ಶನಿವಾರ, ಅಕ್ಟೋಬರ್ 24, 2020
27 °C

ಮರಳಿ ಕಚೇರಿಗೆ: ಜೊತೆಗಿರಲಿ ಸಿದ್ಧತೆ

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

‘ಇಷ್ಟು ದಿನ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೆ. ಕೊರೊನಾ ಸೋಂಕು ಕಡಿಮೆಯಾದ ಮೇಲೆ ಪುನಃ ಕಚೇರಿಗೆ ಹೋದರೆ ಅಲ್ಲಿಯ ಕೆಲಸದ ರೀತಿಗೆ ಹೊಂದಿಕೊಳ್ಳುವುದು ಹೇಗೆ ಎಂದು ಒಮ್ಮೊಮ್ಮೆ ಚಿಂತೆಯಾಗುತ್ತಿದೆ’ ಎನ್ನುವ ಜಾಹೀರಾತು ಕಂಪನಿಯೊಂದರ ಎಕ್ಸಿಕ್ಯುಟಿವ್‌ ರೀನಿ ಉತ್ತಪ್ಪ ಇದಕ್ಕಾಗಿ ತಜ್ಞರ ಸಲಹೆ ಸಿಗಬಹುದೇ ಎಂದು ಆನ್‌ಲೈನ್‌ನಲ್ಲಿ ಹುಡುಕಾಡುತ್ತಿದ್ದಾಳೆ.

ಕೊರೊನಾ ಸೋಂಕು ಶುರುವಾದಾಗ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದವರು ನಿಧಾನವಾಗಿ ಕಚೇರಿಗೆ ಮರಳುತ್ತಿದ್ದಾರೆ. ಆದರೆ ಮನೆಯಿಂದಲೇ ಕೆಲಸ ಮಾಡಿದವರಿಗೆ ಕಚೇರಿಯಲ್ಲಿನ ಶಿಸ್ತುಬದ್ಧ ಕೆಲಸಕ್ಕೆ ಹೊಂದಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇನ್ನಿಲ್ಲದ ಚಿಂತೆ ಕಾಡುತ್ತಿದೆ.

ಸಹೋದ್ಯೋಗಿಗಳ ಸಂಪರ್ಕವಿರಲಿ

‘ಇದೇನೂ ಕಷ್ಟವಲ್ಲ, ನಿಮ್ಮ ಮನಸ್ಸಿನ ಹೊಯ್ದಾಟವಷ್ಟೆ. ನಿಮ್ಮ ಸಹೋದ್ಯೋಗಿಗಳ ಜೊತೆ ಆನ್‌ಲೈನ್‌ನಲ್ಲಿ ಭೇಟಿ ಮಾಡಿ. ಇದು ಒಂದು ರೀತಿಯ ವರ್ಚುವಲ್‌ ಕಾಫಿ ಬ್ರೇಕ್‌ ಎಂದುಕೊಳ್ಳಿ. ಅವರೇನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ’ ಎನ್ನುತ್ತಾರೆ ವೃತ್ತಿ ಮಾರ್ಗದರ್ಶಕ ಪ್ರೊ.ಎಸ್‌.ಕೆ. ಜಾರ್ಜ್‌. ಜೊತೆಗೆ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಪುನಃ ಬೆಳೆಸಿಕೊಂಡರೆ ಒಳ್ಳೆಯದು ಎಂಬ ಮಾತನ್ನೂ ಅವರು ಸೇರಿಸುತ್ತಾರೆ.

ಗೂಗಲ್‌ ಮೀಟ್‌ ಇದ್ದರೆ ನಿಮ್ಮ ಮೇಲಧಿಕಾರಿಗಳ ಅನುಮತಿ ಪಡೆದುಕೊಂಡು ಪುನಃ ಕಚೇರಿಗೆ ಬರುವ ಬಗ್ಗೆ ಸೌಹಾರ್ದವಾಗಿ ಸಹೋದ್ಯೋಗಿಗಳ ಜೊತೆ ಹರಟೆ ಹೊಡೆಯಬಹುದು. ಈ ಸಂದರ್ಭದಲ್ಲಿ ನಿಮ್ಮ ಆತಂಕಗಳನ್ನು ಪರಿಹರಿಸಿಕೊಳ್ಳಬಹುದು.

‘ಕಳೆದ ಕೆಲವು ತಿಂಗಳಿಂದ ನೀವು ಯಾವ ರೀತಿ ಬದುಕನ್ನು ಎದುರಿಸಿದ್ದೀರಿ, ಕಚೇರಿ ಕೆಲಸವನ್ನು ಹೊರತುಪಡಿಸಿ ಕುಟುಂಬದ ಸದಸ್ಯರ ಜೊತೆ, ಅಕ್ಕಪಕ್ಕದ ಮನೆಯವರ ಜೊತೆ ಯಾವ ತರಹದ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದೀರಿ ಎಂಬುದರ ಬಗ್ಗೆಯೂ ಸಕಾರಾತ್ಮಕವಾಗಿ ಯೋಚಿಸಿ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌. ಅವರು. ‘ನೀವು ಹೊರಗಡೆ ಎಷ್ಟು ಸಲ ಹೋಗಿದ್ದೀರಿ, ಪಾರ್ಕ್‌ನಲ್ಲಿ ಸುತ್ತಾಡಿದ್ದೀರಾ ಎಂಬುದನ್ನೆಲ್ಲ ನೆನಪಿಸಿಕೊಳ್ಳಿ’ ಎನ್ನುತ್ತಾರೆ ಅವರು. ಇದರಿಂದ ಪುನಃ ಕೆಲಸಕ್ಕೆಂದು ಕಚೇರಿಗೆ ಪ್ರಯಾಣ ಮಾಡುವಾಗ ಭಯ ಕಡಿಮೆಯಾಗುತ್ತದೆ. ಜೊತೆಗೆ ಸಹೋದ್ಯೋಗಿಗಳು ಹೇಗೆ ಕಚೇರಿಗೆ ಬರುತ್ತಾರೆ ಎಂಬುದನ್ನೂ ತಿಳಿದುಕೊಳ್ಳಿ ಎಂಬುದು ಅವರ ಸಲಹೆ.

ಮೇಲ್‌ ಬಾಕಿ ಉಳಿಸಬೇಡಿ

ನಿಧಾನವಾಗಿ ಕಚೇರಿಯ ಕೆಲಸಕ್ಕೆ ಹೊಂದಿಕೊಳ್ಳಬೇಕಾದರೆ ಮೊದಲು ಇಮೇಲ್‌ ಬಗ್ಗೆ ಗಮನಹರಿಸಿ. ಹಳೆಯ ಮೇಲ್‌ಗಳನ್ನು ಓದಿರದಿದ್ದರೆ ಓದಿ ಉತ್ತರಿಸಿ. ಎಲ್ಲಾ ಮೇಲ್‌ಗಳಿಗೂ ಉತ್ತರಿಸಬೇಕಾದ ಅವಶ್ಯಕತೆಯೂ ಬರುವುದಿಲ್ಲ. ಆದರೂ ಯಾವುದೂ ಬಾಕಿ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಮ್ಮೆಲೇ ಜಾಸ್ತಿ ಮೇಲ್‌ಗಳಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸಹೋದ್ಯೋಗಿಗಳ ನೆರವು ಕೋರಬಹುದು.

ಇದು ಮೊದಲ ಹಂತವಾದರೆ ಉಳಿದ ಎಲ್ಲ ಕೆಲಸಗಳನ್ನೂ ಇದೇ ರೀತಿ ಮಾಡಬಹುದು. ಮನೆಯಿಂದಲೇ ಕೆಲಸ ಮಾಡುವಾಗ ಕೆಲವರು ಸಮಯ ನಿಗದಿಪಡಿಸಿಕೊಂಡಿರುವುದಿಲ್ಲ. ಹಾಗೆಯೇ ಯಾವ ಕೆಲಸವಾದ ಮೇಲೆ ಯಾವುದನ್ನು ಮಾಡಬೇಕು ಎಂಬುದರ ಬಗ್ಗೆಯೂ ಅಷ್ಟೊಂದು ತಲೆ ಕೆಡಿಸಿಕೊಂಡಿರುವುದಿಲ್ಲ. ಕಚೇರಿಗೆ ಹೋದಾಗ ಇದನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲಸ ಮುಗಿಸಲು ಸಮಯವನ್ನು ನಿಗದಿಪಡಿಸಿಕೊಂಡು ಅಷ್ಟನ್ನೂ ಪೂರೈಸಲು ಯತ್ನಿಸಿ. ಆರಂಭದಲ್ಲಿ ಒಂದಿಷ್ಟು ಏರುಪೇರಾಗಬಹುದು. ದಿನ ಕಳೆದಂತೆ ನಿಮ್ಮ ಮೊದಲಿನ ವೇಗಕ್ಕೆ ಮರಳಬಹುದು. ಹಾಗೆಯೇ ಇಂದು ಯಾವ ಕೆಲಸಕ್ಕೆ ಮಹತ್ವ ನೀಡಬೇಕು, ಯಾವುದನ್ನು ನಾಳೆ ಬೇಕಾದರೂ ಮಾಡಬಹುದು ಎಂಬುದರ ಪಟ್ಟಿ ತಯಾರಿಸಿಕೊಳ್ಳಿ. ಕ್ರಮೇಣ ಈ ವಿಭಾಗದಲ್ಲೂ ಮೊದಲಿನ ಚಾಕಚಕ್ಯತೆ ಗಳಿಸಬಹುದು.

ಕಂಪ್ಯೂಟರ್‌ ತಂತ್ರಜ್ಞಾನದಲ್ಲಿ ಬದಲಾವಣೆ ಯಾಗಿರಬಹುದು, ಹೇಗೆ ಕಲಿಯುವುದು ಎಂಬುದು ಕೆಲವರ ಆತಂಕ. ಆತಂಕ ಪಡುವುದಕ್ಕಿಂತ ಹೊಸ ಕೌಶಲಗಳನ್ನು ಕಲಿಯಲು, ಅಳವಡಿಸಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು