7

ಕೆರೆ ದಂಡೆಯಲ್ಲಿ ತೆಪ್ಪದ ಬದುಕು!

Published:
Updated:

ಮಹಾರಾಷ್ಟ್ರದ ಬಿದಿರು, ಸ್ಥಳೀಯ ಎಪಿಎಂಸಿಯಲ್ಲಿ ಸಿಕ್ಕ ಹಳೇ ಗೋಣಿತಾಟು, ಅಲ್ಲಿ ಇಲ್ಲಿ ಉಳಿದ ಟಾರು ಮೆತ್ತಿಕೊಂಡ ಗೋಣಿ ಬಿದಿರಿನ ಚೌಕಟ್ಟಿಗೆ ಅಂಗಿಯಾಗುತ್ತದೆ. ಈಗ ನೋಡಿ ಕಾಮನೂರು ಕೆರೆಯಲ್ಲಿ ಪರೀಕ್ಷಾರ್ಥ ಚಾಲನೆ. ಲೀಕ್‌ಪ್ರೂಫ್‌, ಬ್ರೇಕ್‌ಪ್ರೂಫ್‌ ಆಗಿದೆಯೇ ಎಂದು ಪರೀಕ್ಷಿಸಿದ ನಂತರ ತಾನು ಸೇರಬೇಕಾದ ಜಾಗಕ್ಕಾಗಿ ಮಾವಿನ ಮರದಡಿಯ ಷೋರೂಂನ ಅಡಿ ತಣ್ಣಗೆ ಕಾಯುತ್ತಾ ಕುಳಿತಿರುತ್ತದೆ. 

ಇದು ಯಾವುದೋ ಆಟೊಮೋಬೈಲ್‌ ಕಾರ್ಖಾನೆಯ ಕಥೆ ಅಲ್ಲ. ಕೊಪ್ಪಳ ತಾಲ್ಲೂಕು ಕಾಮನೂರು ಕೆರೆಯ ದಂಡೆಯಲ್ಲಿ ಮುರುಗೇಶನ್‌ ಮತ್ತು ಅವರ ಸಹಾಯಕ ಅಂಜಿನಿ ತೆಪ್ಪ ಕಟ್ಟುತ್ತಿರುವ ಬಗೆ ಇದು. 

ಮುರುಗೇಶನ್‌ಗೆ ತೆಪ್ಪ ಕಟ್ಟಲು ಬರುತ್ತದೆ. ಬಿದಿರು ಸೀಳಲು ಗೊತ್ತಿಲ್ಲ. ಆ ಕೆಲಸ ಬಳ್ಳಾರಿಯ ಅಂಜಿನಿಯದ್ದು. ತೆಳ್ಳನೆಯ ಬಿದಿರನ್ನು ಎರಡಾಗಿ ಸೀಳಿ ದುಂಡಗೆ ಬಾಗುವಂತೆ ಪಳಗಿಸಿ ಕೊಡುವುದು ಅಂಜನಿಯ ಕೈಚಳಕ. ಈಗ ಮುರುಗೇಶನ್‌ ಕೈಯಲ್ಲಿ ತೆಪ್ಪದ ‘ಚಾಸಿ’ ಸಿದ್ಧವಾಗುತ್ತದೆ. ದೊಡ್ಡದೊಂದು ಸೂರ್ಯಕಾಂತಿ ಹೂವು ಅರಳಿದಂತೆ ಕಾಣುತ್ತದೆ ನಿರ್ಮಾಣ ಹಂತದ ತೆಪ್ಪ. ದಪ್ಪದ ಬಿದಿರು ತೆಪ್ಪದ ಬೆನ್ನೆಲುಬು. ಅದರ ಒಳ–ಹೊರಗೆ ತೆಳ್ಳಗಿನ ಸೀಳುಬಿದಿರನ್ನು ಹೆಣೆಯುತ್ತಾರೆ. ತೆಪ್ಪ ಬುಟ್ಟಿಯಾಕಾರಕ್ಕೆ ಬಂದ ಮೇಲೆ ಮೇಲ್ಭಾಗದಲ್ಲಿ ದುಂಡನೆಯ ಗಟ್ಟಿ ಬಿದಿರನ್ನು ಸುತ್ತಿ ಅದಕ್ಕೆ ಎಳೆಯ ಬಳ್ಳಿ ಅಥವಾ ನೈಲಾನ್‌ ದಾರ ಕಟ್ಟಿ ಭದ್ರಪಡಿಸುತ್ತಾರೆ.

ಮುಂದೆ ನೋಡಿ ತೆಪ್ಪಕ್ಕೆ ವಾಟರ್‌ಪ್ರೂಫ್‌ ಟಾರಿನ ಕೋಟ್‌ ರೆಡಿ. ಇದೇ ಗುರು– ಶಿಷ್ಯರು ಟಾರು ಬಳಿದ ಗೋಣಿ ತಾಟನ್ನು ಬಿಗಿಯಾಗಿ ತೆಪ್ಪದ ತಳಭಾಗಕ್ಕೆ ಕಟ್ಟುತ್ತಾರೆ. ಇಂಥ ಎರಡು ಹಾಳೆಗಳನ್ನು ಸುತ್ತುವುದುಂಟು. ಒಂದು ತೂತು ಬಿದ್ದರೂ ತೆಪ್ಪದೊಳಗೆ ನೀರು ಸೋರಿ ಬರಬಾರದು ಎಂಬ ಉದ್ದೇಶ ಇದರದ್ದು. ಇಬ್ಬರೂ ಅವಿರತವಾಗಿ ಕೆಲಸ ಮಾಡಿದರೆ ದಿನಕ್ಕೆ ಒಂದು ತೆಪ್ಪ ಸಿದ್ಧವಾಗುತ್ತದೆ. ಅಂಜಿನಿಗೆ ಇದೊಂದು ಟೈಂ ಪಾಸ್‌ ಕೆಲಸ. ಮುರುಗೇಶನ್‌ಗೆ ತೆಪ್ಪ ನಿರ್ಮಿಸುವ ಜತೆ ಮೀನು ಹಿಡಿಯುವ ಕಸುಬು. ಸಾವಿರಾರು ಮೀನು ಮರಿಗಳನ್ನು ಕೆರೆಗೆ ಬಿಟ್ಟು ಮೀನು ಹಕ್ಕಿ ಸುಳಿಯದಂತೆ ಅವರು ಕಾಯುತ್ತಿದ್ದಾರೆ.

ಹೀಗೆ ಬಯಲು ಸೀಮೆಯ ಒಣ ಭೂಮಿಯಲ್ಲಿ ನಿರ್ಮಾಣವಾದ ತೆಪ್ಪಕ್ಕೆ ಭದ್ರಾವತಿ, ಚನ್ನಗಿರಿ ಸಮೀಪದ ಸೂಳೆಕೆರೆ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದ ಪ್ರಮುಖ ಕೆರೆ ಪ್ರದೇಶದಲ್ಲಿರುವ ಮೀನುಗಾರರಿಂದ, ಮೀನುಗಾರರ ಸಂಘಗಳಿಂದ ಬೇಡಿಕೆ ಬರುತ್ತದೆ. ತೆಪ‍್ಪವೊಂದಕ್ಕೆ ₹2,500 ದರ ನಿಗದಿಪಡಿಸಿದ್ದಾರೆ. ಒಮ್ಮೊಮ್ಮೆ ಬೆಲೆ ವ್ಯತ್ಯಾಸವಾಗುವುದೂ ಇದೆ. 

‘ತೆಪ್ಪಕ್ಕೆ ಬಳಸುವ ಬಿದಿರು ಸುಲಭವಾಗಿ ರಾಜ್ಯದಲ್ಲಿಯೇ ಸಿಗಬೇಕು. ಅರಣ್ಯ ಇಲಾಖೆಯಿಂದ ಇರುವ ನಿಯಮಾವಳಿಗಳ ಅಡೆತಡೆ ನೀಗಬೇಕು. ತೆಪ್ಪ ನಿರ್ಮಾಣ, ಮೀನುಗಾರಿಕೆ  ಸಂಬಂಧಿಸಿ ಸರ್ಕಾರದ ನೆರವೆಲ್ಲವೂ ಮೀನುಗಾರರ ಸಂಘಗಳಿಗೆ ಸಿಗುತ್ತದೆ. ವಾಸ್ತವವಾಗಿ ಆ ಸಂಘದ ಸದಸ್ಯರಾಗಲಿ ಪದಾಧಿಕಾರಿಗಳಾಗಲಿ ಮೀನುಗಾರಿಕೆ ಕಸುಬು ಮಾಡುವುದೇ ಇಲ್ಲ. ಏನೇ ಬೇಕಾದರೂ ಅವರ ಮೂಲಕ ನಾವು ಮೀನು ಹಿಡಿಯುವ ಹಕ್ಕು ಪಡೆಯಬೇಕಾಗುತ್ತದೆ. ಈ ಸಮಸ್ಯೆಗಳೆಲ್ಲಾ ನಿವಾರಣೆ ಆಗಬೇಕು’ ಎಂದು ಕನಸು ಕಾಣುತ್ತಿದ್ದಾರೆ ಮುರುಗೇಶನ್‌ ಮತ್ತು ಅಂಜಿನಿ.

ಕಾಮನೂರಿನ ಜನ ಇವರನ್ನು ವಿಶ್ವಾಸದಿಂದ ಕಂಡಿದ್ದಾರೆ. ಅಂದಹಾಗೆ ಇವರಿಬ್ಬರೂ ಬಳ್ಳಾರಿಯಿಂದ ಬಂದವರು. ಇಲ್ಲಿ ಬಂದು ಬಿದಿರಿನ ಪುಟ್ಟ ತಡಿಕೆಯೊಳಗೆ ದಿನ ಕಳೆಯಲು ಆರಂಭಿಸಿ ಹಲವಾರು ವರ್ಷಗಳೇ ಕಳೆದಿವೆ. ನಿಸರ್ಗದ ಮಕ್ಕಳಾಗಿ ದಿನ ಕಳೆಯುತ್ತಿದ್ದಾರೆ. ತೆಪ್ಪ ನಿರ್ಮಾಣ ನೋಡುವ, ಕಲಿಯುವ ಕುತೂಹಲದಿಂದ ಊರಿನ ಯುವಕರೂ ಒಮ್ಮೊಮ್ಮೆ ನೆರವಾಗುವುದುಂಟು. 

ಕೆರೆಯ ದಂಡೆಯಲ್ಲಿ ಮುರುಗೇಶನ್‌ ಸಾಕಿದ ಬಾತುಕೋಳಿಗಳು ಕೆರೆಗೂ, ದಂಡೆಗೂ ಮಧ್ಯೆ ಓಡಾಡುತ್ತಿರುತ್ತವೆ. ದಂಡೆಯಲ್ಲಿ ನಿಂತ ನಾಟಿಕೋಳಿಗಳ ಸಂಸಾರ ಬಾತು ಕೋಳಿಗಳೊಂದಿಗೆ ಬೆರೆತುಬಿಟ್ಟಿವೆ. ಬಿದಿರಿನ ತಡಿಕೆಯಲ್ಲೇ ಒಂದು ಅಟ್ಟಣಿಕೆಯಿದೆ. ಅದರಲ್ಲಿ ಕುರಿಮರಿ, ಕೆಳಗೆ ತಾಯಿ ಕುರಿ, ಹಾಲಿಗಾಗಿ ಮೇಕೆ... ಹೀಗೆ ಪ್ರಾಣಿ, ಪಕ್ಷಿ ಮನುಷ್ಯರ ಸಹಬಾಳ್ವೆ ಸಾಗಿದೆ. ಎಲ್ಲರಿಗೂ ಕಾವಲುಗಾರನಾಗಿ ನಾಯಿ ಕಾಯುತ್ತಿದೆ. ರಾತ್ರಿ ವೇಳೆ ಈ ಪುಟ್ಟ ಗೂಡನ್ನು ಸೋಲಾರ್‌ ದೀಪ ಬೆಳಗುತ್ತದೆ. ಅದುವರೆಗೂ ಬೇರೆಲ್ಲಿಯೂ ಕಾಣಿಸದ ಟ್ರಾನ್ಸಿಸ್ಟರ್‌ ಹೊಸಪೇಟೆ ಆಕಾಶವಾಣಿಯ ಧ್ವನಿಯನ್ಜು ಕೇಳಿಸುತ್ತಿದೆ. ಹೀಗೆ ಕೆರೆಯ ಏರಿಯಲ್ಲಿ  ದಿನ ಕಳೆದರೆ ಕಾಲ ಎರಡು ದಶಕಗಳಿಗಿಂತ ಹಿಂದಕ್ಕೆ ಕರೆದೊಯ್ಯುತ್ತದೆ.

ಚಿತ್ರಗಳು: ಭರತ್‌ ಕಂದಕೂರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !