ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿ, ‘ಶುದ್ಧ’ ಆಹಾರ: ಮಂಜೀತ್ ಫಿಟ್‌

Last Updated 25 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಹಸಿವಾದಾಗ ಸಮರ್ಪಕ, ‘ಶುದ್ಧ’ ಆಹಾರ ಮತ್ತು ದಣಿವಾದಾಗ ವಿಶ್ರಾಂತಿ. ಇವಿಷ್ಟೇ ಅಥ್ಲೀಟ್‌ ಮಂಜೀತ್ ಸಿಂಗ್ ಅವರ ಫಿಟ್‌ನೆಸ್‌ ತಂತ್ರ ಮತ್ತು ಮಂತ್ರ.

ಸೆಪ್ಟೆಂಬರ್‌ನಲ್ಲಿ ಜಕಾರ್ತದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಮಂಜೀತ್‌ ಸಾಧನೆಯ ಹಾದಿಯಲ್ಲಿ ತುಂಬ ಕಷ್ಟ ಅನುಭವಿಸಿದ್ದಾರೆ. ತಂದೆಯೊಂದಿಗೆ ವ್ಯಾಪಾರ–ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಅವರು ಕ್ರೀಡೆ ಮತ್ತು ವ್ಯಾಪಾರದ ಪೈಕಿ ಒಂದನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ ಭಾರಿ ಗೊಂದಲಕ್ಕೆ ಒಳಗಾಗಿದ್ದರು. ಕೊನೆಗೆ ತಂದೆಯ ಸಲಹೆಯಂತೆ ಅಥ್ಲೆಟಿಕ್ಸ್‌ ತರಬೇತಿಗೆ ಸೇರಿದರು.

ಆದರೆ 2103ರ ಏಷ್ಯನ್ ಚಾಂಪಿಯನ್‌ಷಿಪ್‌ ಮತ್ತು 2014ರ ಫೆಡರೇಷನ್ ಕಪ್‌ನಲ್ಲಿ ಕ್ರಮವಾಗಿ ನಾಲ್ಕು ಮತ್ತು ಎಡನೇ ಸ್ಥಾನ (ಬೆಳ್ಳಿ) ಗಳಿಸಿದ ನಂತರ ಕ್ರೀಡಾಜೀವನದಲ್ಲೂ ಸಂಕಷ್ಟ ಎದುರಾಯಿತು. 2014ರ ಕಾಮನ್‌ವೆಲ್ತ್ ಕೂಟ ಮತ್ತು ಏಷ್ಯಾ ಕೂಟಕ್ಕೆ ಅವರು ಆಯ್ಕೆಯಾಗಲಿಲ್ಲ. ನಿರೀಕ್ಷಿತ ‘ಹೆಸರು’ ತಂದುಕೊಡುತ್ತಿಲ್ಲ ಎಂಬ ಕಾರಣದಿಂದ ಓಎನ್‌ಜಿಸಿ ಕಂಪನಿ ಅವರೊಂದಿಗಿನ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿತು. ಈ ಸಂದರ್ಭದಲ್ಲಿ ಕ್ರೀಡೆಯಿಂದಲೇ ದೂರ ಉಳಿಯುವ ನಿರ್ಧಾರ ಮಾಡಿದರು.

ಆದರೆ ಅಮರೀಶ್ ಕುಮಾರ್ ಅವರ ಬಳ ತರಬೇತಿಗೆ ಸೇರಿದ ನಂತರ ಅವರ ಕ್ರೀಡಾ ಜೀವನದ ದಿಕ್ಕು ಬದಲಾಯಿತು. ಬೂತಾನ್‌ನ ಗುಡ್ಡಗಾಡು ಪ್ರದೇಶ ಮತ್ತು ಊಟಿಯ ಕೊರೆಯುವ ಚಳಿಯಲ್ಲಿ ಅಭ್ಯಾಸ ಮಾಡಿ ಕೊನೆಗೂ ಗುರಿ ಮುಟ್ಟಿದರು. ಏಷ್ಯಾ ಕೂಟದ 1500 ಮೀಟರ್ಸ್‌ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದರೂ 800 ಮೀಟರ್ಸ್‌ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಈಗ, ಏಪ್ರಿಲ್‌ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ ಮತ್ತು ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧರಾಗುತ್ತಿದ್ದಾರೆ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕಠಿಣ ತರಬೇತಿ ನಡೆಯುತ್ತಿದೆ.

‘ಗಾಯದ ಸಮಸ್ಯೆ ಕಾಡದಂತೆ ನೋಡಿಕೊಳ್ಳುವುದಕ್ಕೆ ಮೊದಲ ಆದ್ಯತೆ. ನಂತರ ಫಿಟ್‌ನೆಸ್ ಕಡೆಗೆ ಗಮನ ನೀಡಲಾಗುತ್ತದೆ. ಸ್ಪರ್ಧೆಗೆ ತಿಂಗಳುಗಟ್ಟಲೆ ಸಮಯ ಬಾಕಿ ಇದ್ದಾಗ ಹೆಚ್ಚು ವರ್ಕ್‌ ಔಟ್ ಮಾಡಲಾಗುತ್ತದೆ. ದಿನದಲ್ಲಿ ಏಳರಿಂದ ಎಂಟು ತಾಸುಗಳ ಪರಿಶ್ರಮ ಇರುತ್ತದೆ. ಸ್ಪರ್ಧೆ ಹತ್ತಿರ ಬಂದಂತೆ ತರಬೇತಿಯ ವೇಗ ಹೆಚ್ಚಾಗುತ್ತದೆ; ಅವಧಿ ಕಡಿಮೆಯಾಗುತ್ತದೆ. ದೇಹದ ಮೇಲಿನ ‘ಹೊರೆ’ ಕಡಿಮೆ ಮಾಡುವುದಕ್ಕಾಗಿ ಹೀಗೆ ಮಾಡಲಾಗುತ್ತದೆ.

‘ಫಿಟ್‌ ಆಗಿರುವುದು ನಮ್ಮ ‘ಕೆಲಸ’ದ ಒಂದು ಭಾಗ. ಅಭ್ಯಾಸದ ಸಂದರ್ಭದಲ್ಲಿ ದಿನದಲ್ಲಿ 20ರಿಂದ 25 ಕಿಲೋಮೀಟರ್‌ನಷ್ಟು ಓಡಬೇಕಾಗುತ್ತದೆ. ಆದ್ದರಿಂದ ನಿತ್ಯವೂ ಫಿಟ್‌ ಇರಲೇಬೇಕು’ ಎನ್ನುತ್ತಾರೆ ಅವರು.

‘ಅನಗತ್ಯವಾಗಿ, ದೇಹಕ್ಕೆ ಹಿಡಿಸದ ಆಹಾರ ತಿನ್ನಲೇಬಾರದು. ಹೊರಗಿನಿಂದ ಏನನ್ನೂ ವಿಶೇಷವಾಗಿ ಫಾಸ್ಟ್ ಫುಡ್ ತಿನ್ನುವಂತಿಲ್ಲ. ಈ ನಿಯಮಗಳನ್ನು ಪಾಲಿಸಿ ಸರಿಯಾದ ವಿಶ್ರಾಂತಿ ಪಡೆದರೆ ಫಿಟ್‌ನೆಸ್‌ ಕಪಾಡಿಕೊಳ್ಳುವುದು ಸುಲಭ’ ಎಂಬುದು ಅವರ ವಾದ. ಅಂದಹಾಗೆ, ಏಷ್ಯನ್‌ ಕೂಟದ ನಂತರ ಒಂದೂವರೆ ತಿಂಗಳು ಊರಲ್ಲೇ ‘ವಿಶ್ರಾಂತಿ’ಯಲ್ಲಿದ್ದ ಅವರು ಈಗ ಮತ್ತೆ ಚುರುಕಾಗಿದ್ದಾರೆ. ಬೆಂಗಳೂರಿನ ನಂತರ ಊಟಿಯಲ್ಲಿ ತರಬೇತಿ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT