ಗುರುವಾರ , ಸೆಪ್ಟೆಂಬರ್ 24, 2020
21 °C

ಮಕ್ಕಳಲ್ಲಿ ಕಲಾ ಕೌಶಲ ಅರಳಲಿ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಬಾಲ್ಯದಿಂದಲೇ ಮಕ್ಕಳನ್ನು ಕಲೆ ಹಾಗೂ ಕರಕುಶಲ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಬೌದ್ಧಿಕ ಹಾಗೂ ಶೈಕ್ಷಣಿಕವಾಗಿ ಅವರಲ್ಲಿ ಮಹತ್ತರ ಬೆಳವಣಿಗೆ ಕಾಣಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಅಲ್ಲದೇ ಕಲೆಯಿಂದ ಮಗುವಿಗಾಗುವ ಪ್ರಯೋಜನಗಳು ಕೂಡ ಹಲವು. 

ಕಲೆ ಹಾಗೂ ಕರಕುಶಲ ಚಟುವಟಿಕೆಗಳಿಗೆ ಮಗುವಿನ ದೇಹ, ಮನಸ್ಸು ಹಾಗೂ ಭಾವನೆಗಳ ಸಮ್ಮಿಲನ ತುಂಬಾ ಮುಖ್ಯ. ಅದು ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮಗುವಿಗೆ ಹಲವು ಪ್ರಯೋಜನಗಳಿವೆ.  

ಬಣ್ಣದ ಪೆನ್ಸಿಲ್ ಅಥವಾ ಪೇಂಟ್ ಬ್ರಷ್ ಹಿಡಿಯುವುದು, ಕತ್ತರಿ ಬಳಸುವುದು, ಅಂಟಿನ ಬಾಟಲಿಯಿಂದ ಅಂಟನ್ನು ಮೈಗಂಟಿಕೊಳ್ಳದಂತೆ ತೆಗೆಯುವುದು ಹಾಗೂ ಅಂಟಿಸುವುದು ಮಾಡುವುದರಿಂದ ಮಕ್ಕಳಲ್ಲಿ ಕೌಶಲ ಅಭಿವೃದ್ಧಿಯಾಗುತ್ತದೆ. ಈ ಚಟುವಟಿಕೆಗೆ ಮಕ್ಕಳು ಎರಡೂ ಕೈಗಳನ್ನು ಬಳಸುವುದರಿಂದ ಮಕ್ಕಳಲ್ಲಿ ಸಮನ್ವಯತೆಯ ಕಲೆ ಬೆಳೆಯುತ್ತದೆ.

ಕಲೆ ಹಾಗೂ ಕರಕುಶಲದಿಂದ ಮಕ್ಕಳಿಗಾಗುವ ಕೆಲವು ಉಪಯೋಗಗಳನ್ನು ಇಲ್ಲಿ ತಿಳಿಸಲಾಗಿದೆ.

ಅರಿವಿನ ಕೌಶಲವನ್ನು ಹೆಚ್ಚಿಸುತ್ತದೆ

ಕಲೆ ಹಾಗೂ ಕರಕುಶಲ ಚಟುವಟಿಕೆಗಳು ದೇಹದ ಇಂದ್ರಿಯಗಳನ್ನು ಬಳಸಿಕೊಳ್ಳುತ್ತವೆ. ಜೊತೆಗೆ ನರ ಸಂಪರ್ಕಗಳನ್ನು ಪ್ರೋತ್ಸಾಹಿಸುತ್ತವೆ. ಮಕ್ಕಳ ಮೆದುಳಿನ ಸಿನಾಪ್ಸಿಸ್‌ (ಮೆದುಳಿನ ಕೋಶಗಳ ನಡುವಿನ ಸಂಪರ್ಕ ಬಿಂದು) ಗಳು ಮಕ್ಕಳಲ್ಲಿ ಪ್ರಯೋಗಗಳನ್ನು ಮಾಡಲು ಹಾಗೂ ರಚನಾತ್ಮಕ ಚಟುವಟಿಕೆಗಳನ್ನು ಮಾಡಲು ಉತ್ತೇಜಿಸುತ್ತವೆ. ಅದರೊಂದಿಗೆ ಗಮನ ಹೆಚ್ಚಿಸುವುದು, ಗಮನವನ್ನು ಬೇರೆ ಬೇರೆ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವುದು, ಯೋಜನೆ ಹಾಗೂ ಸಂಘಟನೆ, ಮಲ್ಟಿಟಾಸ್ಕ್‌, ವಿವರಗಳನ್ನು ನೆನಪಿಟ್ಟುಕೊಳ್ಳುವುದು ಹಾಗೂ ಸಮಯ ನಿರ್ವಹಣೆಯಂತಹ ಕಾರ್ಯ ನಿರ್ವಾಹಕಗಳನ್ನು ಉತ್ತೇಜಿಸುತ್ತದೆ.

ಸ್ವಯಂ ಅಭಿವ್ಯಕ್ತಿಗೆ ಪ್ರೋತ್ಸಾಹ

ಮಕ್ಕಳು ಮನಸ್ಸಿನಲ್ಲೇ ಕಲ್ಪಿಸಿಕೊಳ್ಳಲು ಹಾಗೂ ಅಭಿವ್ಯಕ್ತ ಪಡಿಸಲು ಇಷ್ಟಪಡುತ್ತವೆ. ಆದರೆ ಅವರಲ್ಲಿನ ಭಾಷಾ ಕೌಶಲದ ಕೊರತೆಯಿಂದ ಆಲೋಚನೆಗಳನ್ನು ತಿಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರು ಯಾವಾಗಲೂ ತಮ್ಮ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸುವ ಮಾರ್ಗಗಳನ್ನು ಹುಡುಕುತ್ತಾರೆ. ಕಲೆ ಹಾಗೂ ಕರಕುಶಲ ಚಟುವಟಿಕೆಗಳು ಮಕ್ಕಳಲ್ಲಿ ತಮ್ಮ ಮನದ ಭಾವನೆಗಳನ್ನು ಸ್ವತಂತ್ರವಾಗಿ ಹರಿಯಬಿಡಲು ಸಹಾಯ ಮಾಡುತ್ತವೆ. ಅದಲ್ಲದೇ ಈ ಚಟುವಟಿಕೆಗಳು ಮಕ್ಕಳಲ್ಲಿ ಕ್ರಿಯಾಶೀತೆಯನ್ನು ಹೊರಹಾಕಲು ಮತ್ತು ಅವರ ಭಾವನೆಗಳನ್ನು ತಿಳಿಸಲು ಹಾಗೂ ಭಯದ ಭಾವನೆಗಳನ್ನು ಹೊರಹಾಕಲು ಉತ್ತಮ ವಿಧಾನ.

ಸ್ವಯಂ ನಿಯಂತ್ರಣ ಕಲಿಸುತ್ತದೆ

ಕಲಾ ಚಟುವಟಿಕೆಗಳು ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಿ, ಶಾಂತರಾಗಿರಲು ಸಹಾಯ ಮಾಡುತ್ತವೆ. ಅಲ್ಲದೇ ಸ್ವಯಂನಿಯಂತ್ರಣಕ್ಕೂ ಇದು ಸಹಕಾರಿ. ಪೇಂಟ್ ಮಾಡಲು ವಾಟರ್‌ಕಲರ್ ಬಳಸುವಾಗ, ಮಕ್ಕಳು ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಬಣ್ಣ ಬಳಿಯುವಾಗ ಮೊದಲ ಚಿತ್ರಕ್ಕೆ ಬಳಿದ ಬಣ್ಣ ಒಣಗುವವರೆಗೂ ಕಾಯಬೇಕು. ಇದು ಮಕ್ಕಳಲ್ಲಿ ಸತತ ಪರಿಶ್ರಮ ಹಾಗೂ ತಾಳ್ಮೆಯನ್ನು ಬೆಳೆಸುತ್ತದೆ.

ಸ್ವಾಭಿಮಾನವನ್ನು ಬೆಳೆಸುತ್ತದೆ

ಒಂದು ಕಲಾಕೃತಿಯನ್ನು ರಚಿಸುವುದು ಎಷ್ಟು ಸರಳವಾದರೂ ಅದು ಮಗುವಿನಲ್ಲಿ ಸ್ವಾಭಿಮಾನವನ್ನು ಹುಟ್ಟು ಹಾಕುತ್ತದೆ. ಯಾವಾಗ ಮಗು ಕಲೆ ಹಾಗೂ ಕುಶಲ ಚಟುವಟಿಕೆಯನ್ನು ಮುಗಿಸುತ್ತದೋ ಆಗ ಹಿರಿಯರು ಅದನ್ನು ಹೊಗಳಿ, ಪ್ರಶಂಸಿಸಬೇಕು. ಹಾಗೆ ಮಾಡುವುದರಿಂದ ಮಗುವಿಗೆ ಸಂತೋಷವಾಗುತ್ತದೆ. ಜೊತೆಗೆ ಆತ್ಮವಿಶ್ವಾಸವೂ ಬೆಳೆಯುತ್ತದೆ. ಹಾಗಾಗಿ ಮಗುವಿನ ವಯಸ್ಸಿನ ಆಧಾರದ ಮೇಲೆ ಕಲೆ ಅಥವಾ ಕರಕುಶಲ ಚಟುವಟಿಕೆಯ ಆಯ್ಕೆ ಮಾಡುವುದು ಮುಖ್ಯ. ಹಾಗೆಯೇ ಮಗು ತನ್ನ ಚಟುವಟಿಕೆ ಮುಗಿಸಿದ ಮೇಲೆ ಮಗುವಿನ ಪ್ರಯತ್ನವನ್ನು ಹೊಗಳಬೇಕೇ ಹೊರತು ಅವನು ಮಾಡಿದ ಕೆಲಸವನ್ನಲ್ಲ ಎಂಬುದನ್ನು ಹಿರಿಯರು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಸೃಜನಶೀಲತೆ ಹೆಚ್ಚಿಸುತ್ತದೆ

ಕಲೆ ಎಂದರೆ ಮಕ್ಕಳು ತಮ್ಮ ಮನಸ್ಸಿನಲ್ಲಿನ ಕ್ರಿಯಾಶೀಲ ಕಲ್ಪನೆಗಳನ್ನು ಹೊರಹಾಕುವ ಒಂದು ವೇದಿಕೆಯಾಗಿದೆ. ಅಮೆರಿಕ ಮೂಲದ ಇಂಟರ್ ನ್ಯಾಷನಲ್ ಚೈಲ್ಡ್ ಆರ್ಟ್ ಫೌಂಡೇಶನ್ ಅವರ ಪ್ರಕಾರ ತಮ್ಮನ್ನು ಕಲೆಗೆ ಒಡ್ಡಿಕೊಳ್ಳುವ ಮಕ್ಕಳು ಕ್ರಿಯಾತ್ಮಕವಾಗಿ ಯೋಚಿಸುವ ವಿಶೇಷ ಕೌಶಲ ಹೊಂದಿರುತ್ತಾರೆ. ಅಲ್ಲದೇ ಹೊಸ ವಿಷಯಗಳನ್ನು ಕಂಡು ಹಿಡಿಯುವ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಸಮಸ್ಯೆ ಪರಿಹರಿಸುವ ಕೌಶಲ

ಕಲಾತ್ಮಕ ಸವಾಲುಗಳನ್ನು ಎದುರಿಸುವುದರಿಂದ ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ. ಸೃಜನಶೀಲ ಯೋಜನೆಗಳನ್ನು ರೂಪಿಸುವುದು ಹಾಗೂ ಕಾರ್ಯಗತಗೊಳಿಸುವುದರಿಂದ ಮಕ್ಕಳಿಗೆ ಆಯ್ಕೆ ಹಾಗೂ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಸ್ವತಂತ್ರರಾಗಿ ಕೆಲಸ ಮಾಡುವುದರಿಂದ ಅವರ ಸ್ವಂತ ನಿರ್ಧಾರಗಳನ್ನು ಮೌಲ್ಯಮಾಪನ ಮಾಡಿಕೊಳ್ಳುವುದು, ವಿಮರ್ಶಾತ್ಮಕ ಚಿಂತನೆ ಹಾಗೂ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಗುಣ ಅವರಲ್ಲಿ ಹೆಚ್ಚಿರುತ್ತದೆ.

ಸಾಮಾಜಿಕ ಕೌಶಲಗಳನ್ನು ಬೆಳೆಸುತ್ತದೆ

ಸೃಜನಶೀಲ ಚಟುವಟಿಕೆಗಳಲ್ಲಿ ಒಟ್ಟಾಗಿ ತೊಡಗಿಕೊಳ್ಳುವುದರಿಂದ ಮಕ್ಕಳಲ್ಲಿ ಸಂವಹನ ಕೌಶಲ ಹಾಗೂ ಪರಸ್ಪರ ಹಂಚಿಕೊಳ್ಳುವ ಮನೋಭಾವ ಬೆಳೆಯಲು ಅವಕಾಶವಿರುತ್ತದೆ, ಕೆಲಸ ಮಗಿದ ನಂತರ ಬಳಿಸಿದ ವಸ್ತುಗಳನ್ನು ತೆಗೆದಿಡುವುದು ಹಾಗೂ ಸ್ವಚ್ಛಗೊಳಿಸುವುದು ಮಾಡುವುದರಿಂದ ಮಕ್ಕಳಲ್ಲಿ ಟೀಮ್ ವರ್ಕ್ ಹಾಗೂ ಜವಾಬ್ದಾರಿಯುತ ಮನೋಭಾವ ಬೆಳೆಯಲು ಸಹಾಯವಾಗುತ್ತದೆ.

ಬದಲಾವಣೆಗೆ ಹೊಂದಿಕೊಳ್ಳಲು ಸಹಾಯ

ಒಬ್ಬ ವ್ಯಕ್ತಿ ತನ್ನ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಯಾವುದೇ ಸರಿ–ತಪ್ಪು ಮಾರ್ಗಗಳಿಲ್ಲ. ಒಂದು ಚಿತ್ರವನ್ನು ಬಿಡಿಸಿದ ಅಥವಾ ಪೇಂಟಿಂಗ್ ಮಾಡಿದ ನಂತರ ಮಕ್ಕಳು ತಾವು ಬಿಡಿಸಿದ ಚಿತ್ರವನ್ನು ನೋಡುತ್ತಾರೆ, ಆಲೋಚಿಸುತ್ತಾರೆ ಹಾಗೂ ಮತ್ತೆ ಅದನ್ನು ಬದಲಾಯಿಸುತ್ತಾರೆ. ಇದು ಅವರಲ್ಲಿ ಬದಲಾವಣೆಯನ್ನು ಮಾಡಲು ಹಾಗೂ ಬದಲಾವಣೆಯನ್ನು ಒಪ್ಪಿಕೊಳ್ಳಲು ಸಹಾಯವಾಗುತ್ತದೆ. ಅವರಲ್ಲಿ ಹೊಂದಾಣಿಕೆಯ ಮನೋಭಾವ ಬೆಳೆಯುತ್ತದೆ.

ಕಲೆಯನ್ನು ಇತರ ವಿಷಯಗಳೊಂದಿಗೆ ಸಂಯೋಜಿಸುವುದರಿಂದ ಕಲಿಕಾ ಗುಣಮಟ್ಟ ಸುಧಾರಣೆಯಾಗುತ್ತದೆ. ಜೊತೆಗೆ ಮಕ್ಕಳ ಮನಸ್ಸಿಗೆ ವಿನೋದವೂ ಸಿಗುತ್ತದೆ. ಕಲೆಯನ್ನು ರಚಿಸುವುದು ಅಥವಾ ಗಮನಿಸುವುದರಿಂದ ಮಕ್ಕಳಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ಉತ್ತಮವಾಗಿ ಗ್ರಹಿಸಲು ಸಹಾಯವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು