ಸರ್ಕಾರಿ ಶಾಲೆಗಳ ‘ಕೇರ್ ವರ್ಕ್ಸ್’

7
ಕಾಳಜಿ

ಸರ್ಕಾರಿ ಶಾಲೆಗಳ ‘ಕೇರ್ ವರ್ಕ್ಸ್’

Published:
Updated:

ಮ ಳೆ ಬಂದರೆ ಸೋರುವ ಮೇಲ್ಛಾವಣಿ, ಶುಚಿತ್ವ ಇಲ್ಲದ ಶೌಚಾಲಯ, ಕಿತ್ತು ಹೋಗಿದ್ದ ನೆಲಹಾಸು, ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದ ಗೋಡೆಗಳು, ಬಳಸಲಾಗದಷ್ಟು ಹಾಳಾಗಿದ್ದ ಪೀಠೋಪಕರಣಗಳು.

– ಇದು ನಗರದ ಇಬ್ಬಲೂರು ಸರ್ಕಾರಿ ಪ್ರಾಥಮಿಕ ಶಾಲೆಯ 2014ರಲ್ಲಿನ ಚಿತ್ರಣ. ಆದರೆ ಅದೀಗ ಸಂಪೂರ್ಣ ಬದಲಾಗಿದೆ!

ಈ ಶಾಲಾ ಕಟ್ಟಡ ಪೂರ್ಣವಾಗಿ ನವೀಕರಣಗೊಂಡಿದೆ. ತರಗತಿ ಕೊಠಡಿಗಳ ಗೋಡೆ ಮತ್ತು ಸೀಲಿಂಗ್‌ ಅನ್ನು ಭದ್ರಪಡಿಸಲಾಗಿದೆ. ಫ್ಲೋರಿಂಗ್‌ ರಿಪೇರಿ ಮಾಡಿ ನೆಲಹಾಸು ಸಜ್ಜುಗೊಳಿಸಲಾಗಿದೆ. ಬಳಕೆಗೆ ಯೋಗ್ಯವಾಗುವಂತೆ ಶೌಚಾಲಯ ರೂಪುಗೊಂಡಿದೆ. ಹೊಸ ಪೀಠೋಪಕರಣಗಳು ಬಂದಿವೆ. ಶುದ್ಧ ಕುಡಿಯುವ ನೀರು ದೊರೆಯುತ್ತಿದೆ. ಹೀಗೆ ಒಟ್ಟಾರೆ ಇಡೀ ಶಾಲೆಯ ಚಿತ್ರಣವೇ ಬದಲಾಗಿದೆ.

ಈ ಬದಲಾವಣೆ ಕೇವಲ ಇಬ್ಬಲೂರು ಶಾಲೆಗಷ್ಟೇ ಸೀಮಿತವಾಗಿಲ್ಲ. ಕೊಡತಿ, ಸೋಮ ಸುಂದರಪಾಳ್ಯ, ಪುಟ್ಟೇನಹಳ್ಳಿ ಸೇರಿದಂತೆ ನಗರದ 47 ಶಾಲೆಗಳ, 13 ಅಂಗನವಾಡಿಗಳ ಚಿತ್ರಣವೂ ಬದಲಾವಣೆಯಾಗಿದೆ.

ಮೂಲಸೌಕರ್ಯ ವೃದ್ಧಿಯ ಜತೆಗೆ ಈ ಶಾಲೆಗಳಲ್ಲಿ ನಿಯಮಿತವಾಗಿ ಮಕ್ಕಳ ಆರೋಗ್ಯ ತಪಾಸಣೆಯೂ ನಡೆಯುತ್ತಿವೆ. ಅದರಲ್ಲಿ ಮಕ್ಕಳ ಹಲ್ಲು, ಕಣ್ಣಿನ ತಪಾಸಣೆ ಮತ್ತು ಅಗತ್ಯ ಇರುವವರಿಗೆ ಚಿಕಿತ್ಸೆಗಳು ದೊರೆಯುತ್ತಿವೆ. ಶುಚಿತ್ವ ಕುರಿತು ಅರಿವು ಕಾರ್ಯಕ್ರಮಗಳು ನಡೆಯುತ್ತಿವೆ. ಶಿಕ್ಷಕರಿಗೆ ಜೀವನ ಕೌಶಲ, ವೃತ್ತಿ ಕೌಶಲ, ಸ್ಪೋಕನ್‌ ಇಂಗ್ಲಿಷ್‌ ಸೇರಿದಂತೆ ವಿವಿಧ ತರಬೇತಿಗಳು ನಡೆಯುತ್ತಿವೆ. ಅಲ್ಲದೆ ಶಾಲಾ ವಿದ್ಯಾರ್ಥಿಗಳ ‘ಯುವ ಸಂಸತ್ತು’ ಕ್ರಿಯಾಶೀಲವಾಗಿವೆ. ಯುವ ಸಂಸತ್ತಿನಲ್ಲಿನ ಶಾಲಾ ಸಚಿವರೇ (ಮಕ್ಕಳು) ವಿವಿಧ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡು ನಡೆಸುತ್ತಿದ್ದಾರೆ.

ಇವೆಲ್ಲದರ ಪರಿಣಾಮ ಶಾಲೆಗಳಲ್ಲಿ ಪ್ರವೇಶಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ನಿತ್ಯ ಮಕ್ಕಳ ಹಾಜರಾತಿಯೂ ಏರಿಕೆಯಾಗಿದೆ. ಜತೆಗೆ ಶಾಲೆ ತೊರೆಯುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ಯೂಸ್‌ ಕಾರ್ಪ್‌ನ ಅಂಗ ಸಂಸ್ಥೆ
ಇವಿಷ್ಟು ಕೆಲಸ ಕಾರ್ಯಗಳನ್ನು ಕೈಗೊಂಡಿರುವುದು ‘ಕೇರ್‌ವರ್ಕ್ಸ್‌ ಫೌಂಡೇಷನ್‌’ (ಸಿಡಬ್ಲ್ಯಎಫ್‌). ಇದು ಲಾಭರಹಿತ ಉದ್ದೇಶ ಹೊಂದಿದೆ. ಇಬ್ಬಲೂರು ಸರ್ಕಾರಿ ಪ್ರಾಥಮಿಕ ಶಾಲೆಯ ನವೀಕರಣ ಕಾರ್ಯವನ್ನು ಪ್ರಾಯೋಗಿಕವಾಗಿ ತೆಗೆದುಕೊಂಡ ಸಿಡಬ್ಲ್ಯುಎಫ್‌ ನಗರದ ವಿವಿಧೆಡೆಯಿರುವ 47 ಸರ್ಕಾರಿ ಶಾಲೆಗಳು, 13 ಅಂಗನವಾಡಿಗಳು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಸರ್ಕಾರಿ ಶಾಲೆಗಳ ನವೀಕರಣ ಕಾರ್ಯ ಕೈಗೊಂಡಿದೆ. ನವೀಕರಣ ಕಾಮಗಾರಿ ಪೂರ್ಣಗೊಂಡ ನಂತರವೂ ಅದರ ನಿರ್ವಹಣೆಯನ್ನು ಐದು ವರ್ಷಗಳವರೆಗೆ ಈ ಸಂಸ್ಥೆ ನಡೆಸುತ್ತದೆ. ಆ ನಂತರವೂ ವಿವಿಧ ಸಂಸ್ಥೆಗಳ ಜತೆಗೂಡಿ ಆ ಶಾಲೆಗಳ ಕಟ್ಟುನಿಟ್ಟಿನ ನಿರ್ವಹಣೆಗೆ ಕೈಜೋಡಿಸುವ ಬದ್ಧತೆಯನ್ನು ಇದು ಹೊಂದಿದೆ.

ಶಾಲೆಗಳಲ್ಲಿ ಶೌಚಾಲಯದ ನವೀಕರಣದ ಜತೆಗೆ ಅದರ ಶುಚಿತ್ವವನ್ನೂ ಐದು ವರ್ಷ ಈ ಸಂಸ್ಥೆ ನಿರ್ವಹಿಸುತ್ತದೆ. ಅದಕ್ಕಾಗಿ ಈ ಶಾಲೆಗಳಿಗೆ ಆಯಾ ನೇಮಿಸುವ ಈ ಸಂಸ್ಥೆ, ಅವರಿಗೆ ಫೆನಾಯಿಲ್‌, ಪೊರಕೆ, ಬ್ರೆಷ್‌ ಮತ್ತಿತರ ಸಲಕರಣೆಗಳನ್ನು ಕಾಲಕಾಲಕ್ಕೆ ಪೂರೈಸುತ್ತದೆ. ಅಲ್ಲದೆ ಶಾಲೆಯ ನಿರ್ವಹಣೆ ಮತ್ತು ಶುಚಿತ್ವನ್ನು ಪರಿಶೀಲಿಸಲೆಂದೇ ಪ್ರತಿ ಹತ್ತು ಶಾಲೆಗಳಿಗೆ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಿದೆ. ಅವರು ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಶಾಲೆಗಳಿಗೆ ಭೇಟಿ ನೀಡಿ ಶುಚಿತ್ವ ಸೇರಿದಂತೆ ಮತ್ತಿತರ ಅಗತ್ಯಗಳ ಕುರಿತು ಪರಿಶೀಲಿಸುತ್ತಾರೆ.

ಪ್ರತಿ ಶಾಲೆಗೆ ಸರಾಸರಿ ₹ 10 ಲಕ್ಷ ಖರ್ಚು
ಈ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ‘ಕ್ಯೂಸ್‌ ಕಾರ್ಪ್‌’ ಕಂಪನಿಯ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥರಾದ ಬಿ.ಎಸ್‌. ಸ್ಮಿತಾ ಅವರು,  ‘ಇಲ್ಲಿಯವರೆಗೂ 50 ಶಾಲೆಗಳ ನವೀಕರಣ ಕಾರ್ಯ ಕೈಗೊಂಡಿದ್ದೇವೆ. ಈ ಕಾರ್ಯಕ್ಕೆ ಪ್ರತಿ ಶಾಲೆಗೆ ಸರಾಸರಿ ₹ 10 ಲಕ್ಷ ಖರ್ಚಾಗಿದೆ. ಕ್ಯೂಸ್‌ ಕಾರ್ಪ್‌ ಕಂಪೆನಿ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯಡಿ ಸಿಡಬ್ಲ್ಯುಎಫ್‌ಗೆ ಆರ್ಥಿಕ ನೆರವು ನೀಡುತ್ತದೆ. ಅದರ ಮೂಲಕವೇ ಈ ಕಾರ್ಯಗಳು ನಡೆಯುತ್ತಿವೆ’ ಎನ್ನುತ್ತಾರೆ.

‘ನಮ್ಮ ಸಂಸ್ಥೆಯು ಶಾಲಾ ಬಲವರ್ಧನೆ ಕಾರ್ಯಕ್ರಮದಡಿ ಈ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿ ಶಾಲೆಗಳನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಸಂಬಂಧಿಸಿದ ಶಾಲೆಯಲ್ಲಿ ‘ಸ್ಕೂಲ್‌ ಮ್ಯಾಪಿಂಗ್‌’ ಮಾಡುತ್ತೇವೆ. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಎಸ್‌ಡಿಎಂಸಿಯವರು ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಇದರಲ್ಲಿ ಎಲ್ಲರೂ ಸೇರಿ ಶಾಲೆಯ ಕುಂದು ಕೊರತೆಗಳು, ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಪಟ್ಟಿ ಸಿದ್ಧಪಡಿಸುತ್ತಾರೆ. ಅದರಲ್ಲಿ ಶಾಲಾ ಪರಿಸರ, ತರಗತಿ ಪರಿಸರ, ಆರೋಗ್ಯ, ಕೌಶಲಾಭಿವೃದ್ಧಿ ಮತ್ತು ಶೈಕ್ಷಣಿಕ ಸಲಕರಣೆಗಳು ಎಂಬುದಾಗಿ ವಿಭಾಗಿಸಿಕೊಂಡು ಆದ್ಯತೆ ಮೇರೆಗೆ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದು ಅವರು ವಿವರಿಸುತ್ತಾರೆ.

ಮಕ್ಕಳ ಸಂಖ್ಯೆ ಹೆಚ್ಚಳ
‘ಈ ಕಾರ್ಯಕ್ರಮಗಳ ಫಲವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಹೆಚ್ಚಳವಾಗಿದೆ. ಸೋಮಸುಂದರ ಪಾಳ್ಯದಲ್ಲಿ 220 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 400ಕ್ಕೆ ಏರಿದೆ, ಇಬ್ಬಲೂರಿನಲ್ಲಿ 180 ಇದ್ದ ಸಂಖ್ಯೆ ಈಗ 200 ದಾಟಿದೆ. ಪುಟ್ಟೇನಹಳ್ಳಿ ಶಾಲೆಯಲ್ಲಿ ಈ ವರ್ಷ 156 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಇದೇ ರೀತಿ 50 ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಶಿಕ್ಷಕರು ತಾವು ಅನಿವಾರ್ಯವಾಗಿ ಮಾಡಬೇಕಿದ್ದ ಶುಚಿತ್ವ, ಶಾಲಾ ನಿರ್ವಹಣೆ ಮತ್ತಿತರ ಕೆಲಸಗಳಿಂದ ಮುಕ್ತರಾಗಿ ಗುಣಮಟ್ಟದ ಬೋಧನೆಗೆ ಒತ್ತು ನೀಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ನಮ್ಮ ಈ ಕಾರ್ಯದಿಂದ ಕೆಲ ಎನ್‌ಜಿಒಗಳು ಮತ್ತು ಸಿಎಸ್‌ಆರ್ ವಿಭಾಗ ಇಲ್ಲದ ಕಾರ್ಪೊರೇಟ್‌ ಕಂಪನಿಗಳು ನಮ್ಮೊಂದಿಗೆ ಕೈಜೋಡಿಸಿವೆ. ಸರ್ಕಾರ ಕೂಡ ಸಹಕಾರ ನೀಡುತ್ತಿದೆ. ಇತ್ತೀಚೆಗೆ ಕೊಡಗಿನಲ್ಲಿ ನೆರೆ ಹಾವಳಿಯಿಂದ 160ಕ್ಕೂ ಹೆಚ್ಚು ಶಾಲೆಗಳ ಕಟ್ಟಡಗಳ ಹಾಳಾಗಿವೆ. ಅವುಗಳನ್ನು ಪರಿಶೀಲಿಸಿ ನವೀಕರಣ ಕಾರ್ಯ ಕೈಗೊಳ್ಳುವಂತೆ ಸರ್ಕಾರ ನಮ್ಮ ಸಂಸ್ಥೆಗೆ ಸೂಚಿಸಿದೆ. ಇದರ ಜತೆಗೆ ಉತ್ತರ ಕರ್ನಾಟಕದ ಹಲವು ಶಾಲೆಗಳನ್ನು ನವೀಕರಣದ ಜತೆಗೆ ಬಲವರ್ಧಿಸುವ ಕೆಲಸ ಆಗಬೇಕಿದ್ದು, ಮುಂದಿನ ಶೈಕ್ಷಣಿ ವರ್ಷದಿಂದ ಯಾದಗಿರಿಯಲ್ಲಿ ಈ ಚುಟುವಟಿಕೆಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿದ್ದೇವೆ’ ಎನ್ನುತ್ತಾರೆ ಅವರು.

*
ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಚಟುವಟಿಕೆ ಕೈಗೊಂಡಿದ್ದೇವೆ
–ಬಿ.ಎಸ್‌. ಸ್ಮಿತಾ, ಕ್ಯೂಸ್‌ ಕಾರ್ಪ್‌’ ಕಂಪನಿಯ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !