ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ವಜ್ರವ್ಯಾಪಾರಿ ಪರಾರಿ?

Last Updated 24 ಫೆಬ್ರುವರಿ 2018, 20:39 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ ಆಭರಣ ಉದ್ಯಮಿ ನೀರವ್‌ ಮೋದಿ ₹11,400 ಕೋಟಿ ವಂಚನೆ ಮಾಡಿದ ಬೆನ್ನಿಗೇ ಮತ್ತೊಂದು ವಂಚನೆ ಆರೋಪದ ಪ್ರಕರಣವೂ ಬಿಚ್ಚಿಕೊಂಡಿದೆ.

ವಜ್ರಾಭರಣ ರಫ್ತು ಕಂಪನಿ ದ್ವಾರಕಾ ದಾಸ್‌ ಸೇಠ್‌ ಇಂಟರ್‌ ನ್ಯಾಷನಲ್‌ ಪ್ರೈ. ಲಿ. (ಡಿಡಿಎಸ್‌ಐಪಿಎಲ್‌) ವಿರುದ್ಧ ₹389.85 ಕೋಟಿ ಸಾಲ ವಂಚನೆ ಆರೋಪದಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಉದ್ಯಮ ಸಂಸ್ಥೆಯ ವಿರುದ್ಧ ಓರಿಯಂಟಲ್ ಬ್ಯಾಂಕ್‌ ಆಫ್‌ ಕಾಮರ್ಸ್‌ (ಒಬಿಸಿ) ಆರು ತಿಂಗಳ ಹಿಂದೆಯೇ ಸಿಬಿಐಗೆ ದೂರು ನೀಡಿತ್ತು. 

ಡಿಡಿಎಸ್‌ಐಪಿಲ್‌ನ ನಿರ್ದೇಶಕರನ್ನು ಪತ್ತೆ ಮಾಡಲು ಬ್ಯಾಂಕ್‌ ಹತ್ತು ತಿಂಗಳು ಪ್ರಯತ್ನಿಸಿತ್ತು. ಅದರಲ್ಲಿ ವಿಫಲವಾದ ಬಳಿಕ ಕಳೆದ ಆಗಸ್ಟ್‌ನಲ್ಲಿ ಸಿಬಿಐಗೆ ದೂರು ನೀಡಿತ್ತು.

ಡಿಡಿಎಸ್‌ಐಪಿಲ್‌, ಅದರ ನಿರ್ದೇಶಕರಾದ ಸಭ್ಯ ಸೇಠ್‌, ರೀತಾ ಸೇಠ್‌, ಕೃಷ್ಣ ಕುಮಾರ್‌ ಸಿಂಗ್‌, ರವಿ ಸಿಂಗ್‌ ಮತ್ತು ಇನ್ನೊಂದು ಕಂಪನಿ ದ್ವಾರಕಾ ದಾಸ್‌ ಸೇಠ್‌ ಎಸ್‌ಇಝಡ್‌ ಇನ್‌ಕಾರ್ಪೊರೇಷನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಎಲ್ಲರೂ ದೇಶದಿಂದ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಸಾಲ ಪಡೆಯುವಾಗ ಕೊಟ್ಟ ವಿಳಾಸದಲ್ಲಿ ಈಗ ಯಾರೂ ಇಲ್ಲ.

ಇದು ವಸೂಲಾಗದ ಸಾಲ ಎಂದು 2014ರ ಮಾರ್ಚ್‌31ರಂದೇ ಘೋಷಿಸಲಾಗಿತ್ತು. ಮರುಪಾವತಿಯ ಬಗ್ಗೆ ನಿರ್ದೇಶಕರ ಜತೆಗೆ ಬ್ಯಾಂಕ್‌ ಮಾತುಕತೆ ಆರಂಭಿಸಿತ್ತು.

ಬ್ಯಾಂಕ್‌ ವಿರುದ್ಧ ಹರಿಹಾಯ್ದ ಜೇಟ್ಲಿ

ಪಿಎನ್‌ಬಿಗೆ ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣ ಸುದೀರ್ಘ ಏಳು ವರ್ಷ ಗಮನಕ್ಕೇ ಬಂದಿಲ್ಲ ಎಂಬುದು ನಿಯಂತ್ರಣ ಸಂಸ್ಥೆಗಳ ವೈಫಲ್ಯವನ್ನು ತೋರಿಸುತ್ತದೆ ಎಂದು ಜೇಟ್ಲಿ ಹರಿಹಾಯ್ದಿದ್ದಾರೆ. ರಾಜಕಾರಣಿಗಳಿಗೆ ಉತ್ತರದಾಯಿತ್ವ ಇದೆ. ಆದರೆ ಭಾರತದ ನಿಯಂತ್ರಣ ವ್ಯವಸ್ಥೆಗಳಿಗೆ ಯಾವುದೇ ಉತ್ತರದಾಯಿತ್ವ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಂಚಕರ ಜತೆಗೆ ಬ್ಯಾಂಕುಗಳ ಸಿಬ್ಬಂದಿಯೇ ಶಾಮೀಲಾಗುತ್ತಿರುವುದು ಆತಂಕಕಾರಿ. ಹಾಗೆಯೇ ದೀರ್ಘ ಅವಧಿಯವರೆಗೆ ಹಗರಣವನ್ನು ಯಾರೂ ಗುರುತಿಸದಿರುವುದು ಕೂಡ ಚಿಂತೆಗೆ ಕಾರಣವಾಗುವಂತಹ ವಿಚಾರ. ಹಗರಣಗಳನ್ನು ಗುರುತಿಸಿ ತಡೆಯುವುದಕ್ಕಾಗಿ ನಿಯಂತ್ರಣ ಸಂಸ್ಥೆಗಳು ‘ಮೂರನೇ ಕಣ್ಣು’ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಉದ್ಯಮ ಕ್ಷೇತ್ರವು ‘ನೈತಿಕ’ವಾಗಿ ವ್ಯವಹಾರ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಹಗರಣಗಳು ‘ಗಾಯಗಳಾಗಿದ್ದು’ ಸುಧಾರಣೆಗಳು ಮತ್ತು ಸುಲಲಿತ ವ್ಯಾಪಾರ ವ್ಯವಸ್ಥೆಯನ್ನು ಹಿಂದಕ್ಕೆ ತಳ್ಳುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ. ಬ್ಯಾಂಕಿನಲ್ಲಿ ಏನಾಗುತ್ತಿದೆ ಎಂಬುದು ಬ್ಯಾಂಕಿನ ಆಡಳಿತ ಮಂಡಳಿಗೆ ತಿಳಿಯದೇ ಇರುವುದು ಆಘಾತಕಾರಿ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಜನ ಧನ ಲೂಟಿ ಯೋಜನೆ’

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ‘ಜನ ಧನ ಲೂಟಿ ಯೋಜನೆ’ ಇದು ಎಂದು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಹಾಗಾಗಿ ಈ ಕಂಪನಿಯ ಪ್ರವರ್ತಕರು ಕೂಡ ವಿಜಯ ಮಲ್ಯ ಮತ್ತು ನೀರವ್‌ ಮೋದಿ ರೀತಿಯಲ್ಲಿ ದೇಶದಿಂದ ಪರಾರಿಯಾಗಬಹುದು ಎಂದು ಅವರು ಹೇಳಿದ್ದಾರೆ.

‘ಪ್ರಧಾನಿ ಮೋದಿ ಅವರಂತಹ ಅತ್ಯಂತ ದುಬಾರಿ ಕಾವಲುಗಾರ ಇದ್ದಾಗಲೂ ಅವರ ಮೂಗಿನ ಕೆಳಗೇ ಇಂತಹ ವಂಚನೆಗಳು ಹೇಗೆ ನಡೆಯುತ್ತಿವೆ ಎಂದು ನನಗೆ ಅಚ್ಚರಿಯಾಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಪಾಸ್‌ಪೋರ್ಟ್‌ ರದ್ದು

ಪಿಎನ್‌ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಅವರ ಪಾಸ್‌ಪೋರ್ಟ್‌ಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರದ್ದು ಮಾಡಿದೆ. ಈ ಇಬ್ಬರ ಪಾಸ್‌ಪೋರ್ಟ್‌ಗಳನ್ನು ಇದೇ 16ರಂದು ಅಮಾನತು ಮಾಡಲಾಗಿತ್ತು. ವಾರದಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಲಾಗಿತ್ತು. ಅವರಿಂದ ಪ್ರತಿಕ್ರಿಯೆ ಬಾರದ ಕಾರಣ ಈಗ ಪಾಸ್‌ಪೋರ್ಟ್ ಹಿಂದಕ್ಕೆ ಪಡೆಯಲಾಗಿದೆ.

ಪಿಎನ್‌ಬಿ ಹಿರಿಯ ಅಧಿಕಾರಿಗಳ ವಿಚಾರಣೆ

ನೀರವ್‌ ಮೋದಿ ವಂಚನೆ ಪ್ರಕರಣದಲ್ಲಿ ಪಿಎನ್‌ಬಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮೆಹ್ತಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ಬ್ರಹ್ಮಾಜಿ ರಾವ್‌ ಅವರನ್ನು ಸಿಬಿಐ ಶನಿವಾರ ವಿಚಾರಣೆಗೆ ಒಳಪಡಿಸಿದೆ.

ಇವರನ್ನು ಆರೋಪಿಗಳು ಎಂದು ಪರಿಗಣಿಸಲಾಗಿಲ್ಲ. ವಂಚನೆ ಮೂಲಕ ಖಾತರಿಪತ್ರಗಳನ್ನು ಪಡೆದುಕೊಳ್ಳಲು ನೀರವ್‌ ಮತ್ತು ಮೆಹುಲ್‌ ಚೋಕ್ಸಿಗೆ ಹೇಗೆ ಸಾಧ್ಯವಾಯಿತು ಮತ್ತು ಪಿಎನ್‌ಬಿ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರನ್ನು ವಿಚಾರಣೆ ಮಾಡಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ಸಿಬಿಐ ವಿಚಾರಣೆ

ನೀರವ್‌ ಮೋದಿ ವಂಚನೆ ಪ್ರಕರಣದಲ್ಲಿ ಪಿಎನ್‌ಬಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮೆಹ್ತಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ಬ್ರಹ್ಮಾಜಿ ರಾವ್‌ ಅವರನ್ನು ಸಿಬಿಐ ಶನಿವಾರ ವಿಚಾರಣೆಗೆ ಒಳಪಡಿಸಿದೆ.

ಇವರನ್ನು ಆರೋಪಿಗಳು ಎಂದು ಪರಿಗಣಿಸಲಾಗಿಲ್ಲ. ವಂಚನೆ ಮೂಲಕ ಖಾತರಿಪತ್ರಗಳನ್ನು ಪಡೆದುಕೊಳ್ಳಲು ನೀರವ್‌ ಮತ್ತು ಮೆಹುಲ್‌ ಚೋಕ್ಸಿಗೆ ಹೇಗೆ ಸಾಧ್ಯವಾಯಿತು ಮತ್ತು ಪಿಎನ್‌ಬಿ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರನ್ನು ವಿಚಾರಣೆ ಮಾಡಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT