ಕೃಷಿಯೆಂಬೋ ಜೀವನ ಶಿಕ್ಷಣ

7

ಕೃಷಿಯೆಂಬೋ ಜೀವನ ಶಿಕ್ಷಣ

Published:
Updated:
Prajavani

ಸಾಮಾನ್ಯವಾಗಿ ಕಾಲೇಜು ಜೀವನ ಎಂಬುದು ದಿನಾ ಕಾಲೇಜಿಗೆ ಹೋಗುವುದು, ಗೆಳೆಯರೊಂದಿಗೆ ಹರಟೆ ಹೊಡೆಯುವುದು, ಓದುವುದು- ಬರೆಯುವುದು, ಇಂದಿನ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಪರೀಕ್ಷೆ ಬರೆಯುವುದು, ಕೊನೆಗೆ ಅಂಕಪಟ್ಟಿ ಪಡೆಯುವುದರೊಂದಿಗೆ ಮುಗಿದು ಬಿಡುತ್ತದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೃಷಿ, ವಿಜ್ಞಾನ, ವಾಣಿಜ್ಯ, ಕಲೆ, ಸಂಸ್ಕೃತಿ ಬಗ್ಗೆ ಪಠ್ಯಪುಸ್ತಕದಲ್ಲಿ ಇದ್ದುದನ್ನು ಓದುತ್ತೇವೆಯೇ ಹೊರತು ಅದರೊಂದಿಗೆ ‌ತೊಡಗಿಸಿಕೊಂಡಿರುವ ಅನುಭವ ಇರುವುದಿಲ್ಲ. ಎಲ್ಲಾ ವಿಷಯ
ಗಳನ್ನು ಅಧ್ಯಯನ ಮಾಡಿದ ನಂತರ ಅದನ್ನು ನಾವೇ ಸ್ವತಃ ಅನುಭವಿಸಿದಾಗ ಅದರ ಕಷ್ಟ, ಸತ್ಯಾಸತ್ಯತೆ ತಿಳಿಯುತ್ತದೆ. ಆ ಕೆಲಸದಿಂದ ಸಿಗುವ ಅನುಭವದಿಂದ ಅಗಾಧ ಜ್ಞಾನ ಪಡೆಯಬಹುದು.

ಉದಾಹರಣೆಗೆ ಕೃಷಿ. ಕೃಷಿ ಕಾರ್ಯವನ್ನು ನೋಡುವುದರಿಂದ ಮಾತ್ರ ಅದರ ಬಗ್ಗೆ ತಿಳಿವಳಿಕೆ ಸಿಗಲಾರದು. ಭತ್ತದ ಕೃಷಿ ಪದ್ಧತಿಯಲ್ಲಿ ಉಳುಮೆ ಮಾಡುವುದರಿಂದ ಹಿಡಿದು ಅಕ್ಕಿ ಆಗುವ ಹಂತದವರೆಗೆ ಸ್ವತಃ ದುಡಿದೇ ಅರಿತುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಒಂದು ಪುಟ್ಟ ಗ್ರಾಮದ ಖಾಲಿ ಗದ್ದೆಯಲ್ಲಿ ಭತ್ತದ ನಾಟಿ ಕೃಷಿ ಮಾಡಿ ಭತ್ತದ ಕೃಷಿಯ ಬಗ್ಗೆ ಸ್ವತಃ ಅನುಭವ ಪಡೆದುಕೊಳ್ಳುವ ಅವಕಾಶ ಸಿಕ್ಕಿತು.

ವಿದ್ಯಾರ್ಥಿಗಳೆಲ್ಲ ಸೇರಿ ಹುಲ್ಲಿನಿಂದ ಕೂಡಿದ ಗದ್ದೆಯನ್ನು ಸ್ವಚ್ಛಗೊಳಿಸಿ ಹಾರೆ ಪಿಕಾಸು ಹಿಡಿದು ಅದನ್ನು ಮೆದು ಮಾಡಿ‌ ಉಳುಮೆ ಮಾಡಿದೆವು. ಒಂದು ದಿನ ಕೆಸರು ಗದ್ದೆ ಆಟವಾಡಿ ನೇಜಿ ನೆಡುವ ಮುಖಾಂತರ ಎಲ್ಲರೂ ಕೃಷಿ ಮಾಡಲು ಸಾಧ್ಯವಿದೆ ಎಂದು ಅರಿತುಕೊಳ್ಳುವಂತಾಯಿತು. ನಂತರ ಅದಕ್ಕೆ ಬೇಕಾದ ನೀರಿನ ವ್ಯವಸ್ಥೆ, ಮದ್ದು ಸಿಂಪಡಣೆ ಕಾರ್ಯ. ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಬೇಲಿಯ ವ್ಯವಸ್ಥೆಯೂ ಆಯಿತು. ಎಲ್ಲಾ ಮುನ್ನೆಚ್ಚರಿಕೆಗಳ ನಡುವೆ ನೆಟ್ಟ ಸಸಿಗಳು ಬಹಳ ಬೇಗ ಬೆಳೆದು ಉಕ್ಕುವ ಹಸಿರು ಮನಸ್ಸಿಗೆ ಆಹ್ಲಾದ ನೀಡುವಂತಿತ್ತು.

ಇದರ ನಡುವೆ ಹಲವು ಕಠಿಣ ಸಂದರ್ಭಗಳು ಎದುರಾದವು. ಬೆಳೆದು ನಿಂತ ಭತ್ತವನ್ನು ಕೊಯ್ಯಲು ನಾವೆಲ್ಲರೂ ಸಿದ್ಧರಾದೆವು. ಮೊದಲು ಆರಂಭ ಮಾಡುವಾಗ ಭಯ ಆಗಿದ್ದು ಹೌದು. ಆದರೆ ಅದನ್ನು ಕೊಯ್ದು ನೋಡಿದಾಗ ಬಹಳ ಸರಳವಾದ ಕೆಲಸ ಎನಿಸಿತು. ಸಣ್ಣ ಸಸಿಗಳು ಬೆಳೆದು, ಕದಿರಾಗಿ, ಭತ್ತವಾಗುವ ಪ್ರಕ್ರಿಯೆ ಇದೆಯಲ್ಲ, ಅದು ಅದ್ಭುತ. ಅಂದು ಸಿಕ್ಕಿದಂತಹ ಸಂತೋಷ ಮತ್ತು  ಸಾರ್ಥಕತೆಯ ಭಾವ ಹಿಂದೆಂದೂ ಸಿಕ್ಕಿರಲಿಲ್ಲ. ಯಾವುದೇ ಒಂದು ಕೆಲಸವನ್ನು ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದಾಗ ಯಾವ ಕಷ್ಟಗಳು ಬಂದರೂ ಎದುರಿಸಬಹುದು ಎಂಬ ಮಹತ್ವದ ಪಾಠವನ್ನು ಈ ಕೃಷಿ ಕಾರ್ಯದಲ್ಲಿ ಕಲಿತೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಕೃಷಿಯ ಮಹತ್ವ ಮನಸ್ಸಿಗೆ ನಾಟಿತು. ಇಂದಿನ ಮಾಹಿತಿ ತಂತ್ರಜ್ಞಾನದ ಭರಾಟೆಯಲ್ಲಿ ಕೃಷಿಯನ್ನು ಮಾಡಲು ಮುಂದೆ ಬರುವ ಯುವಕರ ಸಂಖ್ಯೆ ಬೆರಳೆಣಿಕೆಯಲ್ಲಿದೆ. ಎಲ್ಲಾ ವಿಶ್ವವಿದ್ಯಾನಿಲಯಗಳು, ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ಅದರ ಬಗ್ಗೆ ಆಸಕ್ತಿ ಮೂಡಿಸಿಕೊಂಡ ಯುವಕರು ಮುಂದೆ ಅನ್ನದಾತರಾಗಿ ಹೆಮ್ಮೆಪಡಬಹುದು. ಕಂಪನಿ ಕೊಡುವ ಸಂಬಳಕ್ಕಿಂತ ಎಷ್ಟೋ ಪಟ್ಟು ಆದಾಯವನ್ನು ಕೃಷಿಯಿಂದ ಪಡೆಯಬಹುದು.

ಶ್ರೀಕಾಂತ್ ಪೂಜಾರಿ ಬಿರಾವು,

ವಿವೇಕಾನಂದ ಕಾಲೇಜು, ಪುತ್ತೂರು

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !