ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಪುಸ್ತಕದಲ್ಲಿ ಆಸಕ್ತಿ ಮೂಡಿಸುವುದು ಹೇಗೆ?

Last Updated 9 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಕಥೆ ಮಕ್ಕಳಿಗೆ ಬಹಳ ಪ್ರಿಯ. ನಾವಂತೂ ಅಜ್ಜಿಯ ಕಥೆಗಳನ್ನು ಕೇಳಿಯೇ ಮಲಗುತ್ತಿದ್ದುದು. ಸ್ವಲ್ಪ ಬೆಳೆದ ಮೇಲೆ ಕಥೆಯ ಪುಸ್ತಕಗಳನ್ನೂ ಓದುವುದೆಂದರೆ ಬಹಳ ಇಷ್ಟವೆನಿಸುತ್ತಿತ್ತು. ಆದರೆ ಈಗ ಮಕ್ಕಳಿಗೆ ಸುಲಭವಾಗಿ ಗ್ಯಾಜೆಟ್‌ಗಳು ಸಿಗುವ ಕಾರಣ ಮಕ್ಕಳಿಗೆ ಪುಸ್ತಕ ಓದುವ ಅಭ್ಯಾಸ ಕ್ರಮೇಣ ನಶಿಸುತ್ತಾ ಹೋಗುತ್ತಿದೆ. ಒಂದು ವರ್ಗದ ಮಕ್ಕಳಿಗೆ ಓದಲು ಬಂದರೂ, ಪುಸ್ತಕಗಳಿದ್ದರೂ ಆಸಕ್ತಿ ಇಲ್ಲ. ಮತ್ತೆ ಕೆಲವರಿಗೆ ಪುಸ್ತಕಗಳೇ ಲಭ್ಯವಿಲ್ಲ. ಮತ್ತು ಇನ್ನೆಲ್ಲಿಂದ ಆಸಕ್ತಿ ಮೂಡಲು ಸಾಧ್ಯ? ಬರಿಯ ಕಥೆ ಪುಸ್ತಕಗಳನ್ನು ಕೊಡುವುದಷ್ಟೇ ಅಲ್ಲ, ಅವುಗಳನ್ನು ಓದಲು, ಓದುವುದರಲ್ಲಿ ಆಸಕ್ತಿ ಮೂಡಿಸುವುದೂ ಅಷ್ಟೇ ಮುಖ್ಯ.

ಆದ್ದರಿಂದ ಮಕ್ಕಳಿಗೆ ಓದಲು ಸಹಾ ಒಂದು ರೀತಿಯ ತರಬೇತಿ ಅಗತ್ಯ. ಇಪ್ಪತ್ತು ವರ್ಷಗಳಿಂದ ಮಕ್ಕಳ ಒಡನಾಟದಲ್ಲಿರುವ ಆಶಾ ಇನ್ಫಿನೈಟ್‌ ಫೌಂಡೇಶನ್ ಸಂಸ್ಥೆಯ ಮೀರಾ ರಮಣ ಅವರು ಮಕ್ಕಳಿಗೆ ಓದುವಲ್ಲಿ ಆಸಕ್ತಿ ಮೂಡಿಸಲು, ಪುಸ್ತಕವನ್ನು ಮಕ್ಕಳಿಗೆ ನೀಡುವ ಮೊದಲು ಪುಸ್ತಕಗಳ ಜೊತೆ ಒಂದು ಆತ್ಮೀಯ ಒಡನಾಟವನ್ನು ಸೃಷ್ಟಿಸುವಲ್ಲಿ ಕೆಲವು ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

ಕಥೆ ಓದುವ ಕ್ರಮಗಳು
ಕ್ರಮ -1 (ರೀಡ್‌ ಅಲೌಡ್‌ ಸೆಶನ್‌): ಮಕ್ಕಳಲ್ಲಿ ಕೇಳಿಸಿಕೊಳ್ಳುವ ಮಟ್ಟ ಹಿರಿಯರಿಗಿಂತಾ ಹೆಚ್ಚಾಗಿರುತ್ತದೆ. ಹಾಗಾಗಿ ಶಿಕ್ಷಕರು ಜೋರಾಗಿ ಕಥೆಯನ್ನು ಓದುತ್ತಾರೆ, ಮಕ್ಕಳು ಕೇಳಿಸಿ ಕೊಳ್ಳುತ್ತಾರೆ. ಇಲ್ಲಿ ಪದಗಳನ್ನು ಉಚ್ಚರಿಸುವ ರೀತಿ, ಎರಡು ಪದಗಳ ಮಧ್ಯೆ ತಡೆ (ನಿಲ್ಲಿಸುವುದು) ಮತ್ತು ಓದುವ ಪದದ ಅರ್ಥವನ್ನು ಧ್ವನಿಯಲ್ಲೇ ಮೂಡಿಸುವುದು, ಈ ಎಲ್ಲವೂ ಮಕ್ಕಳಿಗೆ ಪರಿಚಯವಾಗುತ್ತದೆ. ಇದೇ ರೀತಿ ಮೂರು ಬಾರಿ ಪುನರಾವರ್ತನೆಯಾದಾಗ ಮಕ್ಕಳ ಮನಸಿನಲ್ಲಿ ಪದಗಳು ಮೂಡುತ್ತವೆ.

ಕ್ರಮ-2 (ಶೇರ್ಡ್‌ ರೀಡಿಂಗ್‌): ಎರಡನೆಯದಾಗಿ ಶಿಕ್ಷಕರು ಮತ್ತು ಮಕ್ಕಳು ಪರಸ್ಪರ ಒಟ್ಟಾಗಿ ಓದುವ ಕ್ರಮ. ಸುಲಲಿತವಾಗಿ ಮತ್ತು ಭಾವ ಪೂರ್ಣವಾಗಿ ಶಿಕ್ಷಕರ ಸಹಕಾರದಿಂದ ಮಕ್ಕಳು ಓದುವುದು. ಇದು ಸಹಾ ಒಂದೆರಡು ಬಾರಿ ಪುನರಾವರ್ತನೆಯಾದಾಗ ಮಕ್ಕಳಿಗೆ ಹೊಸ ಪದಗಳ ಪರಿಚಯ ಮತ್ತು ಅರ್ಥ ಅರಿವಾಗುತ್ತದೆ.

ಕ್ರಮ-3 (ಸ್ಟೋರಿ ಟೆಲ್ಲಿಂಗ್‌): ಈ ಹಂತದಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಅಭಿನಯ ಮತ್ತು ಭಾವಪೂರ್ವಕವಾಗಿ ಕಥೆ ಹೇಳುವುದು. ನಮ್ಮ ಅಜ್ಜಿಯರು ರಾಜ– ರಾಣಿಯರ ಕತೆಯನ್ನು ಹೇಳುತ್ತಿದ್ದರಲ್ಲಾ ಹಾಗೆಯೇ.

ಕ್ರಮ-4 ಮಧ್ಯೆ ಮಧ್ಯೆ ಅವರಿಗೆ ವ್ಯಾಕರಣ ಮತ್ತು ಸಂಭಾಷಣೆಯನ್ನು ಸಹಾ ಪರಿಚಯಿಸುವುದು.

ಕ್ರಮ -5 ಈಗ ಕೊನೆಯ ಹಂತ: ಮಕ್ಕಳಿಗೆ ತಮಗೆ ಬೇಕಾದ ಕಥೆ ಪುಸ್ತಕವನ್ನು ಆರಿಸಿಕೊಂಡು ಓದಲು ಅನುವು ಮಾಡುವುದು. ಇಷ್ಟು ಹೊತ್ತಿಗೆ ಅವರು ತಮಗೆ ಬೇಕಾದ ಪುಸ್ತಕವನ್ನು ಆರಿಸಿಕೊಂಡು ಓದಲು ಉತ್ಸುಕರಾಗಿರುತ್ತಾರೆ.

ಈ ಎಲ್ಲಾ ವಿಧಾನಗಳನ್ನು ಅನುಸರಿಸಿದಾಗ ಮಕ್ಕಳು ಬಹಳ ಬೇಗ ಕಥೆಯ ಮೂಲಕ ಭಾಷೆಯನ್ನೂ ಕಲಿಯುತ್ತಾರೆ.

ಶಾಲೆಗೊಂದು ಗ್ರಂಥಾಲಯ
ಮಕ್ಕಳು ಕುಳಿತು ಓದುವುದಕ್ಕೆ ಒಂದು ಚಂದವಾದ ವಾತಾವರಣವೂ ಅಗತ್ಯ. ಮಕ್ಕಳಿಗೆ ಓದಲು, ಪುಸ್ತಕಗಳನ್ನು ನೀಡಲು, ಎಲ್ಲಾ ಶಾಲೆಗಳಲ್ಲೂ ಗ್ರಂಥಾಲಯವಿರಲೇ ಬೇಕು. ಆದರೆ ದುರಾದೃಷ್ಟವಶಾತ್ ನಮ್ಮ ದೇಶದ ಎಲ್ಲ ಶಾಲೆಗಳಲ್ಲಿ ಗ್ರಂಥಾಲಯಗಳಿರುವುದಿಲ್ಲ. ಮಕ್ಕಳಿಗೆ ಬೇಕಾದ ಬಣ್ಣ ಬಣ್ಣದ ಚಿತ್ರಗಳ ಪುಸ್ತಕಗಳು ಮತ್ತು ಒಳ್ಳೆಯ ವಾತಾವರಣವೂ ಅಲ್ಲಿ ಲಭ್ಯವಿರಲಾರದು. ಆದರೆ ಮನಸ್ಸು ಮಾಡಿದರೆ ಇಂತಹ ಗ್ರಂಥಾಲಯದ ರೂಪವನ್ನೇ ಬದಲಿಸಲು ಸಾಧ್ಯವಿದೆ. ಇದಕ್ಕೆ ಲಕ್ಷಾಂತರ ರೂಪಾಯಿಗಳನ್ನೇ ಖರ್ಚು ಮಾಡಬೇಕೆಂದಿಲ್ಲ ಅಥವಾ ಎಲ್ಲದಕ್ಕೂ ಸರ್ಕಾರವನ್ನೇ ಕಾಯ ಬೇಕಾಗಿಲ್ಲ. ನಾಲ್ಕು ಜನರು ಸೇರಿ ಮನಸ್ಸು ಮಾಡಿದಲ್ಲಿ ಖಂಡಿತ ಸಾಧ್ಯ

ಒಂದು ಅಧ್ಯಯನದ ಪ್ರಕಾರ ಮಗು ನಾಲ್ಕನೆಯ ತರಗತಿಗೆ ಬರುವ ಹೊತ್ತಿಗೆ ಅದು ಚೆನ್ನಾಗಿ ಓದಲು ಕಲಿತಿರಬೇಕು. ಇಲ್ಲದಿದ್ದರೆ ಓದಲು ಅರಿಯದ ಮಗು ಮಿಕ್ಕ ಮಕ್ಕಳಿಗಿಂತ ಹಿಂದೆ ಬೀಳುತ್ತದೆ. ಅವರ ಮನವನ್ನು ಆಕರ್ಷಿಸುವಂತಹ ಪುಸ್ತಕಗಳನ್ನು ನೀಡುವ ಮೂಲಕ ಮತ್ತು ಓದಲು ಆಸಕ್ತಿ ಮೂಡಿಸುವಂತಹ ಚಟುವಟಿಕೆಗಳನ್ನು ನೀಡುವುದರಿಂದ ಇದು ಸಾಧ್ಯ. ಎಲ್ಲ ಶಾಲೆಗಳಲ್ಲೂ ಈ ವಿಧಾನವನ್ನು ಅನುಸರಿಸಿದಾಗ ಮಕ್ಕಳ ಮನ ಓದಿನ ಕಡೆಗೆ ತುಡಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT