ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಸ್ಟ್ಯಾಂಡೇ ಕ್ಲಾಸ್‌ ರೂಮ್‌

Last Updated 25 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

‘student life is golden life’ ಎಂಬ ಮಾತು ಅಕ್ಷರಶಃ ಸತ್ಯವಾದುದು. ಪ್ರತಿಯೊಬ್ಬರ ಜೀವನದಲ್ಲಿಯೂ ಮರೆಯಲಾಗದ ಘಟ್ಟವೆಂದರೆ ಕಾಲೇಜಿನಲ್ಲಿ ಕಳೆದ ದಿನಗಳೇ ಆಗಿರುತ್ತವೆ. ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳು, ಕ್ಲಾಸ್‌ನಲ್ಲಿ ನಡೆದ ಸನ್ನಿವೇಶ–ಘಟನೆಗಳು ಮೊದಲು ಚರ್ಚೆಯಾಗುವುದು ಕ್ಯಾಂಟೀನ್ ಅಥವಾ ಬಸ್‌ಸ್ಟ್ಯಾಂಡ್‌ಗಳಲ್ಲಿಯೇ. ಏಕೆಂದರೆ ವಿದ್ಯಾರ್ಥಿಗಳಿಗೆ ಬಸ್‌ಸ್ಟ್ಯಾಂಡ್ ಅಥವಾ ಕ್ಯಾಂಟೀನ್ ಅವರು ಸೇರುವ ಅಡ್ಡವಾಗಿರುತ್ತದೆ.

ಡಿಗ್ರಿ ಮುಗಿಸಿದ ನಾನು, ನನ್ನ ಸ್ನೇಹಿತೆ ಎಂ.ಎ.ಗೆ ಪ್ರವೇಶ ಪಡೆಯಲು ಹೋದ ದಿನವೇ ನಮಗೆ ಮೊದಲೇ ಪರಿಚಯವಿದ್ದ ಸೀನಿಯರ್ಸ್‌ಗಳು ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತಿದ್ದರು. ಅವರ ಬಳಿ ನಾವು ‘ನಿಮಗೆ ಕ್ಲಾಸ್ ಇಲ್ಲವೇ’ ಎಂದು ಕೇಳಿದಾಗ, ಅವರು ‘ನಮ್ಮ ಕ್ಲಾಸ್ ಅಲ್ಲೇ ಇದೆ; ಆದ್ರೆ ನಮಗೆ ನಿಜವಾದ ಕ್ಲಾಸ್ ಈ ಬಸ್‌ಸ್ಟ್ಯಾಂಡೇ; ನೀವು ಸಹ ಹೋಗ್ತಾ ಹೋಗ್ತಾ ಬಸ್‌ಸ್ಟ್ಯಾಂಡ್‌ ಅನ್ನೇ ಕ್ಲಾಸ್‌ರೂಮನ್ನಾಗಿಸಿಕೊಳ್ಳುತ್ತೀರಿ’ ಎಂದು ನಕ್ಕಿದ್ದರು. ಒಬ್ಬರ ಮುಖ ಒಬ್ಬರು ನೋಡಿಕೊಂಡು ‘ನೋಡೋಣ, ನೋಡೋಣ’ ಎಂದು ಅಲ್ಲಿಂದ ಮುಂದೆ ಸಾಗಿದ್ದೆವು.

ಕಾಲೇಜು ಆರಂಭವಾಗಿ ಕ್ಲಾಸ್‌ಗಳು ನಡೆಯುತ್ತಿದ್ದಂತೆ ಮೊದಲೇ ಪರಿಚಯವಿದ್ದ ನಮ್ಮ ಸೀನಿಯರ್ಸ್‌ಗಳೊಂದಿಗೆ ಹೊಸ ಸೀನಿಯರ್ಸ್‌ಗಳು, ನಮ್ಮ ಕ್ಲಾಸಿನ ಸ್ನೇಹಿತರ ಪರಿಚಯ, ಒಡನಾಟಗಳು ಶುರುವಾಗಿದ್ದವು. ಹೀಗೆ ಶುರುವಾದ ಸೀನಿಯರ್ಸ್ ಮತ್ತು ಜ್ಯೂನಿಯರ್ಸ್ ಗೆಳೆತನದ ಚರ್ಚೆಗಳು, ಗುಸು ಗುಸು ಗಾಸಿಪ್‌ಗಳು, ಆಗ ತಾನೇ ಹುಟ್ಟಿಕೊಂಡ ಪ್ರೀತಿ–ಪ್ರೇಮಗಳ ಕುರಿತು ಹರಟೆ ಹೊಡೆಯುವುದು ಎಲ್ಲದ್ದಕ್ಕೂ ಬಸ್‌ಸ್ಟ್ಯಾಂಡೇ ವೇದಿಕೆಯಾಗಿತ್ತು. ಅನೇಕ ಬಾರಿ ಕೆಲವು ಪ್ರೇಮ್ ಕಹಾನಿಗಳು ಹುಟ್ಟಿಕೊಂಡಿದ್ದು ಇದೇ ಬಸ್‌ಸ್ಟ್ಯಾಂಡ್‌ನಲ್ಲಿ.

ಎಷ್ಟೋ ಬಾರಿ ಕ್ಲಾಸ್‌ಗಿಂತ ಬಸ್‌ಸ್ಟ್ಯಾಂಡ್‌ನಲ್ಲೇ ಪೂರ್ತಿ ಹಾಜರಾತಿ ಇರುತಿತ್ತು! ನಮ್ಮ ಸಂಪೂರ್ಣ ಹಾಜರಾತಿಯನ್ನು ಬಸ್‌ಸ್ಟಾಪಿನಲ್ಲಿ ನೋಡಿದ ಪ್ರಾಧ್ಯಾಪಕರು ’ಬಸ್‌ಸ್ಟ್ಯಾಂಡ್‌ನಲ್ಲಿಯೇ ಹಾಜರಾತಿ ವ್ಯವಸ್ಥೆ ಮಾಡುತ್ತೇನೆ, ಹೇಗಿದ್ದರೂ ನಿಮ್ಮ ಪುಲ್ ಅಟೆಂಡೆನ್ಸ್ ಅಲ್ಲಿಯೇ ಇರುತ್ತದೆ‘ ಎಂದಾಗ, ‘ಚಲೋ ಆಗುತ್ತೆ ಸಾರ್ ನಿಮಗೆ, ಹಂಗ್ ಮಾಡಿ ಪುಣ್ಯ ಕಟ್ಕೊಳ್ಳ್ರಿ‘ ಎಂದು ಪಿಸುಗುಟ್ಟಿದ್ದು ನಕ್ಕಿದ್ದೂ ಇದೆ.

ಇನ್ನು ಬೇರೆಡೆಯಿಂದ ಬರುವ ಸ್ನೇಹಿತರಿಗಾಗಿ ಕಾಯ್ದು ಎಲ್ಲರೂ ಸೇರಿ ಮಾತನಾಡುತ್ತಾ, ಛೇಡಿಸುತ್ತಾ ಬಸ್‌ಸ್ಟ್ಯಾಂಡಿನಿಂದ ವಿಭಾಗದತ್ತ ಹೆಜ್ಜೆ ಹಾಕುತ್ತಾ ಸಾಗುವ ಸಂತೋಷ ಕಾಲೇಜು ಮುಗಿದ ಮೇಲೂ ಮರೆಯಲಾಗದ ಒಂದು ಸವಿನೆನಪಾಗಿ ಉಳಿದಿದೆ.

-ಸ್ಮಿತಾ ಅಂಗಡಿ, ಪತ್ರಿಕೋದ್ಯಮ ವಿಭಾಗ ಕ ವಿ. ವಿ. ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT