ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮರ್ಸ್ ಕೋರ್ಸ್

Last Updated 7 ಮೇ 2019, 19:30 IST
ಅಕ್ಷರ ಗಾತ್ರ

‘ನಾನು ನನ್ನ ಮುಂದಿನ ವಿದ್ಯಾಭ್ಯಾಸದ ದಿಕ್ಕನ್ನು ನಿರ್ಧರಿಸಬೇಕು, ಯಾವ ದಿಕ್ಕಲ್ಲಿ ನನ್ನ ಭವಿಷ್ಯವಿದೆ, ಯಾವುದು ನನಗೆ ಸೂಕ್ತ ಕೋರ್ಸ್, ನಾನು ವಾಣಿಜ್ಯದತ್ತ ಕಾಲಿಟ್ಟರೆ ಅವಕಾಶಗಳಿವೆಯೇ, ಕಾಮರ್ಸ್ ಪ್ರವೇಶ ಪಡೆದುಕೊಂಡ ಮೇಲೆ ನನ್ನ ಭವಿಷ್ಯವೇನು?’ ಎಂದು ಚಿಂತಿಸುತ್ತಿರುವ, ಕಾಮರ್ಸ್ ಕೋರ್ಸ್ ಕಡೆ ಇಣುಕು ನೋಡುತ್ತಿರುವ ವಿದ್ಯಾರ್ಥಿಗಳಿಗೊಂದು ರಹದಾರಿ ಈ ವಾಣಿಜ್ಯ ವಿಭಾಗ; ಅಂತಹವರಿಗೆ ಇದು ಪರ್ವಕಾಲ, ಹೇಗೆ ಅಂತೀರಾ?

ಇದು ಹೇಳಿಕೇಳಿ ವೃತ್ತಿಪರ ಕೋರ್ಸ್ ಕಾಲ. ‘ಭದ್ರ ಭವಿಷ್ಯವನ್ನು ಕಟ್ಟಿಕೊಳ್ಳಲು ನಾನು ವೃತ್ತಿಪರ ಕೋರ್ಸ್ ಸೇರಬೇಕು, ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನನ್ನನ್ನು ನಾನು ಶೇಪ್‌ಅಪ್ ಮಾಡಿಕೊಂಡು ಕೆರಿಯರ್ ರೂಪಿಸಿಕೊಳ್ಳುವುದು ಹೇಗೆ, ಏನಾದರೂ ಸರಿ ಮೊದಲು ನನ್ನ ಆಯ್ಕೆ ಕರಾರುವಕ್ಕಾಗಿರಬೇಕು’ ಎನ್ನುವ ವಾಣಿಜ್ಯದತ್ತ ಒಲವಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಇಲ್ಲಿವೆ ಆಯ್ಕೆಗಳು.

ಎಲ್ಲರಿಗೂ ತಿಳಿದಂತೆ ಎಸ್ಸೆಸ್ಸೆಲ್ಸಿ ಪಾಸಾದವರು ಪಿಯು ಅಡ್ಮಿಶನ್ ಕಾಮರ್ಸ್ ತೆಗೆದುಕೊಂಡರೆ ನಂತರ ಬಿ.ಕಾಂ., ಬಿ.ಬಿ.ಎಮ್, ಬಿ.ಬಿ.ಎ. ಮುಂತಾದ ಸಾಂಪ್ರದಾಯಿಕ ಕೋರ್ಸ್ ಆರಿಸಿಕೊಂಡು ಹೆಚ್ಚಿನ ವ್ಯಾಸಂಗಕ್ಕಾಗಿ ಎಂ.ಕಾಂ ಅಥವಾ ಎಂ.ಬಿ.ಎ. ನಂತಹ ಸ್ನಾತಕೋತ್ತರ ಪದವಿಗಳಿಗೆ ತಮ್ಮನ್ನು ಅಣಿಗೊಳಿಸಿಕೊಳ್ಳಬಹುದು. ಅದರಲ್ಲೂ ಸಾಕಷ್ಟು ವಿಷಯಗಳ ಆಯ್ಕೆಗಳಿರುವುದರಿಂದ ಅಲ್ಲೂ ಪರಿಣತಿಯನ್ನು ಪಡೆದುಕೊಂಡು ಆಯಾ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಲು ಅವಕಾಶವಿದೆ.

ಸಿ.ಎ.ಗೆ ವಿಪುಲ ಅವಕಾಶ

ವೃತ್ತಿಪರ ಕೋರ್ಸ್ ಆರಿಸಿಕೊಳ್ಳಬೇಕು, ಸಿ.ಎ. ಆಗಬೇಕು ಎನ್ನುವವರಿಗೆ ವಿಪುಲ ಅವಕಾಶಗಳಿವೆ, ಭಾರತದ 130 ಕೋಟಿ ಜನಸಂಖ್ಯೆಯಲ್ಲಿ ಲೆಕ್ಕಪರಿಶೋಧಕರ ಸಂಖ್ಯೆ 2,80,000 ಮಾತ್ರ, ಅದರಲ್ಲೂ ಕರ್ನಾಟಕದಲ್ಲಿ 16,000ದಷ್ಟು ಲೆಕ್ಕಪರಿಶೋಧಕರಿದ್ದಾರೆ, ಇಡೀ ಭಾರತದಲ್ಲಿ ಆಗುತ್ತಿರುವ ಆರ್ಥಿಕ ಬದಲಾವಣೆಗಳು, ವಿತ್ತೀಯ ಅವಿಷ್ಕಾರಗಳು, ವಾಣಿಜ್ಯ ಚಟುವಟಿಕೆಗಳು, ಸ್ಟಾರ್ಟ್ ಅಪ್‌ಗಳು, ಉದ್ಯಮಿಗಳಿಗೆ ವಿಪುಲ ಅವಕಾಶಗಳು, ವ್ಯಾವಹಾರಿಕ ಕ್ಷೇತ್ರದಲ್ಲಾಗುತ್ತಿರುವ ಆಮೂಲಾಗ್ರ ಬದಲಾವಣೆಗಳು, ತೆರಿಗೆ ಕ್ಷೇತ್ರದ ಕ್ರಾಂತಿ ಇವೆಲ್ಲವನ್ನೂ ನೋಡಿದಾಗ ನಮ್ಮ ಮನಸ್ಸಿಗೆ ಥಟ್ ಅಂತ ಹೊಳೆಯುವುದು ಸಹಜವಾಗಿ ಕಾಮರ್ಸ್. ಕಾರಣ ಭಾರತದಲ್ಲಿ ಇನ್ನೂ 5 ಲಕ್ಷ ಲೆಕ್ಕ ಪರಿಶೋಧಕರ ಕೊರತೆ ಇದೆ ಎನ್ನುವುದು ಸದ್ಯದ ಮಾಹಿತಿ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಲೂಬಹುದು, ಎಷ್ಟರ ಮಟ್ಟಿಗೆ ಕಾಮರ್ಸ್ ಕ್ಷೇತ್ರಕ್ಕೆ ಬೇಡಿಕೆ ಇದೆ, ಅದರಲ್ಲೂ ಸಿ.ಎ. (ಚಾರ್ಟರ್ಡ್ ಅಕೌಂಟೆಂಟ್), ಸಿ.ಎಸ್. (ಕಂಪನಿ ಸೆಕ್ರೆಟರಿ) ನಂತಹ ವೃತ್ತಿಪರ ಕೋರ್ಸ್ ವೈಶಿಷ್ಟ್ಯತೆ ಪಡೆದುಕೊಂಡಿದೆ ಎನ್ನುವುದನ್ನು ನಾವು ಮನಗಾಣಬಹುದು.

ಲಕ್ಷಾಂತರ ರೂಪಾಯಿ ಕೊಟ್ಟು ನಾನು ಕೋರ್ಸ್ ಮಾಡಲು ಶಕ್ತನಲ್ಲ, ನನಗೆ ಹೆಚ್ಚು ಕಾಯುವ ವ್ಯವಧಾನವಿಲ್ಲ, ನನ್ನಲ್ಲಿ ಕಸುವಿದೆ, ಕನಸಿದೆ ಎನ್ನುವ ಸ್ಟುಡೆಂಟ್ಸ್ ಸಿ.ಎ. ಎನ್ನುವ ರಹದಾರಿಯನ್ನು ಆರಿಸಿಕೊಳ್ಳಬಹುದು, ಆದರೆ ಅದು ಕ್ರಮಿಸಲು ಕಠಿಣವೂ ಹೌದು, ಕ್ರಮಿಸಿದರೆ ಭರಪೂರ ಅವಕಾಶಗಳ ಕಣಜವೂ ಹೌದು. ಇಂದು ನಾವು ಯಾವುದೇ ವೃತ್ತಿಪರ ಕೋರ್ಸ್ ಆರಿಸಿಕೊಂಡರೂ ನಮ್ಮಲ್ಲಿ ಲಕ್ಷಾಂತರ ಹಣವೂ ಇರಬೇಕು, ಕೈತುಂಬ ಅಂಕಗಳೂ ಇರಬೇಕು, ಇದು ಪ್ರತಿ ಕೋರ್ಸಿನ ಕನಿಷ್ಠ ಬೇಡಿಕೆ.
ಆದರೆ ಲೆಕ್ಕ ಪರಿಶೋಧಕರಾಗಲು ಕಾಮರ್ಸ್ ಹಿನ್ನೆಲೆಯ ವಿದ್ಯಾರ್ಥಿಗೆ ಬೇಕಾಗಿರುವುದು ಶೇ. 55 ರಷ್ಟು ಅಂಕ, ಇತರೇ ಕೋರ್ಸ್ (ಬಿ.ಎ., ಬಿ.ಎಸ್ಸಿ.) ಮಾಡಿರುವವರಿಗೆ ಬೇಕಿರುವುದು ಶೇಕಡ 60ರಷ್ಟು ಅಂಕ. ಈ ಕೋರ್ಸಿಗೆ ಸೇರಲು ಎರಡು ರೀತಿಯ ಅವಕಾಶಗಳಿವೆ, ಮೊದಲು ದ್ವಿತೀಯ ಪಿ ಯು ಆಧಾರದ ಮೇಲೆ ಸಿ.ಎ. ಅಡ್ಮಿಷನ್ ಹೇಗೆ ಎನ್ನುವುದನ್ನು ತಿಳಿಯೋಣ.

ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ನಂತರ ನೀವು ಸಿ.ಎ. ಫೌಂಡೇಶನ್ ನೊಂದಾಯಿಸಿಕೊಳ್ಳಬಹುದು.

ಏಪ್ರಿಲ್ ನಂತರ ನೊಂದಾಯಿಸಿಕೊಂಡರೆ, ಡಿಸೆಂಬರ್ ಹೊತ್ತಿಗೆ ಇದರ ಪರೀಕ್ಷೆ ಸಿ ಪಿ ಟಿ ಯಲ್ಲಿ ಶೇಕಡ 50 ರಷ್ಟು ಅಂಕ ತೆಗೆದುಕೊಂಡರೆ ಸಿ.ಎ. ಇಂಟರ್ 3 ವರ್ಷಗಳ ಕಾಲ ಪ್ರಾಕ್ಟೀಸಿಂಗ್ ಚಾರ್ಟರ್ಡ್ ಅಕೌಂಟೆಂಟ್ ಬಳಿ ಪ್ರಾಕ್ಟಿಕಲ್ ಅನುಭವಕ್ಕಾಗಿ ಆರ್ಟಿಕಲ್ಸ್ ಮಾಡಬೇಕು.

ಸಿ.ಎ. ಫೈನಲ್ ನಲ್ಲಿ ನಾಲ್ಕು ಸಬ್ಜೆಕ್ಟ್ ಉಳ್ಳ ಎರಡು ಗ್ರೂಪ್, ಅದರಲ್ಲಿ ಒಂದು ಗ್ರೂಪಿನಲ್ಲಿ ಕನಿಷ್ಠ 200 ಅಂಕ ಪಡೆಯಲೇಬೇಕು. ಇಡೀ ಕೋರ್ಸಿಗೆ ಗರಿಷ್ಠ ಮೊತ್ತದ ಶುಲ್ಕ 77000 ರೂಪಾಯಿ.

ಕೆಲವೇ ವರ್ಷಗಳಲ್ಲಿ ಒಂದು ವೃತ್ತಿಪರ ಕೋರ್ಸ್ ಮೂಲಕ ಸುಸಜ್ಜಿತ ಭವಿಷ್ಯವನ್ನು ಕಟ್ಟಿಕೊಳ್ಳಲು ಇದಕ್ಕಿಂತಲೂ ಉತ್ತಮ ಅವಕಾಶಗಳು ಸಿಗಲಾರವು, ಆಯ್ಕೆ ನಿಮ್ಮದೇ, ಭದ್ರ ಭವಿಷ್ಯವೂ ನಿಮ್ಮದೇ!

ಪದವೀಧರರಿಗೆ ಡೈರೆಕ್ಟ್ ಎಂಟ್ರೀ ಸ್ಕೀಮ್

ನೊಂದಾಯಿಸಿಕೊಂಡ ನಂತರ ಐಟಿಟಿ (ಇನ್ಫಾರ್ಮೇಶನ್ ಟೆಕ್ನಾಲಜಿ ಟ್ರೈನಿಂಗ್).

ಓರಿಯೆಂಟೇಷನ್ ಪ್ರೋಗ್ರಾಮ್ (ಸಾಫ್ಟ್ ಸ್ಕಿಲ್ಸ್ ತರಬೇತಿ ಇತ್ಯಾದಿ)

3 ವರ್ಷಗಳ ಕಾಲ ಆರ್ಟಿಕಲ್ಸ್.

ಆರ್ಟಿಕಲ್ಷಿಪ್ ಸಮಯದಲ್ಲಿ ಪ್ರಾಕ್ಟಿಕಲ್ ಜ್ಞಾನದ ಜೊತೆಗೆ ಸ್ಟೈಫಂಡ್.

ಇದೇ ಅವಧಿಯಲ್ಲಿ ಐ.ಪಿ.ಸಿ.ಸಿ. ಪರೀಕ್ಷೆ ಕ್ಲಿಯರ್ ಮಾಡಲು ಅವಕಾಶ.

ಆರ್ಟಿಕಲ್ಸ್ ಮೊದಲೇ ಐಪಿಸಿಸಿ ಕ್ಲಿಯರ್ ಮಾಡಿಕೊಂಡರೆ ಹಾದಿ ಇನ್ನೂ ಸುಲಭ

ಫೈನಲ್ ಪರೀಕ್ಷೆಯಲ್ಲಿ ಎರಡು ಗ್ರೂಪ್ ಪಾಸ್ ಮಾಡಬೇಕು.

ಒಂದೊಂದು ಗ್ರೂಪ್ ಪರೀಕ್ಷೆ ಬರೆಯಲಿಕ್ಕೂ ಅವಕಾಶವಿದೆ.

ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ಇರುತ್ತದೆ.

ಸರಿಯಾಗಿ ಓದಿದರೆ ಕನಿಷ್ಠ ನಾಲ್ಕು ವರ್ಷದಲ್ಲಿ ಪಾಸ್ ಮಾಡಬಹುದು.

ಸಿ.ಎ. ಪಾಸ್ ಮಾಡಿದ ಅಭ್ಯರ್ಥಿಗೆ ದೇಶ, ವಿದೇಶಗಳಲ್ಲಿ ವಿಪುಲ ಅವಕಾಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT