ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಶಿಕ್ಷಣ; ಅವಕಾಶಗಳು ತಕ್ಷಣ

Last Updated 8 ಜನವರಿ 2019, 19:30 IST
ಅಕ್ಷರ ಗಾತ್ರ

ಡಾ. ಸುಮನ್ ಪೆನೇಕರ್ ಇಂದು ಕೊಡಗು ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಣಿ. ಕೊಡಗಿನ ವಿಪತ್ತು ದಿನಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಕೀರ್ತಿ ಅವರದ್ದು. ಅವರು ಮೈಸೂರು ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಪದವಿ ಪಡೆದರು. ಅನಂತರ ಭಾರತೀಯ ಸಿವಿಲ್ ಸರ್ವಿಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಐ.ಪಿ.ಎಸ್. ಪಡೆಯಲು ಅರ್ಹತೆ ಗಳಿಸಿದರು. ಇದೀಗ ಆಕೆ ರಾಜ್ಯದ ಪೋಲೀಸು ಇಲಾಖೆಯಲ್ಲಿದ್ದಾರೆ.

ಮೈಸೂರಿನಲ್ಲಿ ವಾಯುಸೇನೆಗೆ ಸೇರಬಯಸುವವರಿಗೆ ಯಾವುದೇ ಪದವಿ ಪಡೆದ ಅಭ್ಯರ್ಥಿ/ನಿಗೆ ಅವಕಾಶ ನೀಡುವ ಕಚೇರಿ ಇದೆ. ವರ್ಷಕ್ಕೆ ಎರಡು ಬಾರಿ ಅಲ್ಲಿ ಅರ್ಜಿಯನ್ನು ಕರೆಯಲಾಗುತ್ತದೆ. ವಾಯುಸೇನೆಗೆ ಸೇರಲು ಬಯಸುವವರಿಗಾಗಿ ಬರವಣಿಗೆ ಮತ್ತು ದೈಹಿಕ ಪರೀಕ್ಷೆಯ ಮುಕ್ತ ಅವಕಾಶಗಳಿವೆ. ಆಯುರ್ವೇದ ಪದವೀಧರ/ರೆ ಕೂಡ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಯಾಗಲು ಸಾಧ್ಯವಿದೆ. ಆಯುರ್ವೇದ ಕೋರ್ಸು ಮುಗಿಸಿದ ತರುವಾಯ ಮುಂದೇನು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇಲ್ಲಿದೆ ಕೆಲವು ಸಂಗತಿಗಳು. ಪೋಷಕರು, ಪಿ.ಯು.ಸಿ. ಅನಂತರದ ಆಯ್ಕೆಗಳನ್ನು ಗಮನಿಸಬಹುದು.

* ಸ್ವಂತ ಉದ್ಯೋಗಿಯಾಗಿ ವೈದ್ಯಕೀಯ ವೃತ್ತಿ ನಡೆಸಲು ಸಾಧ್ಯ. ಅವರು ಇನ್ನಾವುದೇ ನೌಕರಿ ಅರಸುವ ಅಗತ್ಯ ಇಲ್ಲ.

* ಆಯುರ್ವೇದ ಕಾಲೇಜುಗಳಲ್ಲಿ ಬೋಧನಾವೃತ್ತಿಯನ್ನು ಕೈಗೊಳ್ಳಲು ಸಾಧ್ಯ. ಅದರ ಜೊತೆಗೆ ಸ್ವಂತ ವೈದ್ಯಕೀಯ ವೃತ್ತಿ ಕೂಡ ನಡೆಸಲು ಅವಕಾಶ.

* ರಾಜ್ಯ ಮತ್ತು ದೇಶದ ಅನೇಕ ಸಂಸ್ಥೆಗಳಲ್ಲಿ ಆಯುರ್ವೇದದ ಅನೇಕ ಆಯಾಮಗಳಲ್ಲಿ ಸಂಶೋಧನೆಗೆ ಅವಕಾಶ ಇದೆ.

* ರಾಜ್ಯ ಅಥವಾ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅನಂತರ ನಿರ್ವಹಣೆ ಉದ್ಯೋಗ ಹಿಡಿಯಲು ಸಾಧ್ಯ. ಎಂ.ಬಿ.ಎ. ಕೋರ್ಸು ಪಡೆದು ಅದರಲ್ಲಿ ವಿಶೇಷತಃ ಆಸ್ಪತ್ರೆ ನಿರ್ವಹಣೆಯ ಜವಾಬ್ದಾರಿ ವಹಿಸಲು ಸಾಧ್ಯ.

* ಔಷಧ ತಯಾರಿಕೆ ಘಟಕ ಸ್ವಂತ ಸ್ಥಾಪಿಸಲು ಅಥವಾ ಇತರ ಉದ್ದಿಮೆಗೆ ಸಲಹೆಗಾರರಾಗಿ ಸೇರಲು ಅವಕಾಶ ಇದೆ.

* ಇತರ ಅವಕಾಶಗಳು ಸಹ ಇಂದು ಹೇರಳ. ಉದಾಹರಣೆಗೆ ಮೆಡಿಕಲ್ ಟ್ರಾನ್ಸಕ್ರಿಪ್ಷನ್, ಅಥವಾ ಆಯುರ್ವೇದದ ಪಂಚಕರ್ಮ ಆಸ್ಪತ್ರೆಯ ಸಾಧನಗಳ ತಯಾರಿಕೆ, ವೈದ್ಯಕೀಯ ಪ್ರವಾಸ, ವೈದ್ಯಕೀಯ ಪತ್ರಿಕೋದ್ಯಮ, ಇವೆಂಟ್ ಮ್ಯಾನೇಜ್‍ಮೆಂಟ್, ಆಯುರ್ವೇದ ಆಸ್ಪತ್ರೆಗಳಿಗೆ ನಿರ್ವಹಣಾ ಸಾಫ್ಟ್ವೇರ್ ತಯಾರಿಕೆ, ಸರಬರಾಜಿನಂತಹ ಸ್ವ–ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಇವೆ.

ವೈದ್ಯಕೀಯ ವೃತ್ತಿ: ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳು ಆರಂಭಿಕ ಸಾಲ ನೀಡಲು ಆಯುರ್ವೇದ ಪದವಿ ಪಡೆದರೆ ಸಾಕು. ಪ್ರಾಜೆಕ್ಟ್ ಸರಿಯಾಗಿದ್ದರೆ ಸಾಲ ಸೌಲಭ್ಯ ಖಂಡಿತ. ಒಳ ಹಾಸಿಗೆ ಉಳ್ಳ ಅಥವಾ ಹೊರ ರೋಗಿಗಳ ಸ್ವಂತ ಚಿಕಿತ್ಸಾಲಯ ಆರಂಭಿಸಲು ಆಯುರ್ವೇದ ಪದವಿ ಸಾಕು. ಪಂಚಕರ್ಮ, ಅಗ್ನಿಕರ್ಮ, ಕ್ಷಾರ ಸೂತ್ರದಂತಹ ಆಯುರ್ವೇದದ ವಿಶೇಷ ಚಿಕಿತ್ಸೆಗಳನ್ನು ಅಂತಹ ಕ್ಲಿನಿಕ್ ಅಥವಾ ಆಸ್ಪತ್ರೆಗಳಲ್ಲಿ ಅಳವಡಿಸಲು ಸಾಧ್ಯ.

ಬೋಧನಾ ವೃತ್ತಿಗೆ ಎಂಡಿ ಅಥವಾ ಎಂಎಸ್ ಸ್ನಾತಕೋತ್ತರ ಪದವಿ ಬೇಕು. ಅದಕ್ಕೆ ಪ್ರವೇಶ ಪಡೆಯಲು ಕೇಂದ್ರ ಮಟ್ಟದ ನೀಟ್ ಪರೀಕ್ಷೆ ಬರೆದು ಉತ್ತಮ ರ್‍ಯಾಂಕ್‌ ಪಡೆಯಲು ಅವಕಾಶ. ಮೂರು ವರ್ಷಗಳ ಸ್ನಾತಕೋತ್ತರ ಕೋರ್ಸು ರಾಜ್ಯ ಹೊರ ರಾಜ್ಯಗಳಲ್ಲಿ ಪಡೆಯಲು ಸಾಧ್ಯ. ಸರ್ಕಾರಿ, ವಿಶ್ವವಿದ್ಯಾಲಯ (ಬನಾರಸ್ ಹಿಂದು ವಿ.ವಿ., ನ್ಯಾಶನಲ್ ಇನ್‍ಸ್ಟಿಟ್ಯೂಟ್ ಜೈಪುರ, ನವದೆಹಲಿ) ಸಹ ಅಂತಹ ಎಂಡಿ. ಎಂಸ್ ಕೋರ್ಸುಗಳನ್ನು ನಡೆಸುತ್ತವೆ. ಅಲ್ಲಿ ಪ್ರವೇಶ ಪಡೆದರೆ ಮೂರು ವರ್ಷಗಳ ಸ್ಟೈಫಂಡ್ ಲಭ್ಯವಿದೆ. ಖಾಸಗಿ ಸಂಸ್ಥೆಗಳಲ್ಲಿ ಕೊಂಚ ದುಬಾರಿ ಡೊನೇಷನ್ ನೀಡಬೇಕಾಗುತ್ತದೆ. ಅನಂತರ ಎಂಫಿಲ್, ಪಿಎಷ್‌ಡಿ ಗಳಿಸಲು ಕೆಲವು ಆಯ್ದ ತಾಣಗಳಲ್ಲಿ ಅವಕಾಶ ಇದೆ. ರಾಜ್ಯ ಹೊರರಾಜ್ಯದ ಆಯುರ್ವೇದ ಕಾಲೇಜುಗಳಲ್ಲಿ, ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಮತ್ತು ಇಎಸ್ಐ, ಮಿಲಿಟರಿ ಆಸ್ಪತ್ರೆಗಳಲ್ಲಿ ಚಿಕಿತ್ಸಕರಾಗಲು ಸ್ನಾತಕೋತ್ತರ ಪದವಿ ಪಡೆದರೆ ಉತ್ತಮ ಅವಕಾಶ ಇದೆ.

ವಿಶ್ವ ಆರೋಗ್ಯ ಸಂಸ್ಥೆ ಇಂದು ಆಯುರ್ವೇದ ಪದ್ಧತಿಗೆ ಹೆಚ್ಚು ಒತ್ತನ್ನು ನೀಡಲು ಆರಂಭಿಸಿದೆ. ದೇಶ–ಹೊರದೇಶಗಳಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶಗಳು ಇದೀಗ ತೆರೆದುಕೊಳ್ಳುತ್ತಿವೆ. ಕ್ಲಿನಿಕಲ್ ಅಂದರೆ ರೋಗ ಮತ್ತು ರೋಗಿ ನಿರ್ವಹಣೆಯ ಮಟ್ಟದ ಹಾಗೂ ನಾನ್ ಕ್ಲಿನಿಕಲ್ ಅಂದರೆ ಮೂಲ ಸಿದ್ಧಾಂತಗಳ, ಔಷಧೀಯ ಸಸ್ಯಗಳ ಆಳ ಸಂಶೋಧನೆಗೆ ವಿಪುಲ ಅವಕಾಶಗಳಿವೆ.

ಯುಪಿಎಸ್ಸಿ ಪರೀಕ್ಷೆಗಳಿಗೆ ಬರೆಯಲು ಅವಕಾಶದ ಬಗ್ಗೆ ಮೇಲೆ ಓದಿದಿರಿ. ಎಂಬಿಎ ಪದವಿಯನ್ನು ಪಡೆದರೆ ಅನೇಕ ಅವಕಾಶ ಹುಡುಕಲು ಸಾಧ್ಯ. ಪಬ್ಲಿಕ್ ಹೆಲ್ತ್ ಮ್ಯಾನೇಜ್‍ಮೆಂಟ್ ಕೋರ್ಸುಗಳಿವೆ. ಆಸ್ಪತ್ರೆ ನಿರ್ವಹಣೆಯ ಕೋರ್ಸುಗಳಿವೆ. ಇಂದು ಈ ಬಗೆಯ ಪದವಿ ಪಡೆದು ಒಬ್ಬ ವೈದ್ಯರು ಹೆಚ್ಚಿನ ರೀತಿಯಲ್ಲಿ ಸಮಾಜಕ್ಕೆ ಸಹಾಯ ಮಾಡಲು ಸಾಧ್ಯ. ಉತ್ತಮ ಸಂವಹನ ಕಲೆ ತಮ್ಮದಾಗಿಸಿಕೊಳ್ಳಿರಿ. ಇಂತಹ ಹೊಸ ಆಯಾಮಗಳಲ್ಲಿ ದುಡಿಯಲು ತಮಗೆ ಅವಕಾಶಗಳಿವೆ.

ಔಷಧ ತಯಾರಿಕೆ ಘಟಕ ಸ್ವಂತವಾಗಿ ಶುರು ಮಾಡಲು ಪದವಿ ಸಾಕು. ದೇಶ–ವಿದೇಶಗಳ ಔಷಧ ತಯಾರಿಕೆಯ ಬಹಳ ಉದ್ದಿಮೆಗಳಿಂದು ಆಯುರ್ವೇದ ಔಷಧ ತಯಾರಿಕೆಗೆ ಕೈ ಹಾಕಿವೆ. ಅಲ್ಲಿ ಸಹ ಆಯುರ್ವೇದ ಪದವಿ ತಮ್ಮ ಉದ್ಯೋಗಕ್ಕೆ ನೆರವಾಗುತ್ತದೆ. ಆಯುರ್ವೇದ ಪದವಿಯ ಅನಂತರ ಎಂಫಾರ್ಮ ಪಡೆಯಲು ಗುಜರಾತಿನ ಜಾಂನಗರ ವಿ.ವಿ.ಯಲ್ಲಿ ಅವಕಾಶ ಇದೆ. ತೋಟಗಾರಿಕೆ ಕ್ಷೇತ್ರದಲ್ಲಿ ಔಷಧೀಯ ಸಸ್ಯಕೃಷಿಗೆ ಸಲಹೆ, ನಿರ್ವಹಣೆಯಂತಹ ಜವಾಬ್ದಾರಿಗಳನ್ನು ನಿಮ್ಮದಾಗಿಸಲು ಸಾಧ್ಯವಿದೆ.

ಡಾ. ಅರ್ಚನಾ ಮತ್ತು ಡಾ. ರೇಖಾ ಕೋಟ್ಯಾನ್ ಎಂಬ ಇಬ್ಬರು ಆಯುರ್ವೇದ ಪದವೀಧರೆಯರು ಮಹಾನಸ ಎಂಬ ವಿಶೇಷ ಸಂಸ್ಥೆ ತೆರೆದಿದ್ದಾರೆ. ‘ಮಹಾನಸ’ ಎಂದರೆ ಅಡುಗೆಮನೆ ಎಂದರ್ಥ. ದೇಶ–ವಿದೇಶಗಳ ಅಭ್ಯರ್ಥಿಗಳಿಗೆ ಆಯುರ್ವೇದ ರೀತ್ಯಾ ಅಡುಗೆ ಮಾಡುವ ವಿಶೇಷ ಉಪನ್ಯಾಸಕ್ಕೆ ಮತ್ತು ಕಲಿಯುವ ಕೋರ್ಸನ್ನು ಅವರು ಆರಂಭಿಸಿದ್ದಾರೆ. ಇಂತಹ ಇನ್ನೋವೇಟಿವ್ ಥಿಂಕಿಂಗ್ ಕೂಡ ಹೊಸ ಪೀಳಿಗೆ ಮಂದಿಗೆ ಬರಲು ಖಂಡಿತ ಅವಕಾಶವಿದೆ. ಔಷಧಸಸ್ಯ ಕೃಷಿಗೆ ವಿಪುಲ ಅವಕಾಶಗಳಿವೆ. ಅಂತಹ ಕ್ಷೇತ್ರಗಳಲ್ಲಿ ಯುವ ಪೀಳಿಗೆ ತೊಡಗಿಸಿಕೊಳ್ಳಲು ಆಯುರ್ವೇದ ಪದವಿ ಪೂರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT