ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನ ಕಂಡ ಬಿಡನಾಳ ಸರ್ಕಾರಿ ಶಾಲೆ

Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ ಕ್ಲಾಸ್‌, ಸಿಸಿಟಿವಿ ಕ್ಯಾಮೆರಾ, ಶುದ್ಧ ಕುಡಿಯುವ ನೀರು, ಎಲ್‌ಕೆಜಿ, ಯುಕೆಜಿ ಪೂರ್ವ ಪ್ರಾಥಮಿಕ ಶಿಕ್ಷಣ, 6 ಮತ್ತು 7ನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ, ಕ್ರೀಡಾ ಸಂಘ, ವಿಜ್ಞಾನ ಸಂಘ, ಕನ್ನಡ ಸಂಘ, ಶಾಲಾ ಸಂಸತ್ತು, ಶಾಲೆಯ ಸುತ್ತಲೂ ಎತ್ತರದ ಕಾಂಪೌಂಡ್‌, ಮಕ್ಕಳಿಗೆ ಬೆಳಿಗ್ಗೆ ಸುಗಂಧ ಭರಿತ ತಂಪಾದ ಹಾಲು, ಮಧ್ಯಾಹ್ನ ಬಿಸಿ, ಬಿಸಿಯಾದ ಊಟ, ಉಚಿತ ಪಠ್ಯಪುಸ್ತಕ, ಶೂ, ವಿದ್ಯಾರ್ಥಿವೇತನ, ಕಂಪ್ಯೂಟರ್‌, ಎತ್ತರ ಕಾಂಪೌಂಡ್‌, ಸ್ವಚ್ಛವಾದ ಆಟದ ಮೈದಾನ... ಏನುಂಟು, ಏನಿಲ್ಲ!

ಇಷ್ಟೊಂದು ಸೌಲಭ್ಯ ಇದೆ ಎಂದಾದರೆ ಬಹುಶಃ ಇದು ಖಾಸಗಿ ವಸತಿಯುತ ಶಾಲೆ ಇರಬಹುದು ಎಂಬ ಊಹೆ ನಿಮ್ಮದಾಗಿದ್ದರೆ ಖಂಡಿತವಾಗಿಯೂ ತಪ್ಪು. ಇದು, ಹುಬ್ಬಳ್ಳಿ ನಗರದ ಬಿಡನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.10ರ ಚಿತ್ರಣ.

ಹೌದು, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ, ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಪೋಷಕರು ಒಂದೊಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಆಕರ್ಷಣೆಗೆ ಒಳಗಾಗುವುದರಲ್ಲಿ ಸಂಶಯವಿಲ್ಲ.

1913ರಲ್ಲಿ ಆರಂಭವಾದ ಈ ಶಾಲೆ ಅದಾಗಲೇ ಶತಮಾನ ಪೂರೈಸಿದೆ. ಅಜ್ಜ, ಅಜ್ಜಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ನೂರಾರು ಕುಟುಂಬಗಳ ಎರಡು, ಮೂರು ತಲೆಮಾರಿನವರು ಇದೇ ಶಾಲೆಯಲ್ಲಿ ಕಲಿತಿರುವುದು ವಿಶೇಷ.

ಖಾಸಗಿ ಇಂಗ್ಲಿಷ್‌ ಶಾಲೆಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇಲ್ಲಿಯ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಪೋಷಕರು ಒಂದುಗೂಡಿ ಮೂರು ವರ್ಷಗಳಿಂದ ಎಲ್‌ಕೆಜೆ, ಯುಕೆಜಿಯನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಎಸ್‌ಡಿಎಂಸಿಯವರೇ ಇಬ್ಬರು ಶಿಕ್ಷಕಿಯನ್ನು ನೇಮಿಸಿಕೊಂಡು, ವೇತನವನ್ನು ತಾವೇ ಪಾವತಿಸುತ್ತಿದ್ದಾರೆ. ಸದ್ಯ 80 ಪುಟಾಣಿಗಳು ಎಲ್‌ಕೆಜಿ, ಯುಕೆಜಿಯಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಯ ಆರಂಭಿಕ ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲೂ ಎ,ಬಿ,ಸಿ,ಡಿ, ಟ್ವಿಂಕಲ್‌, ಟ್ವಿಂಕಲ್‌ ಲಿಟ್ಲ್‌ ಸ್ಟಾರ್‌ ಪದ್ಯ ಅನುರಣಿಸುತ್ತಿದೆ.

ಶಾಲೆಯ ವಾತಾವರಣವೂ ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಇರುವುದರಿಂದ ಹಾಗೂ ಗುಣಮಟ್ಟದ ಬೋಧನೆ ಮತ್ತು ಮಕ್ಕಳ ಮೇಲಿನ ಶಿಕ್ಷಕರ ಕಾಳಜಿಯನ್ನು ಕಣ್ಣಾರೆ ಕಾಣುತ್ತಿರುವ ಹಳೇ ಹುಬ್ಬಳ್ಳಿಯ ಬಿಡನಾಳ, ಎಸ್‌.ಎಂ.ಕೃಷ್ಣನಗರ, ಕರ್ಕಿಬಸವೇಶ್ವರ ನಗರ, ಸೋನಿಯಾಗಾಂಧಿ ನಗರ, ಮಾರುತಿ ನಗರ, ಬಿ.ಡಿ.ಪ್ಲಾಟ್‌, ಪಾಂಡುರಂಗ ಕಾಲೊನಿ ಸೇರಿದಂತೆ ಆಸುಪಾಸಿನ ನಿವಾಸಿಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಿಗೆ ಈ ಶಾಲೆಗೆ ಕಳುಹಿಸುತ್ತಿದ್ದಾರೆ. ಸದ್ಯ735ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ.

‘ಶಾಲೆಯೇ ದೇವಾಲಯ, ಮಕ್ಕಳೇ ದೇವರು, ಶಿಕ್ಷಕರೇ ಶಿಲ್ಪಿಗಳು’, ‘ಒಬ್ಬ ಆದರ್ಶ ತಾಯಿಯು ನೂರು ಗುರುಗಳಿಗಿಂತಲೂ ಶ್ರೇಷ್ಠಳು’, ‘ನಂಬಿಕೆ ಇದ್ದರೆ ಮೌನವೂ ಅರ್ಥವಾಗುತ್ತದೆ, ಇಲ್ಲದಿದ್ದರೆ ಪ್ರತಿ ಶಬ್ಧದಲ್ಲೂ ಅಪಾರ್ಥ ಗೋಚರಿಸುತ್ತದೆ’, ‘ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು’, ‘ಅಜ್ಞಾನಿ ಹರಟೆ ಹೊಡೆಯುತ್ತಾನೆ, ಜ್ಞಾನಿ ಮೌನವಾಗಿರುತ್ತಾನೆ’... ಎಂಬ ಉಕ್ತಿಗಳು ಶಾಲೆಯ ಗೋಡೆಗಳ ಮೇಲೆ ಅನುರಣಿಸುತ್ತಿದ್ದು, ಮಕ್ಕಳಿಗೆ ನೀತಿ ಪಾಠ ಹೇಳಿಕೊಡುವಂತಿವೆ.

ಇವುಗಳ ಜೊತೆಗೆ, ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮ ಗಾಂಧಿ ಅವರ ಉಕ್ತಿಗಳು, ಜಿಲ್ಲೆ, ರಾಜ್ಯ, ದೇಶ, ಪ್ರಪಂಚದ ನಕ್ಷೆಗಳು, ರಾಷ್ಟ್ರ ಚಿಹ್ನೆ, ರಾಷ್ಟ್ರಗೀತೆ, ನಾಡಗೀತೆ, ವಂದೇ ಮಾತರಂ ಗೀತೆ ಶಾಲೆಯ ಗೋಡೆಗಳ ಮೇಲೆ ಕಣ್ಣಿಗೆ ರಾಚುತ್ತವೆ. ರಾಷ್ಟ್ರನಾಯಕರು, ದೇಶದ ಪ್ರಧಾನಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಭಾವಚಿತ್ರ, ಶಾಲಾ ಪಂಚಾಂಗ ಶಾಲಾ ಕೊಠಡಿಗಳನ್ನು ಅಲಂಕರಿಸಿವೆ.

‘ಶಾಲೆಯಲ್ಲಿ ಸದ್ಯ 14 ಕೊಠಡಿಗಳು, 12 ಶಿಕ್ಷಕಿಯರು, 6 ಶಿಕ್ಷಕಿಯರು ಇದ್ದಾರೆ. ಹೊಸದಾಗಿ 5 ಕೊಠಡಿಗಳು ನಿರ್ಮಾಣ ಹಂತದಲ್ಲಿವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಎರಡು ಕೊಠಡಿಗಳ ಅಗತ್ಯವಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್‌.ಜಂಗಳಿ ತಿಳಿಸಿದರು.

‘ಶಾಲೆಯಲ್ಲಿ ಮೂರು ವರ್ಷಗಳಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದೇವೆ. ಅಂತೆಯೇ, ಮೂರು ವರ್ಷಗಳಿಂದ 6 ಮತ್ತು 7ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸಿದ್ದೇವೆ. ಎರಡೂ ತರಗತಿಗಳಲ್ಲಿ ತಲಾ 37 ಮಕ್ಕಳು ಕಲಿಯುತ್ತಿದ್ದಾರೆ’ ಎಂದರು.

‘ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ನಡೆಸುತ್ತೇವೆ. ಜೊತೆಗೆ ಅವರ ಪಾಲಕರನ್ನು ಸಂದರ್ಶನ ಮಾಡುತ್ತೇವೆ. ಆಸಕ್ತರನ್ನು ಮಾತ್ರ 6ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಸೇರ್ಪಡೆ ಮಾಡುತ್ತೇವೆ. ಉಳಿದವರು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಾರೆ. ಕನ್ನಡ ಮಾಧ್ಯಮ ತರಗತಿಗೆ ಬೋಧಿಸುವ ಶಿಕ್ಷಕರೇ ಇಂಗ್ಲಿಷ್‌ ಮಾಧ್ಯಮದ ತರಗತಿಗಳನ್ನು ನಡೆಸಿಕೊಂಡು ಹೋಗುತ್ತಾರೆ’ ಎಂದರು.

‘ಶಿಕ್ಷಕರು ಸಹ ಹತ್ತಾರು ವರ್ಷಗಳಿಂದ ಇದೇ ಶಾಲೆಯಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಗೆ ಒಂದು ದಿನವೂ ತಪ್ಪಿಸದೇ ಹಾಜರಾಗುವ ವಿದ್ಯಾರ್ಥಿಗಳಿಗೆ ಶಿಕ್ಷಕಿಯರು ಬಹುಮಾನ ನೀಡುವ ಪರಿಪಾಠ ಬೆಳಸಿಕೊಂಡು ಬಂದಿದ್ದಾರೆ. ಇದರಿಂದ ಮಕ್ಕಳ ಹಾಜರಾತಿ ಪ್ರತಿ ದಿನವೂ ಹೆಚ್ಚಿರುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಮೌಲ್ಯಾಂಕನ ಪರೀಕ್ಷೆಯಲ್ಲಿ ಶಾಲೆ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ತಾಲ್ಲೂಕು ಮಟ್ಟದ ಸಾಂಸ್ಕೃತಿಕ, ಕ್ರೀಡಾ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶಾಲೆಯ ಮಕ್ಕಳು ಪ್ರತಿ ವರ್ಷ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ನೆಹರೂ ಮೈದಾನದಲ್ಲಿ ನಡೆಯುವ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಶಾಲೆಯನ್ನು ಪ್ರತಿನಿಧಿಸುತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ, ಸಾಂಸ್ಕೃತಿಕ, ಕ್ರೀಡಾ ಹಾಗೂ ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ಪ್ರತಿ ವರ್ಷ ಮಾಡುತ್ತೇವೆ. ಶಾಲಾ ವಾರ್ಷಿಕೋತ್ಸವದಲ್ಲಿ ಮೂರ್ನಾಲ್ಕು ಸಾವಿರ ಜನರು ಸೇರುತ್ತಾರೆ’ ಎಂದು ಹೇಳಿದರು.

‘ಬೆಳಿಗ್ಗೆ ಶಾಲೆ ಆರಂಭ ಹಾಗೂ ಸಂಜೆ ಶಾಲೆ ಬಿಡುವ ವೇಳೆಯಲ್ಲಿ ಎರಡು ಬಾರಿ ಪ್ರಾರ್ಥನೆ ಮಾಡಿಸುತ್ತೇವೆ. ಈ ಸಂದರ್ಭದಲ್ಲಿ ಮಕ್ಕಳ ಹಾಜರಾತಿ ತೆಗೆದುಕೊಳ್ಳುತ್ತೇವೆ’ ಎಂದರು.

‘ಶಾಲೆ ಮೈದಾನದಲ್ಲಿ ಗಿಡ, ಮರಗಳಿವೆ. ಆಟ ಆಡಲು ಅನುಕೂಲ ಇದೆ. ಶಾಲೆ ವಾತಾವರಣ ಸ್ವಚ್ಛವಾಗಿದೆ. ಶಿಕ್ಷಕರು ಚಲೊ ಕಲಿಸ್ತಾರೆ. ನಮ್ಮ ಶಾಲೆ ಬಗ್ಗೆ ನಮಗೆ ಹೆಮ್ಮೆ ಇದೆ’ ಎನ್ನುತ್ತಾರೆ ಶಾಲಾ ಸಂಸತ್ತಿನ ಪ್ರಧಾನಮಂತ್ರಿ ನವೀನ್‌ ವಾಲಿಕಾರ ಮತ್ತು ಉಪ ಪ್ರಧಾನಮಂತ್ರಿ ಸೌಭಾಗ್ಯಲಕ್ಷ್ಮಿ ಪಟ್ಟಣಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT