ಉದ್ಯೋಗಗಳ ಕಣಜ ‘ಪ್ಲಾಸ್ಟಿಕ್’ ಲೋಕ’

7

ಉದ್ಯೋಗಗಳ ಕಣಜ ‘ಪ್ಲಾಸ್ಟಿಕ್’ ಲೋಕ’

Published:
Updated:

ಪ್ರತಿದಿನ ನಾವು ಎಷ್ಟೆಲ್ಲ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳಸುತ್ತೇವೆ ಗೊತ್ತೇ? ಬೆಳಿಗ್ಗೆ ಎದ್ದು ಹಲ್ಲುಜ್ಜುವ ಬ್ರಷ್‌ನಿಂದ ಹಿಡಿದು ಮಲಗುವ ಚಾಪೆ, ಹಾಸಿಗೆಯವರೆಗೆ ಎಲ್ಲದರಲ್ಲೂ ಪ್ಲಾಸ್ಟಿಕ್‌ ನುಸುಳಿದೆ. ಧರಿಸುವ ಬಟ್ಟೆಯಲ್ಲಿ, ಅಂಗಿಯ ಗುಂಡಿಯಲ್ಲಿ, ಚಪ್ಪಲಿಯಲ್ಲಿ – ಎಲ್ಲೆಲ್ಲೂ ಪ್ಲಾಸ್ಟಿಕ್‌. ಬದುಕಿನ ಪ್ರತಿ ಹಂತದಲ್ಲೂ ಪ್ಲಾಸ್ಟಿಕ್‌ ದಾಂಗುಡಿ ಇಟ್ಟಿದೆ.

ವೈದ್ಯಕೀಯ ಪರಿಕರಗಳು, ಕೃಷಿ, ವಾಹನೋದ್ಯಮ, ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌, ಫ್ಯಾನ್ಸಿ ವಸ್ತುಗಳು, ಆಟಿಕೆಗಳು, ಕ್ರೀಡಾ ಪರಿಕರಗಳು, ಗೃಹೋಪಯೋಗಿ ವಸ್ತುಗಳು... ಎಲ್ಲದರಲ್ಲೂ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಲೇ ಇದೆ. ಬಳಕೆ ಹೆಚ್ಚಿದಂತೆ ಅವುಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಬೇಡಿಕೆಯೂ ಹೆಚ್ಚಿದೆ, ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತಿದೆ.

ಪ್ಲಾಸ್ಟಿಕ್‌ ಉತ್ಪನ್ನಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂಬ ಕೂಗೂ ಇದೆ. ಇದರಿಂದಾಗಿ ಕೆಲವು ಪ್ಲಾಸ್ಟಿಕ್‌ ವಸ್ತುಗಳ ಪುನರ್ಬಳಕೆಗೂ ಒತ್ತಡ ಹೆಚ್ಚುತ್ತಿದೆ. ಇದು ಕೂಡ ಪರೋಕ್ಷವಾಗಿ ಇನ್ನಷ್ಟು ಉದ್ಯೋಗಸೃಷ್ಟಿಗೆ ಕಾರಣವಾಗುತ್ತಿದೆ. ಜನ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲಿಗಳು ಬಟ್ಟೆ ತಯಾರಿಸಲು ಬಳಕೆಯಾಗುತ್ತಿವೆ. ನಾವು ಧರಿಸುವ ಪಾಲಿಸ್ಟರ್‌ ಬಟ್ಟೆಗಳಲ್ಲಿ ಮರುಬಳಕೆಯಾದ ಪ್ಲಾಸ್ಟಿಕ್‌ ಬಾಟಲಿಗಳ ಅಂಶವೂ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಸಿಪೆಟ್: ಪ್ಲಾಸ್ಟಿಕ್ ಕೈಗಾರಿಕೆಯ ಶಿಕ್ಷಣ ಸಂಸ್ಥೆ : ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಹಾಗಾಗಿ ಇವುಗಳ ಉತ್ಪನ್ನಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರವು ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು (CIPET) ಸ್ಥಾಪಿಸಿದೆ. 1968ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಈಗ 50ರ ಹರೆಯ. ಮೈಸೂರಿನಲ್ಲಿ ಸಿಪೆಟ್‌ನ ಶಾಖೆ ಇದೆ. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 33 ಸಂಸ್ಥೆಗಳಲ್ಲಿ ಇದು ಕೂಡ ಒಂದು. ನಮ್ಮ ರಾಜ್ಯದಲ್ಲಿ ಪ್ಲಾಸ್ಟಿಕ್‌ ಕೈಗಾರಿಕೆ ಕುರಿತ ಕೋರ್ಸ್‌ಗಳನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಇದು. ವಿವಿಧ ಪರಿಕರಗಳ ಉತ್ಪಾದನೆ ಹಾಗೂ ಸಂರಕ್ಷಣಾ ಘಟಕಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಪೆಟ್‌ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ.

ಪ್ಲಾಸ್ಟಿಕ್ ಉತ್ಪನ್ನಗಳ ಸಂಸ್ಕರಣೆ ಗುಣಮಟ್ಟದ ಪರೀಕ್ಷೆಗೆ ಅಗತ್ಯವಾದ ಶಿಕ್ಷಣ ಒದಗಿಸುವ ಅಚ್ಚು ವಿನ್ಯಾಸ ಡಿಪ್ಲೊಮ (DPMT), ಪ್ಲಾಸ್ಟಿಕ್ ತಂತ್ರಜ್ಞಾನ ಡಿಪ್ಲೊಮ (DPT) ಮತ್ತು ಪ್ಲಾಸ್ಟಿಕ್‌ ಸಂಸ್ಕರಣೆ ಮತ್ತು ಪರೀಕ್ಷೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮ (PGD-PPT) ಕೋರ್ಸ್‌ಗಳು ಇಲ್ಲಿವೆ. ಈ ಕೋರ್ಸ್‌ಗಳಿಗೆ ಅಖಿಲ ಭಾರತ ತಾಂತ್ರಿಕ ಕೌಶಲ ಮಂಡಳಿಯ ಅನುಮೋದನೆ ಇದೆ.

ಡಿಪ್ಲೊಮ ಕೋರ್ಸ್‌ಗಳಿಗೆ ಪಿಯುಸಿ ಅಥವಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಇವುಗಳ ಅವಧಿ ಮೂರು ವರ್ಷ. ಆದರೆ, ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ನ ಅವಧಿ ಎರಡು ವರ್ಷ ಮಾತ್ರ. ಪಿ.ಜಿ. ಡಿಪ್ಲೊಮದ ಕಲಿಕಾ ಅವಧಿ ಒಂದೂವರೆ ವರ್ಷ.

ಸಿಪೆಟ್‌ ಪ್ರಾಂಗಣವು ಮೈಸೂರು ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿದೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆಯಿದೆ. ವಿದ್ಯಾರ್ಥಿವೇತನ ಸೌಲಭ್ಯವೂ ಇದೆ. ಪ್ರತಿ ಸೆಮಿಸ್ಟರ್‌ಗೆ ₹ 20ಸಾವಿರದಷ್ಟು ಖರ್ಚು ಬರುತ್ತದೆ. ದೇಶದ ಅನೇಕ ರಾಜ್ಯಗಳಲ್ಲಿ ಸಿಪೆಟ್‌ ಘಟಕಗಳಿವೆ. ಚೆನ್ನೈನ ಸಿಪೆಟ್‌ ಘಟಕದಲ್ಲಿ ಪ್ಲಾಸ್ಟಿಕ್‌ ಕೈಗಾರಿಕೆ ಕುರಿತ ಪದವಿ ಕೋರ್ಸ್‌ಗಳೂ ಲಭ್ಯ.

ಪ್ರವೇಶ ಹೇಗೆ: ಈ ಕೋರ್ಸ್‌ಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ (ಸಿಪೆಟ್‌ ಜೆಇಇ) ನಡೆಯುತ್ತದೆ. 2018–19ನೇ ಸಾಲಿನ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್‌ ಆಧರಿತ ಪರೀಕ್ಷೆಯಲ್ಲಿ (ಸಿಬಿಟಿ) ಉತ್ತೀರ್ಣರಾದವರು ಮಾತ್ರ ಕೋರ್ಸ್‌ಗೆ ಪ್ರವೇಶ ಪಡೆಯಲಿದ್ದಾರೆ. ಮೈಸೂರಿನ ಸಿಪೆಟ್‌ನ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕದವರಿಗೆ ಆದ್ಯತೆ ನೀಡಲಾಗುತ್ತದೆ.

 

ಪ್ರಮುಖ ದಿನಾಂಕಗಳು

ಸಿಪೆಟ್‌–ಜೆಇಇಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ: 28 ಏಪ್ರಿಲ್‌, 2018

* ಸಿಪೆಟ್‌–ಜೆಇಇಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 27 ಜೂನ್‌, 2018

* ಪ್ರವೇಶಪತ್ರ ಪಡೆಯಲು ಕೊನೆಯ ದಿನ: 30 ಜೂನ್‌ 2018

* ಸಿಪೆಟ್‌ ಜೆಇಇ ಪರೀಕ್ಷೆ: 1 ಜುಲೈ 2018

* ಕೋರ್ಸ್‌ ಆರಂಭವಾಗುವ ದಿನಾಂಕ: 01 ಆಗಸ್ಟ್‌ 2018

* ಸಹಾಯವಾಣಿ: 1800 300 28373

**

ದೀರ್ಘಾವಧಿ ತರಬೇತಿಯ ಜೊತೆಗೆ ಅಲ್ಪಾವಧಿ ತರಬೇತಿಯನ್ನೂ ನೀಡುವುದು ಸಿಪೆಟ್‌ನ ವಿಶೇಷ. ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ಸಿಕ್ಕಿದೆ. ಅನೇಕರು ಸ್ವ ಉದ್ಯೋಗ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry