ರೈಟ್‌ ರೈಟ್‌ ಅನ್ನೋರೆ ರಾಂಗು!

7

ರೈಟ್‌ ರೈಟ್‌ ಅನ್ನೋರೆ ರಾಂಗು!

Published:
Updated:
Prajavani

ಶಾಲೆಗೆ ಹೋಗಬೇಕಾದ ಮಕ್ಕಳು ನಗರದ ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌, ಕ್ಲೀನರ್‌ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವೇಗವಾಗಿ ಸಾಗುವ ಖಾಸಗಿ ಬಸ್‌ಗಳ ಚಕ್ರದಡಿ ಈ ಮಕ್ಕಳ ಉಜ್ವಲ ಭವಿಷ್ಯ ನಜ್ಜುಗುಜ್ಜಾಗುತ್ತಿದೆ! ಹೀಗೆ ಕೆಲಸ ಮಾಡುತ್ತಿರುವರಲ್ಲಿ 18 ವರ್ಷದೊಳಗಿನ ಮಕ್ಕಳೂ ಇರುವುದು ಅಘಾತಕಾರಿ ಸಂಗತಿ. 

ವೈಟ್‌ಫೀಲ್ಡ್‌, ಬನಶಂಕರಿ, ಪೀಣ್ಯ, ಟಿನ್‌ಫ್ಯಾಕ್ಟರಿ, ಹೆಬ್ಬಾಳ ಮಾರ್ಗಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಮಕ್ಕಳು ಕೆಲಸಕ್ಕಿದ್ದಾರೆ.  ಮುಖ್ಯವಾಗಿ ನಗರದ ಹೊರವಲಯವನ್ನು ಸಂಪರ್ಕಿಸುವ ಬಹುತೇಕ ಖಾಸಗಿ ಬಸ್‌ಗಳಲ್ಲಿ ಮಕ್ಕಳು ಬೆವರು ಸುರಿಸುತ್ತಿದ್ದಾರೆ. ಈ ಮಕ್ಕಳು ಯಾರೊಂದಿಗೂ ಹೆಚ್ಚಿಗೆ ಮಾತನಾಡುವುದಿಲ್ಲ. ಏನನ್ನಾದರೂ ಕೇಳಿದರೆ ನಮಗೆ ಕೆಲಸವಿದೆ, ನಿಮಗ್ಯಾಕೆ ಎನ್ನುವ ಉತ್ತರ ಗಳು ಬರುತ್ತವೆ. ಆದಾಗ್ಯೂ ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಯಾವ ಅಧಿಕಾರಿಗಳೂ ಈ ಮಕ್ಕಳನ್ನು ರಕ್ಷಿಸುವ ಅಥವಾ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ.  ಬಸ್‌ಗಳಲ್ಲಿ ಟಿಕೆಟ್‌ ನೀಡುವ ಕೆಲಸವನ್ನು ಮಾಡುತ್ತಿರುವ ಮಕ್ಕಳು ಬಾಗಿಲ ತುದಿಯಲ್ಲಿಯೇ ನಿಂತು ಪ್ರಯಾಣಿಸುವುದು, ಬಸ್‌ ನಿಲ್ಲುವ ಮೊದಲೇ ಇಳಿಯು ವುದು, ಹಿಂದೆ ಬರುವ ಗಾಡಿಗಳನ್ನು ನಿಲ್ಲಿಸುವಂತೆ ಕೈ ಹೊರಕ್ಕೆ ಹಾಕಿ ಸೂಚಿಸುವುದನ್ನು ಮಾಡು ತ್ತಾರೆ ಇದು ಅವರ ಜೀವಕ್ಕೂ ಕುತ್ತು.

ಅಪಾಯಕಾರಿ ವೃತ್ತಿ: ಸಾರಿಗೆ ಮತ್ತು ಸರಕು ಸಾಗಾಣಿಕೆಯನ್ನು ಅಪಾಯಕಾರಿ ವೃತ್ತಿ ಎಂದು ಪರಿಗಣಿ ಸಲಾಗಿದೆ. 14ರಿಂದ 18 ವರ್ಷದ ಒಳಗಿನ ಯಾವುದೇ ಮಕ್ಕಳನ್ನಾಗಲಿ ಅಪಾಯಕಾರಿ ವೃತ್ತಿಗಳಲ್ಲಿ ಸೇರಿಸಿ ಕೊಳ್ಳುವಂತಿಲ್ಲ. ಸಾರಿಗೆ ಮತ್ತು ಸರಕು ಸಾಗಾಣಿಕೆಯ ಕೆಲಸದಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ.

ಬಾಲಕಾರ್ಮಿಕ ಪದ್ಧತಿ ತಡೆ ಯುವ ಉದ್ದೇಶದಿಂದ ಜಾರಿಯಾ ಗಿರುವ ಕಾನೂನುಗಳಲ್ಲಿ ಹಲವು ಲೋಪಗಳಿರುವುದು ಮಕ್ಕಳು ಕೆಲಸದಲ್ಲಿ ತೊಡಗಿಸಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತಿದೆ!

ಕಾನೂನಿನಲ್ಲೇ ತೊಡಕು: ಬಾಲ ಕಾರ್ಮಿಕ (ತಡೆ ಮತ್ತು ನಿಯಂತ್ರಣ) ಕಾಯ್ದೆ-1986ರ ರಿಂದಲೂ ಜಾರಿಯಲ್ಲಿದೆ ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿಗಳನ್ನು ತರಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ- 2009 ಪ್ರಕಾರ 6 ರಿಂದ 14ವರ್ಷದವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಘೋಷಿಸ ಲಾಗಿದೆ.

ಕೇಂದ್ರ ಸಂಪುಟ ಅನುಮೋದಿ ಸಿರುವ ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ)ಕಾಯ್ದೆ 2012ಕ್ಕೆ ಮತ್ತಷ್ಟು ತಿದ್ದುಪಡಿ ತಂದಿದೆ. ಇದರ ಪ್ರಕಾರ, ಮಕ್ಕಳು ಶಾಲೆ ಬಿಟ್ಟ ನಂತರ ಮತ್ತು ರಜೆಯಲ್ಲಿ ಶ್ರಮದಾಯಕವಲ್ಲದ, ಕಠಿಣವಲ್ಲದ ಕೃಷಿ, ಮನರಂಜನೆ, ಗುಡಿ ‍ಕೈಗಾರಿಕೆಯಂತ ಕೆಲವು ಕೆಲಸಗಳಲ್ಲಿ ತೊಡ ಗಿಸಿಕೊಳ್ಳಬಹುದು. ಈ ಎಲ್ಲ ಕಾನೂನುಗಳು ಅವೈಜ್ಞಾನಿಕ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ಉತ್ತೇಜಿಸಲು ಸಹಾಯವಾಗುತ್ತಿದೆ ಎನ್ನುತ್ತಾರೆ ತಜ್ಞರು.

 ‘ಕುಟುಂಬದವರ ಬಳಿ ಮಕ್ಕಳು ಬಿಡುವಿನ ಸಮಯದಲ್ಲಿ ಕೆಲಸ ಮಾಡಬಹುದು’ ಎನ್ನುವುದೇ ಕಾಯ್ದೆಯಲ್ಲಿರುವ ಬಹುದೊಡ್ದ ಲೋಪ ಎನ್ನುತ್ತಾರೆ ಮಕ್ಕಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಾಸುದೇವ ಶರ್ಮಾ.  

ಕಡ್ಡಾಯ ಶಿಕ್ಷಣ ನೀತಿಯಲ್ಲೂ ಲೋಪ!: ಶಿಕ್ಷಣ ಹಕ್ಕು ಕಾಯ್ದೆ–2009ರ ಅನ್ವಯ 6ರಿಂದ 14 ವರ್ಷದವರೆಗಿನ ಮಕ್ಕಳು ಕಡ್ಡಾಯ ಶಿಕ್ಷಣ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ. ಅಂದರೆ 1ರಿಂದ 8ನೇ ತರಗತಿಯವರೆಗೆ ಮಾತ್ರ ನಮ್ಮಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಕನಿಷ್ಠ ಹತ್ತನೆ ತರಗತಿಯ ವರೆಗಾದರೂ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಹಲವು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಇವೆ. 


ನಿಮಾನ್ಸ್‌ ಮುಂಭಾಗದ ಖಾಸಗಿ ಬಸ್‌ನಲ್ಲಿ ಕಂಡು ಬಂದ ದೃಶ್ಯ

ತಪ್ಪು ದಾರಿಯ ಮೇಲೆ..: ಖಾಸಗಿ ಬಸ್‌ ಐಟಿಪಿಎಲ್‌ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಬಸ್‌ನ ಹಿರಿಯ ಕಂಡಕ್ಟರ್‌ ಒಬ್ಬರು ಬೋ.. ಮಗನೇ.. ಸೂ.. ಮಗನೇ ಎನ್ನುವ ಪದಗಳನ್ನು ಸಣ್ಣ ಮಗುವಿನ ಮೇಲೆ ಪ್ರಯೋಗಿಸುತ್ತಿದ್ದರು. ‘ಯಾಕ್ರಿ ಮಗುವಿಗೆ ಈ ರೀತಿ ಬೈಯುತ್ತಿದ್ದೀರ’ ಎಂದರೆ ಸಿಗುವ ಉತ್ತರ ‘ಸರ್‌, ಕಾಸು ಕದ್ದಿದ್ದಾನೆ’.

ಅಸಲಿಗೆ ಆ ಮಕ್ಕಳು ಹಣ ಕದ್ದಿರುವುದಿಲ್ಲ. ಅವರಿಗೆ ಸರಿಯಾಗಿ ಹಣ ತೆಗೆದುಕೊಳ್ಳಲು ಬರುವುದಿಲ್ಲ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಹಲವರು ಮಕ್ಕಳಿಗೆ ಮೋಸ ಮಾಡುತ್ತಾರೆ. ಹಲವು ಖಾಸಗಿ ಬಸ್‌ಗಳಲ್ಲಿ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಮೂಲಿ! ಇಂತಹ ವಾತಾವರಣ ಮಕ್ಕಳ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಕಂಡಕ್ಟರ್‌, ಡ್ರೈವರ್‌ಗಳು ಬಳಸುವ ಅವಾಚ್ಯ ಶಬ್ದಗಳು, ಗುಟ್ಕಾ, ಸಿಗರೇಟ್‌ ಚಟಗಳನ್ನು ಮಕ್ಕಳೂ ಅನುಸರಿಸುತ್ತಾರೆ. ತಪ್ಪು ದಾರಿ ಹಿಡಿಯುತ್ತಾರೆ.

‘ಅಣ್ಣ ನಮ್ಮನ್ಯಾರು ನೋಡಿಕೊಳ್ಳುತ್ತಾರೆ...?’ ಮಾತಿಗೆ ಸಿಕ್ಕ ಹುಡುಗನೊಬ್ಬನ ಪ್ರಶ್ನೆ ಇದಾಗಿತ್ತು. ಶಾಲೆಗೆ ಹೋಗುವುದಿ ಲ್ಲವಾ? ಇಲ್ಲೇಕೆ ಕೆಲಸ ಮಾಡುತ್ತಿದ್ದೀಯಾ? ಎಂದುದಕ್ಕೆ ಬಂದ ಪ್ರತಿಕ್ರಿಯೆ ಅದು. ಮಕ್ಕಳ ಹಕ್ಕು, ಶಿಕ್ಷಣ ಇವೆಲ್ಲವೂ ಇವರಿಂದ ಮಾರುದೂರ.

ಪೊಲೀಸರಿಗೆ ವಿಶೇಷ ಅನುಮತಿ ಇದೆ: ಬಾಲಕಾರ್ಮಿಕರನ್ನು ಎಲ್ಲಿಯಾದರು ಕಂಡರೆ ಅವರನ್ನು ರಕ್ಷಿಸಿ, ಮಾಲೀಕರನ್ನು ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ. ಆದರೆ, ಈ ವಿಶೇಷ ಅಧಿಕಾರ ಸಮರ್ಥವಾಗಿ ಬಳಕೆಯಾದಂತಿಲ್ಲ.

* ಮಕ್ಕಳನ್ನು ರಕ್ಷಿಸುವ ಸಮಯದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸ್ಥಳದಲ್ಲೇ ಇದ್ದು, ಮಕ್ಕಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದದ್ದು ನಿಜ ಎಂಬುದನ್ನು ರುಜುವಾತು ಮಾಡಬೇಕಾಗುತ್ತದೆ. ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದಿರುವುದರಿಂದ, ಕ್ರಮಕ್ಕೆ ಮುಂದಾಗುವುದರೊಳಗೆ ಆರೋಪಿಗಳು ತಪ್ಪಿಸಿಕೊಂಡಿರುತ್ತಾರೆ.

  – ವಾಸುದೇವ ಶರ್ಮಾ, ಚೆಲ್ಡ್‌ ರೈಟ್‌ ಟ್ರಸ್ಟ್‌ ಸಂಸ್ಥೆಯ ಸದಸ್ಯ

* ವೈಟ್‌ಫೀಲ್ಡ್‌ನ ಹಲವು ಮಾಂಸದ ಅಂಗಡಿ, ಅಸಂಘಟಿತ ವಲಯಗಳಲ್ಲಿ ಮಕ್ಕಳು ದುಡಿಯುತ್ತಿದ್ದಾರೆ. ಈ ಮಾರ್ಗದ ಖಾಸಗಿ ಬಸ್‌ಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ರಾಜಧಾನಿಯಲ್ಲಿಯೇ ಬಾಲಕಾರ್ಮಿಕರಿರುವಾಗ ಉಳಿದ ಭಾಗದ ಸ್ಥಿತಿ ಹೇಗಿರಬೇಡ..? 

 –ಸುಂದ್ರೇಶ್, ವೈಟ್‌ಫೀಲ್ಡ್‌

* ಜಿಗಣಿ ಮತ್ತು ಜೆ.ಪಿ ನಗರದ ಮಾರ್ಗದಲ್ಲಿನ ಹಲವು ಖಾಸಗಿ ಬಸ್‌ಗಳಲ್ಲಿ ಮಕ್ಕಳು ದುಡಿಯುತ್ತಿದ್ದಾರೆ. ಬಾಲಕಾರ್ಮಿಕ ಮತ್ತು ಕಡ್ಡಾಯ ಶಿಕ್ಷಣದಲ್ಲಿನ ಲೋಪಗಳೇ ಈ ಮಕ್ಕಳು ಹೀಗೆ ಕೆಲಸ ಮಾಡುವುದಕ್ಕೆ ಕಾರಣವಾಗಿದೆ.

 –ದಕ್ಷಿಣ ಮೂರ್ತಿ, ಬನ್ನೇರುಘಟ್ಟ


ಟಿನ್‌ಫ್ಯಾಕ್ಟರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬಸ್‌ನ ತುದಿಯಲ್ಲಿ ನಿಂತು ಪ್ರಯಾಣಿಸುತ್ತಿರುವ ಬಾಲಕ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !