ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ ಎಂಬ ಕಲಿಕಾ ಕೊಂಡಿ

Last Updated 20 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ವ್ಯಕ್ತಿಯೊಬ್ಬನ ಬೆಳವಣಿಗೆಯಲ್ಲಿ ಸಂವಹನವು ಬಹಳ ಪ್ರಮುಖ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಸಂವಹನ ನಡೆಯುತ್ತಲೇ ಇರುತ್ತದೆ. ಆದರೂ ಯಾರು ಉತ್ತಮ ಸಂವಹನ ಕೌಶಲಗಳನ್ನು ಗಳಿಸಿಕೊಂಡಿರುತ್ತಾರೋ ಅವರು ಮಾತ್ರ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಲ್ಲರು. ಸಂವಹನ ಎಂದರೆ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿ ಅಥವಾ ಒಂದು ಗುಂಪಿನೊಂದಿಗೆ ವಿಚಾರಗಳು, ಅಭಿಪ್ರಾಯಗಳು, ಸಂಗತಿಗಳು, ಮೌಲ್ಯಗಳು, ಭಾವನೆಗಳು, ಅನುಭವಗಳು, ಸಲಹೆಗಳು ಇತ್ಯಾದಿಗಳನ್ನು ಪರಸ್ಪರ ಕಳಿಸುವ ಮತ್ತು ಸ್ವೀಕರಿಸುವ ಪ್ರಕ್ರಿಯೆ. ನಿಗದಿತ ಗುರಿ ಸಾಧನೆಯನ್ನು ಮಾತುಕತೆಗಳಲ್ಲಿ ಪರಿಣಾಮಕಾರಿಯಾಗಿ ಖಚಿತಪಡಿಸಿಕೊಳ್ಳಲು ಸಂವಹನ ಬಹಳ ಮುಖ್ಯ. ಪರಿಣಾಮಕಾರಿಯಾದ ಸಂವಹನ ಪರಸ್ಪರ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಜೊತೆಗೆ ಧೈರ್ಯ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ.

ಮಗುವಿಗೆ ಸಂವಹನ ಕೌಶಲ ಮೂಡಿಸುವಲ್ಲಿ ತಂದೆ-ತಾಯಿ, ಸ್ನೇಹಿತರು, ಕುಟುಂಬ, ನೆರೆಹೊರೆ, ಸಮುದಾಯ, ಶಾಲೆ ಹಾಗೂ ಸಮೂಹ ಮಾಧ್ಯಮಗಳು ಪ್ರಭಾವ ಬೀರುತ್ತವೆ.

ಸಂವಹನದ ಪ್ರಯೋಜನಗಳು

ಕುಟುಂಬ ಹಾಗೂ ಶಾಲೆಯಲ್ಲಿ ನಡೆಯುವ ಸಂವಹನವು ಮಗುವಿನ ಭಾಷಾ ತೊಡಕುಗಳನ್ನು ನಿವಾರಿಸಿ ಸರಾಗವಾಗಿ ಮಾತನಾಡುವಂತೆ ಮಾಡುತ್ತದೆ. ಜೊತೆಗೆ ಭಾಷಾ ದೋಷಗಳನ್ನು ಸರಿಪಡಿಸಿಕೊಳ್ಳಲು ಮುಕ್ತ ಅವಕಾಶ ನೀಡುತ್ತದೆ. ಇದು ಮಗುವಿನಲ್ಲಿ ಭಾಷಾಭಿವೃದ್ದಿಗೆ ಸಹಾಯ ಮಾಡುತ್ತದೆ.

ಸಂವಹನ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಮುಕ್ತ ಸಂವಹನದಿಂದ ಮಕ್ಕಳಲ್ಲಿ ಸುರಕ್ಷತೆಯ ಭಾವನೆ ಮೂಡುತ್ತದೆ. ಜೊತೆಗೆ ಉತ್ತಮ ಬಾಂಧವ್ಯ ಮೂಡಿಸಿ ಕಲಿಕೆಗೆ ಸಹಾಯ ಮಾಡುತ್ತದೆ.

ಇದು ಕಲಿಕಾ ದೋಷವನ್ನು ನಿವಾರಿಸುವುದರಿಂದ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಜೊತೆಗೆ ಮಕ್ಕಳನ್ನು ಪಠ್ಯದ ಆಚೆಗಿನ ಕಲಿಕೆಗೆ ಉತ್ತೇಜಿಸುತ್ತದೆ. ಇದರಿಂದ ಮಕ್ಕಳು ಹೊಸದನ್ನು ಕಲಿಯಲು ಉತ್ಸುಕರಾಗುತ್ತಾರೆ.

ಇದರಿಂದ ಹೆಚ್ಚು ಹೆಚ್ಚು ಸ್ನೇಹಿತರನ್ನು ಗಳಿಸಬಹುದು. ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಅಂತೆಯೇ ಇತರ ಸ್ನೇಹಿತರಿಂದ ಮತ್ತಷ್ಟು ಸಂವಹನ ಕೌಶಲಗಳನ್ನು ಗಳಿಸಬಹುದು.

ಮುಕ್ತ ಮಾತುಕತೆಯಲ್ಲಿ ಮಕ್ಕಳು ತಮ್ಮ ಅವಶ್ಯಕತೆಗಳು ಮತ್ತು ಬಯಕೆಗಳನ್ನು ಚರ್ಚಿಸಲು ಅವಕಾಶ ಇರುವುದರಿಂದ ಮಗು ತನ್ನ ಆಲೋಚನೆಗಳೂ ಮುಖ್ಯವೆಂದು ಭಾವಿಸುತ್ತದೆ. ಪ್ರತಿಯಾಗಿ ಮಗುವಿನಲ್ಲಿ ಸ್ವಾಭಿಮಾನ ಮೂಡುತ್ತದೆ.

ಈ ಕೌಶಲದಿಂದ ಮಕ್ಕಳು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಸಮರ್ಥರಾಗುತ್ತಾರೆ. ವಿಷಯದ ವಿವಿಧ ಮಗ್ಗಲುಗಳನ್ನು ಅಧ್ಯಯನ ಮಾಡುವ ಪರಿಣತಿ ಪಡೆಯುವುದರಿಂದ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ಸನ್ನದ್ದರಾಗುತ್ತಾರೆ.

ಮಗುವಿನ ಮಾತಿಗೂ ಗೌರವವಿದೆ ಎಂದು ಗೊತ್ತಾದಾಗ ಮಗು ತನ್ನ ವರ್ತನೆಗಳನ್ನು ಬದಲಿಸಿಕೊಳ್ಳುತ್ತದೆ. ಸಕಾರಾತ್ಮಕ ವರ್ತನೆಗಳನ್ನು ಬೆಳೆಸಿಕೊಳ್ಳುವತ್ತ ಚಿತ್ತ ಹರಿಸುತ್ತದೆ.

ಕುಟುಂಬ/ ಶಾಲೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳ ಕುರಿತು ಸಂವಹನ ನಡೆಸಿ ಪರಿಣತಿ ಗಳಿಸಿದ ಮಗು ಮುಂದೆ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಸಹಜವಾಗಿ ಅಣಿಗೊಳ್ಳುತ್ತದೆ.

ಈ ಕೌಶಲದಿಂದ ಮಗುವಿನಲ್ಲಿ ಉತ್ತಮ ದೇಹಭಾಷೆ ರೂಪುಗೊಳ್ಳುತ್ತದೆ. ಇತರರೊಂದಿಗೆ ಮಾತನಾಡುವ ವೇಳೆ ತನ್ನ ಆಂಗಿಕ ವರ್ತನೆ ಹೇಗಿರಬೇಕೆಂಬುದನ್ನು ಮಗು ತಿಳಿದುಕೊಳ್ಳುತ್ತದೆ.

ಮಗುವಿನ ಓದಿನ ತೊಂದರೆಯನ್ನು ನಿವಾರಿಸುತ್ತದೆ. ನಿರಂತರ ಸಂವಹನದಿಂದ ಶೇ 50– 90ರಷ್ಟು ಮಕ್ಕಳು ಓದಿನಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗುತ್ತಾರೆ.

ಮಗುವಿನ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಮಕ್ಕಳಲ್ಲಿ ಒತ್ತಡ, ಮಾನಸಿಕ ಹಿಂಸೆ, ಖಿನ್ನತೆ, ಸಂಕೋಚಗಳಂತಹ ಸಮಸ್ಯೆಗಳನ್ನು ದೂರ ಮಾಡಿ ಮಾನಸಿಕ ಸ್ವಾಸ್ಥವನ್ನು ಕಾಪಾಡುತ್ತದೆ.

ಮಕ್ಕಳ ಸಂವಹನದ ಅಡೆತಡೆಗಳು

ಸಂವಹನವು ವಿಫಲಗೊಳ್ಳಲು ಅನೇಕ ಕಾರಣಗಳಿರುತ್ತವೆ. ಸಂದೇಶ ಕಳಿಸುವವ ಮತ್ತು ಸ್ವೀಕರಿಸುವವರ ನಡುವೆ ಅಡೆತಡೆಗಳು ಏರ್ಪಟ್ಟಾಗ ಸಂವಹನ ವಿಫಲವಾಗುತ್ತದೆ. ಸಕ್ರಿಯ ಆಲಿಸುವಿಕೆ, ಸ್ಪಷ್ಟೀಕರಣ ಹಾಗೂ ಪ್ರತಿಬಿಂಬಾತ್ಮಕ ಕೌಶಲಗಳ ಕೊರತೆಯು ಸಂದೇಶ ವಿರೂಪಗೊಳ್ಳಲು ಕಾರಣಗಳಾಗಬಹುದು. ಅಡೆತಡೆಗಳು ಗೊಂದಲ ಮತ್ತು ತಪ್ಪು ತಿಳಿವಳಿಕೆಗೆ ಪ್ರೇರಕಗಳಾಗುತ್ತವೆ.

ಬಹುಮುಖ್ಯವಾಗಿ ಕೆಳಗಿನ ಕೆಲವು ಅಡೆತಡೆಗಳು ಉತ್ತಮ ಸಂವಹನಕ್ಕೆ ಮಾರಕ ಎನ್ನಬಹುದು.

ಬಹುತೇಕ ಮಕ್ಕಳಲ್ಲಿ ಆಲೋಚನಾ ಸಾಮರ್ಥ್ಯ ಅಷ್ಟಾಗಿ ಬೆಳವಣಿಗೆಯಾಗಿರುವುದಿಲ್ಲ. ಮಗುವಿನ ಅರಿವಿನ ಸಾಮರ್ಥ್ಯದಲ್ಲಿ ಕೊರತೆಯಾದಾಗ ಭಾಷಾ ಕೌಶಲಗಳು ವಿಕಸನವಾಗಲು ತೊಂದರೆಯಾಗಿ ಸಂವಹನಕ್ಕೆ ತೊಂದರೆಯಾಗುತ್ತದೆ.

ಕೆಲವು ಮಕ್ಕಳಲ್ಲಿ ನಿರರ್ಗಳತೆಯ ಕೊರತೆ. ನಿರರ್ಗಳತೆಯ ಕೊರತೆಗೆ ಉಚ್ಛಾರ ದೋಷ, ದೀರ್ಘಕಾಲಿಕ ಮರೆವು, ಸಂಕೋಚ ಸ್ವಭಾವ ಇತ್ಯಾದಿ ಕಾರಣವಾಗಿರುತ್ತದೆ.

ಭಾಷಾ ತೊಂದರೆ. ಅಭಿವ್ಯಕ್ತಿ ಸರಿಯಾಗಿಲ್ಲದಿರುವುದು, ಶಬ್ದಭಂಡಾರದ ಕೊರತೆ, ಭಾಷಾ ಪ್ರಯೋಗದ ಕೌಶಲಗಳ ಕೊರತೆ, ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹೇಗೆ ವರ್ಗಾಯಿಸಬೇಕೆಂಬ ಕೊರತೆ.

ಧ್ವನಿಯ ಸರಿಯಾದ ಬಳಕೆಯ ಅರಿವು ಇಲ್ಲದಿರುವುದು. ಕೆಲವು ಮಕ್ಕಳು ಶಬ್ದಗಳನ್ನು ಉಚ್ಛರಿಸುವಾಗ ಕೊನೆಯ ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಛರಿಸದೇ ನುಂಗಿಕೊಳ್ಳುತ್ತಾರೆ. ಶ್ವಾಸಕೋಶದಿಂದ ಬರುವ ಗಾಳಿಯನ್ನು ನಿಯಂತ್ರಿಸುವ ಕೌಶಲ ಇಲ್ಲದಿರುವಾಗ ಹೀಗಾಗುತ್ತದೆ. ಧ್ವನಿಯ ಏರಿಳಿತದ ಸ್ಪಷ್ಟ ಚಿತ್ರಣ ಇಲ್ಲದಿರುವುದೂ ಸಹ ಉತ್ತಮ ಸಂವಹನಕ್ಕೆ ಅಡ್ಡಿಯಾಗುತ್ತದೆ.

ಸಮಸ್ಯೆ ನಿವಾರಣೆ ಹೇಗೆ?

ಮಕ್ಕಳಲ್ಲಿ ಸಂವಹನದ ಅಡೆತಡೆಗಳನ್ನು ಮೀರಿ ಕೌಶಲಗಳನ್ನು ಮೂಡಿಸುವುದು ತ್ರಾಸದಾಯಕವಾದರೂ ಸತತ ಅಭ್ಯಾಸದಿಂದ ಇದನ್ನು ಸುಲಭವಾಗಿಸಬಹುದು. ಅದಕ್ಕಾಗಿ ಅನೇಕ ತಂತ್ರಗಳಿವೆ. ಕೆಲವು ತಂತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ.

ಪ್ರತಿಯೊಂದು ಮಗುವೂ ಸಹ ಅನನ್ಯ. ಯಾವ ಮಗುವನ್ನೂ ಕಡೆಗಣಿಸದಂತೆ ಮಗುವಿನೊಂದಿಗೆ ಮುಕ್ತವಾಗಿ ಸಂಭಾಷಣೆ ನಡೆಸಿ. ಅವರ ಬೇಕು–ಬೇಡಗಳನ್ನು ಆಲಿಸಿ. ಅವರಲ್ಲಿನ ಸಂಭಾಷಣಾ ದೋಷವನ್ನು ಪತ್ತೆ ಹಚ್ಚಿ, ಪರಿಹರಿಸುವ ಪ್ರಯತ್ನ ಮಾಡಿ. ಭಯಮುಕ್ತ ವಾತಾವರಣ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮ ಸಂವಹನ ಸಾಧ್ಯ.

ಕುಟುಂಬದಲ್ಲಾಗಲೀ ಅಥವಾ ಶಾಲೆಯಲ್ಲಾಗಲೀ ಸಂಭಾಷಣೆ/ಸಂವಹನಕ್ಕೆ ನಿಗದಿತ ಸಮಯ ಮೀಸಲಿಡಿ. ಈ ಸಮಯದಲ್ಲಿ ಮಗು ಮುಕ್ತವಾಗಿ ಮಾತನಾಡಲು ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತದೆ. ಇದರಿಂದ ಮಗು ಸ್ವಯಂ ಪ್ರೇರಣೆಗೊಂಡು ಕಲಿಕೆಯತ್ತ ಆಸಕ್ತಿ ವಹಿಸುತ್ತದೆ.

ಪ್ರತಿದಿನದ ಶಾಲಾ ಚಟುವಟಿಕೆಗಳ ಕುರಿತು ಕುಟುಂಬದಲ್ಲಿ ವಿಷಯ ಪ್ರಸ್ತಾಪಿತವಾಗಬೇಕು. ಶಾಲೆಯಲ್ಲಿ ಏನೇನು ನಡೆಯಿತು? ಶಾಲೆಯಲ್ಲಿ ಮಗು ಯಾರ ಜೊತೆ ಹೆಚ್ಚು ಸಮಯ ಕಳೆಯಿತು? ಶಾಲೆಯಲ್ಲಿ ಇಷ್ಟವಾದ ಅಂಶ ಯಾವುದು? ಇಷ್ಟವಾಗದ ಅಂಶ ಯಾವುದು? ಯಾಕೆ? ಇತ್ಯಾದಿ ವಿಷಯಗಳ ಬಗ್ಗೆ ಮಕ್ಕಳು ಸವಿವರವಾಗಿ ವಿವರಿಸುವಂತೆ ಕೇಳಬೇಕು.

ಪಠ್ಯೇತರ ಚಟುವಟಿಕೆಗಳಾದ ಭಾಷಣ, ಸಂವಾದ, ಪ್ರಬಂಧ ಬರಹ, ಚಿತ್ರ ರಚನೆ ಇತ್ಯಾದಿ ತಯಾರಿಗೆ ಮಗುವಿಗೆ ಸಹಾಯ ಮಾಡಿ. ಆ ಚಟುವಟಿಕೆಯನ್ನು ಹೇಗೆ ವಿನ್ಯಾಸಗೊಳಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿ.

ಮಗು ಇತರರೊಂದಿಗೆ ಮಾತನಾಡುವಾಗ ದೇಹಭಾಷೆ ಹೇಗಿರಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿತೆ ನೀಡಿ ಅಭ್ಯಾಸ ಮಾಡಿಸಿ. ಇತರರ ದೇಹಭಾಷೆ ಬಗ್ಗೆ ಗಮನ ಹರಿಸಲು ಹೇಳಿ.

ಮಗುವಿಗೆ ನೀವು ಏನನ್ನಾದರೂ ಹೇಳಿದ ನಂತರ ಅದನ್ನು ಪುನರಾವರ್ತಿಸಲು ಹೇಳಿ ಅಥವಾ ಅದಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿ. ಆಗ ಮಗು ಪ್ರತಿ ಬಾರಿ ನೀವು ಹೇಳುವುದನ್ನು ಸ್ಪಷ್ಟವಾಗಿ ಆಲಿಸುತ್ತದೆ. ಕೆಲವು ವೇಳೆ ಹಿಂದಿನ ದಿನದ ವಿಷಯವನ್ನೂ ಕೇಳಿ. ಇದರಿಂದ ಮಗು ಸ್ಪಷ್ಟವಾಗಿ ಆಲಿಸುವ ಜೊತೆಗೆ ಪುನರ್‌ಮನನ ಮಾಡಿಕೊಂಡು ಹೇಳಲು ಸಿದ್ಧತೆ ಮಾಡಿಕೊಳ್ಳುತ್ತದೆ.

ಪಠ್ಯಾಂಶದಲ್ಲಿನ ನಾಟಕ, ಸಂಭಾಷಣೆಗಳನ್ನು ನಾಟಕದ ಮೂಲಕವೇ ಅಭ್ಯಾಸ ಮಾಡಿಸಿ. ಇದರಿಂದ ಧ್ವನಿಯ ಏರಿಳಿತ ಸ್ಪಷ್ಟವಾಗಿ ಉಚ್ಛರಿಸುವ ಹಾಗೂ ನಿಗದಿತ ಸಮಯದಲ್ಲಿ ತಮ್ಮ ಪಾತ್ರದ ಮಾತನ್ನು ಮುಕ್ತಾಯಗೊಳಿಸುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇತರರ ಮಾತನ್ನು ಆಲಿಸಿ ಅದಕ್ಕೆ ಪ್ರತಿಕ್ರಿಯೆ ನೀಡಬೇಕೆಂಬುದನ್ನು ಕಲಿಯುತ್ತಾರೆ. ದೈನಂದಿನ ಚಟುವಟಿಕೆಗಳನ್ನೇ ಪಾತ್ರ ರೂಪದಲ್ಲಿ ಮಾಡಲು ತಿಳಿಸಿ.

ಮಗುವಿನ ಓದಿನ ಸಮಯದಲ್ಲಿ ಜೊತೆಗಿದ್ದು, ಓದಿನ ಧಾಟಿಯನ್ನು ಪರಿಶೀಲಿಸಿ. ಪ್ರತಿದಿನ ನಿಗದಿತವಾಗಿ ಓದಿನ ಅಭ್ಯಾಸ ಮಾಡಿಸಿ. ನಂತರ ಓದಿದ ವಿಷಯದ ಕುರಿತು ಸಂಭಾಷಣೆ ನಡೆಸಿ.

ಆಗಾಗ ಚಲನಚಿತ್ರ, ನಾಟಕ ಪ್ರದರ್ಶನಗಳಿಗೆ ಮಗುವನ್ನು ಕರೆದೊಯ್ಯಿರಿ ಅಥವಾ ಶಾಲೆ/ಮನೆಯಲ್ಲಿಯೇ ಪ್ರದರ್ಶನದ ವ್ಯವಸ್ಥೆ ಮಾಡಿರಿ. ವೀಕ್ಷಿಸಿದ ನಂತರ ಅದರ ಕುರಿತು ಮಗುವಿಗೆ ಮಾತನಾಡಲು ತಿಳಿಸಿ. ಕಥಾವಸ್ತು, ಪಾತ್ರಗಳು, ಸನ್ನಿವೇಶಗಳು, ಹಾಡುಗಳು, ಸಂಗೀತ, ಸ್ಟಂಟ್ಸ್ ಇತ್ಯಾದಿ ಕುರಿತು ಮಗು ತನ್ನದೇ ಆದ ಶೈಲಿಯಲ್ಲಿ ವಿಮರ್ಶೆ ಮಾಡಲು ಮುಕ್ತ ಅವಕಾಶ ನೀಡಿ.

ಮಕ್ಕಳಲ್ಲಿ ಪದಸಂಪತ್ತು ಬೆಳೆಯಲು ಶಬ್ದಕೋಶ ಬಳಸುವ ಅಭ್ಯಾಸ ರೂಢಿಸಿ. ಇದು ವಿವಿಧ ಸನ್ನಿವೇಶಗಳಲ್ಲಿ ನಿರ್ದಿಷ್ಟ ಪದಗಳಿಗೆ ನಾನಾ ಪದಗಳನ್ನು ಬಳಸಲು ಅನುಕೂಲವಾಗುತ್ತದೆ.

ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕಗಳನ್ನು ಓದುವ ಹಾಗೂ ಅದರಲ್ಲಿನ ವಿಷಯದ ಕುರಿತು ಮಾತನಾಡುವ ಅಭ್ಯಾಸ ಬೆಳೆಸಿ. ಇದರಿಂದ ವಿಷಯ ಜ್ಞಾನ ಹೆಚ್ಚುವುದಲ್ಲದೇ ಒಂದು ವಿಷಯದ ವಿವಿಧ ಆಯಾಮಗಳನ್ನು ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT