ಮಂಗಳವಾರ, ನವೆಂಬರ್ 19, 2019
23 °C

ಬಿ.ಸಿ.ಎ: ಸರ್ಕಾರಿ ಉದ್ಯೋಗ ಲಭ್ಯವೇ?

Published:
Updated:
Prajavani

ನನ್ನದು ಬಿ.ಸಿ.ಎ. ಈ ವರ್ಷವೇ ಮುಗಿದಿದೆ. ಮುಂದೆ ನಾನು ಸರ್ಕಾರಿ ನೌಕರಿಗೆ ಏನು ಮಾಡಬೇಕು? ಎಂ.ಸಿ.ಎ. (ಸಿ.ಎಸ್.)  ಮತ್ತು ಮುಂದೆ ಬಿ.ಎಡ್. ಮಾಡಿಕೊಂಡರೆ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಕರ ನೇಮಕಾತಿಯಲ್ಲಿ ಕಂಪ್ಯೂಟರ್‌ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ನಾನು ಈಗ ಏನು ಮಾಡಲಿ? ಖಾಸಗಿ ಕಂಪನಿಗೆ ಹೋಗಲು ಇಷ್ಟ ಇಲ್ಲ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕನಾಗಬೇಕೆಂದರೆ ಏನು ಮಾಡಬೇಕು?
-ರಮೇಶ್ ಗೌಡರ್, ಊರು ಬೇಡ

ರಮೇಶ್, ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಫ್ರೌಢ ಶಾಲಾ ಹಂತದಲ್ಲಿ ಕಲಿಸ್ಪಡುವ ವಿಷಯಗಳನ್ನು ಪದವಿ ಹಂತದಲ್ಲಿ ಕಲಿತವರು ಮಾತ್ರ ಬಿ.ಎಡ್. ಮಾಡುವ ಅವಕಾಶ ಇತ್ತು. ಅಂದರೆ ಸಮಾಜ ವಿಜ್ಞಾನ, ವಿಜ್ಞಾನ, ಭಾಷೆ ಮತ್ತು ಗಣಿತ ವಿಷಯಗಳು. (ಬಿ.ಎಸ್‌ಸಿ., ಬಿ.ಎಡ್. ಮತ್ತು ಬಿ.ಎ., ಬಿ.ಎಡ್.) ಅವರು ಬಿ.ಎಡ್. ಮಾಡಿದ ನಂತರ ತಾವು ಪದವಿಯಲ್ಲಿ, ಮೇಜರ್ ಆಗಿ ಕಲಿತ ವಿಷಯದಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಅವಕಾಶ ಸಿಗುತ್ತಿತ್ತು. ಮುಂದೆ ಪಿ.ಯು.ಸಿ. ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯವಾಗಿ ಬಿ.ಎಡ್. ಹೊಂದಿರಬೇಕು ಎಂದು ತಿದ್ದುಪಡಿ ಆದ ನಂತರ ಕಾಮರ್ಸ್ ಸ್ನಾತಕೋತ್ತರ ಪದವಿಧರರು ಕೂಡ ಬಿ.ಎಡ್. ಮಾಡಲು ಅವಕಾಶ ಕಲ್ಪಿಸಲಾಯಿತು. ಆದರೆ ಕಂಪ್ಯೂಟರ್ ಪದವಿ/ಸ್ನಾತಕೋತ್ತರ ಪದವಿಧರರು ಮಾಡಬಹುದೇ ಇಲ್ಲವೇ ಎನ್ನುವುದು ನಿಖರವಾಗಿ ಗೊತ್ತಿಲ್ಲದೆ ಇರುವುದರಿಂದ ನಿಮ್ಮ ಹತ್ತಿರದ ಬಿ.ಎಡ್. ಕಾಲೇಜನ್ನು ಸಂಪರ್ಕಸಿ ವಿಚಾರಿಸಿ.

ಸಧ್ಯ, ಕರ್ನಾಟಕದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ನೇಮಕಾತಿಯ ವ್ಯವಸ್ಥೆ ಇಲ್ಲ. ನೀವು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಬೇಕು ಎಂದು ಬಯಸಿದಲ್ಲಿ ಪಿ.ಯು.ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಬಹುದು. 2015 ರ ಪಿ.ಯು. ಉಪನ್ಯಾಸಕರ ನೇಮಕಾತಿಯಲ್ಲಿ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರಾಗಲು ಎಂ.ಸಿ.ಎ. ಅಥವಾ ಬಿ.ಟೆಕ್. ಅಥವಾ ಎಂ. ಟೆಕ್, ಅಥವಾ ಎಂ.ಎಸ್‌ಸಿ. ಕಂಪ್ಯೂಟರ್ ಸೈನ್ಸ್ ಪದವಿ ಹೊಂದಿರಬೇಕೆಂದು ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಎಂ.ಸಿ.ಎ. ಮತ್ತು ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಹಾಗಾಗಿ ನೀವು ಪಿ.ಯು., ಪದವಿ ಅಥವಾ ಸ್ನಾತಕೋತ್ತರ – ಯಾವುದೇ ಹಂತದಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇರಬೇಕಾದರೆ ಬಿ.ಸಿ.ಎ. ನಂತರ ಎಂ.ಸಿ.ಎ. ಮಾಡಬೇಕು ಮತ್ತು ಯು.ಜಿ.ಸಿ. ನಡೆಸುವ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಸಧ್ಯ ಉತ್ತಮವಾಗಿರುವ ಎಂ.ಸಿ.ಎ. ಕಾಲೇಜನ್ನು ಆಯ್ದುಕೊಂಡು ಶಿಕ್ಷಣ ಪ್ರಾರಂಭಿಸಿ. ಸ್ನಾತಕೋತ್ತರದ ಅಂತಿಮ ವರ್ಷದಲ್ಲಿರುವಾಗ ನೆಟ್ ಪರೀಕ್ಷೆಗೆ ತಯಾರಿ ನಡೆಸಿ ಬರೆಯಬಹುದು. ಪಿ.ಯು. ಉಪನ್ಯಾಸಕರಾಗಲು ಬಿ.ಎಡ್. ಕಡ್ಡಾಯವಾದರೆ ಅದನ್ನೂ ಮಾಡಿಕೊಳ್ಳಬೇಕಾಗುತ್ತದೆ.

ಸರ್ಕಾರಿ ನೇಮಕಾತಿಗಳಿಗೆ ಬಹಳ ಸಮಯ ಮತ್ತು ಪ್ರಕ್ರಿಯೆಗಳು ಹಿಡಿಯುವುದರಿಂದ ಅದಕ್ಕಾಗಿ ಕಾಯುತ್ತ ಕುಳಿತುಕೊಳ್ಳುವುದಕ್ಕಿಂತ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತ ಅಥವಾ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತ, ಅನುಭವ ಪಡೆಯುತ್ತ ಸರ್ಕಾರಿ ಹುದ್ದೆಗಳಿಗೆ ಪ್ರಯತ್ನ ಮಾಡುವುದು ಉತ್ತಮ ಎಂದು ನನ್ನ ಅನಿಸಿಕೆ. ಈ ಕೆಲಸವು ನಿಮಗೆ ಕೆಲಸದ ಅನುಭವ ಜೊತೆಗೆ ಮುಂದೆ ಮಾಡಲಿರುವ ಸರ್ಕಾರಿ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೌಶಲವನ್ನು ಕಲಿಸುತ್ತದೆ. ಅಷ್ಟು ಮಾತ್ರವಲ್ಲದೆ ಸರ್ಕಾರಿ ಹುದ್ದೆಗಳು ಲಭ್ಯವಾಗದಿದ್ದಲ್ಲಿ ಭವಿಷ್ಯದಲ್ಲಿ ಉದ್ಯೋಗ ಭದ್ರತೆಯನ್ನು ನೀಡುತ್ತವೆ. ಆಲ್ ‍ದಿ ಬೆಸ್ಟ್.

ನಾನು ಎಂ.ಎ. ಎಕನಾಮಿಕ್ಸ್ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಅದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸುತ್ತಿದ್ದೇನೆ. ಆದರೆ ನನಗೆ ಈಗ ಈ ಎರಡರಲ್ಲಿ ಗೊಂದಲವಿದೆ. ಯಾವುದಾದರೂ ಒಂದನ್ನು ಆಯ್ದುಕೊಳ್ಳಲು ನಿರ್ಧರಿಸಿದ್ದೇನೆ. ಯಾವ ಕೋರ್ಸ್ ಆಯ್ದುಕೊಂಡರೆ ಉತ್ತಮ?

-ನವೀನ್ ಕುಮಾರ್, ಹುಲಿಯೂರ್ ದುರ್ಗ, ತುಮಕೂರು

ನವೀನ್, ನೀವು ಯಾವ ನಿರ್ದಿಷ್ಟ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಿ ಎಂದು ಹೇಳದೆ ಇರುವುದರಿಂದ ನಿಖರವಾಗಿ ಯಾವುದನ್ನು ಆಯ್ದುಕೊಳ್ಳಬಹುದು ಎಂದು ಹೇಳುವುದು ಕಷ್ಟವಾಗುತ್ತದೆ. ನೀವು ಈಗಾಗಲೇ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತ ಇರುವುದರಿಂದ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳುತ್ತೇನೆ ಎಂದು ನೋಡುವುದಕ್ಕಿಂತ ನಿಮ್ಮ ಎಂ. ಎ. ಎಕನಾಮಿಕ್ಸ್ ಈ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಮುಂದಿನ ವೃತ್ತಿ ಜೀವನಕ್ಕೆ ಹೇಗೆ ಪೂರಕವಾಗಿ ಸಹಾಯ ಮಾಡುತ್ತದೆ ಎಂದು ನೋಡುವುದು ಉತ್ತಮ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಹೆಚ್ಚಿನ ಪರಿಶ್ರಮ ಮತ್ತು ಸಮಯ ಹಿಡಿಯುವುದರಿಂದ ಕೆಲವೊಮ್ಮೆ ಇಂತಹುದೇ ಸರಿ ಎನ್ನುವ ಖಡಾಖಂಡಿತ ನಿರ್ಧಾರಕ್ಕೆ ಬರುವುದು ಕಷ್ಟ. ಅದಕ್ಕಾಗಿ ನಿಮ್ಮ ಎಂ.ಎ. ಶಿಕ್ಷಣವನ್ನು ಅರ್ಧಕ್ಕೆ ಬಿಡುವ ಬದಲು ಅದನ್ನು ಪೂರೈಸಿಕೊಂಡರೆ ಮುಂದೆ ಸ್ನಾತಕೋತ್ತರ ಪದವಿಯ ಆಧಾರದಲ್ಲಿ ಕರೆಯಲ್ಪಡುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪ್ರಯತ್ನಿಸಲು ಅವಕಾಶ ಲಭಿಸುತ್ತದೆ. ಎಂ.ಎ. ಎಕನಾಮಿಕ್ಸ್ ಮೇಲೆ ಕರೆಯಲ್ಪಡುವ ಬ್ಯಾಂಕಿಂಗ್ ಕ್ಷೇತ್ರದ ಹುದ್ದೆ, ಪ್ರಾಧ್ಯಾಪಕ ಹುದ್ದೆ ಇತ್ಯಾದಿಗಳಿಗೆ ಪ್ರಯತ್ನಿಸಬಹುದು. ಅಷ್ಟು ಮಾತ್ರವಲ್ಲದೆ ಶಿಕ್ಷಣ ಪಡೆಯುವ ಅವಕಾಶವಿದ್ದಾಗ ಆದಷ್ಟು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಅದು ಮುಂದಿನ ಉದ್ಯೋಗ ಮತ್ತು ಜ್ಞಾನ ಸಂಪಾದನೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ನಿಮ್ಮ ವಯಸ್ಸು, ಶಿಕ್ಷಣ ಮತ್ತು ಮುಂದಿನ ಅವಕಾಶಗಳನ್ನು ಪರಿಗಣಿಸಿ ನಿಮ್ಮ ಎಂ.ಎ. ಶಿಕ್ಷಣವನ್ನು ಮುಂದುವರೆಸುತ್ತ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯನ್ನು ಮಾಡಿಕೊಂಡು ಪರೀಕ್ಷೆಗಳನ್ನು ಎದುರಿಸಲು ಪ್ರಯತ್ನಿಸಿದರೆ ಉತ್ತಮ. ಸಾಮಾನ್ಯವಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ನೇಮಕಾತಿ ಅಧಿಸೂಚನೆಯಿಂದ ಹಿಡಿದು, ನೇಮಕಾತಿ ಪರೀಕ್ಷೆ, ಫಲಿತಾಂಶ, ಪರಿಶೀಲನೆ ಹಾಗೂ ಅಂತಿಮ ನೇಮಕಾತಿ ಆಗಲು ಕನಿಷ್ಠ ಒಂದರಿಂದ ಎರಡು ವರ್ಷ ತಗಲುತ್ತದೆ. ಆ ಸಮಯದಲ್ಲಿ ನಿಮ್ಮ ಸ್ನಾತಕೋತ್ತರ ಪದವಿಯು ಮುಗಿಯುತ್ತದೆ. ಒಂದು ವೇಳೆ ನೀವು ಯಾವುದಾದರೂ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನೇಮಕಾತಿ ಅಂತಿಮ ಆದಲ್ಲಿ, ಆ ಸಂದರ್ಭದಲ್ಲಿ ಎರಡರಲ್ಲಿ ಯಾವ ಆಯ್ಕೆ ಎಂದು ತಿರ್ಮಾನಿಸುವುದು ಹೆಚ್ಚು ಸೂಕ್ತ. ಹಾಗಾಗದಿದ್ದಲ್ಲಿ ನಿಮ್ಮ ಎಂ.ಎ. ಆದ ನಂತರ ಪೂರ್ಣ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬಹುದು. ಇವಿಷ್ಟು, ನನ್ನ ದೃಷ್ಟಿಕೋನವಾಗಿದ್ದು ನಿಮ್ಮ ಮುಂದಿನ ಗುರಿ, ಸಮಯ ಮತ್ತು ಪರಿಸ್ಥಿತಿಗಳನ್ನು ಅವಲೋಕಿಸಿ ನಿರ್ಧರಿಸಿ. ಆಲ್ ದಿ ಬೆಸ್ಟ್.

ನಾನು ಬಿ.ಎಸ್‌ಸಿ. ಕಂಪ್ಯೂಟರ್ ಸೈನ್ಸ್‌ 2ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನನಗೆ ಎಂ.ಎಸ್‌ಸಿ. ಮಾಡಲು ಆಸಕ್ತಿ ಇಲ್ಲ. ಯಾವುದಾದರೂ ಕೋರ್ಸ್ ಮಾಡುವ ಬಯಕೆ ಇದೆ. ನನ್ನ ಭವಿಷ್ಯದಲ್ಲಿ ಕೆಲಸಕ್ಕೆ ನೆರವಾಗುವ ಯಾವುದಾದರೂ ಕೋರ್ಸ್‌ಗಳ ಬಗ್ಗೆ ತಿಳಿಸಿ.

-ಗಂಗಾ ಇಂಚರ, ಊರು ಬೇಡ

ಗಂಗಾ ಇಂಚರ, ಕಂಪ್ಯೂಟರ್ ಸೈನ್ಸ್‌ನಲ್ಲಿ ನೀವು ಪದವಿ ಶಿಕ್ಷಣ ಮಾಡುತ್ತಿರುವುದರಿಂದ ಅದೇ ಕ್ಷೇತ್ರಕ್ಕೆ ಸಂಬಂಧಿಸಿದ ಅಲ್ಪಾವಧಿ ಅಥವಾ ದೀರ್ಘಾವಧಿ ಕೋರ್ಸ್‌ಗಳನ್ನು ಮಾಡಬಹುದು. ದೀರ್ಘಾವಧಿ ಎಂದರೆ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಎಂ.ಸಿ.ಎ.) ಮಾಡಬಹುದು. ಅಲ್ಪಾವಧಿ ಉದ್ಯೋಗಾಧಾರಿತ ಕೋರ್ಸ್‌ಗಳಾದ ಜಾವಾ, ಗ್ರಾಫಿಕ್ ಡಿಸೈನ್, ವೆಬ್ ಡಿಸೈನಿಂಗ್, ಇ-ಕಾಮರ್ಸ್, ಸಿ ಪ್ಲಸ್ ಪ್ಲಸ್, ಪಿ.ಎಚ್.ಪಿ. ಎಸ್.ಕ್ಯೂ.ಎಲ್., ಡಾಟ್ ನೆಟ್ ಇತರೆ ಕೋರ್ಸ್‌ಗಳನ್ನು ಮಾಡಬಹುದು.

ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಕುರಿತ ಕೋರ್ಸ್‌ಗಳನ್ನು ಮಾಡಬಹುದು.

ಈ ಕೋರ್ಸ್‌ಗಳು ಸಾಮಾನ್ಯವಾಗಿ ಮೂರರಿಂದ ಆರು ತಿಂಗಳ ಅವಧಿಯದ್ದು. ಈ ಕೋರ್ಸ್‌ ಅನ್ನು ಕಲಿಸುವುದರ ಜೊತೆಗೆ ಉದ್ಯೋಗಾವಕಾಶವನ್ನು ದೊರಕಿಸಿ ಕೊಡುವ ಸಂಸ್ಥೆಯಲ್ಲಿ ಮಾಡಿದರೆ ಉತ್ತಮ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರತಿಕ್ರಿಯಿಸಿ (+)