ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಬೇಡಿಕೆಯ ಕ್ಷೇತ್ರ ‘ಏರೋನಾಟಿಕಲ್‌ ಎಂಜಿನಿಯರಿಂಗ್‌’

Last Updated 4 ಜೂನ್ 2019, 19:30 IST
ಅಕ್ಷರ ಗಾತ್ರ

ಪಿಯುಸಿ ನಂತರ ಎಂಜಿನಿಯರಿಂಗ್‌ ಓದಲು ಬಯಸುವ ವಿದ್ಯಾರ್ಥಿಗಳನ್ನು ಬಹುವಾಗಿ ಆಕರ್ಷಿಸುತ್ತಿರುವ ವಿಭಾಗವೆಂದರೆ ಏರೋನಾಟಿಕಲ್‌ ಎಂಜಿನಿಯರಿಂಗ್‌. ವಾಯುಯಾನ, ಬಾಹ್ಯಾಕಾಶ ಸಂಶೋಧನ ವಲಯಗಳಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಚಿತ್ತ ಹರಿದಿರುವುದು ಅಚ್ಚರಿಯೇನಲ್ಲ ಎನ್ನುತ್ತಾರೆ ಎಚ್‌ಎಎಲ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿ (ಎಚ್‌ಎಂಎ)ಯ ನಿವೃತ್ತ ಪ್ರಧಾನ ವ್ಯವಸ್ಥಾಪಕಿ ನೇಮಿಚಂದ್ರ.

ವಾಯುಯಾನ, ಬಾಹ್ಯಾಕಾಶ ಸಂಶೋಧನೆ ಮತ್ತು ರಕ್ಷಣಾ ವ್ಯವಸ್ಥೆ ಕ್ಷೇತ್ರದಲ್ಲಿನ ಇತ್ತೀಚಿನ ತಂತ್ರಜ್ಞಾನದ ಬೆಳವಣಿಗೆಯು ಬಹುತೇಕರ ಗಮನ ಅತ್ತ ತಿರುಗುವಂತೆ ಮಾಡಿದೆ. ಸಹಜವಾಗಿಯೇ ಇದು ಅಧ್ಯಯನಕ್ಕೆ ಯೋಗ್ಯವಾದ ಕ್ಷೇತ್ರವಾಗಿದ್ದು, ಏರೋನಾಟಿಕಲ್ ಎಂಜಿನಿಯರಿಂಗ್ ಹಾಗೂ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಕ್ಷೇತ್ರ.ಸದ್ಯ ಏರೋನಾಟಿಕಲ್ ಎಂಜಿನಿಯರಿಂಗ್‌ ಕೋರ್ಸ್ ಮಾಡಿದವರಿಗೆ ಸಾಕಷ್ಟು ಅವಕಾಶಗಳಿವೆ.

ವಾಣಿಜ್ಯ ಮತ್ತು ಸೇನಾ ಬಳಕೆ ವಿಮಾನಗಳ ನಿರ್ಮಾಣ, ಪರೀಕ್ಷೆ, ಅಭಿವೃದ್ಧಿ, ವಿನ್ಯಾಸ, ಕಾರ್ಯಾಚರಣೆ ಮತ್ತು ನಿರ್ವಹಣೆ ಬಗ್ಗೆ ಗಮನ ಹರಿಸುವುದು ಏರೋನಾಟಿಕಲ್ ಎಂಜಿನಿಯರುಗಳ ಉದ್ಯೋಗದಲ್ಲಿ ಅಡಕವಾಗಿವೆ. ಈ ಕ್ಷೇತ್ರದಲ್ಲಿ ಏರ್‌ಕ್ರಾಫ್ಟ್‌ ಎಂಜಿನ್ಸ್, ಮಿಸೈಲ್ ಸಿಸ್ಟಮ್ಸ್, ಮಿಲಿಟರಿ ಏರ್‌ಕ್ರಾಫ್ಟ್ ಮತ್ತು ಸಿವಿಲಿಯನ್ ಏರ್‌ಕ್ರಾಫ್ಟ್ ವಿಭಾಗಗಳಿವೆ. ಭಾರತದ ವೈಮಾನಿಕ ಕ್ಷೇತ್ರದಲ್ಲಿ ಮಿಲಿಟರಿ ಮತ್ತು ಸಿವಿಲ್ ಎರಡೂ ವಿಭಾಗಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ದೇಶದ ಸಣ್ಣ ಸಣ್ಣ ನಗರಗಳನ್ನೂ ವಾಯುಯಾನದ ಮೂಲಕ ಜೋಡಿಸುವ ಕೆಲಸ ನಡೆಯುತ್ತಿದೆ. ವೈಮಾನಿಕ ರಂಗ ಬೃಹತ್ತಾಗಿ ಬೆಳೆಯಲಿರುವ ಈ ಸಂದರ್ಭದಲ್ಲಿ, ದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ವೈಮಾನಿಕ ರಂಗಕ್ಕೆ ತಯಾರಾದ ಎಂಜಿನಿಯರ್‌ಗಳ ಅಗತ್ಯವಿದೆ.

ಯಾವ ಯಾವ ಕೋರ್ಸ್‌ಗಳಿವೆ?
ಏರ್‌ಕ್ರಾಫ್ಟ್ ಮೆಂಟೇನೆನ್ಸ್ ಎಂಜಿನಿಯರಿಂಗ್
ಏರ್‌ಕ್ರಾಫ್ಟ್ ಎಂಜಿನಿಯರಿಂಗ್‌ (ಬಿ.ಇ., ಎಂ.ಟೆಕ್‌.)
ಏರೋನಾಟಿಕಲ್ ಎಂಜಿನಿಯರಿಂಗ್ (ಬಿ.ಇ., ಎಂ.ಟೆಕ್‌., ಎಂ.ಎಸ್‌.)
ಏರೋಸ್ಪೇಸ್ ಎಂಜಿನಿಯರಿಂಗ್ (ಬಿ.ಇ., ಎಂ.ಟೆಕ್‌.)

ಅರ್ಹತೆ: ಪದವಿಗೆ ಪ್ರವೇಶ ಪಡೆಯಲು ಅಭ್ಯರ್ಥಿಯು 12ನೇ ತರಗತಿಯನ್ನು ವಿಜ್ಞಾನ ವಿಷಯದಲ್ಲಿ ( ಜೀವಶಾಸ್ತ್ರ, ಗಣಿತ ಮತ್ತು ರಸಾಯನಶಾಸ್ತ್ರ ) ತೇರ್ಗಡೆ ಹೊಂದಿರಬೇಕು. ಐಐಟಿ ಮಾಡಿದವರು ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ) ಅರ್ಹತೆ ಹೊಂದುವುದು ಕಡ್ಡಾಯ. ಈ ಕೋರ್ಸ್ ಅವಧಿ 4 ವರ್ಷ. ಸ್ನಾತಕೋತ್ತರ ಪದವಿ ಪಡೆಯಲಿಚ್ಛಿಸುವವರು ಬಿ.ಇ/ಬಿ.ಟೆಕ್‌.ನಲ್ಲಿ ಪದವಿ ಅಥವಾ ಎಂಜಿನಿಯರಿಂಗ್‌ಗೆ ತತ್ಸಮಾನವಾದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅವಧಿ 2 ವರ್ಷ.

ಬೇಡಿಕೆ ಹೇಗಿದೆ?
ಏರೋನಾಟಿಕಲ್ ಎಂಜಿನಿಯರ್‌ಗಳಿಗೆ ಏರ್‌ಬಸ್, ಬೋಯಿಂಗ್ ಹಾಗೂ ನಾಸಾದಂತಹ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿದೆ. ಇಸ್ರೊ ಮತ್ತು ರಕ್ಷಣಾ ಸಚಿವಾಲಯ ಏರೋನಾಟಿಕಲ್ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ನಾಗರಿಕ ವಿಮಾನಯಾನ ಇಲಾಖೆ, ರಾಷ್ಟ್ರೀಯ ಏರೋನಾಟಿಕಲ್ ಪ್ರಯೋಗಾಲಯ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಒ) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನಲ್ಲಿ ಉದ್ಯೋಗಾವಕಾಶಗಳಿವೆ.

ಏರ್‌ಕ್ರಾಫ್ಟ್ ಕೈಗಾರಿಕೆಗಳು, ಏರ್‌ಲೈನ್ ಇಂಡಸ್ಟ್ರಿ, ಏರ್ ಟರ್ಬೈನ್ ಪ್ರೊಡಕ್ಷನ್ ಪ್ಲಾಂಟ್ ಹಾಗೂ ಡಿಸೈನ್ ಸಂಸ್ಥೆಗಳಲ್ಲಿ ಏರೋಸ್ಪೇಸ್ ಎಂಜಿನಿಯರ್‌ಗಳಿಗೆ ಬೇಡಿಕೆ ಇದೆ. ಶೈಕ್ಷಣಿಕ ಸಂಸ್ಥೆಗಳಲ್ಲೂ ಬೋಧನೆಯ ಅವಕಾಶವಿದ್ದು, ಉತ್ತಮ ವೇತನವೂ ಇದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ.

ಏರೋಸ್ಪೇಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಷನ್ ಪ್ರೋಗ್ರಾಮ್
ಇದು 3 ತಿಂಗಳ ಕೋರ್ಸ್ ಆಗಿದ್ದು ಲಕ್ನೋದ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ 15 ದಿನಗಳ ಕಲಿಕೆ ಐ.ಐ.ಎಂ.ನಲ್ಲಿ ಕೂಡಾ ಇರುತ್ತದೆ. ವೈಮಾನಿಕ ಕ್ಷೇತ್ರ ಮತ್ತು ವೈಮಾನಿಕ ನಿರ್ವಹಣಾ ವಿಷಯಗಳನ್ನು ತರಗತಿಯಲ್ಲಿ ಕಲಿಸುವುದಲ್ಲದೆ, ಪ್ರಾಯೋಗಿಕ ತಿಳಿವಳಿಕೆ ನೀಡಲಾಗುತ್ತದೆ. ಈ ಸರ್ಟಿಫಿಕೇಷನ್ ಪ್ರೋಗ್ರಾಮ್‌ನಲ್ಲಿ ವಿದ್ಯಾರ್ಥಿಗಳು ವಿಮಾನ ಕಾರ್ಖಾನೆಯ ವಿವಿಧ ವಿಭಾಗಗಳಲ್ಲಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ವಿನ್ಯಾಸ, ತಯಾರಿಕೆ, ಪರೀಕ್ಷೆ, ಹಾರಾಟ, ದುರಸ್ತಿ ಮುಂತಾದವುಗಳನ್ನು ನೋಡಿ ಕಲಿಯುವ ಅವಕಾಶವನ್ನು ಒದಗಿಸಲಾಗಿದೆ.

ಪಿ.ಜಿ. ಡಿಪ್ಲೊಮಾ ಇನ್ ಏವಿಯೇಷನ್ ಮ್ಯಾನೇಜ್‌ಮೆಂಟ್ (ಪಿ.ಜಿ.ಡಿ.ಎ.ಎಂ.)
ಇದು 15 ತಿಂಗಳ ಕೋರ್ಸ್ ಆಗಿದ್ದು,ಎಚ್ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ಇದನ್ನು ನಡೆಸುತ್ತಿದೆ. ಇದಕ್ಕೆ ‘ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್’ನ ಮಾನ್ಯತೆ ಇದೆ. ವೈಮಾನಿಕ ಕ್ಷೇತ್ರದ ತಾಂತ್ರಿಕ ಹಾಗೂ ತಂತ್ರಜ್ಞಾನ ನಿರ್ವಹಣೆ ಮತ್ತು ಮ್ಯಾನೇಜ್‌ಮೆಂಟ್ ವಿಷಯಗಳನ್ನು ಒಳಗೊಂಡ ಈ ಕೋರ್ಸ್ ಮುಖ್ಯವಾಗಿ ವೈಮಾನಿಕ ರಂಗದ ಪ್ರಾಯೋಗಿಕ ಮಗ್ಗಲನ್ನು ತೆರೆದಿಡುತ್ತದೆ. ಇದರಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ವಿನ್ಯಾಸ, ತಯಾರಿಕೆ, ಪರೀಕ್ಷೆ, ವಾಯು ಸಂಚಾರ ನಿರ್ವಹಣೆ, ಮ್ಯಾನೇಜ್‌ಮೆಂಟ್ ವಿಷಯಗಳು, ವೈಮಾನಿಕ ರಂಗಕ್ಕೆ ಅವುಗಳ ಅನ್ವಯ ಮುಂತಾದವುಗಳನ್ನು ಕಲಿಸಲಾಗುತ್ತದೆ. ವೈಮಾನಿಕ ಕಾರ್ಯಾಚರಣೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಾಜೆಕ್ಟ್ ವರ್ಕ್ ಅನ್ನು ಕೈಗೊಳ್ಳಲಾಗುತ್ತದೆ. ಈ ಕೋರ್ಸ್‌ ಅಂತರರಾಷ್ಟ್ರೀಯ ಮಾದರಿಯನ್ನು ಒಳಗೊಂಡಿದ್ದು, ವಿದೇಶದ ಪ್ರತಿಷ್ಠಿತ ವೈಮಾನಿಕ ಕಂಪನಿಗಳ ಭೇಟಿಯನ್ನು ಇದರಲ್ಲಿ ಅಳವಡಿಸಲಾಗಿದೆ.

ಎಚ್.ಎ.ಎಲ್. ಮ್ಯಾನೇಜ್‌ಮೆಂಟ್ ಅಕಾಡೆಮಿ
ಎಚ್.ಎ.ಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ವಿಮಾನ ಕಾರ್ಖಾನೆ ತರಬೇತಿಯನ್ನು ನೀಡುತ್ತಿದೆ. ಅತ್ಯಾಧುನಿಕ ತರಗತಿ ಕೊಠಡಿಗಳು, ಕಂಪ್ಯೂಟರ್ ಕೊಠಡಿಗಳಿದ್ದು,ವೃತ್ತಿಪರ ಅಭಿವೃದ್ಧಿಗೆ ತರಬೇತಿ ನೀಡುತ್ತಿರುವ ಈ ಸಂಸ್ಥೆಯಲ್ಲಿ ಪ್ರತಿ ವರ್ಷ 3 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ವಿವಿಧ ತಾಂತ್ರಿಕ ಹಾಗೂ ಮ್ಯಾನೇಜ್‌ಮೆಂಟ್ ವಿಷಯಗಳ ಕುರಿತು ತರಬೇತಿ ಪಡೆಯುತ್ತಾರೆ.

ವೈಮಾನಿಕ ರಂಗಕ್ಕೆ ಪ್ರವೇಶಿಸಲು ಆಶಿಸುವ ಎಳೆಯ ಎಂಜಿನಿಯರುಗಳಿಗಲ್ಲದೆ, ಯಾವುದೇ ರಂಗದಲ್ಲಿ ದುಡಿಯುತ್ತಿದ್ದು, ಇದೀಗ ವೈಮಾನಿಕ ರಂಗಕ್ಕೆ ಸೇರಲು ಇಚ್ಛಿಸುವ ಹೊರಗಿನ ಅಧಿಕಾರಿಗಳಿಗೂ ಪ್ರವೇಶ ಕಲ್ಪಿಸಿದೆ. ಇದಕ್ಕೆಂದೇ ಕೆಲವು ಕೋರ್ಸ್‌ಗಳನ್ನು ವಿನ್ಯಾಸ ಮಾಡಿ ಆರಂಭಿಸಿದೆ.
–ಎಚ್.ಎ.ಎಲ್‌ ಹಿರಿಯ ಪ್ರಾಧ್ಯಾಪಕಿ ಡಾ. ಭಾರತಿ ವಿ. ರವಿಶಂಕರ್‌

**
ವಿಶೇಷ ಅಧ್ಯಯನದ ಕ್ಷೇತ್ರಗಳು
ಏರೋಸ್ಪೇಸ್ ಪ್ರೊಪಲ್ಷನ್
ಸ್ಟ್ರಕ್ಚರಲ್ ಅನಾಲಿಸಿಸ್
ಎಲೆಕ್ಟ್ರಾನಿಕ್ ಸಿಸ್ಟಮ್ಸ್
ಗ್ರೌಂಡ್ ವೆಹಿಕಲ್ ಸಿಸ್ಟಮ್ಸ್
ಟ್ರಾನ್ಸ್‌ಪೋರ್ಟೇಷನ್ ಸಿಸ್ಟಮ್ಸ್
ಏರೋಡೈನಾಮಿಕ್ಸ್ ಅಂಡ್ ಫ್ಲೂಯಿಡ್ ಡೈನಾಮಿಕ್ಸ್
ಏರ್‌ಕ್ರಾಫ್ಟ್ ಸ್ಟ್ರಕ್ಚರ್ಸ್‌ ಅಂಡ್ ಮೆಟೀರಿಯಲ್ಸ್
ಸ್ಟ್ರಕ್ಚರಲ್ ಡಿಸೈನ್ ಅಂಡ್ ಎಂಜಿನಿಯರಿಂಗ್
ಇನ್‌ಸ್ಟ್ರುಮೆಂಟೇಷನ್ ಅಂಡ್ ಕಮ್ಯೂನಿಕೇಷನ್
ನೇವಿಗೇಷನಲ್ ಗೈಡೆನ್ಸ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT