ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಬಿಟಿಎ ಮುಗಿಸಿ ಐಎಎಸ್‌ ಅಧಿಕಾರಿಯಾಗಬಹುದೇ? 

Last Updated 31 ಅಕ್ಟೋಬರ್ 2019, 5:46 IST
ಅಕ್ಷರ ಗಾತ್ರ

ನನಗೆ ಐಎಎಸ್‌ ಅಧಿಕಾರಿಯಾಗುವ ಆಸೆ ಇದೆ. ನಾನು ಈಗ ಬಿ.ಎಸ್‌ಸಿ. ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಆದರೆ ನನಗೆ ಅದು ಕಷ್ಟವಾಗುತ್ತಿದೆ. ಹಾಗಾಗಿ ನಾನು ಬಿಟಿಎ (ಬ್ಯಾಚುಲರ್ ಆಫ್ ಟೂರಿಸಂ ಅಡ್ಮಿನಿಸ್ಟ್ರೇಷನ್‌) ಮಾಡಬೇಕು ಎಂದುಕೊಂಡಿದ್ದೇನೆ. ಬಿಟಿಎ ಮುಗಿದ ನಂತರ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬಹುದೇ ತಿಳಿಸಿ.

-ಮಾನವೀಯ, ಧಾರವಾಡ

ಮಾನವೀಯ, ಯುಪಿಎಸ್‌ಸಿಪರೀಕ್ಷೆ ಬರೆಯಲು ಯುಜಿಸಿ ಇಂದ ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ಮಾಡಿರುವ ಯಾವುದೇ ಪದವಿ ಶಿಕ್ಷಣ ಪಡೆದರೆ ಸಾಕು. ಬಿಟಿಎ ಕೂಡ ಪದವಿ ಶಿಕ್ಷಣವಾಗಿರುವುದರಿಂದ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು. ಕಳೆದ ವರ್ಷದ ಯುಪಿಎಸ್‌ಸಿ ಪರೀಕ್ಷೆಯ ಅಧಿಸೂಚನೆಯನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಿಂದ ಪಡೆದು ಓದಿ, ಪರೀಕ್ಷೆಯ ಕುರಿತು ಪೂರ್ಣ ಮಾಹಿತಿ ಪಡೆಯಿರಿ. ಹಾಗೆ ಯೂಟ್ಯೂಬ್‌ನಲ್ಲಿಯು ಕೂಡ ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಮಾಹಿತಿ ಇರುವ ವಿಡಿಯೊಗಳನ್ನು ವೀಕ್ಷಿಸಿ ಮಾಹಿತಿ ಪಡೆಯಿರಿ. ದಿನನಿತ್ಯ ಪತ್ರಿಕೆಗಳನ್ನು ಓದಿ ನಿಮ್ಮ ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡುವವರು ಬೇರೆಯವರಿಗಿಂತ ಭಿನ್ನವಾಗಿ ದಿನಪತ್ರಿಕೆಗಳನ್ನು ಹೇಗೆ ಓದಬೇಕು ಎನ್ನುವುದರ ಬಗ್ಗೆಯೂ ಯುಟ್ಯೂಬ್‌ನಲ್ಲಿ ಪಾಠಗಳಿವೆ. ಅವುಗಳನ್ನು ಗಮನಿಸಿ. ಸದ್ಯ ಉತ್ತಮ ಜ್ಞಾನದೊಂದಿಗೆ ನಿಮ್ಮ ಪದವಿ ಶಿಕ್ಷಣವನ್ನು ಪೂರೈಸುವ ಬಗೆಗೆ ತಯಾರಿ ಮಾಡಿಕೊಳ್ಳಿ.
ನೀವು ಬಿ.ಎಸ್‌ಸಿ. ಓದುವುದು ಕಷ್ಟವೆನ್ನುವ ಕಾರಣಕ್ಕೆ ಬಿಟಿಎ ಮಾಡುವ ನಿರ್ಧಾರ ಮಾಡಿದ್ದರೆ ಆ ಬಗ್ಗೆ ಒಮ್ಮೆ ಆಲೋಚಿಸಿ ಅಂತಿಮ ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದು ನನ್ನ ಭಾವನೆ. ಬಿ.ಎಸ್‌ಸಿ. ಯಾಕೆ ಕಷ್ಟ ಆಗ್ತಾ ಇದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಬಿಟಿಎ ಸೇರುವ ಮುನ್ನ ಯಾಕೆ ಬಿಟಿಎ ಮಾಡಬೇಕು ಎಂದು ಸ್ಪಷ್ಟ ಮಾಡಿಕೊಳ್ಳಿ. ಬಿಟಿಎ ಪದವಿಯಲ್ಲಿ ನೀವು ಓದಬೇಕಿರುವ ವಿಷಯಗಳು ಯಾವವು, ಅವುಗಳು ನಿಮಗೆ ಆಸಕ್ತಿ ಇವೆಯಾ, ಬಿಟಿಎ ಮುಗಿಸಿದ ನಂತರ ಯಾವ ರೀತಿಯ ಕೆಲಸಗಳು ಸಿಗುತ್ತವೆ, ಅದು ನಿಮ್ಮ ಜೀವನಕ್ಕೆ ಮತ್ತು ಪರೀಕ್ಷೆಗೆ ಹೇಗೆ ಪ್ರಯೋಜನವಾಗುತ್ತದೆ ಇತ್ಯಾದಿ ಮಾಹಿತಿಗಳನ್ನು ಹುಡುಕಿ ಯೋಚಿಸಿ ನಿರ್ಧರಿಸಿ. ಶುಭಾಶಯ.

***

ನನ್ನದು ದ್ವಿತೀಯ ಪಿಯುಸಿ ಮುಗಿದಿದೆ. ಬಿ.ಎ ಓದುತ್ತಿದ್ದೇನೆ. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಪುಣೆಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಪರೀಕ್ಷೆ ಬರೆಯಲು ಆಗುತ್ತಿಲ್ಲ. ಪಿಎಸ್‌ಐ ಆಗಬೇಕು ಎಂಬುದು ನನ್ನ ಕನಸು. ಓದುವುದಕ್ಕೆ ಸಾಧ್ಯ ಆಗುತ್ತಿಲ್ಲ ಏನು ಮಾಡುವುದು ತಿಳಿಸಿ.

-ಶರಣು ಕ್ಷತ್ರಿ, ಊರು ಬೇಡ

ಶರಣು, ಭಾರತದಂತಹ ದೇಶದಲ್ಲಿ ನಮ್ಮಂತಹ ಅನೇಕರ ಕನಸು, ಆಶೋತ್ತರಗಳನ್ನು ಪೂರೈಸಿಕೊಳ್ಳಲು ತೊಡಕಾಗುವಂತಹ ಪ್ರಮುಖವಾದ ಕಾರಣವೇ ನಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಸಮಸ್ಯೆಗಳು. ಆದರೆ ಈ ಸಮಸ್ಯೆಗಳ ಮಧ್ಯೆಯೂ ಅವನ್ನೆಲ್ಲಾ ನಿಭಾಯಿಸಿ ತಾವು ಅಂದುಕೊಂಡಿದ್ದನ್ನು ಸಾ‍ಧಿಸಿದ ಅನೇಕ ಯುವಕ ಯುವತಿಯರು ನಮ್ಮ ಮುಂದಿದ್ದಾರೆ. ಹಾಗೆ ಸಾಧಿಸಲು ಆಗದೇ ಕೈಚೆಲ್ಲಿದವರು ಇದ್ದಾರೆ. ಹೊರಗಿನ ಪರಿಸ್ಥಿತಿ ಮತ್ತು ಒತ್ತಡಗಳು ನಾವು ಸಾಧಿಸದಿರುವುದಕ್ಕೆ ಕಾರಣವಾಗಿದ್ದರು ನಮ್ಮ ಪ್ರಯತ್ನ ಮತ್ತು ಸತತ ಪರಿಶ್ರಮವೇ ಇಲ್ಲಿ ಪ್ರಮುಖವಾಗಿರುತ್ತದೆ. ಹಾಗಾಗಿ, ನಾವು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿ ನಡೆಸಬೇಕಾಗುತ್ತದೆ.

ಮೊದಲನೆಯದಾಗಿ, ನಮ್ಮ ಅಥವಾ ನಮ್ಮದಲ್ಲದ ಯಾವುದೋ ಕಾರಣಗಳಿಂದ ನಾವು ಅನೇಕ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಅದು ಯಾವುದೇ ಕಾರಣಗಳಿಗಾಗಿದ್ದರು, ಇವತ್ತು ಅದನ್ನು ಹೇಗೆ ನಿಭಾಯಿಸಬೇಕು ಎಂಬ ಆಯ್ಕೆಯಷ್ಟೇ ನಮ್ಮ ಬಳಿ ಇದೆ. ಹಾಗಾಗಿ ಇರುವ ವಾಸ್ತವ ಪರಿಸ್ಥಿತಿಯನ್ನು ಒಪ್ಪಿಕೊಂಡು ಮುಂದುವರಿಯಬೇಕಾಗುತ್ತದೆ.

ಈಗ ಕೆಲಸ ಮಾಡುವುದು ನಿಮ್ಮ ಅಗತ್ಯ ಆಗಿರುವುದರಿಂದ ಅದಕ್ಕೆ ಪೂರಕವಾಗಿ ನಿಮ್ಮ ಶಿಕ್ಷಣವನ್ನು ಪೂರೈಸಿಕೊಳ್ಳಲು ಯೋಜನೆ ಮಾಡಿ. ದೂರ ಶಿಕ್ಷಣದಲ್ಲಿ ಬಿ.ಎ. ಮಾಡಲು ಪ್ರಯತ್ನಿಸಿ. ಈ ಕೆಲಸದಲ್ಲಿದ್ದು ಸ್ವಲ್ಪವೂ ಓದಲು ಆಗುತ್ತಿಲ್ಲ ಎಂದಾದರೆ, ಈ ಕೆಲಸ ಮಾಡುತ್ತಲೇ ಬೇರೆ ಯಾವ ಕೆಲಸದಿಂದ ಇಷ್ಟೇ ಆದಾಯದೊಂದಿಗೆ ಓದಲು ಮತ್ತು ಪರೀಕ್ಷೆ ಬರೆಯಲು ಅನುಕೂಲ ಆಗುವಂತ ಕೆಲಸ ನೋಡಿಕೊಳ್ಳುವುದು ಉತ್ತಮ. ಹಾಗೆ, ಕಡಿಮೆ ಸಮಯ ವಿನಿಯೋಗಿಸಿ ನಿಮಗೆ ಬೇಕಾಗುವಷ್ಟು ಆದಾಯ ಪಡೆದುಕೊಳ್ಳುವ ಕೆಲಸಗಳನ್ನು ನೋಡಿಕೊಂಡರೆ ಉಳಿದ ಸಮಯವನ್ನು ನಿಮ್ಮ ಓದಿಗೆ ಮೀಸಲಿಡಬಹುದು. ಸದ್ಯ ಪಿಎಸ್‌ಐ ಕುರಿತು ತಯಾರಿಯ ಚಿಂತೆ ಹೆಚ್ಚು ಮಾಡದೇ ಅದಕ್ಕೆ ಅವಶ್ಯ ಇರುವ ತಯಾರಿಯ ಕುರಿತು ಆಲೋಚಿಸಿ. ಅಂದರೆ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಪದವಿಯನ್ನು ಕಡ್ಡಾಯವಾಗಿ ತೇರ್ಗಡೆ ಹೊಂದಿರಬೇಕು. ಅದಕ್ಕಾಗಿ ಈಗ ಪದವಿ ಶಿಕ್ಷಣವನ್ನು ಪೂರೈಸಿಕೊಳ್ಳುವ ಬಗ್ಗೆ ಕಾರ್ಯಪೃವತ್ತರಾಗಿ.

ಜೊತೆಗೆ ಪಿಎಸ್ಐ ತಯಾರಿಯ ಭಾಗವಾಗಿ ದಿನ ದೈಹಿಕ ಆರೋಗ್ಯ ಕಾಪಾಡಲು ಮನೆಯಲ್ಲಿಯೇ ದೈಹಿಕ ಕಸರತ್ತು ಮತ್ತು ಓಟದ ಮುಖಾಂತರ ತಯಾರಿ ಮಾಡಿಕೊಳ್ಳಿ. ನಿತ್ಯ ದಿನಪತ್ರಿಕೆ ಓದಿ. ನಿಮ್ಮ ಪ್ರಸಕ್ತ ವಿದ್ಯಮಾನಗಳ ಕುರಿತಾದ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಉಳಿದಂತೆ ಪಿಎಸ್ಐ ಪರೀಕ್ಷೆಗೆ ಬೇಕಾಗಿರುವ ನಿರ್ದಿಷ್ಟ ತಯಾರಿಯನ್ನು ನಿಮ್ಮ ಪದವಿ ಆದ ನಂತರ ಕೆಲಸ ಮಾಡುತ್ತ ಅಥವಾ ಆಗಿನ ಪರಿಸ್ಥಿತಿಯನ್ನು ನೋಡಿ ನಿರ್ಧರಿಸಿ. ಆಲ್ ದಿ ಬೆಸ್ಟ್.

***

ನನಗೆ 28 ವರ್ಷ. ನಾನೀಗ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಎಎಸ್ ಮಾಡಬೇಕು ಎಂಬ ಆಸೆ. ಆದರೆ ನನಗೆ ಓದಲು ಸಮಯ ಸಿಗುತ್ತಿಲ್ಲ. ನಾನು ಕೆಲಸ ಮಾಡಿಕೊಂಡೆ ಓದಬೇಕು. ಕೆಲಸ ಬಿಟ್ಟು ಓದಲು ಹೋದರೆ ವಯಸ್ಸಿನ ಅಂತರ ಕಾಡುತ್ತಿದೆ ಹಾಗೂ ನನ್ನ ಕುಟುಂಬ ನನ್ನ ಮೇಲೆ ಅವಲಂಬಿತವಾಗಿದೆ. ನಮಗೆ ಶಿಫ್ಟ್ ಪ್ರಕಾರ ಕೆಲಸ ಇರುತ್ತದೆ. ಬೆಳಿಗ್ಗೆ 6ರಿಂದ 3, ಮಧ್ಯಾಹ್ನ 3ರಿಂದ ರಾತ್ರಿ 12 ಗಂಟೆ, ಜನರಲ್ ಶಿಪ್ಟ್ ಎಂದರೆ 10ರಿಂದ 6 ಇರುತ್ತದೆ. ಏನು ಮಾಡುವುದೋ ಎಂಬ ಗೊಂದಲದಲ್ಲಿ ಇದ್ದೇನೆ, ಮುಂದೆ ಏನು ಮಾಡಬಹುದು ತಿಳಿಸಿ?

-ಹೆಸರು, ಊರು ಬೇಡ

ಮೇಲಿನ, ಪ್ರಶ್ನೆಗೆ ಬರೆದಿರುವ ಉತ್ತರವನ್ನು ಒಮ್ಮೆ ಓದಿಕೊಳ್ಳಿ. ನಮಗಿರುವ ವಾಸ್ತವಿಕ ಸಮಸ್ಯೆಗಳನ್ನು ಒಪ್ಪಿಕೊಂಡು ಸವಾಲಾಗಿ ಸ್ವೀಕರಿಸಿ. ಅದರ ಹಿನ್ನೆಲೆಯಲ್ಲೇ ಯೋಚಿಸಿ ಮಾರ್ಗಗಳನ್ನು ಕಂಡುಕೊಳ್ಳುವುದು ನಮ್ಮ ಅಗತ್ಯವಾಗಿದೆ. ಶಿಫ್ಟ್ ಅಥವಾ ಪಾಳಿಗಳಿರುವ ಕೆಲಸ ಮಾಡುವಾಗ ಓದಲು ಸಮಯ ಹೊಂದಿಸಿಕೊಳ್ಳುವುದು ಸ್ವಲ್ಪ ಕಷ್ಟ. ಕೆಲಸ ಮಾಡಲೇಬೇಕಿರುವ ಅನಿವಾರ್ಯತೆ ಇರುವುದರಿಂದ ಕೆಲಸ ಬಿಟ್ಟು ಓದಲು ಸಾಧ್ಯವಿಲ್ಲ. ಆದರೆ ಇದರಷ್ಟು ಅಥವಾ ಇದಕ್ಕಿಂತ ಹೆಚ್ಚು ಆದಾಯ ಕೊಡಬಲ್ಲ ಶಿಫ್ಟ್ ಇರದ ಬೇರೆ ಕೆಲಸ ಹುಡುಕುವ ಪ್ರಯತ್ನ ಮಾಡಿ. ನಿಗದಿತ ಸಮಯದಲ್ಲಿ ಮಾತ್ರ ಇರುವ ಕೆಲಸ ಹುಡುಕಿಕೊಂಡರೆ ನಿಮ್ಮ ಉಳಿದ ಸಮಯವನ್ನು ಓದಿಗೆ ಮೀಸಲಿಡಬಹುದು. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಡಾ. ನಾಗರ್ಜುನ್ ಗೌಡ ಎನ್ನುವವರು ಕೆಲಸ ಮಾಡಿಕೊಳ್ಳುತ್ತ ತಯಾರಿ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆಯನ್ನು ತೇರ್ಗಡೆ ಮಾಡಿಕೊಂಡಿದ್ದಾರೆ. ಅವರ ಸಂದರ್ಶನಗಳನ್ನು ಯುಟ್ಯೂಬ್‌ನಲ್ಲಿ ನೋಡಿ ಮತ್ತು ಸಾಧ್ಯವಾದರೆ ಅವರನ್ನು ಅಥವಾ ಹಾಗೇ ಬೇರೆ ಯಾರಾದರು ನಿಮಗೆ ಗೊತ್ತಿರುವವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಿರಿ. ಇಂತಹ ಪರೀಕ್ಷೆಗಳಿಗೆ ಸೂಕ್ತವಾದ ಮಾರ್ಗದರ್ಶನ ಮತ್ತು ಸರಿಯಾದ ರೀತಿಯಲ್ಲಿ ತಯಾರಿ ಮಾಡುವುದು ಬಹಳ ಮುಖ್ಯ. ಹಾಗಾಗಿ ಆ ಕುರಿತು ಅನುಭವವಿರುವ ವ್ಯಕ್ತಿಗಳನ್ನು ಭೇಟಿಯಾಗಿ ಸಹಾಯ ಪಡೆಯಿರಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT