ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಓದಿನ ರೀತಿ ನಿಮಗೆಷ್ಟು ಪರಿಚಿತ?

Last Updated 23 ಏಪ್ರಿಲ್ 2019, 19:56 IST
ಅಕ್ಷರ ಗಾತ್ರ

ನಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಾವು ಅದೆಷ್ಟು ಯೋಚಿಸುತ್ತೇವೆ. ಅವರು ಚೆನ್ನಾಗಿ ಓದಲು ನಮ್ಮಿಂದ ಏನೆಲ್ಲಾ ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆಯಲ್ಲವೇ? ಹಾಗೇ ನಾವು ಎಲ್ಲಾ ಪರಿಕರಗಳನ್ನು, ಸೌಲಭ್ಯಗಳನ್ನು ಒದಗಿಸಿದರೂ ಅವರು ನಮ್ಮ ಅಪೇಕ್ಷೆಗೆ ತಕ್ಕಂತೆ ಓದುತ್ತಿಲ್ಲವೆಂಬ ಅನಿಸಿಕೆ ಬಹಳಷ್ಟು ಪೋಷಕರಿಗೆ ಇರಬಹುದು. ಅವರಿಗೆ ಸೌಲಭ್ಯಗಳನ್ನಷ್ಟೇ ಒದಗಿಸಿದರೆ ಸಾಕೇ? ಅಥವಾ ಅವರನ್ನು ಕಲಿಕೆಯಲ್ಲಿ ಸಮರ್ಥವಾಗಿ, ಆಸಕ್ತಿದಾಯಕವಾಗಿ ತೊಡಗಿಸಲು ಇನ್ನೇನಾದರೂ ಮಾಡಬೇಕೇ?

ಹೌದು, ನಾವು ಮನೆಯಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕವಾದ ಸೌಲಭ್ಯಗಳು ಮತ್ತು ವಾತಾವರಣವನ್ನು ಕಲ್ಪಿಸುವುದರ ಜೊತೆಗೆ, ಮಕ್ಕಳು ಓದುವ ರೀತಿಯನ್ನು ಗಮನಿಸಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನೂ, ಸಹಕಾರವನ್ನೂ ನೀಡಬೇಕು. ಹಾಗಾದರೆ, ನಮ್ಮ ಮಕ್ಕಳು ಓದುವ ವಿಧಾನದ ಬಗ್ಗೆ ಅವರ ಕಲಿಕೆಯ ರೀತಿಯ ಬಗ್ಗೆ ನಾವು ನಿಜವಾಗಿಯೂ ಅರಿತಿದ್ದೇವೆಯೇ?

ಎಲ್ಲ ಮಕ್ಕಳೂ ಜಾಣರೇ. ಹಾಗಾದರೆ ಅವರು ಕಲಿಯುವ ರೀತಿಯಲ್ಲಿ ವ್ಯತ್ಯಾಸವೇಕೆ? ಬೇರೆ ಬೇರೆ ಮಕ್ಕಳು ಬೇರೆ ಬೇರೆ ವಿಷಯಗಳ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಆಸಕ್ತಿ ಹೊಂದಿರುವುದೇಕೆ?

ಮೇಲಿನ ಪ್ರಶ್ನೆಗೆ ಹಲವಾರು ಕೋನಗಳಲ್ಲಿ ಹಲವಾರು ಉತ್ತರಗಳನ್ನು ಕೊಡಬಹುದು. ಆದರೆ ಈ ಲೇಖನದಲ್ಲಿ ಒಂದು ದಿಕ್ಕಿನಿಂದ ಉತ್ತರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಮಕ್ಕಳ ಕಲಿಕೆಯ ರೀತಿಯನ್ನು ನಾವು ಗಮನಿಸಿದರೆ, ಮನೆಯಲ್ಲಿ ಅವರ ಕಲಿಕೆಯ ರೀತಿಗೆ ಅನುಗುಣವಾದ ಪೂರಕ ವಾತಾವರಣವನ್ನು ಕಲ್ಪಿಸಲು ಸಹಾಯಕವಾಗುತ್ತದೆ. ನಾವು ಸ್ಥೂಲವಾಗಿ, ಮಕ್ಕಳ ಬೇರೆ ಬೇರೆ ಕಲಿಕೆಯ ರೀತಿಗಳನ್ನು ಅರಿಯುವ ಪ್ರಯತ್ನವನ್ನು ಮಾಡೋಣ.

ಮಕ್ಕಳು ಕಲಿಯುವ ವಿಧಾನವನ್ನು ಆಧರಿಸಿ ಅವರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.

* ದೃಶ್ಯೀಕರಣದಿಂದ ಕಲಿಯುವ ಮಕ್ಕಳು

ಈ ರೀತಿಯ ಮಕ್ಕಳು ಸಾಮಾನ್ಯವಾಗಿ ಹೆಚ್ಚು ಮಾತನಾಡುವುದಿಲ್ಲ. ತಾವು ಮಾಡುವ ಕೆಲಸಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ. ಇವರು ಸಾಮಾನ್ಯವಾಗಿ ಏನನ್ನಾದರೂ ಓದುವಾಗ ಅಥವಾ ತಿಳಿಯುವಾಗ ತಮಗೆ ಅರಿವಿಲ್ಲದಂತೆಯೇ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಆ ವಿಷಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಾಕಷ್ಟು ಬಾರಿ ಇವರನ್ನು ಹಗಲುಗನಸುಗಾರರು ಎಂದು ತಪ್ಪಾಗಿ ಭಾವಿಸುತ್ತೇವೆ.

ಈ ರೀತಿಯ ಮಕ್ಕಳಿಗೆ ಮನೆಯಲ್ಲಿ ಸಾಧ್ಯವಾದಷ್ಟು ನಿಃಶಬ್ದದ ವಾತಾವರಣವನ್ನು ಕಲ್ಪಿಸಿ. ಈ ರೀತಿಯ ಮಕ್ಕಳು ದೃಶ್ಯಮಾಧ್ಯಮದ ಮೂಲಕ ಚೆನ್ನಾಗಿ ಕಲಿಯುತ್ತಾರೆ. ಆದ್ದರಿಂದ ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿ.

* ಮಾತನಾಡುವುದರಿಂದ ಕಲಿಯುವ ಮಕ್ಕಳು

ಈ ರೀತಿಯ ಮಕ್ಕಳು ಸಾಮಾನ್ಯವಾಗಿ ಹೆಚ್ಚು ಮಾತನಾಡಲು ಇಚ್ಛಿಸುತ್ತಾರೆ. ಬೇರೆಯವರೊಂದಿಗೆ ಬೇಗನೆ ಬೆರೆಯುತ್ತಾರೆ. ಜೋರಾಗಿ ಓದಲು ಇಚ್ಛಿಸುತ್ತಾರೆ. ಅತ್ಯಂತ ಲವಲವಿಕೆಯಿಂದ ಇರುತ್ತಾರೆ. ಮನೆಯಲ್ಲಿ ಓದು ಎಂದ ತಕ್ಷಣ, ಅಪ್ಪ ಅಮ್ಮನ ಬಳಿ ಬಹಳಷ್ಟು ಪ್ರಶ್ನೆಗಳನ್ನು ಕೇಳಿ, ಮಾತಿನಲ್ಲಿ ತೊಡಗುತ್ತಾರೆ ! ಈ ರೀತಿಯ ಮಕ್ಕಳು ಹೆಚ್ಚು ಮಾತನಾಡಲು ಬಯಸುವುದರಿಂದ, ಮನೆಯಲ್ಲಿ ತಂದೆ ತಾಯಿಯರು ಈ ಮಕ್ಕಳೊಂದಿಗೆ ಸಾಧ್ಯವಾದಷ್ಟೂ ಮಾತನಾಡುತ್ತಲೇ ಕಲಿಯಲು ಉತ್ತೇಜಿಸಿ. ಉದಾ: ನಿಮ್ಮ ಮಕ್ಕಳಿಗೆ ಕಲಿಸುವುದರ ಬದಲು ಅವರಿಂದ ಕಲಿಯಲು ತೊಡಗಿರಿ. ಈ ಮಕ್ಕಳು ಬೇರೆಯವರಿಗೆ ಕಲಿಸುವುದನ್ನು ನಿಜವಾಗಿಯೂ ಇಷ್ಟಪಡುತ್ತಾರೆ.

* ಓದು/ ಬರವಣಿಗೆಯಿಂದ ಕಲಿಯುವ ಮಕ್ಕಳು

ಈ ರೀತಿಯ ಮಕ್ಕಳು ಸಾಮಾನ್ಯವಾಗಿ ಮೌನಿಗಳಾಗಿರುತ್ತಾರೆ. ಇವರಿಗೆ ಬರೆಯುವುದು ಮತ್ತು ಓದುವುದರಲ್ಲಿ ಸಹಜವಾಗಿಯೇ ಆಸಕ್ತಿ ಇರುತ್ತದೆ. ಇವರ ಬರವಣಿಗೆ ಅತ್ಯಂತ ಸುಂದರವಾಗಿರುತ್ತದೆ. ಇವರು ಹೆಚ್ಚು ಸಮಯವನ್ನು ಬರೆಯುವುದರಲ್ಲಿಯೋ, ಪ್ರಾಜೆಕ್ಟ್ ಚಟುವಟಿಕೆಗಳನ್ನು ಮಾಡುವುದರಲ್ಲಿಯೋ ಕಳೆಯುತ್ತಾರೆ. ಈ ರೀತಿಯ ಮಕ್ಕಳಿಗೆ ಹೆಚ್ಚು ಬರೆಯುವ ಕೆಲಸಗಳನ್ನು ಕೊಡುವುದರ ಮೂಲಕ ಅವರ ಕಲಿಕೆಯನ್ನು ಸುಂದರವಾಗಿಸಬಹುದು.

* ಚಟುವಟಿಕೆಗಳಿಂದ ಕಲಿಯುವ ಮಕ್ಕಳು

ಹೆಸರೇ ಹೇಳುವಂತೆ ಈ ರೀತಿಯ ಮಕ್ಕಳು ಚಟುವಟಿಕೆಗಳ ಮುಖಾಂತರ ಚೆನ್ನಾಗಿ ಕಲಿಯುತ್ತಾರೆ. ಮನೆಯಲ್ಲಿ ಇವರನ್ನು ಗುರುತಿಸುವುದು ಸುಲಭ. ಈ ರೀತಿಯ ಮಕ್ಕಳು ಸಾಮಾನ್ಯವಾಗಿ ಒಂದು ಕಡೆ ಕುಳಿತು ಓದಲು ಬಹಳ ಕಷ್ಟ ಪಡುತ್ತಾರೆ. ಓದಲು ಹೇಳಿದಾಕ್ಷಣ ಇವರು ಪುಸ್ತಕವನ್ನು ಹಿಡಿದು ಮನೆಯಲ್ಲೆಲ್ಲಾ ಓಡಾಡಲು ತೊಡಗುತ್ತಾರೆ! ಒಂದೇ ಕಡೆ ಓದಲು ಕುಳಿತರೂ, ಕುಳಿತಲ್ಲಿಯೇ ತಲೆ ಅಥವಾ ಕೈ-ಕಾಲು ಗಳನ್ನು ಆಡಿಸುತ್ತಿರುತ್ತಾರೆ. ಈ ರೀತಿಯ ಮಕ್ಕಳಿಗೆ ಮನೆಯಲ್ಲಿ ಓಡಾಡುತ್ತಾ ಓದಲು ಅವಕಾಶ ಮಾಡಿಕೊಡಿ. ಮನೆಯಲ್ಲಿ ಸಣ್ಣ-ಸಣ್ಣ ಚಟುವಟಿಕೆಗಳ ಮುಖಾಂತರ ಕಲಿಯಲು ಅವಕಾಶ ಮಾಡಿಕೊಡಿ.

ಈ ಮೇಲಿನ ಎಲ್ಲಾ ರೀತಿಯ ಕಲಿಕೆಯೂ ಒಳ್ಳೆಯದೇ. ನಾವು ನಮ್ಮ ಮಕ್ಕಳ ಕಲಿಕೆಯ ರೀತಿಯನ್ನು ಅರಿತು ಅದಕ್ಕೆ ತಕ್ಕ ಪೂರಕ ವಾತಾವರಣವನ್ನು ನಿರ್ಮಿಸಿದ್ದೇ ಆದರೆ ಎಲ್ಲ ಮಕ್ಕಳೂ ಆನಂದದಿಂದ ಕಲಿಯುತ್ತಾರೆ.

ಮಕ್ಕಳ ಒಲವು ಗುರುತಿಸಿ

ಕೆಲವು ಮಕ್ಕಳಿಗೆ ಗಣಿತದಲ್ಲಿ ಆಸಕ್ತಿಯಿದ್ದರೆ, ಕೆಲವರಿಗೆ ಸಮಾಜಶಾಸ್ತ್ರ ಅಚ್ಚುಮೆಚ್ಚು, ಹಲವರಿಗೆ ಭಾಷೆಗಳ ಬಗ್ಗೆ ಒಲವು ಹೆಚ್ಚು. ಮನೆಯಲ್ಲಿ ಹಲವಾರು ಪೋಷಕರು ಗಮನಿಸಿರಬಹುದು, ಯಾವಾಗಲಾದರೂ ಮಕ್ಕಳಿಗೆ ಓದು ಎಂದರೆ ಅವರು ಯಾವಾಗಲೂ ಒಂದೇ ವಿಷಯದ ಪಠ್ಯವನ್ನು ಓದಲು ತೊಡಗುತ್ತಾರೆ. ಹಲವು ಮಕ್ಕಳಂತೂ ಯಾವಾಗಲೂ ಪ್ರಾಜೆಕ್ಟ್‌ಗಳನ್ನು ಮಾಡುವುದರಲ್ಲಿಯೇ ತಲ್ಲೀನರಾಗಿರುತ್ತಾರೆ. ಕೆಲವರ ಆಸಕ್ತಿ ಸದಾ ಕ್ರೀಡೆಯ ಕಡೆಗೇ. ಕೆಲವು ಮಕ್ಕಳಿಗೆ ಮನೆಯಲ್ಲಿ ಓದು ಎಂದರೆ ಸಾಕು, ಆ ಕ್ಷಣದಲ್ಲಿ ಅವರಿಗೆ ಪ್ರಪಂಚದಲ್ಲಿರುವ ಎಲಾ ವಿಷಯಗಳ ಬಗ್ಗೆಯೂ ಅಮ್ಮನೊಂದಿಗೋ, ಅಪ್ಪನೊಂದಿಗೋ ಚರ್ಚೆ ಮಾಡಬೇಕು ಎನಿಸುತ್ತದೆ. ಕೆಲವರಿಗೆ ಒಂದು ಕಡೆ ಕುಳಿತು ಓದಲು ಸಾಧ್ಯವೇ ಆಗುವುದಿಲ್ಲ. ಮುಂಜಾನೆ ಬೇಗನೆ ಎದ್ದು ಓದು ಎನ್ನುವ ಸಲಹೆ ಕೆಲವು ಮಕ್ಕಳಿಗೆ ರುಚಿಸುವುದೇ ಇಲ್ಲಾ! ಕೆಲವು ಮಕ್ಕಳು ಓದಲು ನಿಶ್ಶಬ್ದವಾದ ವಾತಾವರಣ ಬಯಸಿದರೆ, ಕೆಲವರು ಟಿ.ವಿ. ನೋಡುತ್ತಲೋ, ಸಂಗೀತವನ್ನು ಕೇಳುತ್ತಲೋ ಓದಲು ಇಷ್ಟಪಡುತ್ತಾರೆ!

ಲೇಖಕರು ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT