ಮರೆಯಲಾಗದ ಮುದ್ದು ಸ್ನೇಹಿತೆ

ಶನಿವಾರ, ಏಪ್ರಿಲ್ 20, 2019
27 °C

ಮರೆಯಲಾಗದ ಮುದ್ದು ಸ್ನೇಹಿತೆ

Published:
Updated:
Prajavani

ಕಾಲೇಜು ಜೀವನದ ಸವಿನೆನಪಿನ ಬುತ್ತಿಯಲ್ಲಿ ನನ್ನನ್ನು ಸದಾ ಕಾಡುವ ಸುಂದರ ನೆನಪು ಎಂದರೆ ಆಕೆ. ಆಕೆಯನ್ನು ಸ್ನೇಹಿತೆ ಎನ್ನಲೋ ತಾಯಿ ಎನ್ನಲೋ ಇಂದಿಗೂ ತಿಳಿಯುತ್ತಿಲ್ಲ. ಪೆದ್ದು ಪೆದ್ದಾಗಿದ್ದ ನನ್ನ ಜೀವನದಲ್ಲಿ ತಿಳಿವಳಿಕೆಯ ಸೆಲೆಯಾಗಿ ಬಂದವಳು ಆಕೆ. ತಾಯಿಯ ಪ್ರೀತಿಗೆ ಸರಿಸಮನಾದ ಪ್ರೀತಿ ಅವಳದ್ದು. ಸ್ನೇಹಿತೆಯ ಕಾಳಜಿ, ಮಮಕಾರ ಅವಳದ್ದು. ನನ್ನ ಸಂತಸ, ನೋವಿನಲ್ಲಿ ಸದಾ ನನಗೆ ಹೆಗಲಾಗಿದ್ದವಳು. ನನ್ನೆಲ್ಲಾ ನೋವನ್ನು ತನ್ನದು ಎಂದುಕೊಂಡು ನನ್ನ ಬದುಕನ್ನು ಸುಂದರವಾಗಿಸಿದವಳು ಆ ನನ್ನ ಗೆಳತಿ. 

ಕಲ್ಪನೆಗೂ ಮೀರಿದ, ವರ್ಣಿಸಲು ಸಾಧ್ಯವಾಗದ ವ್ಯಕ್ತಿತ್ವದ ಹಸನ್ಮುಖಿ ಅವಳು. ತಾನು ನಕ್ಕು, ಎಲ್ಲರ ಮೊಗದಲ್ಲೂ ಸಂತೋಷ ತರಿಸುವ ನಿಷ್ಕಲ್ಮಶ ಹೃದಯದ ಆ ಹುಡುಗಿಯನ್ನು ನಾನು ‘ಅವರು’ ಎಂದೇ ಸಂಭೋದಿಸುವುದು. ನಾನು ಅವರನ್ನು ಮೊದಲು ನೋಡಿದ್ದು ಪ್ರಾಥಮಿಕ ಶಾಲೆಯ ಮುಗ್ಧ ವಯಸ್ಸಿನಲ್ಲಿ. ಪ್ರಾಥಮಿಕ ಶಾಲೆ ಮುಗಿದ ಮೇಲೆ ನನ್ನ ಅವರ ಭೇಟಿ ಆಗಿರಲೇ ಇಲ್ಲ. ಮತ್ತೆ ನಾನು ಅವರನ್ನು ಭೇಟಿ ಮಾಡಿದ್ದು ಸ್ನಾತಕೋತ್ತರ ಪದವಿಯಲ್ಲಿ. ನಾನು ಮೊದಲ ಬಾರಿ ನೋಡಿದಾಗ ಆಕೆ ಸಣ್ಣ ವಯಸ್ಸಿನ ಆಟವಾಡುವ, ಬಾಲ್ಯವನ್ನು ಸುಂದರವಾಗಿ ಕಳೆಯುತ್ತಿದ್ದ ಮುದ್ದು ಹುಡುಗಿಯಾಗಿದ್ದಳು. ಆದರೆ ಈಗ ಆಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪ್ರೌಢ ಯುವತಿ. ಜವಾಬ್ದಾರಿಯುತ ಹೆಣ್ಣುಮಗಳು. 

ಸ್ನಾತಕೋತ್ತರ ಪದವಿಯಿಂದ ನನ್ನ ಅವರ ಸ್ನೇಹ ಚಿಗುರೊಡೆದಿತ್ತು. ಪರಸ್ಪರ ಕಾಳಜಿ, ಅಕ್ಕರೆ ನಮ್ಮ ನಡುವೆ ಬಿಟ್ಟಿರಲಾಗದ ನಂಟಿಗೆ ದಾರಿ ಮಾಡಿತ್ತು. ತಾಳ್ಮೆ ಹಾಗೂ ವಾತ್ಸಲ್ಯದ ಗಣಿಯಾದ ನನ್ನ ಅಮ್ಮನ ನಂತರ ನನ್ನ ಬಗ್ಗೆ ಬಹಳ ಪ್ರೀತಿ, ಕಾಳಜಿ ತೋರಿದವರು ಆಕೆ. ಅವರು ನನ್ನ ಪಾಲಿನ ದೇವತೆಯೂ ಹೌದು. ಸ್ನೇಹವೆಂದರೆ ಏನು, ಪ್ರೀತಿ ಎಂದರೆ ಏನು ಎಂದು ತೋರಿಸಿದ್ದ ಆಕೆ ಇಂದು ನನ್ನ ಜೊತೆಗಿಲ್ಲ. ಆದರೆ ಆಕೆ ನೀಡಿದ್ದ ಪರಿಶುದ್ಧ ಸ್ನೇಹದ ನಂಟು ಮಾತ್ರ ನನ್ನೊಂದಿಗೆ ಇಂದಿಗೂ ಗಟ್ಟಿಯಾಗಿದೆ. ಎಲ್ಲೇ ಇರು, ಹೇಗೆ ಇರು ಸದಾ ನೀನು ಸಂತಸದಿಂದಿರು ಗೆಳತಿ. 

–ಶರತ್ ಕುಮಾರ್. ಎನ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !