ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ನಿರ್ಲಕ್ಷ್ಯ ಧೋರಣೆ: ಗೊಂದಲದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು

ಪದೇಪದೇ ಪರಿಷ್ಕರಣೆಯಾಗುತ್ತಿರುವ ವೇಳಾಪಟ್ಟಿ
Last Updated 29 ಜೂನ್ 2019, 15:04 IST
ಅಕ್ಷರ ಗಾತ್ರ

ಬೆಂಗಳೂರು:ಪದೇಪದೇ ಪರೀಕ್ಷೆ ಮುಂದೂಡಿಕೆ, ಪರೀಕ್ಷಾ ದಿನಾಂಕದಲ್ಲಿ ಗೊಂದಲ, ಅಸಮರ್ಪಕ ವೇಳಾಪಟ್ಟಿ... ಇದು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಅಧಿಕಾರಿಗಳ ಕಾರ್ಯವೈಖರಿ. ಇದರಿಂದಾಗಿ ವಿದ್ಯಾರ್ಥಿಗಳು ಗಲಿಬಿಲಿಗೊಂಡಿದ್ದಾರೆ.

ಈ ಬಾರಿ ಸ್ನಾತಕೋತ್ತರ ವಿಭಾಗದ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿಯನ್ನು ಮೂರು ಬಾರಿ ಪರಿಷ್ಕರಣೆ ಮಾಡಲಾಗಿದೆ. ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಜುಲೈ 1ರಿಂದ ನಡೆಯಲಿದೆ ಎಂದು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ನಂತರ ಅದನ್ನು ಜುಲೈ 5ರಿಂದ ಎಂದು ಪರಿಷ್ಕರಿಸಲಾಯಿತು. ಆದರೆ, ಗಣಿತ ವಿಷಯಕ್ಕೆ ಸಂಬಂಧಿಸಿದ ವೇಳಾಪಟ್ಟಿಯಲ್ಲಿ ಜುಲೈ 10ರಿಂದ ಪರೀಕ್ಷೆ ಆರಂಭ ಎಂದು ಉಲ್ಲೇಖಿಸಲಾಗಿತ್ತು. ಇದರಲ್ಲಿ ಎರಡು ಕಡ್ಡಾಯ ವಿಷಯಗಳೇ (ಮೆಷರ್ ಆ್ಯಂಡ್ ಇಂಟಿಗ್ರೇಷನ್ ಮತ್ತು ಮ್ಯಾಥಮ್ಯಾಟಿಕಲ್ ಮೆಥಡ್ಸ್‌) ನಮೂದಾಗಿರಲಿಲ್ಲ! ಇದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿತು. ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾಲಯ ಜೂನ್ 28ರಂದು ಮತ್ತೆ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡಿದೆ.

2018ರಲ್ಲೂ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಹಲವು ಬಾರಿ ಮುಂದೂಡಲಾಗಿತ್ತು. ಬಳಿಕ 2019ರ ಜನವರಿ ಕೊನೆಯ ವಾರದಲ್ಲಿ ಆರಂಭವಾಗಿದ್ದವು.

ಪ್ರವೇಶಪತ್ರದಲ್ಲಿ ದಿನಾಂಕವೇ ಇರುವುದಿಲ್ಲ:‘ಕೊನೆಯ ಕ್ಷಣದವರೆಗೂ ಪರೀಕ್ಷಾ ದಿನಾಂಕದ ಬಗ್ಗೆ ಅಂತಿಮ ನಿರ್ಧಾರವಾಗಿರುವುದಿಲ್ಲ. ಹೀಗಾಗಿ ದಿನಾಂಕ ನಮೂದಿಸದೆಯೇ ಪ್ರವೇಶ ಪತ್ರಗಳನ್ನು ವಿತರಿಸಿದ ಉದಾಹರಣೆಯೂ ಇದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. 2018ರ ಜುಲೈನಲ್ಲಿ ಮತ್ತು 2019ರ ಜನವರಿ ಮತ್ತು ಫೆಬ್ರುವರಿಯಲ್ಲಿ ನಡೆದ ಪರೀಕ್ಷೆಗಳಿಗೆ ದಿನಾಂಕ ನಮೂದಿಸದೆಯೇ ಹಾಲ್‌ ಟಿಕೆಟ್ ನೀಡಲಾಗಿತ್ತು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವಿದ್ಯಾರ್ಥಿಗಳು ತಿಳಿಸಿದರು.

ಫಲಿತಾಂಶವೂ ವಿಳಂಬ:2019ರ ಜನವರಿ–ಫೆಬ್ರುವರಿಯಲ್ಲಿ ನಡೆದ ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಜೂನ್ ಮಧ್ಯಭಾಗದಲ್ಲಿ. ಈ ವೇಳೆಯಲ್ಲಿ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವುದರಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವುದು, ಉತ್ತರಪತ್ರಿಕೆಯ ನಕಲು ಪ್ರತಿಗೆ ಮನವಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ತೊಡಕಾಗುತ್ತಿದೆ.

ಚುನಾವಣೆ, ರಜೆ ಕಾರಣ:ಈ ಬಾರಿ ಪರೀಕ್ಷೆ ಮತ್ತು ಫಲಿತಾಂಶ ವಿಳಂಬವಾಗಲು ಲೋಕಸಭೆ ಚುನಾವಣೆ ಮತ್ತು ಸಾಲು ಸಾಲು ಸರ್ಕಾರಿ ರಜೆಗಳೇ ಕಾರಣ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಪರೀಕ್ಷಾ ವೇಳಾಪಟ್ಟಿ ಗೊಂದಲದ ಹಾಗೂ ಪದೇ ಪದೇ ಮುಂದೂಡಿದ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.

‘ಪರೀಕ್ಷೆ ವಿಳಂಬದಿಂದ ಉದ್ಯೋಗಕ್ಕೂ ಧಕ್ಕೆ’

‘ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಈಗಾಗಲೇ ತರಗತಿಗಳು ಆರಂಭಗೊಂಡಿವೆ. ಸಾಮಾನ್ಯವಾಗಿ ರಾಜ್ಯದೆಲ್ಲೆಡೆ ಜೂನ್ ಅಂತ್ಯಕ್ಕೆ ಅಥವಾ ಜುಲೈ ಆರಂಭದಲ್ಲಿ ಪದವಿ ತರಗತಿಗಳೂ ಆರಂಭಗೊಂಡಿರುತ್ತವೆ. ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ನಮ್ಮ ವಿಶ್ವವಿದ್ಯಾಲಯದಲ್ಲಿ ಇನ್ನೂ ಪರೀಕ್ಷೆಗಳೇ ಮುಗಿದಿಲ್ಲ. ಹಾಗಾಗಿ ಉಪನ್ಯಾಸಕ ಹುದ್ದೆಗಳ ಅವಕಾಶ ಕೈತಪ್ಪಿದೆ’ ಎಂದು ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ‘ಪ್ರಜಾವಾಣಿ’ಬಳಿ ಅಳಲು ತೋಡಿಕೊಂಡರು.

ಮೊದಲ ಬಾರಿ ಬಿಡುಗಡೆಯಾದ ಪರೀಕ್ಷೆ ವೇಳಾಪಟ್ಟಿ
ಮೊದಲ ಬಾರಿ ಬಿಡುಗಡೆಯಾದ ಪರೀಕ್ಷೆ ವೇಳಾಪಟ್ಟಿ
ಗಣಿತ ವಿಷಯದಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ (2 ಕಡ್ಡಾಯ ವಿಷಯ ಕೈಬಿಟ್ಟಿರುವುದು)
ಗಣಿತ ವಿಷಯದಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ (2 ಕಡ್ಡಾಯ ವಿಷಯ ಕೈಬಿಟ್ಟಿರುವುದು)
ಮೂರನೇ ಬಾರಿ ಪ್ರಕಟಗೊಂಡ ವೇಳಾಪಟ್ಟಿ
ಮೂರನೇ ಬಾರಿ ಪ್ರಕಟಗೊಂಡ ವೇಳಾಪಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT