ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವವಿಜ್ಞಾನ

ತಿಳಿವು–ನಲಿವು
Last Updated 25 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಈ ಭೂಮಿಯ ಮೇಲೆ ಮಾನವನ ವಿಕಾಸ ಹೇಗಾಯಿತು, ಬೇರೆ ಬೇರೆ ಸಂಸ್ಕೃತಿಗಳ ಬುಡಕಟ್ಟುಗಳ ಜನರು ಹೇಗೆಲ್ಲಾ ಬದುಕುತ್ತಾರೆ, ಅವರ ಜೀವನ ವಿಧಾನವೇನು, ರೀತಿ ನೀತಿಗಳೇನು? – ಇಂಥ ಮಾಹಿತಿಗಳನ್ನು ತಿಳಿಯ ಬಯಸುವ ಆಸಕ್ತರಿಗಾಗಿ ಕೈಬೀಸಿ ಕರೆಯುವ ಕ್ಷೇತ್ರ ಮಾನವವಿಜ್ಞಾನ.

ಮಾನವವಿಜ್ಞಾನಿಗಳು ಮನುಷ್ಯನನ್ನೇ ಅಧ್ಯಯನದ ವಿಷಯವಾಗಿಟ್ಟುಕೊಂಡು, ಶತಮಾನಗಳಿಂದ ಮನುಷ್ಯ ಹೇಗೆ ಬೆಳೆದ, ನಾಗರಿಕತೆಯನ್ನು ಹೇಗೆ ಎಲ್ಲೆಲ್ಲಿಯೂ ಬೆಳೆಸಿದ ಎಂಬುದನ್ನು ಅರಿಯುತ್ತಾರೆ. ಜಗತ್ತಿನ ಎಲ್ಲೆಡೆಗಳಲ್ಲಿರುವ ಜನರ ಸಾಮಾಜಿಕ ಜೀವನ, ಭಾಷೆ, ಕಲೆ, ಸಂಪ್ರದಾಯ, ದೈಹಿಕಲಕ್ಷಣ ಮುಂತಾದವುಗಳನ್ನು ಅಭ್ಯಸಿಸುತ್ತಾರೆ. ಅನಾದಿಕಾಲದಿಂದ ಮನುಷ್ಯನಲ್ಲಾದ ದೈಹಿಕ ಬದಲಾವಣೆಗಳು, ಮಾನವಜನಾಂಗದ ವಿವಿಧ ಬುಡಕಟ್ಟುಗಳ ಸಂಸ್ಕೃತಿಗಳ ಚಟುವಟಿಕೆಗಳ ವ್ಯತ್ಯಾಸವನ್ನು ಅರಿಯಲು ಯತ್ನಿಸುತ್ತಾರೆ.

ಹದಿನಾರನೇ ಶತಮಾನದಲ್ಲಿ ಒಂದು ಪ್ರತ್ಯೇಕ ಅಧ್ಯಯನ ವಿಷಯವಾಗಿ ರೂಪುಗೊಂಡ ಮಾನವವಿಜ್ಞಾನವು ಇಂದು ಸಾಮಾಜಿಕ ಮಾನವವಿಜ್ಞಾನ, ಸಾಂಸ್ಕೃತಿಕ ಮಾನವ ವಿಜ್ಞಾನ, ಭಾಷಿಕ ಮಾನವವಿಜ್ಞಾನ, ಜೈವಿಕ ಮಾನವವಿಜ್ಞಾನ, ಭಾಷಾ ಮಾನವಿಕವಿಜ್ಞಾನ ಮುಂತಾದ ಹಲವು ಕವಲುಗಳಾಗಿ ಬೆಳೆದು ನಿಂತಿದೆ.

ಮಾನವವಿಜ್ಞಾನಿ ಜ್ಞಾನದ ಹಲವು ಶಾಖೆಗಳ ಸಾಧನಗಳನ್ನು ಬಳಸುತ್ತಾನೆ. ಪ್ರಾಚೀನ ಮಾನವರ ಬಳಕೆಯ ವಸ್ತುಗಳ ವಯಸ್ಸನ್ನು ನಿರ್ಧರಿಸಲು ರಸಾಯನವಿಜ್ಞಾನ ಭೌತವಿಜ್ಞಾನಗಳ ಜ್ಞಾನ ಮತ್ತು ಉಪಕರಣಗಳನ್ನು ಬಳಸುವಂತೆಯೇ ದೈಹಿಕ ವಿಕಾಸದ ವಿವರಗಳನ್ನು ಅರಿಯಲು ತಳಿವಿಜ್ಞಾನ, ಅಂಗರಚನಾವಿಜ್ಞಾನಗಳಂತಹ ಜೀವವಿಜ್ಞಾನದ ವಿಭಾಗಗಳನ್ನೂ ಉಪಯೋಗಿಸಿಕೊಳ್ಳುತ್ತಾನೆ.

ಚರಿತ್ರೆ, ಭಾಷಾವಿಜ್ಞಾನ, ಪುರಾತತ್ವವಿಜ್ಞಾನ, ಜನಪದ, ಸಾಹಿತ್ಯ, ಕಲೆ ಮೊದಲಾದ ಮಾನವಿಕಶಾಸ್ತ್ರಗಳ ನೆರವನ್ನೂ ಅವನು ಬಳಸಿಕೊಳ್ಳುತ್ತಾನೆ. ಇತ್ತೀಚಿನ ವರ್ಷಗಳಲ್ಲಿ ಮಾನವವಿಜ್ಞಾನದ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶಗಳೂ ಲಭಿಸುತ್ತಿವೆ. ಭೂತದ ಪುಟಗಳನ್ನು ತಿರುವಿ ಹಾಕುವ ಮೂಲಕ ಭವಿಷ್ಯದ ಬದುಕನ್ನು ರೂಪಿಸುವ ಮಾನವವಿಜ್ಞಾನ ನಿಜಕ್ಕೂ ಆಕರ್ಷಕ ಅಧ್ಯಯನ ಕ್ಷೇತ್ರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT