ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವಿಜ್ಞಾನ ಕಲಿಕೆಗೆ ಜೀವಜಂತು ಬಳಸುವಂತಿಲ್ಲ

ಸುತ್ತೋಲೆ ಹೊರಡಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ: ಅನುಷ್ಠಾನಗೊಂಡ ಪೇಟಾ ಸಲಹೆ
Last Updated 8 ನವೆಂಬರ್ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಪಿ.ಯು.ಸಿ.ಯಲ್ಲಿನ ವಿಜ್ಞಾನದ ವಿದ್ಯಾರ್ಥಿಗಳು ಇನ್ನು ಮುಂದೆ ಜೀರ್ಣಾಂಗ ವ್ಯವಸ್ಥೆ, ರಕ್ತಪರಿಚಲನೆ, ದೇಹಾಂಗ ಅಧ್ಯಯನಕ್ಕೆ ಜೀವಜಂತುಗಳನ್ನು ಬಳಸುವಂತಿಲ್ಲ. ಬದಲಾಗಿ ಸುಧಾರಿತ ತಾಂತ್ರಿಕ ಪರಿಕರಗಳಿಂದ ಈ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.

ರಾಜ್ಯದ ಎಲ್ಲ ಪಿ.ಯು. ಕಾಲೇಜುಗಳ ಪ್ರಯೋಗಾಲಯಗಳಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿಗಳು ಹಾಗೂ ಜೀವಜಂತುಗಳನ್ನು ಬಳಸಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್‌(ಪೇಟಾ) ಸಂಸ್ಥೆಯ ಸಲಹೆಗಾರ ಮುಂಬೈನ ಡಾ. ರೋಹಿತ್‌ ಭಾಟಿಯಾ ಅವರು ಸೆಪ್ಟೆಂಬರ್‌ನಲ್ಲಿ ಪತ್ರ ಬರೆದು, ಪ್ರಾಣಿ ಹಿಂಸೆ ತಡೆ ಕಾಯ್ದೆ–1960ರಲ್ಲಿನ ಸೆಕ್ಷನ್‌ 17(ಡಿ)ಯಲ್ಲಿನ ವಿವರಗಳತ್ತ ಇಲಾಖೆಯ ಗಮನ ಸೆಳೆದಿದ್ದರು.

ಏನಿದೆ ಆ ಸೆಕ್ಷನ್‌ನಲ್ಲಿ?: ‘ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಾಲೇಜುಗಳು ಸೇರಿದಂತೆ ಸಾಧ್ಯತೆ ಇರುವ ಕಡೆಗಳಲ್ಲಿ ಪ್ರಾಣಿಗಳ ಮೇಲೆ ಪ್ರಯೋಗಗಳನ್ನು ಮಾಡುವುದನ್ನು ತಪ್ಪಿಸಬೇಕು. ಬದಲಾಗಿ ಪುಸ್ತಕಗಳು, ಮಾದರಿಗಳು, ಚಿತ್ರಪಟಗಳನ್ನು ಬಳಸಬೇಕು’ಎನ್ನುತ್ತದೆ ನಿಯಮ.

ಶಾಲಾಕಲಿಕೆಯು ವನ್ಯಜೀವ ಸಂರಕ್ಷಣಾ ಕಾಯ್ದೆ–1972ರ ನಿಯಮಗಳಿಗೆ ಬದ್ಧವಾಗಿರಬೇಕು. ಉಭಯಚರಗಳು ಮತ್ತು ಕೆಲವು ಕೀಟಗಳನ್ನು ಕೊಲ್ಲಬಾರದೆಂದು ಕಾಯ್ದೆ ಹೇಳುತ್ತದೆ ಎಂದು ಭಾಟಿಯಾ ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಮಾಹಿತಿ ಆಧರಿಸಿ,‘ಕಲಿಕೆಯಲ್ಲಿ ಆಧುನಿಕ ಮಾದರಿಗಳನ್ನು ಬಳಸಿ, ಪ್ರಾಣಿಗಳನ್ನು ರಕ್ಷಿಸಿ, ಜೀವ ವೈವಿಧ್ಯತೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಪರಿಣಾಮಕಾರಿಯಾದ ಬೋಧನೆ ಮತ್ತು ತರಬೇತಿ ನೀಡುತ್ತ, ಜೀವಜಂತುಗಳನ್ನು ಮುಂದಿನ ಪೀಳಿಗೆಗೂ ಉಳಿಸೋಣ’ ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

‘ಫಾರ್ಮಲಿನ್‌ಗೆ ಅವಕಾಶ ಇರಲಿ’: ‘ಕಪ್ಪೆ, ಮೀನು, ಓತಿಕ್ಯಾತ, ಅಕ್ಟೊಪಸ್‌ನಂತಹ ಜೀವಿಗಳ ಮೃತದೇಹಗಳನ್ನು ಕಲಿಕೆಗಾಗಿ ವರ್ಷಾನುಗಟ್ಟಲೇ ಕೊಳೆಯದಂತೆ ಫಾರ್ಮಲಿನ್‌ ದ್ರಾವಣದಲ್ಲಿ ಶೇಖರಿಸಿ ಇಡಲಾಗುತ್ತದೆ. ಪಾರದರ್ಶಕ ಗಾಜಿನ ಬಾಟಲಿಗಳಲ್ಲಿ ಇರುವ ಈ ಪ್ರಯೋಗ ಸಾಮಗ್ರಿಗಳು ಎಂಟತ್ತು ವರ್ಷ ಬಾಳಿಕೆ ಬರುತ್ತವೆ. ಹಾಗಾಗಿ ಇವುಗಳನ್ನು ಬಳಸಲು ವಿನಾಯಿತಿ ನೀಡಬೇಕು’ ಎಂದು ಜೀವ ವಿಜ್ಞಾನದ ಉಪನ್ಯಾಸಕರೊಬ್ಬರು ತಿಳಿಸಿದರು.

‘ಮಲ್ಟಿಮೀಡಿಯಾ ಒದಗಿಸಲಿ’: ‘ರಾಸಾಯನಿಕದಲ್ಲಿಟ್ಟ ಅಥವಾ ಚಿತ್ರಗಳಲ್ಲಿನ ಜಂತುಗಳನ್ನು ನೋಡಿ ಕಲಿಯುವುದಕ್ಕಿಂತ, ಅವುಗಳನ್ನು ಸ್ಪರ್ಶಿಸಿ ಕಲಿತರೆ ಅಂತಹ ಸಂಗತಿಗಳು ನೆನಪಿನಲ್ಲಿ ಉಳಿಯುತ್ತವೆ. ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಕಂಪ್ಯೂಟರ್‌ ಆಧಾರಿತ ಮಲ್ಟಿಮೀಡಿಯಾದ ವಿನೂತನ ಪ್ರಯೋಗ ಸಾಮಗ್ರಿಗಳನ್ನು ಒದಗಿಸಿದ ಬಳಿಕವೇ ಈ ನಿಯಮ ಜಾರಿ ಮಾಡಬೇಕಾಗಿತ್ತು’ ಎಂದರು ವಿದ್ಯಾರ್ಥಿ ಯಾದಗಿರಿ ಬಂಗಾರಪ್ಪ.

ಪೇಟಾ ಸ್ವಾಗತ: ‘ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿರ್ದೇಶನದ ಮೇರೆಗೆ ಪದವಿ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ 2014ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಈಗ ಪಿ.ಯು. ಮಟ್ಟದಲ್ಲೂ ಅನುಷ್ಠಾನಗೊಂಡಿರುವುದು ಉತ್ತಮ ಕ್ರಮವಾಗಿದೆ’ ಎಂದು ಪೇಟಾ ಸಂಸ್ಥೆಯ ವಿಜ್ಞಾನನೀತಿ ಸಲಹೆಗಾರ್ತಿ ಡಾ. ದೀಪ್ತಿ ಎಂ. ಕಪೂರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

‘ಕಪ್ಪೆ ಬದುಕಿದರೆ, ಅಂಕ ಸಿಗುತ್ತಿತ್ತು’

‘1990ಕ್ಕಿಂತ ಮುಂಚೆ ವಿಜ್ಞಾನದ ವಿದ್ಯಾರ್ಥಿಗಳು ಕಪ್ಪೆ, ಮೀನು, ಓತಿಕ್ಯಾತಗಳಿಗೆ ಅನಸ್ತೇಶಿಯಾ ನೀಡಿ, ಅವುಗಳ ದೇಹವನ್ನು ಕುಯ್ಯಬೇಕಿತ್ತು. ಅದರ ದೇಹದ ಅಧ್ಯಯನದ ಬಳಿಕ, ಹೊಲಿಗೆ ಹಾಕಬೇಕಿತ್ತು’

‘ಚಿಕಿತ್ಸೆಯ ಬಳಿಕ ಆ ಜೀವಿಗಳು ಬದುಕಿದರೆ ಮಾತ್ರ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಂಕಗಳು ಸಿಗುತ್ತಿದ್ದವು. ಆ ಜೀವಿ ಸತ್ತರೆ ನಮ್ಮ ಅಂಕಗಳಿಕೆಗೂ ಕುತ್ತು ಬರುತ್ತಿತ್ತು’ ಎಂದು ಕಲಬುರ್ಗಿಯ ಸರ್ಕಾರಿ ಬಾಲಕಿಯರ ಪಿ.ಯು.ಕಾಲೇಜಿನ ಉಪನ್ಯಾಸಕ ಶಿವರಾವ್‌ ಮಾಲಿ ಪಾಟೀಲ ವಿದ್ಯಾರ್ಥಿ ದಿನಗಳನ್ನು ಸ್ಮರಿಸಿಕೊಂಡರು.

**

ಇಲಾಖೆ ಬಯಸಿದರೆ ಜೀವಿಗಳನ್ನು ಬಳಸದೆಯೇ, ಕಂಪ್ಯೂಟರ್‌ ಆಧಾರಿತ ಪ್ರಾಯೋಗಿಕಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಯೋಗ ನೀಡುತ್ತೇವೆ.

-ಡಾ. ದೀಪ್ತಿ ಎಂ. ಕಪೂರ್‌, ಪೇಟಾ ಸಲಹೆಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT