ಆಗಸ್ಟ್‌ನಲ್ಲೂ ರಿಯಾಯಿತಿ: ಪುಸ್ತಕಪ್ರಿಯರಿಗೆ ಸುಗ್ಗಿ

7
ಪುಸ್ತಕ ಪ್ರೀತಿ

ಆಗಸ್ಟ್‌ನಲ್ಲೂ ರಿಯಾಯಿತಿ: ಪುಸ್ತಕಪ್ರಿಯರಿಗೆ ಸುಗ್ಗಿ

Published:
Updated:

ಪುಸ್ತಕ ಪ್ರಿಯರು, ಓದುಗರು, ಸಂಶೋಧಕರಿಗೆ ನವೆಂಬರ್‌ ತಿಂಗಳೆಂದರೆ ಬಲು ಇಷ್ಟ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಪ್ರಾಧಿಕಾರ, ಪ್ರಕಾಶನಗಳು, ಮಳಿಗೆಗಳು ಪುಸ್ತಕಗಳ ಖರೀದಿಗೆ ಈ ವೇಳೆ ವಿಶೇಷ ರಿಯಾಯಿತಿ ಘೋಷಿಸುತ್ತವೆ. ಹಾಗಾಗಿ ಪುಸ್ತಕಪ್ರಿಯರು ನವೆಂಬರ್‌ಗಾಗಿ ಕಾಯುತ್ತಾರೆ. ಆದರೆ ಇನ್ನು ಮುಂದೆ ಇದಕ್ಕಾಗಿ ನವೆಂಬರ್‌ವರೆಗೂ ಕಾಯುವ ಅಗತ್ಯ ಇಲ್ಲ. ಕೆಲ ಪ್ರಾಧಿಕಾರಗಳು, ಪ್ರಕಾಶನ ಸಂಸ್ಥೆಗಳು ಆಗಸ್ಟ್‌ನಲ್ಲೂ ಪುಸ್ತಕ ಖರೀದಿಗಾಗಿ ವಿಶೇಷ ರಿಯಾಯಿತಿ ಘೋಷಿಸಿವೆ.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಗಸ್ಟ್‌ ತಿಂಗಳು ಪೂರ್ತಿ ಪುಸ್ತಕಗಳಿಗೆ ಶೇ 50ರಷ್ಟು ರಿಯಾಯಿತಿ ಘೋಷಿಸಿ ಮಾರಾಟ ಆರಂಭಿಸಿವೆ. ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಪುಸ್ತಕಗಳಿಗೂ ಶೇ 50ರಷ್ಟು ರಿಯಾಯಿತಿ ದೊರೆಯಲಿವೆ.

ಪುಸ್ತಕವನ್ನು ಕೊಂಡು ಓದುವ ಹವ್ಯಾಸವನ್ನು ಜನರಲ್ಲಿ ಬೆಳೆಸುವುದರ ಜತೆಗೆ ಹೆಚ್ಚಿನ ಪುಸ್ತಕಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಇದರ ಹಿಂದಿನ ಉದ್ದೇಶ. ಪುಸ್ತಕಗಳ ಬೆಲೆ ದುಬಾರಿ ಎಂದು ಕೆಲವರು ಪುಸ್ತಕಗಳನ್ನು ಖರೀದಿಸುವುದಿಲ್ಲ. ಇನ್ನೂ ಕೆಲವರು ಪುಸ್ತಕಗಳನ್ನು ಓದಲು ಗ್ರಂಥಾಲಯಗಳಿಗೆ ಹೋಗುತ್ತಾರೆ ಮತ್ತೂ ಕೆಲವರು ಅತ್ಯಗತ್ಯ ಪುಸ್ತಕಗಳನ್ನು ಜೆರಾಕ್ಸ್‌ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಓದುಗರ ಕೈಗೆಟುಕುವ ಬೆಲೆಗೆ ಪುಸ್ತಕಗಳು ದೊರೆಯುವಂತಾದರೆ ಪುಸ್ತಕ ಓದುವ ಮತ್ತು ಖರೀದಿಸುವ ಸಂಸ್ಕೃತಿ ಎರಡನ್ನೂ ಬೆಳೆಸಿದಂತಾಗುತ್ತದೆ ಎಂಬುದು ಇದರ ಹಿಂದಿನ ಉದ್ದೇಶ.

ವರ್ಷದಲ್ಲಿ ಮೂರು ತಿಂಗಳು ರಿಯಾಯಿತಿ: ಪ್ರತಿವರ್ಷ ಮೂರು ತಿಂಗಳು ವಿಶೇಷ ರಿಯಾಯಿತಿಯನ್ನು ಈ ಪ್ರಾಧಿಕಾರಗಳು ನೀಡಲಿದ್ದು, ಅದಕ್ಕೆ ಆಗಸ್ಟ್‌ನಿಂದಲೇ ಚಾಲನೆ ದೊರೆತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಪ್ರತಿ ಜನವರಿ, ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರತಿ ಆಗಸ್ಟ್‌ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರತಿ ನವೆಂಬರ್‌ ತಿಂಗಳಲ್ಲಿ ಪುಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ಅಥವಾ ವಿಶೇಷ ರಿಯಾಯಿತಿಯನ್ನು ಇವು ನೀಡಲಿವೆ.

ರಾಷ್ಟ್ರೀಯ ಹಬ್ಬಗಳು ಮತ್ತು ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ಓದುಗರಿಗೆ ನೀಡುವುದರ ಮೂಲಕ ಈ ವಿಶೇಷ ದಿನಗಳನ್ನು ವಿಭಿನ್ನವಾಗಿ ಸ್ಮರಿಸುವ ಹಾಗೂ ಆ ದಿನಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶವನ್ನೂ ಇದು ಒಳಗೊಂಡಿದೆ.

ಆನ್‌ಲೈನ್‌ನಲ್ಲೂ ಶೇ 50ರಷ್ಟು ರಿಯಾಯಿತಿ: ಪ್ರಾಧಿಕಾರದ ಪುಸ್ತಕ ಮಳಿಗೆಗಳಿಗೆ ಹೋಗಿ ಪುಸ್ತಕ ಖರೀದಿಸಲು ಆಗದವರು ಆನ್‌ಲೈನ್‌ನಲ್ಲೂ ಶೇ 50ರ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದು. ಅಂಚೆ ವೆಚ್ಚವನ್ನು ಹೆಚ್ಚುವರಿಯಾಗಿ ನೀಡ ಬೇಕಾಗುತ್ತದೆಯಷ್ಟೇ ಎನ್ನುತ್ತಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ.

‘ಇತ್ತೀಚೆಗೆ ಆನ್‌ಲೈನ್‌ ವಹಿವಾಟು ಹೆಚ್ಚುತ್ತಿದೆ. ವಿದೇಶಗಳಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿವೆ. ವಿದೇಶಿ ಓದುಗರನ್ನು ತಲುಪಲು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ವಿವಿಧ ಆನ್‌ಲೈನ್‌ ವಹಿವಾಟು ನಡೆಸುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಇದು ಪ್ರಾಧಿಕಾರದ ಬೆಳ್ಳಿಹಬ್ಬದ (25) ವರ್ಷವೂ ಆಗಿರುವುದರಿಂದ ಓದುಗರಿಗೆ ಕಡಿಮೆ ದರದಲ್ಲಿ ಪುಸ್ತಕಗಳು ದೊರೆಯುವಂತೆ ಮಾಡಲು ಇಂಥ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಜಿಲ್ಲಾ ಕಚೇರಿಗಳಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ’ ಎನ್ನುತ್ತಾರೆ ಅವರು.

ಮಾರಾಟಕ್ಕೂ ಪ್ರೋತ್ಸಾಹ: ‘ಮೊದಲು ನವೆಂಬರ್‌ನಲ್ಲಿ ಮಾತ್ರ ಪುಸ್ತಕ ಖರೀದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸರ್ಕಾರಿ ಆದೇಶ ಬಂದಿದ್ದು, ಅದರಂತೆ ವರ್ಷದಲ್ಲಿ ಜನವರಿ, ಆಗಸ್ಟ್‌, ನವೆಂಬರ್‌ನಲ್ಲಿ ವಿಶೇಷ ರಿಯಾಯಿತಿ ನೀಡಬೇಕಿದೆ. ಹಾಗಾಗಿ ಆಗಸ್ಟ್‌ನಲ್ಲಿಯೇ ಇದಕ್ಕೆ ಚಾಲನೆ ನೀಡಿದ್ದೇವೆ. ಇದು ಪುಸ್ತಕಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವ ಯೋಜನೆ’ ಎನ್ನುತ್ತಾರೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ರಿಜಿಸ್ಟ್ರಾರ್‌ ಈಶ್ವರ್‌ ಮಿರ್ಜಿ.

ಓದುಗ ಸ್ನೇಹಿ
‘ವಿಲ್‌ ಡ್ಯುರಾಂಟ್‌ ಅವರ ನಾಗರಿಕತೆಯ ಕಥೆಗಳು (ಅನುವಾದಿತ) ಕುರಿತ 11 ಸಂಪುಟಗಳನ್ನು ಕುವೆಂಪು ಭಾಷಾ ಭಾರತಿ ಪ್ರಕಟಿಸಿದೆ. ಪ್ರತಿ ಸಂಪುಟದ ಬೆಲೆ ₹ 1,000. (ಒಟ್ಟು ಬೆಲೆ ₹ 11 ಸಾವಿರ).

ಶೇ 50ರ ರಿಯಾಯಿತಿಯಂತೆ ಇವುಗಳನ್ನು ತೆಗೆದುಕೊಂಡರೆ ₹ 5,500ಕ್ಕೆ ಎಲ್ಲ ಸಂಪುಟಗಳು ದೊರೆಯುತ್ತವೆ. ಅದೇ ರೀತಿ ಕರ್ನಾಟಕ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು (12 ಸಂಪುಟಗಳನ್ನು) ಪುಸ್ತಕಗಳನ್ನು ಭಾಷಾ ಭಾರತಿ ಪ್ರಕಟಿಸಿದೆ. ಅವುಗಳ ಒಟ್ಟಾರೆ ಬೆಲೆ ₹ 1,800. ಅದು ₹ 900ಕ್ಕೆ ಸಿಗುತ್ತದೆ. ಇದೇ ರೀತಿ ಕನ್ನಡ ಪುಸ್ತಕ ಪ್ರಾಧಿಕಾರದ ಹಲವು ಪುಸ್ತಕಗಳು ಗರಿಷ್ಠ ರಿಯಾಯಿತಿಗೆ ದೊರೆಯತ್ತದೆ ಎಂದರೆ ನನ್ನಂಥ ಸಂಶೋಧಕನಿಗೆ ಹೆಚ್ಚು ಅನುಕೂಲ. ಪುಸ್ತಕ ಖರೀದಿಗೆ ವಿಶೇಷ ರಿಯಾಯಿತಿಯನ್ನು ನವೆಂಬರ್‌ ಜತೆಗೆ ವರ್ಷದ ಮೂರು ತಿಂಗಳೂ ನೀಡುವುದು ನಿಜವಾಗಿಯೂ ಓದುಗ ಸ್ನೇಹಿ ಧೋರಣೆ’ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ಇತಿಹಾಸ ಉಪನ್ಯಾಸಕ ಎಚ್‌.ಜಿ.ರಾಜೇಶ್‌.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !