ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಇಸ್ರೇಲ್‌ನಲ್ಲಿ ಕೃಷಿ ವ್ಯಾಸಂಗ

Last Updated 1 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನಾನು ಪ್ರಸ್ತುತ ಬಿ.ಎಸ್‌ಸಿ. ಕೃಷಿ ಓದುತ್ತಿದ್ದೇನೆ. ಎಂ.ಎಸ್‌ಸಿ. ಕೃಷಿ ಇಸ್ರೇಲ್‌ನಲ್ಲಿ ವ್ಯಾಸಂಗ ಮಾಡ ಬಯಸಿದ್ದು ಅಲ್ಲಿ ಪ್ರವೇಶ ಪಡೆಯಲು ಮಾರ್ಗದರ್ಶನ ಮಾಡಿ. ಅದಕ್ಕೆ ಬೇಕಿರುವ ಅರ್ಹತೆ ಬಗ್ಗೆ ಮಾಹಿತಿ ನೀಡಿ.

ಭರತ್ ಎಂ.ಎಂ., ಊರು ಬೇಡ

ಭರತ್, ಸಾಮಾನ್ಯವಾಗಿ ಇಸ್ರೇಲ್‌ನ ಕೃಷಿ ಸ್ನಾತಕೋತ್ತರ ಪದವಿಗಳು ಸಸ್ಯ ವಿಜ್ಞಾನ ಅಥವಾ ಪ್ರಾಣಿ ವಿಜ್ಞಾನದ ವಿಷಯದಲ್ಲಿರುತ್ತವೆ. ಈ ಕೋರ್ಸ್‌ನ ಅವಧಿ 1–2 ವರ್ಷ. ಅಂದರೆ ಎರಡು ಅಥವಾ ಮೂರು ಸೆಮಿಸ್ಟರ್ ಇರುತ್ತವೆ. ಜೊತೆಗೆ ಸಂಶೋಧನ ಪ್ರಬಂಧದ ಕೆಲಸದ ಆಧಾರದ ಮೇಲೆ ಕಲಿಕಾ ಅವಧಿ ಹೆಚ್ಚಾಗಬಹುದು.

ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆಯಲು ಕೃಷಿ ಅಥವಾ ಜೀವಶಾಸ್ತ್ರ ವಿಷಯಗಳಲ್ಲಿ 80 ಜಿ.ಪಿ.ಎ. ಅಂಕದೊಂದಿಗೆ ತೇರ್ಗಡೆ ಆಗಿರಬೇಕು. ಭಾರತದ ವಿದ್ಯಾರ್ಥಿಗಳು ಇಂಗ್ಲಿಷ್‌ ಅನ್ನು ಮಾತೃಭಾಷೆಯಾಗಿ ಮಾತನಾಡುವ ದೇಶದವರಿರದೆ ಇರುವುದರಿಂದ ಯಾವುದಾದರೂ ಒಂದು ಅಂತರರಾಷ್ಟ್ರೀಯ ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಅದಕ್ಕಾಗಿ ಟೋಫೆಲ್ (TOEFL) ಅಥವಾ ಐ.ಇ.ಎಲ್.ಟಿ.ಎಸ್. ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಸಾಮಾನ್ಯವಾಗಿ ಐ.ಇ.ಎಲ್.ಟಿ.ಎಸ್. ಪರೀಕ್ಷೆಯಲ್ಲಿ 6.7 ಅಥವಾ ಟೋಫೆಲ್ ಪರೀಕ್ಷೆಯಲ್ಲಿ 89 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು. ಇದರ ಜೊತೆಗೆ ಅಭ್ಯರ್ಥಿಗಳು ತಮ್ಮ ಶಿಕ್ಷಕರಿಂದ ಅಥವಾ ಕೆಲಸ ಮಾಡುತ್ತಿದ್ದರೆ ಅಲ್ಲಿಯ ಉನ್ನತ ಅಧಿಕಾರಿಗಳಿಂದ ಬರೆಸಿದ ಮೂರು ಶಿಫಾರಸು ಪತ್ರಗಳನ್ನು (ರೆಫರೆನ್ಸ್ ಲೆಟರ್) ಲಗತ್ತಿಸಬೇಕು. ಸಾಮಾನ್ಯವಾಗಿ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಹತ್ತರಿಂದ ಹನ್ನೆರಡು ಲಕ್ಷದಷ್ಟು ಕಾಲೇಜು ಶುಲ್ಕ ತಗಲುತ್ತದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿವೇತನದ ಅವಕಾಶವಿದ್ದು, ಅದನ್ನು ಪಡೆಯುವ ಬಗೆಯನ್ನು ಆಯಾ ಕಾಲೇಜಿನ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

ಹೀಬ್ರೂ ವಿಶ್ವವಿದ್ಯಾಲಯ ಜೆರುಸಲೆಮ್, ಟೆಲ್ ಅವೀವ್ ವಿಶ್ವವಿದ್ಯಾಲಯ, ಬೆನ್ ಗುರಿಯನ್ ವಿಶ್ವವಿದ್ಯಾಲಯ ಇತ್ಯಾದಿಗಳು ಇಸ್ರೇಲ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು.

ಇವಿಷ್ಟು ಸಾಮಾನ್ಯ ಮಾಹಿತಿಯಾಗಿದ್ದು ಕೆಲವೊಂದು ಅರ್ಹತೆ, ಆಯ್ಕೆಯ ಮಾನದಂಡ ಮತ್ತು ಆಯ್ಕೆಯ ಪ್ರಕ್ರಿಯೆ ಆಯಾ ಸಂಸ್ಥೆಯ ಅಧಿಕಾರ ವ್ಯಾಪ್ತಿಗೆ ಒಳಪಡುವುದರಿಂದ ನೀವು ಆಯಾ ಕಾಲೇಜಿನ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಮುಂದುವರೆಯಿರಿ. ಶುಭಾಶಯ.

***

ನಾನು ಬಿ.ಎ. ಓದುತ್ತಿದ್ದೇನೆ. ಬೇಸಿಕ್ ಕಂಪ್ಯೂಟರ್‌ ಕೂಡ ಆಗಿದ್ದು, ಹಣಕಾಸು ತೊಂದರೆಯ ಕಾರಣದಿಂದ ಕೆಲಸ ಹುಡುಕುತ್ತಿದ್ದೇನೆ. ಉದ್ಯೋಗಕ್ಕೆ ಸರಿಯಾದ ಮಾರ್ಗ ತಿಳಿಸಿ.

ನಾಗು, ಊರು ಬೇಡ.

ನಾಗು, ನೀವು ಈಗ ಬಿ.ಎ. ಓದುತ್ತ ಇರುವುದರಿಂದ ಸಂಪೂರ್ಣವಾಗಿ ಶಿಕ್ಷಣ ಬಿಟ್ಟು ಕೆಲಸಕ್ಕೆ ಹೋಗುವುದು ಉತ್ತಮ ಆಯ್ಕೆ ಎಂದು ಕಾಣುವುದಿಲ್ಲ. ನೀವು ಇಲ್ಲಿಗೆ ಶಿಕ್ಷಣ ನಿಲ್ಲಿಸಿದಲ್ಲಿ ಇಂದಿನ ಸಂದರ್ಭಕ್ಕೆ ನಿಮಗೆ ಅನುಕೂಲವಾಗಬಹುದು. ಆದರೆ ನಿಮ್ಮ ಶಿಕ್ಷಣ ಕೇವಲ ಪಿ.ಯು.ಸಿ. ಗೆ ನಿಂತು ಹೋಗುತ್ತದೆ. ಅದೇ ನೀವು ಬಿ.ಎ. ಪೂರೈಸಿದಲ್ಲಿ ನಿಮ್ಮ ಶೈಕ್ಷಣಿಕ ಅರ್ಹತೆ ಪದವಿ ಹಂತದ್ದಾಗುತ್ತದೆ ಮತ್ತು ಪದವಿ ಆಧಾರದ ಮೇಲೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಹಣಕಾಸು ತೊಂದರೆ ಇರುವುದರಿಂದ ಅದು ಪರಿಗಣಿಸಬೇಕಾದ ವಿಷಯವೇ ಆಗಿದೆ. ಅದಕ್ಕಾಗಿ ಸಂಜೆ ಹೊತ್ತಿನಲ್ಲಿ ಅಥವಾ ರಾತ್ರಿ ಪಾಳಿಯಲ್ಲಿ ಅಥವಾ ರಜಾ ದಿನಗಳಲ್ಲಿ ಕೆಲಸ ಮಾಡಿ ನಿಮ್ಮ ಪದವಿ ಶಿಕ್ಷಣ ಮತ್ತು ಹಣಕಾಸಿನ ಸಮಸ್ಯೆಯನ್ನು ನಿರ್ವಹಿಸಲು ಪ್ರಯತ್ನಿಸಿ.

ನೀವು ಯಾವ ಊರು ಎಂದು ಹೇಳದೆ ಇರುವುದರಿಂದ ನಿಮ್ಮ ಸುತ್ತಮುತ್ತಲಿನ ಅವಕಾಶಗಳನ್ನು ಹೇಳುವುದು ಇಲ್ಲಿ ಕಷ್ಟ. ನಿಮ್ಮ ಹತ್ತಿರದ ಕಂಪನಿಗಳು, ಷಾಪಿಂಗ್ ಮಾಲ್ ಇತ್ಯಾದಿಗಳಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಬಹುದು. ಒಂದುವೇಳೆ ನಿಮಗಿರುವ ಹಣಕಾಸಿನ ತೊಂದರೆಯಲ್ಲಿ ಓದುತ್ತ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ, ಯಾವುದಾದರೂ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತ ಸಂಜೆ ಕಾಲೇಜಿನನಲ್ಲಿ ಅಥವಾ ದೂರ ಶಿಕ್ಷಣದಲ್ಲಿ ಪದವಿ ಓದಿ ಮುಂದಿನ ಶಿಕ್ಷಣ ಪಡೆದುಕೊಳ್ಳಬಹುದು.

ಕಂಪ್ಯೂಟರ್ ಕೋರ್ಸ್ ಅಗಿರುವುದರಿಂದ ಬಿಲ್ಲಿಂಗ್, ಡೇಟಾ ಎಂಟ್ರಿ ಕೆಲಸಗಳಿಗೆ ಪ್ರಯತ್ನಿಸಬಹುದು. ಹಾಗೆಯೇ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲೂ ಪ್ರಯತ್ನಿಸಬಹುದು. ಅದರ ಜೊತೆಗೆ ಪಿ.ಯು.ಸಿ. ಶಿಕ್ಷಣದ ಆಧಾರದ ಮೇಲೆ ಕರೆಯಲ್ಪಡುವ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಿ. ಆಲ್ ದಿ ಬೆಸ್ಟ್.

***

ನಾನು ಎಂ.ಎಸ್‌ಸಿ. ಫಿಸಿಕ್ಸ್‌ನಲ್ಲಿ (ಸಾಲಿಡ್‌ ಸ್ಟೇಟ್‌ ಫಿಸಿಕ್ಸ್‌ ಸ್ಪೆಷಲೈಜೇಶನ್‌) ವಿಷಯವಾಗಿ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ.ಎರಡು ವರ್ಷ ಖಾಸಗಿ ಕಾಲೇಜಿನಲ್ಲಿ ಉದ್ಯೋಗ ಮಾಡಿದ್ದೇನೆ. ಆದರೆ ಉದ್ಯೋಗ ಭದ್ರತೆ ಇಲ್ಲದ ಕಾರಣ ಈಗ ಸರ್ಕಾರಿ ಕೆಲಸಕ್ಕಾಗಿ ಓದುತ್ತಿದ್ದೇನೆ. ಆದರೆ ಆರ್ಥಿಕ ಪರಿಸ್ಥಿತಿಯಿಂದ ಮತ್ತೆ ಉದ್ಯೋಗಕ್ಕೆ ಸೇರಬೇಕಾಗಿದೆ. ಖಾಸಗಿ ಕಂಪನಿಗಳಲ್ಲಿ ಫಿಸಿಕ್ಸ್‌ಗೆ ಸಂಬಂಧಿಸಿದಂತೆ ಉದ್ಯೋಗ ಇವೆಯೇ? ಇದ್ದರೆ ಯಾವ ಕಂಪನಿಗಳು? ಉಜ್ವಲ ಭವಿಷ್ಯಕ್ಕಾಗಿ ಸರಿಯಾದ ಮಾರ್ಗ ತಿಳಿಸಿ.

ಹನುಮೇಶ, ಸಿಂಧನೂರು

ಹನುಮೇಶ, ಮೊದಲನೆಯದಾಗಿ ಕೆಳಮಧ್ಯಮ ವರ್ಗದ ಜನರಿಗೆ ಕೇವಲ ಪರೀಕ್ಷೆಗಳನ್ನಷ್ಟೇ ಗಮನದಲ್ಲಿಟ್ಟುಕೊಂಡಿರಲು ಸಾಧ್ಯವಿಲ್ಲ. ಬದುಕಿನ ಕೆಲವು ಜವಾಬ್ದಾರಿಗಳನ್ನು ಪೂರೈಸಿಕೊಳ್ಳಲು ಕೆಲಸ ಮಾಡುವುದು ಮುಖ್ಯವಾಗುತ್ತದೆ. ಇದು ಕೇವಲ ನಿಮ್ಮ ಅಥವಾ ಕೆಲವರ ಪರಿಸ್ಥಿತಿ ಅಲ್ಲ. ಭಾರತದಂತದ ದೇಶದಲ್ಲಿ ಬಹುತೇಕ ಯುವಕ– ಯುವತಿಯರ ಪಾಡು ಇದೇ ಆಗಿದೆ. ಹಾಗಾಗಿ ಕೆಲಸ ಮಾಡುತ್ತ, ಸಮಯ ಹೊಂದಿಸಿಕೊಳ್ಳುತ್ತ ನಮ್ಮ ಗುರಿಯತ್ತ ಸಾಗುವುದು ಅನಿವಾರ್ಯ ಮಾರ್ಗವಾಗುತ್ತದೆ. ಇದು ಅನಿವಾರ್ಯವಾದರೂ ಕೆಲವೊಂದು ಪ್ರಯೋಜನಗಳು ಇವೆ. ನಮ್ಮ ಮುಂದಿನ ಕೆಲಸಕ್ಕೆ ಅನುಭವವನ್ನು, ಕೌಶಲವನ್ನು ಕೂಡ ಇದು ಕೊಡಮಾಡುತ್ತದೆ.

ಎರಡನೆಯದಾಗಿ, ಸರ್ಕಾರಿ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೇರ್ಗಡೆ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ. ನಮ್ಮ ಪರಿಶ್ರಮದ ಜೊತೆಗೆ ಇತರ ಅಂಶಗಳು ಕೂಡ ಸೇರಿ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕಾಗುತ್ತದೆ. ಅದೇನೆ ಆದರೂ ನಮ್ಮ ಪ್ರಯತ್ನವನ್ನು ನಾವು ಮುಂದುವರಿಸಬೇಕಾಗುತ್ತದೆ.

ಖಾಸಗಿ ಸಂಸ್ಥೆಗಳಲ್ಲಿ ಫಿಸಿಕ್ಸ್ ವಿಷಯದ ಆಧಾರದ ಮೇಲೆ ಉದ್ಯೋಗಗಳು ಲಭ್ಯ. ಉತ್ಪಾದನ ವಲಯ, ಏರೋಸ್ಪೇಸ್, ಆಯಿಲ್ ಆ್ಯಂಡ್ ಗ್ಯಾಸ್, ಎನರ್ಜಿ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿರುತ್ತವೆ. ಮೊದಲಿಗೆ ನಿಮ್ಮ ವೈಯಕ್ತಿಕ ಮಾಹಿತಿ, ಶಿಕ್ಷಣ ಮತ್ತು ಕೆಲಸದ ಅನುಭವವನ್ನು ಸೇರಿಸಿ ಒಂದು ರೆಸ್ಯೂಮೆ ತಯಾರಿಸಿ ಖಾಸಗಿ ಜಾಬ್ ಪೋರ್ಟಲ್‌ಗಳಾದ ಮಾನ್‌ಸ್ಟರ್, ನೌಕರಿ ಡಾಟ್ ಕಾಮ್, ಇನ್ ಡೀಡ್, ಲಿಂಕಡ್ ಇನ್ ಇತ್ಯಾದಿಗಳಲ್ಲಿ ಅಪಲೋಡ್ ಮಾಡಿ. ನಿಮ್ಮ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಉದ್ಯೋಗಾವಕಾಶಗಳು ಇದ್ದಾಗ ಖಾಸಗಿ ಕಂಪನಿಗಳಿಂದ ಕರೆ ಬರುತ್ತದೆ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT