ಎಂಜಿನಿಯರಿಂಗ್‌: ನಾಳೆಯಿಂದ ಐಚ್ಛಿಕ ಆಯ್ಕೆ

ಭಾನುವಾರ, ಜೂಲೈ 21, 2019
22 °C
ನೀಟ್ ದಾಖಲಾತಿ 21ಕ್ಕೆ ವಿಸ್ತರಣೆ, 4 ದಿನದೊಳಗೆ ವೈದ್ಯಕೀಯ ಸೀಟ್‌ ಮ್ಯಾಟ್ರಿಕ್ಸ್‌

ಎಂಜಿನಿಯರಿಂಗ್‌: ನಾಳೆಯಿಂದ ಐಚ್ಛಿಕ ಆಯ್ಕೆ

Published:
Updated:
Prajavani

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಾಗಿ ತಮ್ಮ ಇಚ್ಛೆಯ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಜೂನ್‌ 21ರಿಂದ 25ರವರೆಗೆ ನಡೆಯಲಿದೆ. ನೀಟ್‌ (ವೈದ್ಯಕೀಯ/ ದಂತವೈದ್ಯಕೀಯ) ಕೋರ್ಸ್‌ಗಳ ಆಯ್ಕೆಗಾಗಿ ನೋಂದಣಿ ಮಾಡುವ ದಿನಾಂಕವನ್ನು ಶುಕ್ರವಾರದವರೆಗೆ (ಜೂನ್‌ 21) ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಗಿರೀಶ್‌ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ‘ಫೋನ್‌ಇನ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವಾರು ಮಂದಿ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬುಧವಾರ ಕೊನೆಗೊಳ್ಳಬೇಕಿದ್ದ ಸಿಇಟಿ ದಾಖಲಾತಿ ಪರಿಶೀಲನೆಯನ್ನು ಗುರುವಾರಕ್ಕೆ ವಿಸ್ತರಿಸಲಾಗಿದ್ದು, ಇಲ್ಲಿಯವರೆಗೆ ದಾಖಲಾತಿ ಪರಿಶೀಲನೆಗೆ ಹಾಜರಾಗದೆ ಇದ್ದವರು ರಾಜ್ಯದ ಯಾವುದೇ ಸಹಾಯ ಕೇಂದ್ರಕ್ಕೆ ತೆರಳಬಹುದು ಎಂದರು.

ಕೆಇಎ ವೆಬ್‌ಸೈಟ್‌ http://kea.kar.nic.in ನಲ್ಲಿ ಎಂಜಿನಿಯರಿಂಗ್ ಸೀಟ್‌ ಮ್ಯಾಟ್ರಿಕ್ಸ್‌ ಜತೆಗೆ ಹಿಂದಿನ ವರ್ಷಗಳ ಕಟಾಫ್‌ ಅನಲೈಸರ್‌ ಪ್ರಕಟಿಸಲಾಗಿದೆ. ಇದನ್ನು ಗಮನಿಸಿದರೆ ಹಲವು ಗೊಂದಲಗಳಿಗೆ ಪರಿಹಾರ ನಿಶ್ಚಿತ. ಕಾಲೇಜುವಾರು, ಕೋರ್ಸುವಾರು ಮತ್ತು ಪ್ರವರ್ಗವಾರು ವಿವರಗಳನ್ನು ಕಟಾಫ್‌ ಅನಲೈಸರ್ ನಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು. 

ಸರ್ಕಾರದಿಂದ ಸೀಟ್‌ ಮ್ಯಾಟ್ರಿಕ್ಸ್‌ ಮತ್ತು ಶುಲ್ಕದ ವಿವರಗಳು ಪ್ರಕಟವಾದ ಬಳಿಕ ವೈದ್ಯಕೀಯ– ದಂತವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳ ಮತ್ತು ಕಾಲೇಜುಗಳ ಇಚ್ಛೆ ನಮೂದಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಬೆಂಗಳೂರು ರಾಜಾಜಿನಗರದ ಭಾಸ್ಕರ್‌ ಎಂಬುವವರ ಕರೆಗೆ ಸ್ಪಂದಿಸಿದ ಗಿರೀಶ್‌, ಕೋರ್ಸ್‌ಗಳನ್ನು ಆಯ್ಕೆ ಮಾಡಲು ಬಯಸಿರುವವರ ನೋಂದಣಿ ಕಾರ್ಯವನ್ನು ಇದೇ 21ರವರಗೆ ವಿಸ್ತರಿಸಲಾಗಿದೆ. ‌ದಾಖಲಾತಿ ಪರಿಶೀಲನೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಇದೇ 21 ರಿಂದ 28ರವರೆಗೆ ದಾಖಲೆಗಳ ಪರಿಶೀಲನೆ ನಡೆಯಬಹುದು ಎಂದರು. ನೋಂದಣಿಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಇದೇ 22ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಇದರಿಂದ ವೈದ್ಯಕೀಯ ಸೀಟುಗಳಿಗೆ ನೊಂದಣಿ ಮಾಡಿರುವ ಅಭ್ಯರ್ಥಿಗಳ ವಿವರಗಳನ್ನು ತಿಳಿಯಬಹುದು, ಆಯ್ಕೆಗೆ ಇರುವ ಗೊಂದಲ ಬಗೆಹರಿಸಿಕೊಳ್ಳಬಹುದು ಎಂದರು.

ನೋಂದಣಿ ಪ್ರತ್ಯೇಕ: ವೈದ್ಯಕೀಯ ಎಂಬಿಬಿಎಸ್‌– ದಂತ ವೈದ್ಯಕೀಯ ಹಾಗೂ ಆಯುಷ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವವರು ಸಿಇಟಿ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ವೈದ್ಯಕೀಯ– ದಂತವೈದ್ಯಕೀಯಕ್ಕೆ ಮಾತ್ರ ನೋಂದಣಿ ಮಾಡಿಕೊಂಡರೆ ಕೊನೆಯಲ್ಲಿ ಆಯುಷ್‌ ವಿಭಾಗಕ್ಕೆ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತರಾಗಬೇಕಾಗಬಹುದು ಎಂದು ಅವರು ಕಿವಿಮಾತು ಹೇಳಿದರು.

ವೆಬ್‌ಸೈಟ್‌ನಲ್ಲೇ ಎಲ್ಲವೂ: ಅಭ್ಯರ್ಥಿಗಳು ‘ಚಾಯ್ಸ್‌’ ಆಯ್ಕೆ ಮಾಡಿಕೊಳ್ಳಲು, ಚಲನ್‌ ಡೌನ್‌ಲೋಡ್‌ ಮಾಡಿಕೊಳ್ಳಲು, ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಗೆ, ಪ್ರವೇಶ ಆದೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಲು ಯಾವುದೇ ಸಹಾಯ ಕೇಂದ್ರಗಳಿಗೆ ಭೇಟಿ ನೀಡಬೇಕಿಲ್ಲ. ಕೆಇಎ ವೆಬ್‌ಸೈಟ್‌ನಲ್ಲೇ ಇದಕ್ಕೆಲ್ಲ ಅವಕಾಶ ಇದೆ ಎಂದು ಗಿರೀಶ್ ಹೇಳಿದರು.

ಅಭ್ಯರ್ಥಿ ತಮಗೆ ದೊರೆತ ಸೀಟು ತೃಪ್ತಿಕರವಾಗಿದ್ದಲ್ಲಿ ‘ಚಾಯ್ಸ್‌ 1’ ಆಯ್ಕೆ ಮಾಡಬೇಕು. ಮೊದಲ ಸುತ್ತಿನ ಆಯ್ಕೆ ತೃಪ್ತಿಕರವಾಗಿದೆ, ಆದರೆ ಮುಂದಿನ ಸುತ್ತಿನಲ್ಲಿ ಇನ್ನೂ ಉತ್ತಮ ಸೀಟು ಬೇಕಾಗಿದೆ ಎಂದಾದರೆ ‘ಚಾಯ್ಸ್‌ 2’  ಆಯ್ಕೆ ಮಾಡಬೇಕು. ಮೊದಲ ಸುತ್ತಿನಲ್ಲಿ ದೊರಕಿದ ಸೀಟು ತೃಪ್ತಿಕರವಾಗಿಲ್ಲ, ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ ಎಂದರೆ ‘ಚಾಯ್ಸ್‌ 3’ ಆಯ್ಕೆ ಮಾಡಬೇಕು. ಆದರೆ ‘ಚಾಯ್ಸ್‌ 4’ ಅನ್ನು ಆಯ್ಕೆ ಮಾಡುವಾಗ ಮಾತ್ರ ಬಹಳ ಎಚ್ಚರದಿಂದಿರಬೇಕು. ಇದನ್ನು ಆಯ್ಕೆ ಮಾಡಿಕೊಂಡರೆ ಹಂಚಿಕೆಯಾದ ಸೀಟು ಬೇಡ, ಮತ್ತೆ ಮುಂದಿನ ಸುತ್ತಿನಲ್ಲಿಯೂ ಯಾವುದೇ ಸೀಟು ಬೇಡ ಎಂದು ತಿಳಿಸಿದಂತಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅಭ್ಯರ್ಥಿಗಳು ಪ್ರತಿದಿನ ಕನಿಷ್ಠ ಎರಡು ಬಾರಿ http://kea.kar.nic.in ವೆಬ್‌ಸೈಟ್‌ ಅನ್ನು ತರೆದು ನೋಡುತ್ತಲೇ ಇರಬೇಕು. ಆನ್‌ಲೈನ್‌ ಮೂಲಕ ಅರ್ಜಿ ನಮೂನೆಯಲ್ಲಿ ನೋಂದಾಯಿಸಿರುವ ಮೊಬೈಲ್‌ ಸಂಖ್ಯೆಗೆ ಆಗಿಂದಾಗ್ಗೆ ಮಾಹಿತಿ ಕಳುಹಿಸಲಾಗುತ್ತದೆ ಎಂದರು.

ಪ್ರಾಧಿಕಾರದ ಸಲಹೆಗಾರ ಎಸ್‌.ಎನ್‌. ಗಂಗಾಧರಯ್ಯ ಹಾಗೂ ಶ್ರೀನಾಥ್‌ ಅವರು ಪೂರಕ ಮಾಹಿತಿ ನೀಡಿದರು.

ವೆಬ್‌ಸೈಟ್‌ ಅತ್ಯುತ್ತಮ
ಬೆಂಗಳೂರು ರಾಜಾಜಿನಗರದ ಭಾಸ್ಕರ್‌ ಅವರು ಕರೆ ಮಾಡಿ, ಕೆಇಎ ವೆಬ್‌ಸೈಟ್‌ ಅತ್ಯುತ್ತಮ ಎಂದು ಪ್ರಶಂಸಿಸಿದರು. ‘ವೆಬ್‌ಸೈಟ್‌ನಲ್ಲಿ ಅಗತ್ಯದ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ. ಯಾವುದೇ ಗೊಂದಲವೂ ಉಂಟಾಗದ ರೀತಿಯಲ್ಲಿ ಮಾಹಿತಿ ಇದೆ. ಮೊಬೈಲ್‌ನಲ್ಲಿ ಸಹ ತೆರೆದು ನೋಡಬಹುದು. ಇಂತಹ ಸರಳ, ಸುಲಭವಾಗಿ ಮಾಹಿತಿ ನೀಡುವ ಬೇರೊಂದು ವೆಬ್‌ಸೈಟ್‌ ಇಲ್ಲ ಎಂದು ಅವರು ಪ್ರಶಂಸಿಸಿದರು.

ವಿಶೇಷ ಸೂಚನೆ
ಈಗಾಗಲೇ ಸಿಇಟಿ-2019ಕ್ಕೆ ನೊಂದಣಿ ಮಾಡಿ ದಾಖಲಾತಿ ಪರಿಶೀಲನೆಯನ್ನು ಪೂರ್ಣಗೊಳಿಸಿರುವವರು, ಯುಜಿನೀಟ್ 2019ರ ರೋಲ್ ನಂಬರ್ ಅನ್ನು ಕೆಇಎ ವೆಬ್‍ಪೋರ್ಟಲ್‍ನಲ್ಲಿ ವೈದ್ಯಕೀಯ / ದಂತವೈದ್ಯಕೀಯ / ಆಯುಷ್ ಕೋರ್ಸುಗಳ ಪ್ರವೇಶಾತಿಗಾಗಿ ದಾಖಲಿಸಬೇಕು. ಆದರೆ ಮತ್ತೊಮ್ಮೆ ಶುಲ್ಕವನ್ನು ಪಾವತಿಸುವಂತಿಲ್ಲ, ಮುಂದುವರಿದು ಅರ್ಜಿ ನಮೂನೆಯಲ್ಲಿ ಮುದ್ರಿತವಾಗಿರುವ ನೀಟ್ ರೋಲ್ ನಂಬರ್ ಅನ್ನು ಪರಿಶೀಲಿಸಿಕೊಳ್ಳಿ. ಸುಳ್ಳು ಮಾಹಿತಿ ನೀಡಿದರೆ ವ್ಯಾಸಂಗದ ಯಾವ ಅವಧಿಯಲ್ಲಾಧರೂ ರದ್ದಾಗಿಬಿಡುತ್ತದೆ.

* ಸುಪ್ರಿತಾ, ಬೆಂಗಳೂರು: ನೀಟ್‌ ರ‍್ಯಾಂಕಿಂಗ್‌ ಯಾವಾಗ ಬರುತ್ತದೆ? ಸ್ಟೇಟ್‌ ರ‍್ಯಾಂಕಿಂಗ್‌ ಅಂತ ಕೊಡ್ತೀರಾ?
ಸ್ಟೇಟ್‌ ರ‍್ಯಾಂಕಿಂಗ್‌ ಅಂತ ಕೊಡುವುದಿಲ್ಲ. ನಮ್ಮಲ್ಲಿ ಯಾರು ನೋಂದಾಯಿಸಿ ದಾಖಲಾತಿ ಪರಿಶೀಲನೆ ಆಗಿರುತ್ತದೋ ಅವರ ಪಟ್ಟಿಯನ್ನು ‍ಪ್ರಕಟಿಸುತ್ತೇವೆ. ಸೀಟು ಹಂಚಿಕೆ ನೀಟ್‌ ರ‍್ಯಾಂಕ್‌ ಆಧಾರದಲ್ಲೇ ನಡೆಯುವುದು. ಸರ್ಕಾರದಿಂದ ಇನ್ನೂ ನೀಟ್‌ ರ‍್ಯಾಂಕಿಂಗ್‌ ಮಾಹಿತಿ ಬಂದಿಲ್ಲ. ಇಚ್ಛೆ ನಮೂದು ಪ್ರಕ್ರಿಯೆ ಎಂಜಿನಿಯರಿಂಗ್‌–ಮೆಡಿಕಲ್‌–ಆಯುಷ್‌ ವಿಭಾಗಗಳಿಗೆ  ಪ್ರತ್ಯೇಕವಾಗಿರುತ್ತದೆ.

* ಚೈತನ್ಯ, ಸಿಂಧನೂರು: ಎಂಜಿನಿಯರಿಂಗ್‌ ಸೀಟು ಆಯ್ಕೆಯಲ್ಲಿ ಸರ್ಕಾರಿ ಕೋಟಾದ ಬಗ್ಗೆ ಹೇಗೆ ತಿಳಿಯುತ್ತದೆ?
ನಮ್ಮ ಕೆಇಎ ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಕಟಾಫ್‌ ಅನಲೈಸರ್‌ ಅನ್ನು ಪ್ರಕಟಿಸಿದ್ದೇವೆ. ಅಲ್ಲಿ ಎಲ್ಲ ಮಾಹಿತಿಯೂ ಸಿಗುತ್ತದೆ.

* ಸಂಗಪ್ಪ, ಯಾದಗಿರಿ: ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೀಟು ಲಭ್ಯತೆ ಯಾವಾಗ ಗೊತ್ತಾಗುತ್ತದೆ?
ಇನ್ನು 3–4 ದಿನದೊಳಗೆ ಗೊತ್ತಾಗಲಿದೆ. ಕೆಇಎ ವೆಬ್‌ಸೈಟ್‌ನಲ್ಲಿ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟವಾಗಲಿದೆ.

* ಸೂಗಪ್ಪ ಗೌಡ, ರಾಯಚೂರು: ಮಾಹಿತಿ ಕೇಳಿ ಪೋನ್‌ ಮಾಡಿದರೆ ಕೆಇಎ ಕಚೇರಿಯಲ್ಲಿ ಫೋನ್‌ ಸ್ವೀಕರಿಸುತ್ತಿಲ್ಲ ಏಕೆ?
ತೊಂದರೆಯಾಗಿದ್ದರೆ ಕ್ಷಮಿಸಿ, ಈ ಸಮಸ್ಯೆಯನ್ನು ತಕ್ಷಣ ಪರಿಹರಿಸುತ್ತೇವೆ.

* ಶಕೀಲ್‌ ಅಹ್ಮದ್‌, ಬಳ್ಳಾರಿ: ದ್ವಿತೀಯ ಪಿಯುಸಿಯಲ್ಲಿ ಪೂರಕ ಪರೀಕ್ಷೆ ಬರೆದವರಿಗೂ ಸೀಟು ಆಯ್ಕೆ ಅವಕಾಶ ಯಾವಾಗ?
ಮೊದಲ ಹಂತದ ಸೀಟು ಆಯ್ಕೆ ಪ್ರಕ್ರಿಯೆ ಕೊನೆಗೊಂಡ ಬಳಿಕ ಪ್ರತ್ಯೇಕ ಅವಕಾಶ ಕೊಡಲಾಗುತ್ತದೆ. ಅದರ ಬಗ್ಗೆ ಸಹ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುತ್ತೇವೆ.

* ಮಹಮ್ಮದ್‌ ನೂರುಲ್ಲಾ, ಹೊಳಲ್ಕೆರೆ: ಸಿಇಟಿಯಲ್ಲಿ 16 ಸಾವಿರ ರ‍್ಯಾಂಕ್‌ ಇದೆ, ಯಾವ ಕಾಲೇಜಿನಲ್ಲಿ ಸೀಟು ಸಿಕ್ಕೀತು?
ವೆಬ್‌ಸೈಟ್‌ನಲ್ಲಿ ಕಟಾಫ್‌ ಅನಲೈಸರ್‌ ಪ್ರಕಟಿಸಿದ್ದೇವೆ. ಅದನ್ನು ನೋಡಿದರೆ ಈ ವರ್ಷ ಸಿಗಬಹುದಾದ ಕಾಲೇಜಿನ ಅಂದಾಜು ಮಾಡಬಹುದು.

* ಸಿದ್ದಪ್ಪ, ಬಳ್ಳಾರಿ: ಇಷ್ಟವಾದ ಕಾಲೇಜಿನಲ್ಲಿ ಸೀಟು ಪಡೆಯುವುದು ಹೇಗೆ? ನಾನು ಬಿಎಸ್‌ಸಿ ಕೃಷಿ ಪದವಿಗೆ ಸೇರಲು ಬಯಸುತ್ತಿದ್ದೇನೆ.
ರಾಜ್ಯದಲ್ಲಿ ಕೆಲವು ವಿ.ವಿ.ಗಳ ಸುಪರ್ದಿಗೆ ಬರುವ 30ರಿಂದ 40 ಕಾಲೇಜುಗಳಲ್ಲಿ ಬಿಎಸ್‌.ಸಿ ಕೃಷಿ ವ್ಯಾಸಂಗ ಮಾಡಲು ಅವಕಾಶವಿದೆ. ಅದರಲ್ಲಿ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ... ಹೀಗೆ ಹಲವು ಶಾಖೆಗಳಿವೆ. ಅವುಗಳಲ್ಲಿ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !