ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಕ್ಲರ್ಕ್‌ ಪರೀಕ್ಷೆ ಸಿದ್ಧತೆ ಹೇಗಿರಬೇಕು?

Last Updated 12 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಸಂಪಾದಿಸಬೇಕೆಂಬುದು ಬಹುತೇಕ ಪದವೀಧರರ ಕನಸು. ಬ್ಯಾಂಕಿಂಗ್ ಪರೀಕ್ಷೆ ಎಂದರೆ ಕಾಮರ್ಸ್ ಪದವೀಧರರಿಗೆ ಮೀಸಲು ಎಂಬ ಮನೋಭಾವದ ಕಾಲವೊಂದಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ವಿವಿಧ ಪದವಿಗಳನ್ನು ಹೊಂದಿದ ನೌಕರರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಣಸಿಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್‌ ಪದವೀಧರರು ಮಾತ್ರವಲ್ಲ, ಸ್ನಾತಕೋತ್ತರ ಪದವೀಧರರು ಕೂಡ ಬ್ಯಾಂಕಿಂಗ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವುದು ಹೊಸ ಬೆಳವಣಿಗೆ. ಇದಕ್ಕೆ ಕಾರಣ ಈ ಕ್ಷೇತ್ರದಲ್ಲಿರುವ ಉದ್ಯೋಗ ಭದ್ರತೆ.

ಪ್ರತಿವರ್ಷ ನಡೆಯುವ ಬ್ಯಾಂಕಿಂಗ್ ಪರೀಕ್ಷೆಗೆ ಎಂಟರಿಂದ ಒಂಬತ್ತು ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಲಕ್ಷಗಟ್ಟಲೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಾಗ ತಮ್ಮ ಬ್ಯಾಂಕ್‌ಗೆ ಅಗತ್ಯವಿರುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಜಕ್ಕೂ ಅತ್ಯಂತ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಐಬಿಪಿಎಸ್ ಹಲವಾರು ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ನೇಮಕಾತಿ ಪ್ರಕ್ರಿಯೆಯನ್ನು ನಿರ್ವಹಿಸುತ್ತಾ ಬಂದಿದೆ.

ಈ ವರ್ಷದ ಬಹುತೇಕ ಬ್ಯಾಂಕಿಂಗ್ ಪರೀಕ್ಷೆಗಳು ಮುಗಿದಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಡಿಸೆಂಬರ್‌ನಲ್ಲಿ ಜರುಗಲಿರುವ ಐಬಿಪಿಎಸ್ (ಸಿಆರ್‌ಪಿ) ಕ್ಲರ್ಕ್‌-IX ಈ ವರ್ಷದ ಕೊನೆಯ ಅವಕಾಶ. ಇದನ್ನು ಸದುಪಯೋಗಪಡಿಸಿಕೊಂಡು ಉದ್ಯೋಗ ಹೊಂದುವಲ್ಲಿ ಯಶಸ್ವಿಯಾಗುವುದು ಅಭ್ಯರ್ಥಿಯ ಜವಾಬ್ದಾರಿ.

ಈ ವರ್ಷದ ಎಸ್‌ಬಿಐ ಪ್ರೊಬೇಷನರಿ ಆಫೀಸರ್‌, ಎಸ್‌ಬಿಐ ಕ್ಲರ್ಕ್‌, ಆರ್‌ಆರ್‌ಬಿ ಪ್ರೊಬೇಷನರಿ ಆಫೀಸರ್‌ ಮತ್ತು ಕ್ಲರ್ಕ್‌, ಐಬಿಪಿಎಸ್‌ ಪ್ರೊಬೇಷನರಿ ಆಫೀಸರ್‌ ಹಾಗೂ ಎಲ್‌ಐಸಿ ಅಸಿಸ್ಟೆಂಟ್‌ ಪ್ರಿಲಿಮ್ಸ್‌ ಪರೀಕ್ಷೆಗಳು ಮುಕ್ತಾಯಗೊಂಡಿದ್ದು, ಅಲ್ಲಿ ಆಯ್ಕೆಗೊಂಡು ಐಬಿಪಿಎಸ್ ಪರೀಕ್ಷೆ ಬರೆಯಲು ಇಚ್ಛಿಸದ ಅಥವಾ ಪರೀಕ್ಷೆಯನ್ನು ಬರೆದು ಕೂಡ ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯನ್ನು ಎರಡನೆಯ ಆಯ್ಕೆಯಾಗಿ ಇಟ್ಟುಕೊಂಡ ಅಭ್ಯರ್ಥಿಗಳಿಂದಾಗಿ ಸ್ಪರ್ಧೆ ಕೊಂಚ ಕಡಿಮೆಯಾಗಬಹುದು ಎಂಬುದು ಒಂದೆಡೆ. ಮತ್ತೊಂದೆಡೆ ಈ ಎಲ್ಲ ಪರೀಕ್ಷೆಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮೇನ್ಸ್ ಪರೀಕ್ಷೆಯಲ್ಲಿ ವಿಫಲಗೊಂಡಿರುವ ಹಾಗೂ ಪ್ರಿಲಿಮ್ಸ್ ಅಥವಾ ಮೇನ್ಸ್ ಪರೀಕ್ಷೆಗಳಲ್ಲಿ 0.25– 2 ಅಂಕಗಳಿಂದ ಹೊರಗುಳಿದ ಅಭ್ಯರ್ಥಿಗಳು ತಮ್ಮ ಪರೀಕ್ಷೆ ಅಥವಾ ಫಲಿತಾಂಶದ ನಂತರ ಆತ್ಮವಿಶ್ವಾಸ ಕಳೆದುಕೊಳ್ಳದೆ, ಅಧ್ಯಯನ ವಿಶ್ರಾಂತಿ ತೆಗೆದುಕೊಳ್ಳದೆ ತಮ್ಮ ತಯಾರಿಯನ್ನು ನಿರಂತರವಾಗಿ ಮುಂದುವರಿಸಿರುತ್ತಾರೆ. ಹೀಗಾಗಿ ಇಂತಹ ಅಭ್ಯರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಸ್ಪರ್ಧೆ ನೀಡುವ ಸಾಧ್ಯತೆ ಸಹಜವಾಗಿಯೇ ಹೆಚ್ಚು. ಹಾಗೆಂದ ಮಾತ್ರಕ್ಕೆ ಮೊದಲ ಬಾರಿಗೆ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವುದು ಸಾಧ್ಯವಿಲ್ಲ ಎಂದರ್ಥವಲ್ಲ. ಇದು ಸಂಪೂರ್ಣ ಆಯಾ ವಿದ್ಯಾರ್ಥಿಯ ಸ್ಮಾರ್ಟ್‌ವರ್ಕ್ ತಯಾರಿ ಹಾಗೂ ಪರೀಕ್ಷಾ ತಂತ್ರದ ಮೇಲೆ ಅವಲಂಬಿತವಾಗಿರುವಂತಹುದು.

ಖಾಸಗಿ ಕೆಲಸ ಹಾಗೂ ಪರೀಕ್ಷಾ ತಯಾರಿ

ಬಹುತೇಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಅಥವಾ ಬೋಧನಾ ವೃತ್ತಿಯಲ್ಲಿದ್ದುಕೊಂಡು ಜೊತೆಜೊತೆಗೆ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಇರುತ್ತಾರೆ. ಇದು ಬಹುತೇಕ ಕಷ್ಟವಾದರೂ ದೊರಕುವ ಸಮಯವನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಂಡು ಕಠಿಣ ಶ್ರಮದ ಜೊತೆಗೆ ಸ್ಮಾರ್ಟ್‌ವರ್ಕ್ ನಡೆಸಿದರೆ ಖಂಡಿತ ನಿರೀಕ್ಷಿತ ಫಲಿತಾಂಶ ಸಾಧ್ಯ. ಪ್ರಿಲಿಮ್ಸ್ ಪರೀಕ್ಷೆಗಾಗಿ ಉದ್ಯೋಗದ ಜೊತೆ ಜೊತೆಗೆ ತಯಾರಿ ನಡೆಸಿ ಮೇನ್ಸ್ ಪರೀಕ್ಷೆಗಾಗಿ 15– 20 ದಿನ ರಜೆ ತೆಗೆದುಕೊಂಡು ಅಧ್ಯಯನ ನಡೆಸಬಹುದು ಹಾಗೂ ಉದ್ಯೋಗದಲ್ಲಿ ದೊರಕುವ ಅತಿ ಕಡಿಮೆ ಕಾಲಾವಕಾಶದ ವಿರಾಮವನ್ನು ಸಹ ಸದ್ಬಳಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಜನರಲ್‌ ನಾಲೆಡ್ಜ್‌ ವೊಕೆಬಲರಿ ಮ್ಯಾಥ್ಸ್‌ನಂತಹ ವಿಷಯಕ್ಕೆ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ದೊರಕುವ ಸಮಯದಲ್ಲಿ ಅಭ್ಯಸಿಸಬೇಕು.

* ಈ ಅಭ್ಯರ್ಥಿಗಳು ವೀಕೆಂಡ್‌ನಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ದೊರಕುವ ರಜೆಗಳನ್ನು ಪರೀಕ್ಷಾ ತಯಾರಿಗಾಗಿ ಮೀಸಲಿಡಬೇಕು.

* ನಿಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ನೀವು ದುರ್ಬಲರಾಗಿರುವ ವಿಷಯಕ್ಕೆ ಸಂಬಂಧಿಸಿದಂತಹ ಪುಸ್ತಕಗಳ ಖರೀದಿಗೆ ಬಳಸಿಕೊಳ್ಳಬೇಕು.

* ನಾಲ್ಕರಿಂದ ಐದು ಸಂಸ್ಥೆಗಳ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

* ಅವಶ್ಯವೆನಿಸಿದರೆ ಕೋಚಿಂಗ್ ಕ್ಲಾಸ್‌ಗಳನ್ನು ತೆಗೆದುಕೊಳ್ಳಬಹುದು. ಇದು ವಿದ್ಯಾರ್ಥಿಯ ಅಗತ್ಯ ಹಾಗೂ ಪರಿಣತಿಯನ್ನು ಅವಲಂಬಿಸಿದೆ.

ಸಮಯ ನಿರ್ವಹಣೆ

ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಸಂಪೂರ್ಣ ಸಮಯವನ್ನು ಪರೀಕ್ಷಾ ಸಿದ್ಧತೆಗೇ ಮೀಸಲಿಟ್ಟ ಅಭ್ಯರ್ಥಿಗಳು ಬಹಳಷ್ಟು ಸಂಖ್ಯೆಯಲ್ಲಿರುತ್ತಾರೆ. ಹಾಗೆಂದ ಮಾತ್ರಕ್ಕೆ ಸರಿಯಾದ ವೇಳಾಪಟ್ಟಿ ಇಲ್ಲದೆ ಅಥವಾ ವಿಶ್ರಾಂತಿ ಹಾಗೂ ಏಕಾಗ್ರತೆ ಇಲ್ಲದೆ, ಒತ್ತಡದಲ್ಲಿ ತಯಾರಿ ನಡೆಸಿದರೆ ದಿನದ ಎಷ್ಟೇ ಗಂಟೆ ಮೀಸಲಿಟ್ಟರೂ ಸಾಫಲ್ಯ ಅಸಾಧ್ಯ. ಬ್ಯಾಂಕಿಂಗ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಡುವ ಅತಿ ದೊಡ್ಡ ತಪ್ಪು ಎಂದರೆ ಅದು ಪ್ರಿಲಿಮ್ಸ್ ಪರೀಕ್ಷೆಗೆ ಒಂದು ಸಲ ಹಾಗೂ ಮೆನ್ಸ್ ಪರೀಕ್ಷೆಗೆ ಒಂದು ಸಲ ತಯಾರಿ ನಡೆಸುವುದು. ಈ ತಂತ್ರ ಯಶಸ್ಸು ನೀಡುವುದು ಅಸಾಧ್ಯ.

ಪ್ರಿಲಿಮ್ಸ್‌ನಲ್ಲಿ ಕೇಳಲಾಗುವ ಪ್ರಶ್ನೆಗಳು ವೇಗ ಹಾಗೂ ನಿಖರತೆ ಆಧಾರಿತವಾಗಿರುವ ಅತ್ಯಂತ ಸುಲಭ ಪ್ರಶ್ನೆಗಳು ಹಾಗೂ ಈ ಪರೀಕ್ಷೆ ಕೇವಲ ಮೇನ್ಸ್ ಪರೀಕ್ಷೆಗೆ ಅರ್ಹತಾ ಪರೀಕ್ಷೆ. ಅಲ್ಲದೆ ಶೇ 25ರಷ್ಟು ಋಣಾತ್ಮಕ ಅಂಕದ ಪರಿಣಾಮ ವೇಗ ಹಾಗೂ ನಿಖರತೆಗೆ ಪ್ರಾಮುಖ್ಯತೆ ನೀಡಿ ಉತ್ತರಿಸಿದ ಅಭ್ಯರ್ಥಿಗಳು ಮೆನ್ಸ್ ಪರೀಕ್ಷೆಗೆ ಅರ್ಹರಾಗುತ್ತಾರೆ. ಇದಲ್ಲದೆ ಪ್ರಿಲಿಮ್ಸ್‌ನ ಫಲಿತಾಂಶದ ಹಾಗೂ ಮೇನ್ಸ್‌ನ ಪರೀಕ್ಷಾ ದಿನದ ಅವಧಿ ತುಂಬಾ ಕಡಿಮೆ. ಈ ಅವಧಿಯಲ್ಲಿ ಮೇನ್ಸ್ ಲೆವಲ್‌ನ ಅಥವಾ ಕ್ಲಿಷ್ಟಕರ ಹಾಗೂ ಕಾನ್ಸೆಪ್ಟ್ ಆಧಾರಿತ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಅಭ್ಯಸಿಸುವುದು ಅಸಾಧ್ಯ. ಅಲ್ಲದೇ ಶಾರ್ಟ್‌ಕಟ್‌ಗಳು ಮೇನ್ಸ್ ಪರೀಕ್ಷೆಯಲ್ಲಿ ಖಂಡಿತ ಸಹಾಯ ಮಾಡಲಾರವು. ಆದ್ದರಿಂದ ಮೇನ್ಸ್ ಪರೀಕ್ಷೆಗೆ ಈಗಿನಿಂದಲೇ ಅಭ್ಯಾಸ ನಡೆಸುವುದು ಸೂಕ್ತ. ಇದು ಪ್ರಿಲಿಮ್ಸ್ ಪರೀಕ್ಷೆಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ವಿಶ್ವಾಸವನ್ನು ಹೆಚ್ಚಿಸಿ ನಿಮ್ಮ ಪರೀಕ್ಷೆಯ ನಂತರ ಫಲಿತಾಂಶದ ಅಂದಾಜಿಗೆ ಸಹಾಯವಾಗುತ್ತದೆ. ಹೀಗಾಗಿ ನೀವು ಮೇನ್ಸ್ ಪರೀಕ್ಷಾ ತಯಾರಿಗೆ ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯದೆ ಸಿದ್ಧತೆ ನಡೆಸಿ.

ಪರೀಕ್ಷಾ ಭಯ ದೂರವಿರಿಸಿ

ಪ್ರತಿ ಅಣಕು ಪರೀಕ್ಷೆ ತೆಗೆದುಕೊಳ್ಳುವಾಗ ನಿಜವಾದ ಪರೀಕ್ಷೆ ಎಂದು ಪರಿಭಾವಿಸಿ. ಇದರಿಂದಾಗಿ ಅಣಕು ಪರೀಕ್ಷೆಗಳಲ್ಲಿ ಅಂಕಗಳು ಸುಧಾರಿಸುತ್ತವೆ ಹಾಗೂ ನಿಜವಾದ ಪರೀಕ್ಷೆಯಲ್ಲಿ ಹೆದರಿಕೆ, ಹಿಂಜರಿಕೆ ದೂರವಾಗುತ್ತದೆ. ಹಾಗೆಯೇ ನಿಜವಾದ ಪರೀಕ್ಷೆಯನ್ನು ಇದೊಂದು ಅಣಕು ಪರೀಕ್ಷೆ ಎಂದು ಪರಿಭಾವಿಸಿದರೆ ಪರೀಕ್ಷಾ ಭಯ ದೂರವಾಗಿ ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತದೆ. ಕೆಲವೊಮ್ಮೆ ಪರೀಕ್ಷಾ ಭಯ ಎಷ್ಟೊಂದು ಋಣಾತ್ಮಕ ಪರಿಣಾಮ ಬೀರುತ್ತದೆ ಎಂದರೆ ವಿದ್ಯಾರ್ಥಿಯು ಕೇವಲ ಕಠಿಣ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೊನೆಯಲ್ಲಿರುವ ಅತಿ ಸರಳ ಪ್ರಶ್ನೆಗಳ ಹತ್ತಿರ ಹೋಗಲಾರದೇ ಪರೀಕ್ಷೆ ಪೂರ್ಣಗೊಳಿಸಿ ಸ್ಪರ್ಧೆಯಿಂದ ಹಿಂದೆ ಉಳಿಯಬೇಕಾಗುತ್ತದೆ.

ಅಭ್ಯರ್ಥಿ ಪರೀಕ್ಷೆಗೆ ತನ್ನದೇ ತಂತ್ರಗಳನ್ನು ತಯಾರಿಸಿ ಅವುಗಳನ್ನು ಕಾರ್ಯಗತಗೊಳಿಸಿಕೊಳ್ಳಬೇಕು. ಈಗ ಪರೀಕ್ಷೆಗೆ ಕಡಿಮೆ ಸಮಯ ಇರುವುದರಿಂದ ಪರೀಕ್ಷೆ ಆಧಾರಿತ ತಯಾರಿ ನಡೆಸುವುದು ಸೂಕ್ತ ಹಾಗೂ ಅತಿ ಮುಖ್ಯವಾಗಿ ಈ ವರ್ಷದ ಎಲ್ಲ ಹಾಗೂ ಕಳೆದೆರಡು ವರ್ಷಗಳ ಎಲ್ಲಾ ಬ್ಯಾಂಕ್ ಪರೀಕ್ಷೆಗಳು, ಮೆಮೊರಿ ಆಧಾರಿತ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ. ಇದು ನಿಮಗೆ ಪರೀಕ್ಷೆ ಬಗ್ಗೆ ಕಲ್ಪನೆ ತಂದು ಕೊಡುವುದಲ್ಲದೆ ಕಟ್-ಆಫ್ ಅಷ್ಟೊಂದು ಹೆಚ್ಚಿರುವ ಕಾರಣ ಏನೆಂಬುದನ್ನು ತಿಳಿಸಿಕೊಡುತ್ತದೆ. ಪರೀಕ್ಷಾ ದಿನದಂದು ವಿಶ್ಲೇಷಣೆ ಮಾಡುತ್ತ ಕೂರದೇ ಆದಷ್ಟು ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಿ.

ಪ್ರಶ್ನೆಗಳ ಆಯ್ಕೆ ಕೌಶಲ

ಈ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳು ಇರುವುದರಿಂದ ಹಾಗೂ ಅರವತ್ತು ನಿಮಿಷಗಳಲ್ಲಿ ನೂರು ಪ್ರಶ್ನೆಗಳಿಗೆ ಉತ್ತರಿಸುವುದು ಅಸಾಧ್ಯ. ಹೀಗಾಗಿ ಅಭ್ಯರ್ಥಿಯ ಪ್ರಶ್ನೆಗಳ ಆಯ್ಕೆಯ ಕೌಶಲ ಬಹುಮುಖ್ಯ ಪಾತ್ರ ವಹಿಸುತ್ತದೆ. ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಶ್ನೆಗಳನ್ನು ಬಿಟ್ಟು ಬಿಡುವುದು ಸೂಕ್ತ. ಈ ಜ್ಞಾನ ಹೆಚ್ಚೆಚ್ಚು ಅಣಕು ಪರೀಕ್ಷೆಗಳನ್ನು ತೆಗೆದುಕೊಂಡು ಅದರ ವಿಮರ್ಶೆ ನಡೆಸುವುದರ ಮೂಲಕ ದೊರಕುತ್ತದೆ. ಇದಲ್ಲದೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಹಾಗೂ ರೀಸನಿಂಗ್ ವಿಭಾಗಗಳಲ್ಲೂ ಸಹ ‘ನೋ ಪೆನ್ ನೋ ಪೇಪರ್’ ರೀತಿಯ ಹಲವು ಪ್ರಶ್ನೆಗಳು ಇರುತ್ತವೆ. ಈ ಎಲ್ಲ ಪ್ರಶ್ನೆಗಳನ್ನು ಉತ್ತರಿಸುವುದು ಮುಖ್ಯ.

ಅಭ್ಯರ್ಥಿಯು ಯಾವುದೇ ಸೆಕ್ಷನ್ ಪ್ರಾರಂಭವಾದ ತಕ್ಷಣ ಮೊದಲ 20– 30 ಸೆಕೆಂಡ್‌ಗಳಲ್ಲಿ ಆ ಸೆಕ್ಷನ್‌ನಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಪೂರ್ತಿ ಸರಳ ಪ್ರಶ್ನೆಗಳು ಉಳಿದುಕೊಂಡು ಅವುಗಳನ್ನು ಉತ್ತರಿಸದೇ ಹೋಗುವ ಸಾಧ್ಯತೆಯೇ ಹೆಚ್ಚು. ಜೊತೆಗೆ ಒಂದೇ ಪ್ರಶ್ನೆಯ ಮೇಲೆ ಹೆಚ್ಚು ಸಮಯ ಮೀಸಲಿಡುವುದು ಕೂಡ ಅನಗತ್ಯ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಬಹುತೇಕ ಸರಳ ಪ್ರಶ್ನೆಗಳು ಇರುವುದರಿಂದ ತ್ವರಿತವಾಗಿ ಹಾಗೂ ನಿಖರತೆಯೊಂದಿಗೆ ಹೆಚ್ಚು ಪ್ರಶ್ನೆಗಳನ್ನು ಉತ್ತರಿಸುವುದು ಸೂಕ್ತ. ಒಂದು ವೇಳೆ ಪರೀಕ್ಷೆ ಬರೆಯುವಾಗ ಪ್ರಶ್ನೆಗಳು ಕಷ್ಟವೆನಿಸಿದರೆ ನರ್ವಸ್ ಆಗದಿರಿ. ಪರೀಕ್ಷೆ ಕಷ್ಟ ಎಂದರೆ ಎಲ್ಲರಿಗೂ ಕಷ್ಟ ಹಾಗೂ ಸುಲಭ ಎಂದರೆ ಎಲ್ಲರಿಗೂ ಸುಲಭ ಎಂಬುದು ನೆನಪಿನಲ್ಲಿರಲಿ. ಅನಾವಶ್ಯಕವಾಗಿ ಪರೀಕ್ಷೆಯಲ್ಲಿ ನರ್ವಸ್ ಆಗಿ ಉಳಿದ ಸುಲಭ ಪ್ರಶ್ನೆಗಳನ್ನು ಸಹ ಉತ್ತರಿಸದೇ ಬರಬೇಡಿ. ಇದಲ್ಲದೆ ಪ್ರಶ್ನೆಗಳಿಗೆ ಉತ್ತರಿಸಿದ ಸಂಖ್ಯೆ ಅತಿ ಕಡಿಮೆ ಎನಿಸಿದರೆ ‘ಆಪ್ಷನ್ ಎಲಿಮಿನೇಷನ್’ ಸಹಾಯ ತೆಗೆದುಕೊಳ್ಳಿ. ಬದಲಾಗಿ ಅಂದಾಜು ಉತ್ತರದ ಆಯ್ಕೆ ಮಾಡದಿರಿ.

ಪ್ರಶ್ನೆಗಳಿಗೆ ಉತ್ತರಿಸುವ ಕ್ರಮ

ಮೊದಲು ಐದು ಅಂಕಗಳ ಪ್ರಶ್ನೆಗಳು. ನಂತರ 3– 4 ಅಂಕ, ಕೊನೆಗೆ ಒಂದು ಅಂಕದ ಪ್ರಶ್ನೆಗಳಿಗೆ ಉತ್ತರಿಸಿ. ಕಾರಣ ಮೊದಲು ಐದು ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಿದರೆ ಕೊನೆಯಲ್ಲಿ ದೊರಕುವ ಎರಡರಿಂದ ಮೂರು ನಿಮಿಷಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಒಂದು ಅಥವಾ ಎರಡು ಅಂಕಗಳ ಸಮಸ್ಯೆಗಳನ್ನು ಬಿಡಿಸಬಹುದು. ಆದರೆ ಮೊದಲೇ ಒಂದರಿಂದ ಎರಡು ಅಂಕಗಳ ಸಮಸ್ಯೆಗಳನ್ನು ಬಿಡಿಸಿದಾಗ ಕೊನೆಯಲ್ಲಿ 8 ನಿಮಿಷ ಉಳಿಯಿತು ಎಂದಿಟ್ಟುಕೊಳ್ಳಿ. ಈ ಸಮಯದಲ್ಲಿ ಒಂದು 5 ಅಂಕದ ಪ್ರಶ್ನೆಗಳನ್ನು ಪೂರ್ತಿಗೊಳಿಸಿ, ಕೊನೆಗೆ ಉಳಿದ ಮೂರು ನಾಲ್ಕು ನಿಮಿಷಗಳಲ್ಲಿ ಮತ್ತೊಂದು 5 ಅಂಕದ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಸಾಧ್ಯ. ಒಂದು ವೇಳೆ ಪ್ರಶ್ನೆಯನ್ನು ಪೂರ್ತಿ ಉತ್ತರಿಸಿದರೂ ಸ್ಕ್ರೀನ್‌ನ ಮೇಲೆ ಮಾರ್ಕ್ ಮಾಡಲು ವಿಫಲವಾಗಬಹುದು. ಹೀಗಾಗಿ ಈ ಕೊನೆಯ ಮೂರು ನಿಮಿಷಗಳು ವ್ಯರ್ಥವಾಗಬಹುದು. ಆದ್ದರಿಂದ ಕ್ರಮವಾಗಿ ಮೊದಲು 5 ಅಂಕಗಳು, ನಂತರ ಎರಡರಿಂದ ಮೂರು ಅಂಕಗಳು, ಕೊನೆಗೆ ಒಂದು ಅಂಕದ ಪ್ರಶ್ನೆಗಳಿಗೆ ಉತ್ತರಿಸಿ.

ಅಣಕು ಪರೀಕ್ಷೆ

ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುವಾಗ ಈ ಅವಕಾಶ ಕಳೆದುಕೊಂಡರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಸಂಪಾದಿಸಲು ಮತ್ತೊಂದು ವರ್ಷ ಕಾಯಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡರೆ ಸ್ವಾಭಾವಿಕವಾಗಿ ಪರೀಕ್ಷಾ ತಯಾರಿಯನ್ನು ಗಂಭೀರವಾಗಿ ನಡೆಸಬಹುದು. ಪರೀಕ್ಷೆಗೆ ಸಮರ್ಪಣೆ, ಜಾಣ ನಡೆ, ದೃಢ ಸಂಕಲ್ಪ, ಕಾರ್ಯವಿಧಾನ ಅತ್ಯಗತ್ಯ. ಅಭ್ಯಾಸದ ವೇಳಾಪಟ್ಟಿ ಅನುಕರಣೆ ಮಾಡುವುದಕ್ಕಿಂತ ಸ್ವತಃ ತಯಾರಿಸುವುದು ಉತ್ತಮ. ನಿತ್ಯ ರಾತ್ರಿಯ 8 ಗಂಟೆಗಳನ್ನು ನಿದ್ರೆಗೆ ಮೀಸಲಿರಿಸಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ತಯಾರಿಸುವುದು ಉತ್ತಮ. ಒಂದು ದಿನಕ್ಕೆ ಒಂದೇ ವಿಷಯವೆಂಬಂತೆ ವೇಳಾಪಟ್ಟಿ ತಯಾರಿಸದಿರಿ ಹಾಗೂ ವೇಳಾಪಟ್ಟಿಯಲ್ಲಿ ಪ್ರತಿನಿತ್ಯ ಒಂದು ಅಥವಾ ಕನಿಷ್ಠ ಪಕ್ಷ ಎರಡು ದಿನಕ್ಕೊಂದು ಪೂರ್ಣ ಪ್ರಮಾಣದ ಅಣಕು ಪರೀಕ್ಷೆ ವಿಶ್ಲೇಷಣೆಯ ಜೊತೆಗೆ ಸೇರಿರಲಿ.

ವಿಶ್ಲೇಷಣೆ ಇಲ್ಲದೆ ನೂರಾರು ಅಣಕು ಪರೀಕ್ಷೆ ತೆಗೆದುಕೊಂಡರೂ ಅದು ಸಂಪೂರ್ಣ ನಿರರ್ಥಕ. ಹೀಗಾಗಿ ಒಂದು ಗಂಟೆಯ ಅಣಕು ಪರೀಕ್ಷೆಯ ನಂತರ ಕನಿಷ್ಠ ಎರಡು ಗಂಟೆಗೆ ಆ ಪರೀಕ್ಷೆಯ ವಿಶ್ಲೇಷಣೆ ನಡೆಸಬೇಕು. ಇದರಿಂದ ನಿಮ್ಮಲ್ಲಿರುವ ಪ್ರಬಲ ಹಾಗೂ ದುರ್ಬಲ ಅಂಶಗಳ ಬಗ್ಗೆ ತಿಳಿದುಕೊಳ್ಳಬಹುದು. ನಂತರ ದುರ್ಬಲ ಅಂಶಗಳ ಅಧ್ಯಯನ ನಡೆಸಿ ಹೆಚ್ಚು ಅಂಕ ಗಳಿಸಬಹುದು. ಅಲ್ಲದೆ ಒಂದು ಸಮಸ್ಯೆಯನ್ನು ಹಲವಾರು ವಿಧಾನಗಳಲ್ಲಿ ಬಿಡಿಸಲು ಸಾಧ್ಯವಿರುವುದರಿಂದ ನೀವು ಬಿಡಿಸಿದ ವಿಧಾನ ಕ್ಲಿಷ್ಟಕರವಾಗಿದ್ದು ವಿಶ್ಲೇಷಣೆಯಲ್ಲಿ ದೊರಕಿದ ವಿಧಾನ ಸುಲಭವಾಗಿದ್ದರೆ ಅದನ್ನು ಅನುಸರಿಸಬಹುದು. ಹೀಗೆ ಇನ್ನೂ ಅನೇಕ ಪ್ರಯೋಜನಗಳು ಅಣಕು ಪರೀಕ್ಷೆಯ ಸಹಾಯದಿಂದ ದೊರಕುತ್ತವೆ. ಹೀಗಾಗಿ ಪರೀಕ್ಷೆಯ ಕೊನೆಯ ದಿನದವರೆಗೂ ಅಣಕು ಪರೀಕ್ಷೆ ತೆಗೆದುಕೊಳ್ಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT