ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ತಾಕತ್ತಿನ ‘ವಿರಾಟ್‌’ ಸ್ವರೂಪ

Last Updated 28 ಜನವರಿ 2019, 5:38 IST
ಅಕ್ಷರ ಗಾತ್ರ

ಕಳೆದ ವರ್ಷದ ಕೊನೆಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ದಿನ. ಭಾರತದ ಇನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ 170 ರನ್‌ಗಳ ಜೊತೆಯಾಟ ಆಡಿದ್ದರು. ಇನಿಂಗ್ಸ್‌ನ 120ನೇ ಓವರ್‌ ಕುತೂಹಲಕಾರಿ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು. ಪ್ಯಾಟ್ ಕಮಿನ್ಸ್‌ ಎಸೆತವನ್ನು ಕೊಹ್ಲಿ ಫ್ಲಿಕ್ ಮಾಡಿದರು. ಚೆಂಡು ಮಿಡ್‌ವಿಕೆಟ್ ಬೌಂಡರಿ ಕಡೆಗೆ ಸಾಗಿತು. ಅದು ಬೌಂಡರಿ ಗೆರೆ ದಾಟುವುದಿಲ್ಲ ಎಂದು ಮನದಟ್ಟಾಗುತ್ತಿದ್ದಂತೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಓಡಿ ರನ್‌ ಗಳಿಸತೊಡಗಿದರು. ಮೊದಲ ಮೂರು ರನ್‌ಗಳು ನಿರಾಯಾಸವಾಗಿ ಬಂದವು. ವಿಕೆಟ್‌ಗಳ ಮಧ್ಯೆ ಪೂಜಾರ ಅವರಿಗಿಂತ ವೇಗವಾಗಿ ಓಡುತ್ತಿದ್ದ ಕೊಹ್ಲಿ ನಾಲ್ಕನೇ ರನ್‌ಗಾಗಿ ಕರೆ ನೀಡಿದರು. ಆಗಲೇ ಸುಸ್ತಾಗಿದ್ದ ಪೂಜಾರ ಬೇಡ ಎಂದರು. ಇದು ದೊಡ್ಡ ಸುದ್ದಿಯಾಯಿತು.

ಒಂದೇ ವಯಸ್ಸಿನ (30 ವರ್ಷ) ಇಬ್ಬರ ಪೈಕಿ ಕೊಹ್ಲಿ ಎಷ್ಟು ಓಡಿದರೂ ಸುಸ್ತಾಗುವುದಿಲ್ಲ ಎಂಬುದು ಗೊತ್ತಿಲ್ಲದ ಕ್ರಿಕೆಟ್ ಪ್ರಿಯರು ಬಹುಶಃ ಯಾರೂ ಇರಲಾರರು. ಇದಕ್ಕೆ ಕಾರಣ ಅವರ ಫಿಟ್‌ನೆಸ್‌. ಕ್ರೀಡೆಯಲ್ಲಿ ಸಾಧನೆಗೆ ಫಿಟ್‌ನೆಸ್‌ ಒಂದೇ ಮೂಲಮಂತ್ರ ಎಂದು ಬಲವಾಗಿ ನಂಬಿರುವವರಲ್ಲಿ ಒಬ್ಬರು ವಿರಾಟ್ ಕೊಹ್ಲಿ. ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಯೋಯೊ ಟೆಸ್ಟ್‌ ನಡೆಸಬೇಕು ಎಂದು ಒತ್ತಾಯಿಸಿ, ಅದು ಜಾರಿಗೆ ಬರುವಂತೆ ಮಾಡಿರುವ ಅವರು ಯೋಯೊ ಟೆಸ್ಟ್‌ನಲ್ಲಿ ತಮಗಿಂತ ಕಿರಿಯ ವಯಸ್ಸಿನ ಅದೆಷ್ಟು ‘ಹುಡುಗರನ್ನು’ ಓಟದಲ್ಲಿ ಹಿಂದಿಕ್ಕಿಲ್ಲ!

ಇತ್ತೀಚೆಗೆ ನಡೆದಿದ್ದ ಸಂದರ್ಶನವೊಂದರಲ್ಲಿ, ಕೊಹ್ಲಿ ಫಿಟ್‌ನೆಸ್‌ಗೆ ಆದ್ಯತೆ ನೀಡಲು ಕಾರಣವೇನು ಎಂಬುದನ್ನು ತಿಳಿಸಿದ್ದರು. ‘ಸಣ್ಣ ವಯಸ್ಸಿನಲ್ಲಿ, ಫಿಟ್‌ನೆಸ್‌ನಿಂದಾಗಿ ಏನಾದರೂ ಸಾಧಿಸಬಲ್ಲೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ವೃತ್ತಿ ಜೀವನದ ಆರಂಭದಲ್ಲಿ ಅದರ ಮಹತ್ವ ತಿಳಿಯಿತು. ನಂತರ ಆ ಕಡೆಗೆ ಹೆಚ್ಚು ಗಮನ ನೀಡಿದೆ’ ಎಂದು ಅವರು ಹೇಳಿದ್ದರು.

‘ಸರ್ವಾಂಗೀಣ ಬೆಳವಣಿಗೆ ಎಂದರೆ ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠವಾಗಿರುವುದು. ಇದಕ್ಕೆ ಫಿಟ್‌ನೆಸ್‌ ಅತ್ಯಗತ್ಯ. ದೈಹಿಕವಾಗಿ ಸದೃಢವಾಗಿದ್ದರೆ ಮಾನಸಿಕ ಆರೋಗ್ಯ ಚೆನ್ನಾಗಿರುವುದಿಲ್ಲ’ ಎಂಬುದು ಫಿಟ್‌ನೆಸ್‌ಗೆ ಕೊಹ್ಲಿ ನೀಡುವ ವಿವರಣೆ.

ಸಸ್ಯಾಹಾರದತ್ತ ಚಿತ್ತ?: ದೈಹಿಕ ಫಿಟ್‌ನೆಸ್‌ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿರುವ ಕೊಹ್ಲಿ ವೇಗನ್‌ ಕ್ಲಬ್‌ ಆಫ್ ಅಥ್ಲೆಟಿಕ್ಸ್‌ನಲ್ಲಿ ಕಸರತ್ತು ಆರಂಭಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಅಲ್ಲಿ ಮುಖ್ಯವಾಗಿ ರನ್ ಮಷಿನ್‌ನಲ್ಲಿ ಹೆಚ್ಚು ಹೊತ್ತು ಕಳೆಯಲು ಮುಂದಾಗಿದ್ದಾರೆ. ಇದೇ ವೇಳೆ, ಸದ್ಯ ಸಸ್ಯಾಹಾರಿಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿದೆ.

ಟೆನಿಸ್ ಸೂಪರ್‌ಸ್ಟಾರ್‌ಗಳಾದ ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌ ಸಹೋದರಿಯರು, ಫಾರ್ಮುಲಾ ಒನ್ ಚಾಂಪಿಯನ್‌ ಲೂವಿಸ್‌ ಹ್ಯಾಮಿಲ್ಟನ್‌ ಮತ್ತು ಸ್ಪ್ರಿಂಟ್ ದಂತಕತೆ ಕಾರ್ಲ್‌ ಲೂಯಿಸ್ ಈ ಹಿಂದೆ ಸಸ್ಯಾಹಾರಿಗಳಾಗಿ ಮಾರ್ಪಟ್ಟಿದ್ದರು.

**

ಹೀಗಿರಲಿ ದಿನಚರಿ

* ಯಾವುದೇ ಸಂದರ್ಭವಿರಲಿ, ದೇಹವನ್ನು ಸ್ವಲ್ಪ ಕಾಲವಾದರೂ ಕ್ರಿಯಾಶೀಲವಾಗಿರಿಸುವುದು. ನಿತ್ಯ ಕನಿಷ್ಠ ಎರಡು ತಾಸು, ವಾರದಲ್ಲಿ ಐದು ದಿನ ವ್ಯಾಯಾಮ.

* ಮನೆಯಲ್ಲೇ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುವುದು, ಫಿಟ್‌ನೆಸ್‌ಗೆ ತೊಂದರೆಯಾಗುವಂಥ ಅಂಶಗಳು ಆಹಾರದಲ್ಲಿ ಬೆರೆತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ತೆಗೆದುಕೊಳ್ಳುವುದು.

* ಜಂಕ್ ಫುಡ್‌ನಿಂದ ಸಾಧ್ಯವಾದಷ್ಟೂ ದೂರ ಇರುವುದು, ತೆಗೆದುಕೊಂಡರೂ ಅದರ ದಾಸರಾಗದೇ ಇರುವುದು.

* ಸಾವಯವ ಮತ್ತು ಆರೋಗ್ಯಕರ ಆಹಾರದತ್ತ ಹೆಚ್ಚು ಗಮನ ನೀಡುವುದು. ಹಸಿದಿದ್ದಾಗ ಬರ್ಗರ್ ಕೈಗೆತ್ತಿಕೊಳ್ಳುವುದಕ್ಕಿಂತ ಕಾಳುಗಳು ಮತ್ತು ಆರೋಗ್ಯಕ್ಕೆ ಹಿತವೆನಿಸುವ ಸ್ಯಾಂಡ್‌ವಿಚ್‌ ಸೇವಿಸುವುದು.

* ಡಯಟಿಂಗ್ ಮಾಡುತ್ತಿದ್ದರೆ ಯಾವುದಾದರೂ ಒಂದು ದಿನ ಅದನ್ನು ಮುರಿಯುವುದು. ಹಾಗೆಂದು ಆ ದಿನ ಬೇಕಾಬಿಟ್ಟಿ ತಿನ್ನುವುದು ಎಂದಲ್ಲ. ನಿಮಗೆ ಹೆಚ್ಚು ಇಷ್ಟವಾಗುವ ಆಹಾರವನ್ನು ಹಿತ–ಮಿತವಾಗಿ ಸೇವಿಸುವುದು.

* ವ್ಯಾಯಾಮ ಮಾಡುವಾಗ ಸ್ಟಾಮಿನಾ ಮತ್ತು ದೇಹದ ಬಲವನ್ನು ಹೆಚ್ಚಿಸಲು ಒತ್ತು ನೀಡುವುದರ ಕಡೆಗೆ ಒತ್ತು ನೀಡಬೇಕೇ ಹೊರತು ದೇಹದ ತೂಕ ಕಡಿಮೆ ಮಾಡುವುದಕ್ಕಲ್ಲ.

* ಕುಡಿತ, ಸಿಗರೇಟ್‌ನಿಂದ ದೂರ ಇರಬೇಕು. ಈ ಚಟಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ.
**

ಫಿಟ್‌ನೆಸ್ ಅಲೆ; ಸಾಧನೆಗಳ ಮಾಲೆ
ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಹಿಂದಿಕ್ಕಿ ಓಡುತ್ತಿರುವ ಕುದುರೆ. ಅವರ ಈ ಸಾಧನೆಗಳಿಗೆ ಫಿಟ್‌ನೆಸ್ ಪ್ರಮುಖ ಕಾರಣ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಇತ್ತೀಚೆಗೆ ಐಸಿಸಿಯ ಮೂರು ಪ್ರಶಸ್ತಿಗಳನ್ನು ಜೊತೆಯಾಗಿ ಗಳಿಸಿದ ಮೊದಲ ಆಟಗಾರ ಎಂಬ ಶ್ರೇಯಸ್ಸು ಅವರ ಪಾಲಾಗಿತ್ತು. ವರ್ಷದ ಶ್ರೇಷ್ಠ ಕ್ರಿಕೆಟಿಗ, ವರ್ಷದ ಟೆಸ್ಟ್ ಬ್ಯಾಟ್ಸ್‌ಮನ್ ಮತ್ತು ವರ್ಷದ ಏಕದಿನ ಬ್ಯಾಟ್ಸ್‌ಮನ್‌ ಪ್ರಶಸ್ತಿಗಳು ಅವರ ಪಾಲಾಗಿದ್ದವು. ಹೀಗಾಗಿ ಫಿಟ್‌ನೆಸ್, ಅವರ ಮೇಲೆ ಬೀರಿರುವ ಪ್ರಭಾವದ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.

**

ಪಂದ್ಯಗಳು ಇಲ್ಲದ ಸಂದರ್ಭದಲ್ಲಿ ಮಾಂಸಖಂಡಗಳನ್ನು ಬೆಳೆಸುವ ಕಡೆಗೆ ಹೆಚ್ಚು ಗಮನ ನೀಡುತ್ತೇನೆ. ಇದಕ್ಕೆ ಹೆಚ್ಚು ವರ್ಕ್‌ಔಟ್ ಅಗತ್ಯ. ಕಾಲುಗಳು ಮತ್ತು ಬೆನ್ನೆಲುಬು ಬಲಶಾಲಿ ಆಗಿರಬೇಕು ಎಂಬುದು ನನ್ನ ಬಯಕೆ. ಕ್ರಿಕೆಟ್‌ನಲ್ಲಿ ನನ್ನ ಸಾಮರ್ಥ್ಯ ನಿರ್ವಹಣೆಗೆ ಇದು ಅಗತ್ಯ. ಪಂದ್ಯಗಳು ಇರುವ ಸಂದರ್ಭದಲ್ಲಿ ಫಿಟ್‌ನೆಸ್ ಮತ್ತು ಸ್ಟಾಮಿನಾ ವೃದ್ಧಿಸಲು ಗಮನ ನೀಡುತ್ತೇನೆ.
- ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT