ಮಂಗಳವಾರ, ಡಿಸೆಂಬರ್ 1, 2020
23 °C

ಬೇಡಿಕೆಯ ಕೋರ್ಸ್‌ ಟ್ಯಾಲೆಂಟ್ ಅನಾಲಿಟಿಕ್ಸ್

ಡಾ. ಗಿರೀಶ ವೈ.ಎಂ ಮತ್ತು ಡಾ. ರಾಕೇಶ ಡಿ. Updated:

ಅಕ್ಷರ ಗಾತ್ರ : | |

Prajavani

ನಿಮ್ಮ ಸಂಸ್ಥೆಯು ಉತ್ತಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಡುತ್ತಿದ್ದರೂ, ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರೂ, ಉದ್ಯೋಗಿಗಳು ನಿಮ್ಮ ಕಂಪನಿಯನ್ನು ತೊರೆದು ಬೇರೊಂದು ಕಂಪನಿಯನ್ನು ಸೇರಲು ಬಯಸುತ್ತಿದ್ದಾರೆಯೇ? ನಿಮ್ಮ ಕಂಪನಿಯ ಉದ್ಯೋಗಿಗಳಲ್ಲಿ ದಕ್ಷತೆ ಕಡಿಮೆಯಾಗಿದೆಯೇ? ಕೇವಲ ವೇತನಕ್ಕಾಗಿ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ? ಉದ್ಯೋಗಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೆ ತಮ್ಮನ್ನು ಅನುತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಯೇ? ಈ ಕಾರಣಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ತಿಳಿಯಲು ಪ್ರಯತ್ನಿಸಿದ್ದೀರಾ?

ನಿಜ, ಈ ಕಾರಣಗಳನ್ನು ತಿಳಿಯಲು ವಿವಿಧ ಸಂಖ್ಯಾಶಾಸ್ತ್ರದ ಮಾದರಿಗಳನ್ನು ಮಾನವ ಸಂಪನ್ಮೂಲದ ಮೂಲಕ ಸಂಗ್ರಹಿಸಿರುವ ದತ್ತಾಂಶಕ್ಕೆ ಅನ್ವಯಿಸಿ ಹಾಗೂ ವಿಶ್ಲೇಷಿಸಿ, ನಿಮ್ಮ ಕಂಪನಿಯ ವ್ಯವಹಾರ ಫಲಿತಾಂಶಗಳನ್ನು ಬಲಪಡಿಸಿ, ಕಂಪನಿಯು ಯಶಸ್ಸಿನ ಉತ್ತುಂಗಕ್ಕೇರುವಲ್ಲಿ ಅತೀ ಮುಖ್ಯ ಪಾತ್ರವಹಿಸುವುದೇ ಈ ಟ್ಯಾಲೆಂಟ್ ಅನಾಲಿಟಿಕ್ಸ್. ಇದನ್ನು ಪೀಪಲ್ ಅನಾಲಿಟ್ಟಿಕ್ಸ್ ಅಥವಾ ಎಚ್ಆರ್ ಅನಾಲಿಟಿಕ್ಸ್ ಎಂದೂ ಕರೆಯುತ್ತಾರೆ. ಇಲ್ಲಿ ಸಂಖ್ಯಾಶಾಸ್ತ್ರದ ಉಪಕರಣದ ಮೂಲಕ ಮಾನವ ಸಂಪನ್ಮೂಲ ಸಮಸ್ಯೆಗಳಿಗೆ ವಿಶ್ಲೇಷಣೆ ಮಾಡಿ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.

ಸಂಸ್ಥೆಗಳಿಗೆ ಈ ವಿಶ್ಲೇಷಣೆ ಏಕೆ ಅವಶ್ಯ?

ಸಂಸ್ಥೆಗಳಿಗೆ ಅತ್ಯುತ್ತಮ ಸಾಮರ್ಥ್ಯ ಹಾಗೂ ಸರಿಯಾದ ಮನೋಭಾವ ಹೊಂದಿದ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹಾಗೂ ಅಂತಹ ಉದ್ಯೋಗಿಯನ್ನು ಬೇರೆ ಕಂಪನಿಗೆ ಹೋಗದಂತೆ ತಡೆಯುವುದು ನಿಜಕ್ಕೂ ಸವಾಲಿನ ಸಂಗತಿ. ಈ ಟ್ಯಾಲೆಂಟ್ ಅನಾಲಿಟಿಕ್ಸ್‌ನ ಸಹಾಯದಿಂದ ತಮ್ಮ ಕಂಪನಿಯಲ್ಲಿ ಯಾರು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಹಾಗೂ ಯಾರು ಉದ್ದೇಶಪೂರ್ವಕವಾಗಿ ಅನುತ್ಪಾದಕತೆಯಲ್ಲಿಯೇ ಕಾಲ ಕಳೆಯುತ್ತಾರೆ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಂಡು ಸಮಸ್ಯೆಗಳಿಗೆ ಸರಿಯಾದ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳಲು ಸಹಾಯ ಮಾಡುತ್ತದೆ.

ಉದಾಹರಣೆಗೆ ಒಂದು ಬ್ರಾಂಡೆಡ್ ಹೋಟೆಲ್‌ನಲ್ಲಿ ಉದ್ಯೋಗಿಗಳು ಪದೇ ಪದೇ ಹೋಟೆಲ್ ಅನ್ನು ಬಿಟ್ಟು ಬೇರೆಡೆ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಆ ಹೋಟೆಲ್‌ ಉತ್ಪಾದಕ ಮಟ್ಟದಲ್ಲಿ ಸಾಕಷ್ಟು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂಸ್ಥೆಯು ಮನಗಂಡು ಉದ್ಯೋಗಿಗಳನ್ನು ಉತ್ಪಾದಕ ಮಟ್ಟಕ್ಕೆ ತರಲು ಸಾಕಷ್ಟು ಹಣ ಮತ್ತು ಸಮಯವನ್ನು ವಿನಿಯೋಗಿಸಬೇಕಾಗುತ್ತದೆ. ಆದರೆ ಕಂಪನಿಯು ಈ ಟ್ಯಾಲೆಂಟ್ ಅನಾಲಿಟಿಕ್ಸ್ ಸಹಾಯ ಪಡೆದರೆ ಉದ್ಯೋಗಿಗಳ ವಲಸೆಯನ್ನು ಕಡಿಮೆ ಮಾಡುವುದರ ಮೂಲಕ ತನ್ನ ಆದಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು.

ಕೋರ್ಸ್‌ ಹೇಗೆ ಮತ್ತು ಎಲ್ಲಿದೆ?

ಯಾವುದೇ ಪದವಿ ಪಡೆದವರು, ಸಂಖ್ಯಾಶಾಸ್ತ್ರದಲ್ಲಿ ಪರಿಣತಿ ಪಡೆದವರು ಎಂಬಿಎನಲ್ಲಿ ಒಂದು ವಿಷಯವಾಗಿ ಇದನ್ನು ತೆಗೆದುಕೊಳ್ಳಬಹುದು. ದೇಶದ ಎಲ್ಲಾ ಐಐಎಂಗಳಲ್ಲಿ ಈ ವಿಷಯದಲ್ಲಿ ಉತ್ತಮ ಮಟ್ಟದ ತರಬೇತಿ ದೊರಕುತ್ತದೆ.

ಇದಲ್ಲದೆ ಆರು ತಿಂಗಳಿನ ಅಲ್ಪಾವಧಿ ಕೋರ್ಸ್‌ ಕೂಡ ಇದೆ. ಯಾವುದೇ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಈ ಕೋರ್ಸ್‌ ಮಾಡಿಕೊಳ್ಳಬಹುದು. ಇದರ ಜತೆಗೆ ಆರ್, ಪೈಥಾನ್, ಪವರ್ ಬಿ ಐಡಬ್ಲ್ಯು, ವಿಸಿಯರ್, ಕ್ಯೂಲಿಕ್, ಎಸ್.ಪಿ.ಎಸ್.ಎಸ್, ಸಿಪ್ಲೇಕ್ಸ್, ಆಕ್ಟೀಮೈಸರ್ ಮೊದಲಾದ ಕಂಪ್ಯೂ ಟರ್‌ ಕೌಶಲಗಳಲ್ಲಿ ಪರಿಣತಿ ಪಡೆದರೆ ಸೂಕ್ತ.

ಈ ವಿಷಯದಲ್ಲಿ ಪರಿಣತಿ ಪಡೆದವರು ಡೇಟಾ ವಿಜ್ಞಾನಿಯಾಗಿ ಉದ್ಯೋಗಕ್ಕೆ ಸೇರಬಹುದು. ಬಹುತೇಕ ಪ್ರತಿಷ್ಠಿತ ಕಂಪನಿಗಳು ಈ ವಿಷಯದಲ್ಲಿ ನೈಪುಣ್ಯ ಪಡೆದವರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿವೆ. ಇದಲ್ಲದೇ ಡೇಟಾ ಅನಾಲಿಸಿಸ್‌ ಮಾಡುವ ಸಂಸ್ಥೆಗಳಲ್ಲಿ ಕೂಡ ವಿಪುಲ ಅವಕಾಶವಿದೆ.

(ಡಾ. ಗಿರೀಶ ವೈ.ಎಂ.– ಸಹಾಯಕ ಪ್ರಾಧ್ಯಾಪ ಕರು, ಎಂ.ಬಿ.ಎ ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು. ಡಾ. ರಾಕೇಶ ಡಿ.– ಸಹಾಯಕ ಪ್ರಾಧ್ಯಾಪಕರು, ಸೆಂಟರ್ ಅಫ್ ಮ್ಯಾನೆಜ್‌ಮೆಂಟ್ ಸ್ಟಡಿ ಜೆಎಸ್ಎಸ್ ಸೈನ್ಸ್ ಅಂಡ್ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ, ಮೈಸೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು