ಮಂಗಳವಾರ, ಡಿಸೆಂಬರ್ 10, 2019
26 °C

ರಜನಿಕಾಂತ್‌ ಓದಿದ ಶಾಲೆಗೀಗ ಹೊಸ ಹೆಸರು

Published:
Updated:

ವಿಪುರಂ ಗುಟ್ಟಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಸರು ಇಂದಿನಿಂದ (ಬುಧವಾರ) ‘ಶ್ರೀಮತಿ ತುಕ್ಕೂಬಾಯಿ ಭೋಜಗಡೆ ಮತ್ತು ಶ್ರೀಮತಿ ಮನ್ನಾಬಾಯಿ ನಿಕ್ಕಂ’ ಸರ್ಕಾರಿ ಪ್ರಾಥಮಿಕ ಶಾಲೆ ಎಂದು ಬದಲಾಗಲಿದೆ.

ತಮಿಳಿನ ಖ್ಯಾತ ನಟ ರಜನಿಕಾಂತ್‌ ಸೇರಿದಂತೆ ಸಹಸ್ರಾರು ಮಂದಿಗೆ ಅಕ್ಷರ ಕಲಿಸಿರುವ ಈ ಕನ್ನಡ ಶಾಲಾ ಕಟ್ಟಡಕ್ಕೆ 105 ವರ್ಷಗಳ ಇತಿಹಾಸವಿದೆ.

ಅಸಲಿಗೆ ಇದು ಸರ್ಕಾರ ಆರಂಭಿಸಿದ ಶಾಲೆಯಲ್ಲ. ದಾನಿಯಾದ ತುಕ್ಕೂಬಾಯಿ ಭೋಜಗಡೆ ಅವರು 1913ರಲ್ಲಿ ಕಟ್ಟಿಸಿದ, ಇದು ಆರಂಭದಲ್ಲಿ ಧರ್ಮಛತ್ರ ಕಟ್ಟಡವಾಗಿತ್ತು. 1940ರಲ್ಲಿ ಈ ಕಟ್ಟಡದಲ್ಲಿ ಶಾಲೆ ಆರಂಭಿಸಲಾಯಿತು. ತುಕ್ಕೂಬಾಯಿ ಅವರು ತಮ್ಮ ಪತಿ ಬಿ. ವೆಂಕಟರಾವ್‌ ಭೋಜಗಡೆ (ಬೆಳ್ಳಿ ವ್ಯಾಪಾರಿ) ಅವರ ನೆನಪಿನಲ್ಲಿ ಇದನ್ನು ಕಟ್ಟಿಸಿದ್ದರು. ಯಾವುದೇ ಶಾಲಾ ಶಿಕ್ಷಣ ಪಡೆಯದ ತುಕ್ಕೂಬಾಯಿ ಅವರು, ಕುಟುಂಬದವರ ನೆರವಿಲ್ಲದೆ, ತಮ್ಮ ಸ್ವಂತ ಹಣ ವ್ಯಯಿಸಿ ಈ ಕಟ್ಟಡವನ್ನು ಕಟ್ಟಿಸಿದ್ದರು.

ಶಾಲಾ ಶಿಕ್ಷಣ ಇಲ್ಲದೇ, ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದ ವೆಂಕಟರಾವ್‌ ಭೋಜಗಡೆ ಅವರು ತನ್ನಂತೆ ಇತರರು ಕಷ್ಟಪಡಬಾರದು, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂದು ಹೇಳುತ್ತಿದ್ದರು. ಅಲ್ಲದೆ ಶಿಕ್ಷಣಕ್ಕಾಗಿ ವಿವಿಧೆಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟವನ್ನು ನೀಡುವ ವ್ಯವಸ್ಥೆಯಾಗಬೇಕು ಎಂಬ ಕನಸು ಹೊಂದಿದ್ದರು. ಪತಿಯ ಈ ಕನಸನ್ನು ನನಸು ಮಾಡಿದವರು ತುಕ್ಕೂಬಾಯಿ. ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳಿಗಾಗಿ ಅವರು ಬಸವನಗುಡಿಯಲ್ಲಿ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕಾಗಿ ಹಣವನ್ನು ಉದಾರವಾಗಿ ದಾನ ನೀಡಿದರು.‌

ಮನ್ನಾಬಾಯಿ ಕೊಡುಗೆ: ತುಕ್ಕೂಬಾಯಿ ಅವರ ಮೊಮ್ಮಗಳು ಮನ್ನಾಬಾಯಿ. ಅವರ ಪತಿ ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ದಿವಂಗತ ಪ್ರೊ. ಎನ್‌.ಎ.ನಿಕ್ಕಂ. 1970ರ ವೇಳೆಗೆ ಈ ಶಾಲೆಯಲ್ಲಿ 800ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಶಾಲೆಯನ್ನು ಸರ್ಕಾರ ನಡೆಸುವುದೇ ಸೂಕ್ತವೆಂದು ಭಾವಿಸಿ, 1970ರ ಜೂನ್‌ 15ರಂದು ಮನ್ನಾಬಾಯಿ ಮತ್ತು ನಿಕ್ಕಂ ಅವರು ಶಾಲೆಯನ್ನು (3,543 ಚ.ಅ ಜಾಗವನ್ನೂ) ಸರ್ಕಾರಕ್ಕೆ ದಾನ ನೀಡಿದರು.

ಈ ಶಾಲಾ ಕಟ್ಟಡವನ್ನು 2012ರಲ್ಲಿ ನೆಲಸಮಗೊಳಿಸಿದ ಸರ್ಕಾರ, ಅಲ್ಲಿ ‘ಹೈಟೆಕ್‌’ ಶಾಲಾ ಕಟ್ಟಡ ನಿರ್ಮಿಸಿದೆ. ಈ ವೇಳೆ ಆ ಶಾಲಾ ಕಟ್ಟಡದಲ್ಲಿ ಇದ್ದ ನಾಮ ಫಲಕವನ್ನು (ಶಾಲಾ ನಿರ್ಮಾಣದ ಸಂದರ್ಭದಲ್ಲಿ ಹಾಕಿದ್ದ) ಡಾ. ಎನ್‌ ಶಕುಂತಲಾ ಮಾನೆ (ಮನ್ನಾಬಾಯಿ ಅವರ ಮಗಳು) ಅವರು ಸಂರಕ್ಷಿಸಿದರು.

ನಂತರ ಶಕುಂತಲಾ ಮಾನೆ, ಅವರ ಸಹೋದರಿ ಶೈಲಜಾ ನಿಕ್ಕಂ, ಸಹೋದರ ಜಯಸಿಂಹ ಅವರು ಜತೆಗೂಡಿ, ತಮ್ಮ ಪೂರ್ವಜರು ಕಟ್ಟಿಸಿದ ಕನ್ನಡ ಶಾಲೆಗೆ ಅವರ ಹೆಸರನ್ನು ನಾಮಕರಣ ಮಾಡುವಂತೆ ಸರ್ಕಾರಕ್ಕೆ 2012ರಲ್ಲಿ ಮನವಿ ಸಲ್ಲಿಸಿದರು. ಆಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರು, ಈ ಕುರಿತು ಪ್ರಸ್ತಾವನೆ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದರು.

‘ಶಾಲೆಗೆ ಹೆಸರಿಡಬೇಕೆಂದರೆ ಹೊಸ ಕಟ್ಟಡಕ್ಕೆ ತಗಲುವ ವೆಚ್ಚದ ಮೂರನೇ ಒಂದು ಭಾಗದಷ್ಟನ್ನು ನೀಡಬೇಕು ಎಂಬುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಪೂರ್ವಜರು ಜಾಗವನ್ನೇ ದಾನವಾಗಿ ನೀಡಿದ್ದಾರೆ, ಈಗ ಮತ್ತೆ ಹಣವನ್ನು ದಾನವಾಗಿ ನೀಡಬೇಕಾ ಎಂದು ಬೇಸರಗೊಂಡಿದ್ದೆವು. ಬಳಿಕ, ಆ ಜಾಗ ಈಗ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ ಎಂಬುದನ್ನು ಇಲಾಖೆಗೆ ಮನದಟ್ಟು ಮಾಡಿಕೊಟ್ಟೆವು. ಈ ಕುರಿತು ಬಸವನಗುಡಿ ಉಪ ನೋಂದಣಾಧಿಕಾರಿ ಕಚೇರಿಯಿಂದ ದೃಢೀಕರಣ ಪತ್ರ ಪಡೆದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಶಾಲೆಗೆ ದಾನಿಗಳ ಹೆಸರಿನ್ನಿಡಲು ಸಮ್ಮತಿ ಸೂಚಿಸಿ, 2014ರ ಡಿಸೆಂಬರ್‌ 4ರಂದು ಆದೇಶಿಸಿತು’ ಎಂದು ಶಕುಂತಲಾ ಮಾನೆ ಮಾಹಿತಿ ನೀಡುತ್ತಾರೆ.

ಈ ಜಾಗದಲ್ಲಿ ನಿರ್ಮಾಣವಾದ ನೂತನ ಶಾಲಾ ಕಟ್ಟಡದ ಉದ್ಘಾಟನೆ ಕಳೆದ ವರ್ಷ ನೆರವೇರಿತ್ತು. ಈ ಶಾಲೆಗೆ ಪ್ರಮುಖ ದಾನಿಗಳಾದ ‘ದಿ. ಶ್ರೀಮತಿ ತುಕ್ಕಬಾಯಿ ಮತ್ತು ದಿ. ಶ್ರೀಮತಿ ಮನ್ನಾಬಾಯಿ ನಿಕ್ಕಂ ಸರ್ಕಾರಿ ಪ್ರಾಥಮಿಕ ಶಾಲೆ’ ಎಂದು ಬುಧವಾರ ನಾಮಕರಣ ಮಾಡಲಾಗುತ್ತಿದೆ.

ಶಾಲಾ ನಾಮಫಲಕದ ಉದ್ಘಾಟನೆ: ಅತಿಥಿಗಳು– ಪ್ರೇಮಾ ಕೃಷ್ಣ,
ಡಾ. ಪಿ.ಸಿ.ಜಾಫರ್‌, ಎಚ್‌.ಎ.ಕೆಂಪೇಗೌಡ. ಅಧ್ಯಕ್ಷತೆ– ರವಿ ಸುಬ್ರಹ್ಮಣ್ಯ. ಸ್ಥಳ– ಸರ್ಕಾರಿ ಪ್ರಾಥಮಿಕ ಶಾಲೆ, ಗವಿಪುರಂ, ಗುಟ್ಟಹಳ್ಳಿ. ಗವಿ ಗಂಗಾಧರೇಶ್ವರ ದೇವಸ್ಥಾನದ ಪಕ್ಕ. ಬೆಳಿಗ್ಗೆ 9

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು