ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ನೇ ವಯಸ್ಸಿಗೆ ಎಲೆಕ್ಟ್ರಿಕಲ್‌ ಎಂಜಿನಿಯರ್‌!

ನೆದರ್ಲೆಂಡ್ಸ್‌ನ ಇಂಡ್‌ಹೋವೆನ್ ವಿ.ವಿ.ಯಲ್ಲಿ ಡಿಸೆಂಬರ್‌ನಲ್ಲಿ ಪದವಿ ಪೂರೈಸಲಿರುವ ಲಾರೆಂಟ್‌ ಸೈಮನ್ಸ್
Last Updated 17 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಒಂಬತ್ತನೇ ವಯಸ್ಸಿಗೆ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸುವ ಮೂಲಕ ಬೆಲ್ಜಿಯಂ ಮೂಲದ ಲಾರೆಂಟ್‌ ಸೈಮನ್ಸ್‌ ಜಗತ್ತಿನ ಅತಿ ಕಿರಿಯ ಪದವೀಧರನಾಗಲಿದ್ದು, ವಿಶ್ವ ದಾಖಲೆಯ ಮನ್ನಣೆ ಗಳಿಸಲಿದ್ದಾನೆ.

ನೆದರ್ಲೆಂಡ್ಸ್‌ನ ಇಂಡ್‌ಹೋವೆನ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ಲಾರೆಂಟ್‌ ಇದೇ ಡಿಸೆಂಬರ್‌ನಲ್ಲಿ ಪದವಿ ಪೂರೈಸಲಿದ್ದಾನೆ.

ಅಗಾಧ ಬುದ್ಧಿಮತ್ತೆಯ ಲಾರೆಂಟ್‌ 8ನೇ ವಯಸ್ಸಿನ ಅಸುಪಾಸಿರುವಾಗಲೇ18 ತಿಂಗಳಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದ. ವರ್ಷದ ಆರಂಭದಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಮೂಲಕ ಅತಿ ಕಿರಿಯ ವಯಸ್ಸಿನ ವಿದ್ಯಾರ್ಥಿ ಎಂಬ ಪಾತ್ರಕ್ಕೂ ಒಳಗಾಗಿದ್ದ. ಈಗ ಅದೇ ಪದವಿಯನ್ನು ಮುಗಿಸುವ ಕಾತರದಲ್ಲಿದ್ದಾನೆ.

ವೈದ್ಯರ ಕುಟುಂಬದಿಂದ ಬಂದ ಈ ಹುಡುಗ ಎಂತಹುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಅರ್ಥಮಾಡಿಕೊಂಡು ಸ್ಪಂದಿಸುವಷ್ಟು ಬುದ್ಧಿಮತ್ತೆಯನ್ನು ತೋರಿಸಿದ್ದಾನೆ.

‘ಮಗ ವಿಶೇಷವಾಗಿ ಏನಾದರೂ ಮಾಡಬೇಕು ಎಂಬ ಯಾವ ಉದ್ದೇಶವೂ ಇರಲಿಲ್ಲ. ಸಹಜವಾಗಿ ಲಾರೆಂಟ್‌ನನ್ನು ಶಾಲೆಗೆ ಕಳುಹಿಸಿದಾಗ ಆತನ ವೇಗದ ಕಲಿಕಾ ಸಾಮರ್ಥ್ಯದ ಬಗ್ಗೆ ಶಾಲಾ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆತನ ಆಸಕ್ತಿಯನ್ನು ಪೋಷಿಸುತ್ತಾ ಬಂದಿದ್ದೇವೆ. ಇದು ಆತನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ’ ಎಂದು ಲಾರೆಂಟ್‌ ತಂದೆ ಅಲೆಕ್ಸಾಂಡರ್‌ ಸೈಮನ್ಸ್‌ ಹರ್ಷ ವ್ಯಕ್ತಪಡಿಸಿದ್ದಾರೆ.

‘ನನ್ನ ಮಗನ ಬುದ್ಧಿ ಹಾಗೂ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ. ಆತ ಈಗಾಗಲೇ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪಿಎಚ್‌.ಡಿ ಮಾಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದಾನೆ. ಜತೆಗೆ ವೈದ್ಯಶಾಸ್ತ್ರದಲ್ಲಿ ಪದವಿ ಗಳಿಸುವ ಇರಾದೆಯೂ ಇದೆ’ ಎನ್ನುವ ಅವರು, ‘ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮಗನಿಗೆ ಪ್ರವೇಶ ನೀಡಲು ಮುಂದೆ ಬಂದವು. ಆದರೆ, ಸದಾ ಓದಿನಲ್ಲಿಯೇ ತೊಡಗಿ ತನ್ನ ಬಾಲ್ಯವನ್ನು ಕಳೆದುಕೊಳ್ಳಬಾರದು. ಆತನಿಗೆ ಏನು ಇಷ್ಟವೊ ಅದನ್ನು ಮಾಡಲಿ ಎಂಬುದೇ ನಮ್ಮ ಆಸೆ. ಹಾಗಾಗಿ ಆತನ ಅಪೂರ್ವ ಬಾಲ್ಯ ಮತ್ತು ಪ್ರತಿಭೆ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ.

‘ಸದ್ಯಕ್ಕೆ ಆತನಿಗೆ ಸಂಶೋಧನೆಯಲ್ಲಿ ತೀವ್ರ ಆಸಕ್ತಿಯಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಜತೆಗೆ ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದಾನೆ’ ಎಂಬುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ:ವಿಭಿನ್ನ ಸಾಧಕರು

ಐಂಡ್ಹೋವನ್‌ ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಶೋರ್ಡ್‌ ಹಲ್‌ಶಫ್‌, ‘‌ಲಾರೆಂಟ್‌ ಅತಿ ವೇಗದಲ್ಲಿ ಕಲಿಯುವ ಹುಡುಗ ಮಾತ್ರವಲ್ಲ ಎಲ್ಲರೊಂದಿಗೆ ಬೆರೆಯುವ ಹೃದಯವಂತ. ಕೇವಲ ಬುದ್ಧಿಮತ್ತೆಯಿಂದ ಅಷ್ಟೆ ಅಲ್ಲ, ಹೃದಯದಿಂದಲೂ ಆತ ಎಲ್ಲರನ್ನು ಗೆಲ್ಲುತ್ತಾನೆ’ ಎಂದು ಹೇಳಿಕೊಂಡಿದ್ದಾರೆ.

ಇಂಥ ವಿಶೇಷ ಪ್ರತಿಭೆಯ ಮಕ್ಕಳಿಗಾಗಿಯೇ ವಿಶ್ವವಿದ್ಯಾಲಯದಲ್ಲಿ ಹೊಂದಾಣಿಕೆಯ ವೇಳಾಪಟ್ಟಿಯನ್ನು ರೂಪಿಸಲಾಗಿದೆ. ಜತೆಗೆ ದೈಹಿಕ ಶಿಕ್ಷಣಕ್ಕೂ ಒತ್ತು ನೀಡಲಾಗುತ್ತಿದೆ’ ಎನ್ನುತ್ತಾರೆ.

ಲಾರೆಂಟ್‌ ತಾಯಿ ಲಿಡಿಯಾ, ‘ನನ್ನ ಮಗನ ಬುದ್ಧಿಮತ್ತೆಯು ಬಹಳ ವಿಶಿಷ್ಟವಾಗಿದೆ ಎಂಬುದನ್ನು ಆತನ ಅಜ್ಜ ಅಜ್ಜಿಯೇ ಮೊದಲು ಎಲ್ಲರ ಗಮನಕ್ಕೆ ತಂದರು. ಈ ವಿಶೇಷ ಪ್ರತಿಭೆ ಆತನಿಗೆ ವರವಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಆತನ ಯೋಚನೆಗಳಿಗೆ ಪ್ರೋತ್ಸಾಹವಷ್ಟೆ ನೀಡುತ್ತಿದ್ದೇವೆ. ಉಳಿದಂತೆ ನಿರ್ಧಾರಗಳೆಲ್ಲ ಅವನದ್ದೆ’ ಎಂದು ತಿಳಿಸಿದ್ದಾರೆ.

ಶೈಕ್ಷಣಿಕ ಹಾಗೂ ಉದ್ಯೋಗದ ಬಗ್ಗೆಯೂ ಯೋಚನೆ ಮಾಡಿರುವ ಲಾರೆಂಟ್‌ ಕೃತಕ ಅಂಗಾಂಗಗಳನ್ನು ಸೃಷಿಸುವ ಗುರಿಯನ್ನು ಹೊಂದಿದ್ದಾನೆ. ಈ ಪುಟ್ಟ ವಯಸ್ಸಿಗೆ ಇಷ್ಟೆಲ್ಲ ತಲೆಕೆಡಿಸಿಕೊಂಡಿರುವ ಈ ಹುಡುಗ ಜೀವನವನ್ನು ನೀರಸವಾಗಿ ಕಳೆಯುತ್ತಿರಬಹುದು ಎಂದು ಭಾವಿಸಬೇಡಿ. ಎಲ್ಲ ಮಕ್ಕಳಂತೆ ಇರಲು ಇಷ್ಟಪಡುವ ಈ ಹುಡುಗ ತನ್ನ ನಾಯಿ ‘ಸ್ಯಾಮಿ’ಯೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾನೆ. ಸೆಲ್‌ಪೋನ್‌ ಬಳಸುತ್ತಾನೆ. ಪದವಿ ಪಡೆದ ನಂತರ ಸಿಗುವ ರಜೆಯನ್ನು ಜಪಾನ್‌ನಲ್ಲಿ ಕಳೆಯಬೇಕೆಂಬುದು ಯೋಜನೆಯನ್ನು ಹಾಕಿಕೊಂಡಿದ್ದಾನೆ.‌

10ನೇ ವಯಸ್ಸಿಗೆ ಅಲ್ಬಾನ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು,14ನೇ ವಯಸ್ಸಿಗೆ ಜೀವರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೈಕಲ್‌ ಕಾರ್ನಿ ದಾಖಲೆಯನ್ನು ಲಾರೆಂಟ್‌ ಸರಿಗಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT