ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎ: ಪರಿಶ್ರಮ, ಬದ್ಧತೆ ಬೇಕು!

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ನಾನು ಈಗ ದ್ವಿತೀಯ ಪಿಯುಸಿ(ವಾಣಿಜ್ಯ) ಪರೀಕ್ಷೆ ಬರೆದಿರುವೆ. ಆದರೆ ನಾನು ಸಿ.ಎ. ಕಲಿಯಬೇಕೆಂದಿರುವೆ. ಪಿಯುಸಿ ನಂತರದ ವಿದ್ಯಾಭ್ಯಾಸದ ಸರಳ ಮಾರ್ಗವನ್ನು ತಿಳಿಸಿ.
-
ಅರುಣ ಬ.ಮೂಡಿ, ಧಾರವಾಡ

ಭಾರತೀಯ ಚಾರ್ಟ್‌ರ್ಡ್ ಅಕೌಂಟೆಂಟ್ ಸಂಸ್ಥೆ ನಡೆಸುವ ಸಿ.ಎ. ಪರೀಕ್ಷೆಯು ಬಹಳ ಪ್ರತಿಷ್ಠಿತವಾದ, ಬಹಳ ಪರಿಶ್ರಮ ಮತ್ತು ಬದ್ಧತೆಯಿಂದ ತೇರ್ಗಡೆ ಹೊಂದುವ ಪರೀಕ್ಷೆ. ಇದು ಮೂರು ಹಂತಗಳಲ್ಲಿ ತೇರ್ಗಡೆ ಹೊಂದಬೇಕಾದ ಪರೀಕ್ಷೆಯಾಗಿದ್ದು ಸಾಮಾನ್ಯವಾಗಿ(ಎಲ್ಲ ಹಂತಗಳನ್ನು ಮೊದಲ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದರೆ) ಐದು ವರ್ಷಗಳಲ್ಲಿ ಮುಗಿಸಬಹುದಾಗಿದೆ.

ಮೊದಲ ಹಂತ: ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ಮೊದಲ ಹಂತದ ಪರೀಕ್ಷೆಯಾದ ಸಿ.ಪಿ.ಟಿ. (ಕಾಮನ್ ಪ್ರೋಫಿಷಿಯನ್ಸಿ ಟೆಸ್ಟ್) ಪರೀಕ್ಷೆಗೆ ನೊಂದಾಯಿಸಿ. ಐದು ತಿಂಗಳ ಓದಿನ ನಂತರ ಸಿ.ಪಿ.ಟಿ ಪರೀಕ್ಷೆಗೆ ಹಾಜರಾಗಬೇಕು. ವಾಣಿಜ್ಯ ವಿಭಾಗದಲ್ಲಿ ಪಿ.ಯು. ಶಿಕ್ಷಣ ಮುಗಿಸಿದ್ದರೆ ಶೇ 55ರಷ್ಟು ಮತ್ತು ವಾಣಿಜ್ಯೇತರ ವಿಷಯವಾಗಿದ್ದರೆ ಶೇ 60ರಷ್ಟು ಅಂಕ ಪಡೆದಿರಬೇಕು. ಈ ಪರೀಕ್ಷೆಯಲ್ಲಿ ಅಕೌಂಟಿಂಗ್‌ನ ಮೂಲಭೂತ ಜ್ಞಾನ, ಅರ್ಥಶಾಸ್ತ್ರ, ವಾಣಿಜ್ಯ ಕಾನೂನು ಮತ್ತು ಗಣಿತಕ್ಕೆ ಸಂಬಂಧಿಸಿದ ವಿಷಯಗಳು ಇರುತ್ತವೆ.

ಎರಡನೇ ಹಂತ: ಸಿ.ಪಿ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಎರಡನೇ ಹಂತವಾದ ಐ.ಪಿ.ಸಿ.ಸಿ. ( ಇಂಟಿಗ್ರೇಟೆಡ್ ಪ್ರೊಫೆಷನಲ್ ಕಾಂಪಿಟೆನ್ಸ್ ಕೋರ್ಸ್) ಗೆ ನೊಂದಾಯಿಸಿಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಅಕೌಂಟಿಂಗ್, ಕಾರ್ಪೊರೇಟ್ ಕಾನೂನು, ಕಾಸ್ಟ್ ಮ್ಯಾನೇಜ್‌ಮೆಂಟ್‌, ತೆರಿಗೆ, ಫೈನಾನ್ಸ್ ಇತರ ವಿಷಯಗಳಿರುತ್ತವೆ. ಈ ಪರೀಕ್ಷೆಯಲ್ಲಿ ಎರಡು ಗುಂಪುಗಳಿದ್ದು ಎರಡರಲ್ಲೂ ತೇರ್ಗಡೆ ಹೊಂದಬೇಕು. ಒಂದು ಗುಂಪನ್ನು ತೇರ್ಗಡೆ ಹೊಂದಿ ಇನ್ನೊಂದು ಗುಂಪನ್ನು ಆರ್ಟಿಕಲ್‌ಶಿಪ್ ಮಾಡುತ್ತ ಮುಗಿಸಿಕೊಳ್ಳಬಹುದು. ಐ.ಪಿ.ಸಿ.ಸಿ. ಪರೀಕ್ಷೆ ತೇರ್ಗಡೆಯಾದ ನಂತರ ಮೂರು ವರ್ಷಗಳ ಆರ್ಟಿಕಲ್‌ಶಿಪ್ ಮಾಡಬೇಕು. ಅಂದರೆ ಈಗಾಗಲೇ ಚಾರ್ಟ್‌ರ್ಡ್‌ ಅಕೌಂಟೆಂಟ್ ಆಗಿರುವವರ ಜೊತೆ ಅಥವಾ ಚಾರ್ಟ್‌ರ್ಡ್‌ ಅಕೌಂಟೆನ್ಸಿ ಮಾಡುವ ಸಂಸ್ಥೆಯಲ್ಲಿ ಇಂಟರ್ನ್ ಆಗಿ ಕೆಲಸದ ಅನುಭವ ಪಡೆಯಬೇಕು. ಆರ್ಟಿಕಲ್‌ಶಿಪ್ ಸಮಯದಲ್ಲಿ ಸಂಸ್ಥೆಗಳು ಅಭ್ಯರ್ಥಿಗಳಿಗೆ ಸಹಾಯಧನವನ್ನು ಕೊಡುತ್ತವೆ.

ಮೂರನೇ ಹಂತ: ಆರ್ಟಿಕಲ್‌ಶಿಪ್ ಮುಗಿಸಿದ ನಂತರ ಹಾಗೂ ಐ.ಪಿ.ಸಿ.ಸಿ. ಪರೀಕ್ಷೆಯ ಎರಡು ಗುಂಪುಗಳಲ್ಲಿ ತೇರ್ಗಡೆ ಹೊಂದಿದ ನಂತರ ಅಂತಿಮ‌ವಾಗಿ ಎಫ್. ಸಿ. ( ಫೈನಲ್‌ ಕೋರ್ಸ್ ) ಪರೀಕ್ಷೆಗೆ ನೊಂದಾಯಿಸಿಕೊಳ್ಳಬೇಕು. ಈ ಪರೀಕ್ಷೆಯಲ್ಲಿಯೂ ಎರಡು ಗುಂಪುಗಳಿದ್ದು ಎರಡನ್ನೂ ತೇರ್ಗಡೆ ಹೊಂದಬೇಕು. ಕಾರ್ಪೊರೇಟ್ ಮತ್ತು ಅರ್ಥಶಾಸ್ತ್ರದ ಕಾನೂನುಗಳು, ಕಾಸ್ಟ್‌ ಮ್ಯಾನೇಜ್‌ಮೆಂಟ್, ತೆರಿಗೆ, ಅಂತರರಾಷ್ಟ್ರೀಯ ತೆರಿಗೆ, ಫೈನಾನ್ಸ್, ಆಡಿಟಿಂಗ್ ಹೀಗೆ ಅನೇಕ ವಿಷಯಗಳಿರುತ್ತವೆ.

ಸಿ.ಎ. ಪರೀಕ್ಷೆ ಬರೆಯಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸಿ.ಪಿ.ಟಿ. ಪರೀಕ್ಷೆಗೆ ಒಮ್ಮೆ ನೋಂದಣಿ ಆದಲ್ಲಿ ಮೂರು ವರ್ಷದ ಅವಧಿ, ಐ.ಪಿ.ಸಿ.ಸಿ. ಮತ್ತು ಅಂತಿಮ ಪರೀಕ್ಷೆಗೆ ಐದು ವರ್ಷಗಳ ಅವಧಿ ಇದ್ದು, ಅದರೊಳಗೆ ತೇರ್ಗಡೆ ಆಗದಿದ್ದರೆ ಪುನಃ ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆಯಬಹುದು. ಎಲ್ಲ ಪರೀಕ್ಷೆಗಳು ಸೇರಿ ಕೇವಲ ಐವತ್ತು ಸಾವಿರ ರೂಪಾಯಿಯಷ್ಟು ಶುಲ್ಕವಾಗುತ್ತದೆ. ಕೋಚಿಂಗ್ ಪಡೆಯುವುದಾದರೆ ಆಯಾ ಸಂಸ್ಥೆಯ ಅನುಗುಣವಾಗಿ ಶುಲ್ಕವಿರುತ್ತದೆ.

ಈ ಬಗ್ಗೆ ವಿವರವಾದ ಮಾಹಿತಿ, ಪರೀಕ್ಷಾ ವೇಳಾಪಟ್ಟಿ, ವಿಷಯಗಳು ಮತ್ತು ನೋಂದಣಿಗೆ ಭಾರತೀಯ ಚಾರ್ಟ್‌ರ್ಡ್ ಅಕೌಂಟೆಂಟ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್www.icai.orgನ್ನು ಪರಿಶೀಲಿಸಿ. ಸಿ.ಎ. ಪರೀಕ್ಷೆ ತೇರ್ಗಡೆ ಆಗಲು ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆ ಇರುವುದರಿಂದ ನಿಮ್ಮ ಹತ್ತಿರದ ಒಳ್ಳೆಯ ಕೋಚಿಂಗ್ ಸೆಂಟರ್‌ ಸಹಾಯ ಪಡೆಯಿರಿ. ಕೋಚಿಂಗ್ ಇಲ್ಲದೆ ಪಾಸಾದವರು ಇದ್ದರೂ ಓದುವ ಕ್ರಮ, ಕೆಲವು ಮಾರ್ಗದರ್ಶನ ಪಡೆಯಲು ಕೋಚಿಂಗ್ ಸಹಾಯವಾಗುತ್ತದೆ.

ಪಿ.ಯು.ಸಿ. ವಾಣಿಜ್ಯ ಪರೀಕ್ಷೆ ತೇರ್ಗಡೆ ಹೊಂದಿದ ನಂತರ ನಿಮ್ಮ ಬಳಿ ಕೆಲವು ಆಯ್ಕೆಗಳಿವೆ. ಒಂದನೆಯದು, ನಿಮ್ಮ ಸಂಪೂರ್ಣ ಸಮಯ ಮತ್ತು ಶಕ್ತಿಯನ್ನು ಸಿ.ಎ. ಪರೀಕ್ಷಾ ತಯಾರಿಗಾಗಿ ಮೀಸಲಿಟ್ಟು ಸಿ.ಎ. ಓದಬಹುದು. ಎರಡನೆಯದು ಬಿ.ಕಾಂ. ಪದವಿಯನ್ನು ರೆಗ್ಯುಲರ್ ಆಗಿ ಓದುತ್ತ, ಸಂಜೆ ಸಿ.ಎ. ತಯಾರಿ ನಡೆಸಿಕೊಂಡು ಸಿ.ಎ. ಪರೀಕ್ಷೆಯನ್ನು ಬರೆಯಬಹುದು. ನಿಮ್ಮ ಪದವಿ ಮುಗಿಯುವುದರೊಳಗೆ ಮೊದಲೆರಡು ಪರೀಕ್ಷೆ ಪಾಸು ಮಾಡಿಕೊಂಡು ಪದವಿ ಮುಗಿದ ನಂತರ ಆರ್ಟಿಕಲ್‌ಶಿಪ್ ಮಾಡಿಕೊಂಡು ಸಿ.ಎ.ಮುಂದುವರೆಸಬಹುದು.

ಮೂರನೆಯದಾಗಿ ಸಿ.ಎ. ಪರೀಕ್ಷೆ ಬರೆಯುತ್ತ ದೂರ ಶಿಕ್ಷಣದಲ್ಲಿ ಅಥವಾ ಸಂಜೆ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಮಾಡಬಹುದು. ಸಿ.ಎ.‌‌ ಮಾಡುತ್ತಿರುವಾಗ ಪದವಿ ಓದುವ ಆಯ್ಕೆಯನ್ನು ಪರಿಗಣಿಸಲು ಕಾರಣ ಏನೆಂದರೆ, ಸಿ.ಎ. ಪಾಸಾದಲ್ಲಿ ಅದು ಬೇರೆಲ್ಲಾ ಶಿಕ್ಷಣಕ್ಕಿಂತ ಹೆಚ್ಚು ಆದಾಯ, ಗೌರವ ಮತ್ತು ವೃತ್ತಿ ಅವಕಾಶಗಳನ್ನು ಒದಗಿಸುತ್ತದೆ. ಆದರೆ ಒಂದು ವೇಳೆ ಸಿ.ಎ. ಪಾಸಾಗದಿದ್ದಲ್ಲಿ ನಮ್ಮ ವಿದ್ಯಾರ್ಹತೆ ಕೇವಲ ದ್ವೀತಿಯ ಪಿ.ಯು.ಸಿ.ಯಾಗಿ ಉಳಿಯುವುದರಿಂದ, ಭವಿಷ್ಯದ ಸುರಕ್ಷತೆ ಮತ್ತು ಬೇರೆ ಪರ್ಯಾಯ ಆಯ್ಕೆಗಳಿಗಾಗಿ ಪದವಿ ಮಾಡಿಕೊಂಡರೆ ಉತ್ತಮ. ನಿಮ್ಮ ಆತ್ಮವಿಶ್ವಾಸ ಮತ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕ್ಕೊಂಡು ನಿರ್ಧರಿಸಿ.‌

ಸಿ.ಎ. ತೇರ್ಗಡೆ ಹೊಂದಿದ ನಂತರ ಭಾರತೀಯ ಚಾರ್ಟ್‌ರ್ಡ್‌ ಅಕೌಂಟೆನ್ಸಿ ಸಂಸ್ಥೆಯ ಸದಸ್ಯತ್ವ ದೊರಕುತ್ತದೆ. ಸರ್ಕಾರಿ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ, ತೆರಿಗೆ ಸಂಸ್ಥೆಗಳಲ್ಲಿ, ಆಡಿಟಿಂಗ್ ಸಂಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ ಮತ್ತು ಸ್ವಂತ ಆಡಿಟರ್ ಆಗಿ ಕೂಡ ಸೇವೆ ಸಲ್ಲಿಸಬಹುದು.

ಸಿ.ಎ. ಓದಲು ಬಹಳ ಮುಖ್ಯವಾಗಿ ಬೇಕಾಗಿರುವುದು ದೃಢವಾದ ಆತ್ಮವಿಶ್ವಾಸ ಮತ್ತು ಬದ್ಧತೆ. ಸರಿಯಾದ ವೇಳಪಟ್ಟಿ ಮಾಡಿಕೊಂಡು ಅದಕ್ಕೆ ಬದ್ಧರಾಗಿ ದಿನನಿತ್ಯ ನಿಗದಿತ ಸಮಯ ಕೊಟ್ಟು ಪರಿಶ್ರಮ ಪಡಬೇಕು. ಕೆಲವೊಮ್ಮೆ ನಾವು ಎಣಿಸಿದಷ್ಟು ಫಲಿತಾಂಶ ಬರೆದೇ ಇರಬಹುದು. ನಮ್ಮ ಫಲಿತಾಂಶ ಅಥವಾ ಬೇರೆಯವರ ಫಲಿತಾಂಶದಿಂದ ವಿಚಲಿತರಾಗದೇ ಆತ್ಮವಿಶ್ವಾಸದಿಂದ ಮತ್ತೆ ಸತತ ಪರಿಶ್ರಮ ಪಡಬೇಕಾಗುತ್ತದೆ. ಮೊದಲನೇ ಪ್ರಯತ್ನದಲ್ಲಿ ಎಲ್ಲಾ ಹಂತಗಳಲ್ಲಿ ತೇರ್ಗಡೆಯಾಗಿ 23ನೇ ವಯಸ್ಸಿಗೆ ಸಿ.ಎ.‌ ಆದವರು ಇದ್ದಾರೆ. ಬಹಳ ಅವಕಾಶಗಳ ನಂತರ ತೇರ್ಗಡೆ ಹೊಂದಿ ಸಿ.ಎ. ಆದವರೂ ಇದ್ದಾರೆ. ಹೀಗಾಗಿ ನಮ್ಮ ಪ್ರಯತ್ನ ಮತ್ತು ಪರಿಶ್ರಮವನ್ನು ನಾವು‌‌‌ ಮಾಡುತ್ತ ನಮ್ಮ ಸಮಯಕ್ಕಾಗಿ ಕಾಯಬೇಕು. ಆಲ್ ದಿ ಬೆಸ್ಟ್.

**

ನಾನು ಬಿ.ಸಿ.ಎ. ಹಾಗೂ ಎಂ.ಸಿ.ಎ. ಮಾಡಿದ್ದೇನೆ. ಸದ್ಯ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ಸಿ.ಎ. ಮಾಡಬೇಕೆಂಬ ಆಸೆಯಿದೆ. ಅದು ಎಷ್ಟು ವರ್ಷಗಳ ಕೋರ್ಸ್‌? ಕೋಚಿಂಗ್‌ ಕೇಂದ್ರಗಳು ಯಾವವು?
-ಗಾಯತ್ರಿ ಎಸ್‌.ಬಿ., ಊರು ಬೇಡ

ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಸಿ.ಎ. ಪರೀಕ್ಷೆಯ ಮೊದಲ ಪರೀಕ್ಷೆ ಆದ ಸಿ.ಪಿ.ಟಿ.ಯಿಂದ ವಿನಾಯಿತಿ ಇದ್ದು ನೇರವಾಗಿ ಎರಡನೇ ಹಂತದ ಪರೀಕ್ಷೆ ಐ.ಪಿ.ಸಿ.ಸಿ.ಗೆ ನೊಂದಾಯಿಸಿಕೊಳ್ಳಬಹುದು. ಕಾಮರ್ಸ್ ಪದವಿಯಾದರೆ ಶೇ 55 ಅಂಕ, ಇತರ ಪದವಿಯಾದರೆ ಶೇ 60 ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಹೀಗಾಗಿ, ನೀವು ನೇರವಾಗಿ ಎರಡನೇ ಹಂತದ ಪರೀಕ್ಷೆಗೆ ನೊಂದಾಯಿಸಿಕೊಂಡು ಪರೀಕ್ಷಾ ತಯಾರಿ ಪ್ರಾರಂಭಿಸಬಹುದು. ನಂತರದ ಪ್ರಕ್ರಿಯೆಗಳು ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯಾಗಿದ್ದು ಆ ಬಗ್ಗೆ ಮಾಹಿತಿಗಾಗಿ ಮೇಲಿನ ಉತ್ತರವನ್ನು ಗಮನಿಸಿ.

ಐ.ಪಿ.ಸಿ.ಸಿ.ಪರೀಕ್ಷೆಗೆ ನೊಂದಾಯಿಸಿದ ಒಂಬತ್ತು ತಿಂಗಳಲ್ಲಿ ಪರೀಕ್ಷೆ ಬರೆದು ತೇರ್ಗಡೆ ಆದ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ಮುಗಿಸಿ ಅಂತಿಮ ಪರೀಕ್ಷೆ ಬರೆಯಬೇಕು. ಎಲ್ಲ ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದರೆ ನಿಮ್ಮ ಸಿ.ಎ. ಶಿಕ್ಷಣವು ನಾಲ್ಕು ವರ್ಷಗಳಲ್ಲಿ ಮುಗಿಯುತ್ತದೆ.

ಜೆ.ಕೆ. ಶಹಾ ಕ್ಲಾಸಸ್, ಯಶಸ್ ಅಕಾಡೆಮಿ, ಸಂಪತ್ ಅಕಾಡೆಮಿ,‌‌ ಸಿ.ಎ.ಪಿ.ಎಸ್. ಸಂಸ್ಥೆಗಳು ಬೆಂಗಳೂರಿನ ಪ್ರತಿಷ್ಠಿತ ಸಿ.ಎ. ಕೋಚಿಂಗ್ ನೀಡುವ ಸಂಸ್ಥೆಗಳು. ಈ ಸಂಸ್ಥೆಗಳ ಈಗಿನ ಗುಣಮಟ್ಟದ ಕುರಿತು ಅಲ್ಲಿನ ಸಿ.ಎ. ವಿದ್ಯಾರ್ಥಿಗಳಲ್ಲಿ ಕೇಳಿ ವಿಚಾರಿಸಿಕೊಂಡು ನಿರ್ಧರಿಸಿ.

ನಿಮಗೆ ಪರಿಚಯ ಇರುವವರ ಸಂಪರ್ಕದಿಂದ ಯಾರಾದರೂ ಸಿ.ಎ. ಓದುತ್ತಿರುವ ವಿದ್ಯಾರ್ಥಿಗಳನ್ನು ಅಥವಾ ಸಿ.ಎ. ಮುಗಿಸಿರುವವರನ್ನು ಹುಡುಕಿ, ಅವರ ಬಳಿ ಸಿ.ಎ. ಪರೀಕ್ಷೆಗೆ ಬೇಕಾಗುವ ತಯಾರಿ, ಬದ್ಧತೆ, ಪರಿಶ್ರಮ, ಸಮಯ, ಓದು ಇತ್ಯಾದಿಗಳನ್ನು ಕೂಲಂಕಷವಾಗಿ ಚರ್ಚಿಸಿ. ಆ ಬಗ್ಗೆ ವಿವರವಾಗಿ ತಿಳಿದು ನೀವು ಸಿ.ಎ. ಓದುವುದರ ಬಗ್ಗೆ ‌ನಿರ್ಧರಿಸಿ, ಯೋಜನೆ ರೂಪಿಸಿಕೊಂಡು ಮುಂದುವರಿಸಿ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT