ಗುರುವಾರ , ನವೆಂಬರ್ 14, 2019
26 °C

ವಿನೂತನ ಪ್ರಯೋಗಗಳ ಪಠ್ಯ

Published:
Updated:

ಬೆಂಗಳೂರು ವಿಶ್ವವಿದ್ಯಾಲಯದ ತ್ರಿವಿಭಜನೆಯಿಂದ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ (ಬಿಸಿಯು) ಹೊಸ ಪಠ್ಯಕ್ರಮದೊಂದಿಗೆ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೊರ್ಸ್‌ಗಳನ್ನು ಈ ವರ್ಷದಿಂದ ಆರಂಭಿಸಿದೆ.

ರಾಜಧಾನಿಯ ಕೇಂದ್ರ ಭಾಗದಲ್ಲಿರುವ ಸೆಂಟ್ರಲ್‌ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಸಿಯು ದೇಶದಲ್ಲಿರುವ ಮೊದಲ ನಗರ ಕೇಂದ್ರಿತ ವಿಶ್ವವಿದ್ಯಾಲಯ. ಇದರ ವ್ಯಾಪ್ತಿಯಲ್ಲಿ ನಗರದ 260 ಕಾಲೇಜುಗಳಿವೆ.

ಈಗಾಗಲೇ ಬಿಸಿಯು ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳಲ್ಲಿನ ವಿವಿಧ ಸ್ನಾತಕೋತ್ತರ (ಪಿ.ಜಿ) ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು ದಂಡರಹಿತ ಅರ್ಜಿ ಸಲ್ಲಿಸಲು ಇದೇ 25 ಕೊನೆ ದಿನ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಇದೇ 28 ಕೊನೆ ದಿನ.

ಕೌಶಲ, ಉದ್ಯೋಗಾಧಾರಿತ ಪಠ್ಯ

ಕನ್ನಡ, ಇಂಗ್ಲಿಷ್‌, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಕಾರ್ಯ, ತತ್ವಶಾಸ್ತ್ರ ಸೇರಿದಂತೆ ವಿವಿಧ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಷಯಗಳ ಪಿ.ಜಿ ಕೋರ್ಸ್‌ಗಳಿಗೆ ಕೌಶಲ ಮತ್ತು ಉದ್ಯೋಗಾಧಾರಿತ ಪಠ್ಯವನ್ನು ವಿ.ವಿ ಸಿದ್ಧಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಪ್ರಚಲಿತವಿರುವ ಪಠ್ಯಗಳ ಜತೆಗೆ ಸಂವಹನ ಕೌಶಲ ವೃದ್ಧಿಸುವ ಪಠ್ಯವನ್ನೂ ವಿ.ವಿ ಅಳವಡಿಸಿದೆ. ಅಲ್ಲದೆ ಕಂಪ್ಯೂಟರ್‌ ಕಲಿಕೆ, ಸ್ಪೋಕನ್‌ ಇಂಗ್ಲಿಷ್‌ ಜತೆಗೆ ಇಂಗ್ಲಿಷ್‌ ಬರವಣಿಗೆ ಕುರಿತ ಪತ್ರಿಕೆಗಳನ್ನೂ ಅಳವಡಿಸಿದೆ. ಪಿ.ಜಿ ಕಲಿಕೆಗೆ ಸೇರುವ ಪ್ರತಿ ವಿದ್ಯಾರ್ಥಿಯು ಕೋರ್ಸ್‌ ಪೂರ್ಣಗೊಳಿಸುವ ವೇಳೆಗೆ ಇಂಗ್ಲಿಷ್‌ ಕಲಿಕೆ, ಕಂಪ್ಯೂಟರ್‌ ಬಳಕೆಯ ಜ್ಞಾನವನ್ನು ಹೊಂದಿರಬೇಕು ಎಂಬುದು ವಿ.ವಿ ಆಶಯ.

ಅಂತರ್‌ ಶಿಸ್ತೀಯ ಮತ್ತು ಬಹು ಶಿಸ್ತೀಯ ವಿಷಯಗಳ ಅಧ್ಯಯನಕ್ಕೂ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಇದೆ. ಅಂದರೆ ನಿಗದಿತ ವಿಷಯದಲ್ಲಿ ಪಿ.ಜಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಯು 2 ಮತ್ತು 3ನೇ ಸೆಮಿಸ್ಟರ್‌ನಲ್ಲಿ ಕಡ್ಡಾಯವಾಗಿ ಬೇರೆ ವಿಭಾಗದ ಕೋರ್ಸ್‌ಗಳಲ್ಲಿನ ಒಟ್ಟು 2 ಪತ್ರಿಕೆಯನ್ನು ಓದಲೇಬೇಕು.

ಉದಾಹರಣೆಗೆ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿ ರಾಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಯಾವುದಾದರೂ ಒಂದೊಂದು ಪತ್ರಿಕೆಯನ್ನು ಓದಲೇಬೇಕು. ಅದೇ ರೀತಿ ಇತರ ವಿಭಾಗಗಳ ವಿದ್ಯಾರ್ಥಿಗಳು ಕೂಡ. ಈ ಮೂಲಕ ವಿದ್ಯಾರ್ಥಿಗಳಿಗೆ ಬೇರೆ ವಿಷಯಗಳ ಜ್ಞಾನವನ್ನು ವೃದ್ಧಿಸುವುದು ವಿ.ವಿಯ ಉದ್ದೇಶ. ಅದಲ್ಲದೆ ನಿಗದಿತ ವಿಷಯದಲ್ಲಿ ಒಟ್ಟು ಆರು ಆಯ್ಕೆ ಪತ್ರಿಕೆಗಳನ್ನೂ ವಿದ್ಯಾರ್ಥಿಗಳು ಓದಬೇಕು.

ಬೆಂಗಳೂರು ಕೇಂದ್ರಿತ ಪಠ್ಯ

ಬೆಂಗಳೂರು ನಗರ ಕೇಂದ್ರಿತ ವಿ.ವಿಯಾಗಿರುವ ಕಾರಣ ಪ್ರತಿ ವಿಷಯಗಳ ಪಠ್ಯದಲ್ಲಿ ಬೆಂಗಳೂರು ನಗರದ ಕುರಿತ ಒಂದೊಂದು ಪತ್ರಿಕೆಯನ್ನು ವಿ.ವಿ ಅಳವಡಿಸಿದೆ. ಸಮಾಜಶಾಸ್ತ್ರದಲ್ಲಿ ‘ಅಂಡರ್‌ಸ್ಟ್ಯಾಂಡಿಂಗ್‌ ಬೆಂಗಳೂರು’ ಕುರಿತ ಪತ್ರಿಕೆ ಇದೆ. ಇತಿಹಾಸದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಇತಿಹಾಸ, ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅರ್ಥಿಕ ವ್ಯವಸ್ಥೆ, ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ರಾಜ್ಯಾಡಳಿತದ ಶಕ್ತಿಕೇಂದ್ರವಾಗಿ ಬೆಂಗಳೂರು ಕುರಿತ ಪತ್ರಿಕೆಗಳನ್ನು ಪರಿಚಯಿಸಲಾಗಿದೆ.

ಪಠ್ಯದಲ್ಲಿ ಬೆಂಗಳೂರಿಗೆ ಸ್ಥಾನ ಕಲ್ಪಿಸುವುದರ ಜತೆಗೆ ಬೆಂಗಳೂರಿಗೆ ಸಂಬಂಧಿಸಿದಂತೆ ನಾನಾ ಆಯಾಮಗಳಲ್ಲಿ ಉನ್ನತ ಅಧ್ಯಯನ, ಸಂಶೋಧನೆಗಳು ನಡೆಯುವುದಕ್ಕೂ ಇದು ಸಹಕಾರಿಯಾಗುತ್ತದೆ.

ವಿಶೇಷ ಪ್ರಯೋಗ

ಕನ್ನಡ ಸ್ನಾತಕೋತ್ತರ ಪದವಿ ಕೋರ್ಸ್‌ನ ಪಠ್ಯದಲ್ಲೂ ವಿಶೇಷ ಪ್ರಯೋಗವನ್ನು ಬಿಸಿಯು ಮಾಡಿದೆ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಸಾಹಿತ್ಯ ಅಧ್ಯಯನ, ಸಂಸ್ಕೃತಿ ಅಧ್ಯಯನ, ತೌಲನಿಕ ಸಾಹಿತ್ಯ, ಕನ್ನಡ ಸಾಹಿತ್ಯ ಚರಿತ್ರೆ ರಚನೆ, ಸೃಜನಶೀಲ ನಿರೂಪಣೆಗಳು, ಕನ್ನಡ ಭಾಷಾ ರಚನೆ, ಕನ್ನಡ ಕಾವ್ಯ ಮೀಮಾಂಸೆ, ಹಳೆಗನ್ನಡ, ಶಾಸನ, ಓಲೆಗರಿಗಳ ಅಧ್ಯಯನ, ತೌಲನಿಕ ಅಧ್ಯಯನವನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ. ಅವುಗಳ ಜತೆಗೆ ಪತ್ರಿಕಾ ಬರವಣಿಗೆಯ ಅಧ್ಯಯನ ಮತ್ತು ಪ್ರಯೋಗ, ತಂತ್ರಜ್ಞಾನ ಮಾಧ್ಯಮಗಳ ಬರವಣಿಗೆ ಮತ್ತು ಪ್ರಯೋಗ, ಸಂಶೋಧನಾ ಬರವಣಿಗೆಯ ಅಧ್ಯಯನ ಪತ್ರಿಕೆಗಳನ್ನು ಅಳವಡಿಸಲಾಗಿದೆ. ಇವುಗಳ ಜೊತೆ ಅನುವಾದ, ಪ್ರಯೋಗದ ಪತ್ರಿಕೆಗಳನ್ನೂ ಸೇರಿಸಲಾ
ಗಿದೆ. ಕನ್ನಡ ಎಂ.ಎ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ಗಮನಿಸಿರುವ ವಿ.ವಿ ಈ ಕುರಿತು ಪತ್ರಿಕೆಗಳನ್ನು ಅಳವಡಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲೂ ವಿಪುಲ ಅವಕಾಶಗಳು ಸಿಗಲಿವೆ ಎಂಬುದು ವಿ.ವಿಯ ಆಶಯ.

ಪ್ರಬಂಧ ರಚನೆ

ಪ್ರತಿ ಪಿ.ಜಿ ಕೋರ್ಸ್‌ನ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ಸಂಪ್ರಬಂಧ ರಚಿಸಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಕ್ಷೇತ್ರಕಾರ್ಯ, ಚರ್ಚೆ, ಸಂವಾದ, ಅಧ್ಯಯನ, ವಿಶ್ಲೇಷಣೆ, ವಿಮರ್ಶೆ ಸೇರಿದಂತೆ ಸಂಶೋಧನಾ ವಿಧಾನವನ್ನು ಕಲಿಸುವ ಉದ್ದೇಶವನ್ನು ವಿ.ವಿ ಹೊಂದಿದೆ.

ಇಂಟರ್ನ್‌ಶಿಪ್‌

ಪ್ರತಿ ಕೋರ್ಸ್‌ನಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಾದರೆ ಜನಪ್ರತಿನಿಧಿಗಳ ಬಳಿ, ಸಮಾಜಶಾಸ್ತ್ರ ಮತ್ತು ಸಮಾಜ ಕಾರ್ಯದ ವಿದ್ಯಾರ್ಥಿಗಳಾದರೆ ಎನ್‌ಜಿಒಗಳ ಬಳಿ, ಕನ್ನಡ ವಿದ್ಯಾರ್ಥಿಗಳಾದರೆ ಪತ್ರಿಕೆಗಳು, ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ, ಇತಿಹಾಸದ ವಿದ್ಯಾರ್ಥಿಗಳಾದರೆ ಐಸಿಎಚ್‌ಆರ್‌ ಸೇರಿದಂತೆ ಇತರ ಸಂಶೋಧನಾ ಕೇಂದ್ರಗಳಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸುವುದಾಗಿ ವಿ.ವಿ ಕುಲಪತಿ ಪ್ರೊ. ಎಸ್‌. ಜಾಫೆಟ್‌ ಮಾಹಿತಿ ನೀಡಿದರು.

ಮೂಲ ಸೌಕರ್ಯ ಮತ್ತು ಸಿಬ್ಬಂದಿ

‘ಮೂಲ ವಿಶ್ವವಿದ್ಯಾಲಯದಿಂದ ಕೆಲ ಬೋಧಕರು ಬಿಸಿಯು ಅನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ. ಅಲ್ಲದೆ ಜೆಎನ್‌ಯು, ದೆಹಲಿ ವಿ.ವಿ ಸೇರಿದಂತೆ ದೇಶದ ಪ್ರತಿಷ್ಠಿತ ವಿ.ವಿಗಳ ಬೋಧಕರನ್ನು ಕಾಲ ಕಾಲಕ್ಕೆ ಕರೆಸಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು. ಅದರ ಜತೆಗೆ ವಿವಿಧ ವಿ.ವಿಗಳಲ್ಲಿ ಇತ್ತೀಚೆಗೆ ನಿವೃತ್ತರಾಗಿರುವ ಪ್ರಾಧ್ಯಾಪಕರನ್ನು ಅತಿಥಿ ಬೋಧಕರಾಗಿ ನೇಮಕ ಮಾಡಿಕೊಳ್ಳುತ್ತೇವೆ. ಬಿಸಿಯು ವ್ಯಾಪ್ತಿಯ ಕೆಲ ಸರ್ಕಾರಿ ಮತ್ತು ಸಂಯೋಜಿಕ ಕಾಲೇಜುಗಳ ಬೋಧಕರನ್ನು ನಿಯೋಜನೆ ಮೇರೆಗೆ ವಿ.ವಿಗೆ ಕರೆಸಿಕೊಳ್ಳುತ್ತೇವೆ. ಜತೆಗೆ ಇನ್ನೂ ಕೆಲ ಅತಿಥಿ ಬೋಧಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಸಲು ಯೋಜಿಸಿದ್ದೇವೆ’ ಎನ್ನುತ್ತಾರೆ ಅವರು.

‘ಸೆಂಟ್ರಲ್‌ ಕಾಲೇಜಿನಲ್ಲಿ ಇರುವ ‘ಫಿಸಿಕ್ಸ್‌ ಬ್ಲಾಕ್‌’ನಲ್ಲಿ 10 ವಿಭಾಗಗಳ ಪಿ.ಜಿ ಕೋರ್ಸ್‌ ನಡೆಸಲು ನಿರ್ಧರಿಸಿದೆ.

ಮುಂದಿನ ಯೋಜನೆ

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಮತ್ತು ವಿಭಿನ್ನ ಪಿ.ಜಿ ಕೋರ್ಸ್‌ಗಳನ್ನು ಆರಂಭಿಸಲು ಬಿಸಿಯು ನಿರ್ಧರಿಸಿದೆ. ಪ್ರಮುಖವಾಗಿ ಸಿನಿಮಾ ಅಧ್ಯಯನ, ನಗರೀಕರಣ ಮತ್ತು ಯೋಜನೆ, ಐದು ವರ್ಷದ ಇಂಟಿಗ್ರೇಟೆಡ್‌ ಕೋರ್ಸ್‌ಗಳು, ಡಿಜಿಟಲ್‌ ಮಾಧ್ಯಮ ಅಧ್ಯಯನ, ವೊಕೇಷನಲ್‌ ಕೋರ್ಸ್‌ಗಳನ್ನು ಆರಂಭಿಸಲು ವಿ.ವಿ ಯೋಜಿಸಿದೆ. 

ಸೆಂಟ್ರಲ್ ಕಾಲೇಜು ನಡೆದು ಬಂದ ಹಾದಿ

ಸೆಂಟ್ರಲ್‌ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. 1886ರಲ್ಲಿ ಆರಂಭವಾದ ಇದು, ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿತ್ತು. ದೇಶಕಂಡ ಮಹಾನ್‌ ವಿಜ್ಞಾನಿಗಳು, ವಿದ್ವಾಂಸರು, ಸಾಹಿತಿಗಳು ಇಲ್ಲಿ ಬೋಧನಾ ಕಾರ್ಯ ನಿರ್ವಹಿಸಿದ್ದಾರೆ. 1964ರಲ್ಲಿ ಇದು ಬೆಂಗಳೂರು ವಿಶ್ವವಿದ್ಯಾಲಯವಾಯಿತು.

ನಂತರ ವಿ.ವಿಯ ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳ ಪಿ.ಜಿ ಕೋರ್ಸ್‌ಗಳು ಇಲ್ಲಿಯೇ ನಡೆಯುತ್ತಿತ್ತು. ಜ್ಞಾನಭಾರತಿ ಆವರಣ ನಿರ್ಮಾಣವಾದ ನಂತರ ಒಂದೊಂದಾಗಿಯೇ ಹಲವು ವಿಭಾಗಗಳನ್ನು ಅಲ್ಲಿಗೆ ವರ್ಗಾಯಿಸಲಾಯಿತು. ವಿಜ್ಞಾನದ ಕೆಲವು ಮತ್ತು ವಾಣಿಜ್ಯ ವಿಷಯದ ವಿವಿಧ ಕೋರ್ಸ್‌ಗಳು ಸೆಂಟ್ರಲ್‌ ಕಾಲೇಜಿನಲ್ಲಿ ನಡೆಯುತ್ತಿದ್ದವು. ಇದೀಗ ಸೆಂಟ್ರಲ್‌ ಕಾಲೇಜು ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದಿದೆ. ಹಲವು ವರ್ಷಗಳ ನಂತರ ಇಲ್ಲಿ ಪುನಃ ಸಾಹಿತ್ಯ, ಕಲಾ, ಮಾನವಿಕ ವಿಷಯಗಳ ಕಲಿಕೆ ಮತ್ತು ಬೋಧನಾ ಚಟುವಟಿಕೆ ನಡೆಯಲಿದೆ.
***
ಜವಾಹರಲಾಲ್‌ ನೆಹರು ವಿ.ವಿ, ದೆಹಲಿ ವಿ.ವಿ, ನಿಯಾಸ್‌, ಐಸಾಕ್‌, ಗುಲ್ಬರ್ಗದಲ್ಲಿನ ಕೇಂದ್ರೀಯ ವಿ.ವಿಯ ಹಿರಿಯ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿ ವಿವಿಧ ವಿಷಯಗಳಲ್ಲಿನ ಪಠ್ಯಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಸ್ಥಳೀಯ ಮತ್ತು ಜಾಗತಿಕ ಮಟ್ಟದ ಜ್ಞಾನ ದೊರೆಯುವಂತೆ ಪಠ್ಯ ಸಿದ್ಧಪಡಿಸಲಾಗಿದೆ
– ಪ್ರೊ. ಎಸ್‌. ಜಾಫೆಟ್‌, ಕುಲಪತಿ, ಬಿಸಿಯು

ಪ್ರತಿಕ್ರಿಯಿಸಿ (+)