‘ಆತ್ಮವಿಶ್ವಾಸದ ಜತೆ ನೌಕರಿಯೂ ಸಿಕ್ತು..!’

ವಿಜಯಪುರ: ‘ಸರ್ಕಾರಿ ನೌಕರಿ ಗಿಟ್ಟಿಸಲೇಬೇಕು ಎಂಬ ಕನಸು ಕಂಡಾಕೆ ನಾನು. ಇದಕ್ಕಾಗಿ ಮಹಿಳಾ ಕಾನ್ಸ್ಟೆಬಲ್ ಹುದ್ದೆಗೆ ಮಂಗಳೂರಿನಲ್ಲಿ ಪರೀಕ್ಷೆ ಬರೆದಿದ್ದೆ. ಫಲ ಸಿಗಲಿಲ್ಲ. ಬೇಸರಗೊಂಡೆ.
ಊರ ಹಿರಿಯರೊಬ್ಬರ ಸಲಹೆಯಂತೆ, ಎರಡು ತಿಂಗಳು ಕೋಚಿಂಗ್ ಪಡೆಯಲಿಕ್ಕಾಗಿ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಸೇರಿದೆ. ಇಲ್ಲಿಗೆ ಬಂದ್ಮೇಲೆ ನನಗೆ ಗೊತ್ತಾಗಿದ್ದು ಯುವತಿಯರಿಗೆ ಉಚಿತ ತರಬೇತಿಯಿದೆ ಎಂಬುದು.
ಇಲ್ಲಿ ನನಗೆ ಬದುಕಿನ ಅನುಭವ ಸಿಕ್ಕಿತು. ಸ್ವಾವಲಂಬಿ ಬದುಕಿಗೆ ಹೊರಳಿದೆ. ಇಷ್ಟಪಟ್ಟು ಓದಿ ನೌಕರಿ ಗಿಟ್ಟಿಸಿದೆ. ಇದೀಗ ನಾನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೆಬಲ್. ಇದಕ್ಕಿಂತ ಹೆಚ್ಚಾಗಿ ನನ್ನೂರಿನ ಮೊದಲ ಪೊಲೀಸ್ ನಾನೇ ಎಂಬ ಹೆಮ್ಮೆ ನನ್ನದಾಗಿದೆ’ ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಜುನ್ನೂರು ಗ್ರಾಮದ ರಾಧಾ ದುರ್ಗನ್ನವರ ತಮ್ಮ ಖುಷಿ ಹಂಚಿಕೊಂಡರು.
‘ನಮ್ ಮನೇಲಿ ನಾಲ್ವರು ಹೆಣ್ಮಕ್ಕಳು. ಬಡ ಕುಟುಂಬ. ಅಪ್ಪ ಇಲ್ಲ. ಅಮ್ಮನೇ ಎಲ್ಲ. ಪರೀಕ್ಷಾ ಶುಲ್ಕ ಕಟ್ಟಲು ತ್ರಾಸಾದಾಗ ಚಾಣಕ್ಯ ಬಳಗವೇ ನೆರವು ನೀಡಿತು. ನನ್ನ ಹೆಸರಲ್ಲಿ ಡಿ.ಡಿ. ತೆಗೆಯಿತು. ಅರ್ಜಿ ತುಂಬುವ ಜತೆ ನನಗೂ ಆತ್ಮವಿಶ್ವಾಸ ತುಂಬಿತು. ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಹಲ ಪುಸ್ತಕಗಳನ್ನು ಓದಲು ನೀಡಿತು’ ಎಂದು ರಾಧಾ ಹೇಳಿದರು.
‘ಅಣ್ಣನ ಸಲಹೆ ಮೇರೆಗೆ ಇಲ್ಲಿ ತರಬೇತಿ ಪಡೆಯುತ್ತಿರುವೆ. ಇದೀಗ ನನ್ನ ಆತ್ಮವಿಶ್ವಾಸ ನೂರ್ಮಡಿಗೊಂಡಿದೆ. ಪೊಲೀಸ್ ಆಗಲೇಬೇಕು ಎಂಬ ಛಲ ನನ್ನಲ್ಲಿ ಮೂಡಿದೆ’ ಎಂದು ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಕೌಟಾ ಕೆ. ಗ್ರಾಮದ ರೇಣುಕಾ ಜೀರಿಗೆ ತಿಳಿಸಿದರು.
‘ದುಡ್ದ್ ತಿನ್ನೋರ್ ನಾವು. ಎರಡ್ಮೂರು ಬಾರಿ ಪ್ರಯತ್ನಿಸಿದರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಉಚಿತ ತರಬೇತಿ ಪಡೆಯಲಿಕ್ಕಾಗಿ ಇಲ್ಲಿಗೆ ಬಂದಿರುವೆ. ಇದೀಗ ಸರ್ಕಾರಿ ನೌಕರಿ ಗಿಟ್ಟಿಸುವ ನನ್ನ ಕನಸಿಗೆ ರೆಕ್ಕೆ ಬಂದಿದೆ’ ಎಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ಬಸಮ್ಮ ರಾಮಣ್ಣನವರ ಹೇಳಿದರು.
‘ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಸಂಬಂಧಿಯೊಬ್ಬರು ಚಾಣಕ್ಯದ ಉಚಿತ ತರಬೇತಿ ಬಗ್ಗೆ ಮಾಹಿತಿ ನೀಡಿದರು. ನಮ್ಮ ಕುಟುಂಬದ ನಿರ್ಧಾರವೇ ಬದಲಾಯ್ತು. ಇದೀಗ ನನ್ನಪ್ಪ–ಅಮ್ಮ ಮಗಳು ಓದಿ ಕೆಲಸ ಪಡೆಯಲಿ ಎನ್ನುತ್ತಿದ್ದಾರೆ’ ಎಂದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಸೊನ್ನ ಗ್ರಾಮದ ಡಿ.ಟಿ.ಮಮತಾ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.