ಮೇಳಗಳಿಗಿಂತ ಭಿನ್ನವಾಗಲಿದೆ ಎನ್ನುವುದು ಪ್ರೈಡ್‌ ಸರ್ಕಲ್‌ ಕಂಪನಿ ವಿಶ್ವಾಸ.

ತಮ್ಮ ಅತಂತ್ರ ದೈಹಿಕ ಮತ್ತು ಲೈಂಗಿಕ ಸ್ಥಿತಿಯ ಕಾರಣಕ್ಕಾಗಿ ಉದ್ಯೋಗದಿಂದ ವಂಚಿತರಾದಪ್ರತಿಭಾನ್ವಿತ ಎಲ್‌ಜಿಬಿಟಿಕ್ಯೂಐ ಪ್ಲಸ್‌ ಸಮುದಾಯದ ಸದಸ್ಯರಿಗೆಉದ್ಯೋಗ ಮತ್ತು ಹಕ್ಕುಗಳನ್ನು ಒದಗಿಸುವುದು ಈ ಮೇಳದ ಉದ್ದೇಶವಾಗಿದೆ.ಉನ್ನತ ಮತ್ತು ಮಧ್ಯಮ ದರ್ಜೆಯ ಹುದ್ದೆಗಳ ಜತೆಗೆ ದೈಹಿಕ ಶ್ರಮ ಬೇಡುವ ಕೆಳ ದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನೂ ಮಾಡಿಕೊಡುವ ಮಹತ್ವದ ಉದ್ದೇಶ ಹೊಂದಿದೆ.

ರೈಸ್‌ ಉದ್ಯೋಗ ಮೇಳದಲ್ಲಿ ಎಲ್‌ಜಿಬಿಟಿಕ್ಯು ಸಮೂಹದ ಕನಿಷ್ಠ 800 ಜನರಿಗೆ ಉದ್ಯೋಗ ದೊರೆಕಿಸಿಕೊಡುವ ಗುರಿ ಇದೆ ಎನ್ನುತ್ತಾರೆ ಪ್ರೈಡ್‌ ಸರ್ಕಲ್‌ ಸಹ ಸಂಸ್ಥಾಪಕ ಸಿಇಒ ಶ್ರೀನಿವಾಸನ್‌ ರಾಮಸ್ವಾಮಿ.

ಸ್ನೇಹಿತರ ವಲಯದಲ್ಲಿ ಶ್ರೀನಿ ಎಂದು ಚಿರಪರಿಚಿತರಾಗಿರುವ ಅವರು ಉದ್ಯೋಗ ಮೇಳ ಮತ್ತು ಕಂಪನಿಯ ಕನಸುಗಳ ಕುರಿತು ‘ಮೆಟ್ರೊ’ ಜತೆ ಮಾತನಾಡಿದರು.

ಮುಂದಿನ ಎರಡು ವರ್ಷಗಳ ಒಳಗಾಗಿ ದೇಶದ 10 ನಗರಗಳಲ್ಲಿ ಇಂತಹ ಉದ್ಯೋಗ ಮೇಳವನ್ನು ಆಯೋಜಿಸುವ ಗುರಿ ಹೊಂದಲಾಗಿದೆ. ಭಾರತದಲ್ಲಿ ಪ್ರೈಡ್ ಸರ್ಕಲ್‍ಗೆ ಸಾಕಷ್ಟು ಉತ್ತಮ ಅವಕಾಶಗಳಿದ್ದು, ಕಾರ್ಪೋರೇಟರ್ ಕಂಪನಿಗಳ ಜೊತೆಗೆ ಅದು ಪೂರಕವಾಗಿ ಕೆಲಸ ಮಾಡಲಿದೆ ಎಂದರು.

ಎಲ್‍ಜಿಬಿಟಿ ಸಮೂಹಕ್ಕೆ ಕೆಲಸ ದೊರಕಿಸಿಕೊಡುವ ಮೂಲಕ ಕೆಲಸ ಮಾಡುವ ಸ್ಥಳದಲ್ಲಿ ಘನತೆ, ಸಮಾನತೆ ತಂದುಕೊಡಲು ಶ್ರಮಿಸಲಿದೆ. ಆ ಮೂಲಕ ಅವಕಾಶ ವಂಚಿತ ಸಮುದಾಯದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ವಿಶಿಷ್ಟ ಪ್ರಯತ್ನ ಮುಂದುವರೆಸಿಕೊಂಡು ಹೋಗಲಿದೆ ಎನ್ನುವುದು ಶ್ರೀನಿ ವಿಶ್ವಾಸ.

ತೃತೀಯ ಲಿಂಗಿಗಳ ಆಶಾಕಿರಣ ‘ಪ್ರೈಡ್‌’

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಮತ್ತು ಪ್ರಭಾವಿ ಸ್ಥಾನಗಳಲ್ಲಿರುವ ಸಿಬ್ಬಂದಿ ಸೇರಿ ಹುಟ್ಟು ಹಾಕಿರುವ ಕಂಪನಿಯೇ ಪ್ರೈಡ್‌ ಸರ್ಕಲ್‌ ಪ್ರೈವೇಟ್‌ ಲಿಮಿಟೆಡ್‌. ಎಲ್‌ಜಿಬಿಟಿ ಸಮೂಹವನ್ನು ಸಮಾಜಿಕ ಒಳಗೊಳ್ಳುವಿಕೆ ಕ್ರಿಯೆಯಲ್ಲಿ ತೊಡಗಿಸುವ ಮತ್ತು ಉದ್ಯೋಗ ಸೇರಲು ಅವಕಾಶ ಮಾಡಿಕೊಡುವ ಮಹತ್ವದ ಉದ್ದೇಶದೊಂದಿಗೆ ಎರಡು ವರ್ಷಗಳ ಹಿಂದೆ ಪ್ರೈಡ್‌ ಸರ್ಕಲ್‌ ಕಾರ್ಯಾರಂಭ ಮಾಡಿದೆ.

ಪ್ರತಿಭಾನ್ವಿತ ತೃತೀಯ ಲಿಂಗಿಗಳಿಗೆ ಉದ್ಯೋಗ ಮತ್ತು ಅವರ ಹಕ್ಕುಗಳನ್ನು ಒದಗಿಸುವುದು ಈ ಕಂಪನಿಯ ಮೂಲ ಉದ್ದೇಶ. ವಿವಿಧ ಕಂಪನಿಗಳ ಉದ್ಯೋಗದಾತರು ಮತ್ತು ವ್ಯಕ್ತಿಗಳ ನಡುವೆ ಸಂವಹನ ಕಲ್ಪಿಸುವ ವೇದಿಕೆಯಂತೆ ಇದು ಕೆಲಸ ಮಾಡುತ್ತಿದೆ.

ಬೆಂಗಳೂರಿನ ಶ್ರೀನಿವಾಸನ್‌ ರಾಮಸ್ವಾಮಿ ಮತ್ತು ಬಿಹಾರದ ರಾಮಕೃಷ್ಣ ಸಿನ್ಹಾ ನೇತೃತ್ವದಲ್ಲಿ 2017ರಲ್ಲಿ ಈ ಕಂಪನಿಯನ್ನು ಹುಟ್ಟು ಹಾಕಿದರು. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಜೈಪುರ, ದೆಹಲಿ, ಕೋಲ್ಕತ್ತ, ಮುಂಬೈ, ಜೆಮ್‌ಷೆಡ್‌ಪುರದಲ್ಲೂ ಕಂಪನಿಯ ಕಚೇರಿ ತೆರೆಯಲಾಗಿದೆ.

80ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು, ಭಾರತೀಯ ಕಂಪನಿಗಳು, ನವೋದ್ಯಮಗಳಲ್ಲಿ ಪ್ರೈಡ್‌ ಸರ್ಕಲ್‌ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿದೆ. ಸದಸ್ಯತ್ವ ಮುಕ್ತವಾಗಿದ್ದು, ಯಾರು ಬೇಕಾದರೂ ಉಚಿತವಾಗಿ ಸದಸ್ಯತ್ವ ಪಡೆದುಕೊಳ್ಳಬಹುದು.

ಎಲ್ಲ ಕಂಪನಿಗಳ ಮಾನವ ಸಂಪನ್ಮೂಲ ನೀತಿ ನಿರೂಪಣೆಯಲ್ಲಿ ತೃತೀಯ ಲಿಂಗಿಗಳನ್ನೂ ಒಳಗೊಳ್ಳುವಿಕೆ ಒಂದು ಭಾಗವಾಗಬೇಕು. ಎಲ್‌ಜಿಬಿಟಿ ಸಮೂಹದ ಸದಸ್ಯರನ್ನು ಅವರ ಪ್ರತಿಭೆಯ ಮೇಲೆ ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳುವಂತೆ ಪ್ರಭಾವ ಬೀರುವ ಕೆಲಸವನ್ನು ಈ ಕಂಪನಿ ಮಾಡುತ್ತಿದೆ.

ಪ್ರೈಡ್‌ ಸರ್ಕಲ್‌ ಸದುದ್ದೇಶವನ್ನು ಮನಗಂಡಿರುವ ಹಲವಾರು ಕಂಪನಿಗಳು, ಸಂಸ್ಥೆಗಳು ಪ್ರೈಡ್‌ ಜತೆ ಹೆಜ್ಜೆ ಹಾಕಲು ಮುಂದೆ ಬಂದಿರುವುದು ಪ್ರೈಡ್‌ ಸರ್ಕಲ್‌ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಕಾರ್ಯಕ್ರಮದ ರೂಪುರೇಷೆ

ಜುಲೈ 12: ಬೆಳಿಗ್ಗೆ 9ರಿಂದ ಸಂಜೆ 5

ಭಾಗ 1- ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ಜಾಗತಿಕ ಮಟ್ಟದ ನಾಯಕರು ಎಲ್‌ಜಿಬಿಟಿ ಸಮೂಹದ ಸಾಮಾಜಿಕ ಒಳಗೊಳ್ಳುವಿಕೆ ಉತ್ತಮ ವಿಧಾನಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಎಲ್‌ಜಿಬಿಟಿ ಸಮೂಹಕ್ಕೆ ವಿವಿಧ ಕ್ಷೇತ್ರಗಳಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ಅರಿವು ನೀಡಿ, ಉಜ್ವಲ ಭವಿಷ್ಯ ರೂಪಿಸುವುದು ಇದರ ಗುರಿಯಾಗಿದೆ. 250–300 ಎಲ್‌ಜಿಬಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಭಾಗ 2. ಮಧ್ಯಾಹ್ನ 1:30– ಸಂಜೆ 5:30

ಉದ್ಯೋಗ ಮೇಳದಲ್ಲಿ ಭಾಗವಹಿಸುವವರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು 9 ವಿವಿಧ ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿವೆ. ಕೆಲವು ಪ್ರಮುಖ ಕಾಪೋರೇಟ್ ಕಂಪನಿಗಳ ನುರಿತ ತಜ್ಞರು ಪ್ರಬಂಧ ಮಂಡಿಸಲಿದ್ದಾರೆ.

ಈ ಮೇಳದಲ್ಲಿ 40 ರಿಂದ 50 ಕಂಪನಿಗಳು ಭಾಗವಹಿಸಲಿದ್ದು ಸಂಪರ್ಕಕ್ಕಾಗಿ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಇದು ಎಲ್‍ಜಿಬಿಟಿಐ ಅಭ್ಯರ್ಥಿಗಳೊಂದಿಗೆ ಬೆರೆಯಲು ಅವಕಾಶ ಕಲ್ಪಿಸುತ್ತದೆ.

ಎಲ್‍ಜಿಬಿಟಿಐ ವಿದ್ಯಾರ್ಥಿಗಳು, ಉದ್ಯೋಗಸ್ಥರ ಜೊತೆಗೆ ಬೆರೆಯಲು ಮಾರ್ಗದರ್ಶನ ನೀಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆಗಾಗಿ ತ್ವರಿತ ಸಂದರ್ಶನ ವಲಯಗಳನ್ನು ತೆರೆಯಲಾಗುವುದು.

ಉದ್ಯೋಗಕ್ಕೆ ನೆರವು

ಈ ಉದ್ಯೋಗ ಮೇಳದಲ್ಲಿ ಎಲ್‍ಜಿಬಿಟಿ ಸಮೂಹದ ಸ್ವಯಂ ಉದ್ಯೋಗ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳ ಪೂರೈಕೆಗೆ ವ್ಯಾಪಾರಿಗಳ ಸಹಭಾಗಿತ್ವ ಪಡೆಯಲು ಸಹಾಯ ನೀಡಲಾಗುವುದು. ಎಲ್‍ಜಿಬಿಟಿಐ ನೇತೃತ್ವದಲ್ಲಿ ನಡೆಯುತ್ತಿರುವ 20ಕ್ಕಿಂತ ಹೆಚ್ಚು ಉದ್ಯಮಗಳಿಗೆ ಅವಕಾಶ ನೀಡಲಾಗುವುದು. ಅವರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಕಾರ್ಪೊರೇಟ್‌ ಸಂಸ್ಥೆಗಳು, ಅಭ್ಯರ್ಥಿಗಳು, ಸ್ವಯಂ ಸೇವಾಸಂಸ್ಥೆಗಳು, ಎಲ್‌ಜಿಬಿಟಿ ಮಾಲಿಕತ್ವದ ವಾಣಿಜ್ಯೋದ್ಯಮ ಸಂಸ್ಥೆಗಳು ರೈಸ್‌ನಲ್ಲಿ ಪಾಲ್ಗೊಳ್ಳಲಿವೆ. ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ: www.thepridecircle.com/https://www.thepridecircle.com/rise / ಮೊಬೈಲ್‌ ಸಂಖ್ಯೆ–+91 9741116929. ಎಲ್‌ಜಿಬಿಟಿಕ್ಯೂ ಸಮುದಾಯ ಮತ್ತು ಪ್ರೈಡ್‌ ಸರ್ಕಲ್‌ ವಾಟ್ಸ್‌ ಆ್ಯಪ್‌ ಗ್ರುಪ್‌ ಕೂಡ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT