ಶಿಕ್ಷಣ ಕಾಶಿ ಸಿಂದಗಿ: ವಿದ್ಯಾರ್ಥಿನಿಯರ ಕಲಿಕೆಗೂ ಪೂರಕ ವಾತಾವರಣ

7
ಸಿಂದಗಿಯ ಜ್ಞಾನಮಂದಿರ ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾಲೇಜು

ಶಿಕ್ಷಣ ಕಾಶಿ ಸಿಂದಗಿ: ವಿದ್ಯಾರ್ಥಿನಿಯರ ಕಲಿಕೆಗೂ ಪೂರಕ ವಾತಾವರಣ

Published:
Updated:
Deccan Herald

ಸಿಂದಗಿ: ಸಿಂದಗಿ ಶಿಕ್ಷಣ ಕಾಶಿ ಎಂದೇ ಹೆಸರಾಗಿದೆ. ಇಲ್ಲಿ ಶಾಲಾ–ಕಾಲೇಜುಗಳಿಗೆ ಬರವಿಲ್ಲ. 59 ಅನುದಾನ ರಹಿತ ಶಾಲೆಗಳಿವೆ. ಇನ್ನೂ ಅನುದಾನ ಪಡೆಯುವ ಶಾಲೆಗಳು ಕೂಡ ಹಲವಾರು. ಇಡೀ ಶಿಕ್ಷಣ ವ್ಯವಸ್ಥೆಗೆ ಕಳಸಪ್ರಾಯವಾಗಿರುವುದು ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ.

ಶಿಕ್ಷಣ ಪ್ರೇಮಿ ಸಾರಂಗಮಠದ ಅಂದಿನ ಪೀಠಾಧ್ಯಕ್ಷರಾಗಿದ್ದ ಚೆನ್ನವೀರ ಶ್ರೀಗಳು, ತಮ್ಮ ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ, ಕಾಲೇಜು ಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿದ್ದರು. ನಿವೃತ್ತ ತಹಶೀಲ್ದಾರ್ ಎನ್.ಎಂ.ಮಠ ಆರಂಭದ ಹಂತದಲ್ಲಿ ಇಲ್ಲಿನ ಬಜಾರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇದರ ಪರಿಣಾಮವಾಗಿ 1969ರಲ್ಲಿ ಶಿಕ್ಷಣ ಸಂಸ್ಥೆ ಆರಂಭಗೊಳ್ಳುವ ಮೂಲಕ ಸಿಂದಗಿ ತಾಲ್ಲೂಕಿನ ಮೊದಲ ಕಾಲೇಜು ಎಂಬ ಖ್ಯಾತಿಗೂ ಇದು ಒಳಗಾಗಿದೆ.

ಕಾಲೇಜಿನ ಕಟ್ಟಡಕ್ಕೆ 26 ಎಕರೆ ಭೂಮಿಯನ್ನು ಆರ್.ಬಿ.ಬೂದಿಹಾಳ, ಆರ್.ಡಿ.ಪಾಟೀಲ ದಾನವನ್ನಾಗಿ ನೀಡಿದ್ದರು. ಅದರಂತೆ ಪಿ.ಜಿ.ಪೋರವಾಲ ಮತ್ತು ವಿ.ವಿ.ಸಾಲಿಮಠ ದೇಣಿಗೆ ನೀಡಿದ್ದರು. ಎನ್.ಎಂ.ಮಠ, ಮುದ್ದಪ್ಪ ಜೋಗೂರ, ಮಣ್ಣೆಪ್ಪ ಹೂಗಾರ, ಟಿ.ಜಿ.ಹಿರೇಮಠ, ವಿ.ಸಿ.ಮೋಟಗಿ, ಜಿ.ಆರ್.ವಾರದ, ಡಾ.ಎಸ್.ಜಿ.ಬಮ್ಮಣ್ಣಿ, ಸಿದಗೊಂಡಪ್ಪ ಹಿರೇಕುರುಬರ, ಬಿ.ಐ.ಮಸಳಿ, ಸಿ.ಜಿ.ಪಾಟೀಲ ವಕೀಲ, ನರಸಿಂಗಪ್ಪ ಸಂಗಮ, ಜಿ.ಆರ್.ವಾರದ ಹಾಗೂ ಪ್ರಥಮ ಪ್ರಾಚಾರ್ಯ ದಿವಂಗತ ಎಸ್.ಜಿ.ಸಾಲಿಮಠ ಇವರೆಲ್ಲರ ನೆರವಿನಿಂದ ಕಾಲೇಜು ಪ್ರಗತಿಪಥದಲ್ಲಿ ಸಾಗಿದೆ.

ಈ ಸಂಸ್ಥೆಯಡಿ ನಡೆಯುತ್ತಿರುವ ಜಿ.ಪಿ.ಪೋರವಾಲ, ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಕಾಲೇಜು, ಬಿಸಿಎ ಕಾಲೇಜು, ಮತ್ತು ಭಾಸ್ಕರಾಚಾರ್ಯ-2 ಸ್ನಾತಕೋತ್ತರ ಕೇಂದ್ರದಲ್ಲಿ 1200ರಷ್ಟು ವಿದ್ಯಾರ್ಥಿಗಳು ಇದೀಗ ಅಧ್ಯಯನ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಗುಣಮಟ್ಟದ ಬೋಧನೆ ನೀಡಲಾಗುತ್ತದೆ ಎಂಬ ಕಾರಣಕ್ಕಾಗಿ ನೆರೆಯ ಕಲಬುರ್ಗಿ ಜಿಲ್ಲೆಯನ್ನೊಳಗೊಂಡಂತೆ ಹಲ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಾರೆ.

ವಿಶೇಷಗಳ ಸಂಗಮ ಈ ಕಾಲೇಜು..!

ಶೇ 55ರಷ್ಟು ಬಾಲಕಿಯರೇ ಓದುತ್ತಿರುವುದು ಈ ಕಾಲೇಜಿನ ವಿಶೇಷ. ಕಳೆದ ವರ್ಷ ಈ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಷಯದಲ್ಲಿ ಐ.ಎನ್.ಅಂಗಡಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದು ಸಾಧನೆ.

ಈ ಕಾಲೇಜಿನ ವಿದ್ಯಾರ್ಥಿ ಆನಂದ ಹಿರೇಕುರುಬರ 2014ರಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಚೀನಾದಲ್ಲಿ ಜರುಗಿದ ಯುವ ವಿದ್ಯಾರ್ಥಿ ವಿನಿಮಯ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಕಾಲೇಜಿನ ಆವರಣ ಹಸಿರುಮಯ. ಗ್ರೀನ್ ಹೌಸ್, ಬೊಟಾನಿಕಲ್ ಗಾರ್ಡನ್ ಇದೆ. ₹ ಎಂಟು ಲಕ್ಷ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿದೆ.

ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. 400 ಮೀಟರ್ಸ್ ಓಟದ ಪ್ಲೇ ಗ್ರೌಂಡ್, ₹ 1.30ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ, ಮಲ್ಟಿ ಜಿಮ್ ಇದೆ. ಎರಡು ವಿಜ್ಞಾನ ವಿಷಯಗಳ ಮ್ಯೂಸಿಯಂ ಸಹ ಇವೆ. ಎರಡು ಕಂಪ್ಯೂಟರ್ಸ್ ಲ್ಯಾಬ್, 31863 ಗ್ರಂಥಗಳಿವೆ. ಡಿಜಿಟಲ್ ವರ್ಗ ಕೋಣೆಗಳನ್ನೊಳಗೊಂಡಿದೆ ಈ ಕಾಲೇಜು.

ಪ್ರತಿ ವರ್ಷ ಕಾಮರ್ಸ್ ವಿಭಾಗದಿಂದ ವ್ಯವಹಾರಿಕ ಹಬ್ಬ ಆಚರಿಸಲಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳಿಗಾಗಿ ಏಳು ದಿನ ಕೌಶಲ ತರಬೇತಿ ನೀಡಲಾಗುತ್ತದೆ. ರಾಜ್ಯ, ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಪ್ರತಿ ವರ್ಷ ಕನಿಷ್ಠ 50 ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತಾಗಿ ಪ್ರಬಂಧ ಮಂಡಿಸುತ್ತಾರೆ. ಪ್ರಾಧ್ಯಾಪಕ ವರ್ಗ ಸಹ ಯು.ಜಿ.ಸಿ ವತಿಯಿಂದ ಏರ್ಪಡಿಸುವ ಸಂಶೋಧನಾ ಪ್ರಬಂಧ ಮಂಡನೆ ಸಮಾವೇಶದಲ್ಲಿ ಭಾಗವಹಿಸುತ್ತಾರೆ.

ಈ ವರ್ಷ ಡಾ.ನಾಗರಾಜ ಮುರಗೋಡ (ಬೆಳಗಾವಿ ಜಿಲ್ಲೆಯ ವೀರಶೈವ ಮಠಗಳ ಸಾಮಾಜಿಕ ಕೊಡುಗೆ), ಡಾ.ಆರ್.ಎಂ.ಪಾಟೀಲ (ಮುಂಬೈ ಕರ್ನಾಟಕದ ಸ್ವಸಹಾಯ ಗುಂಪುಗಳ ಅಧ್ಯಯನ), ಡಾ.ಶ್ರೀಧರ ಕಾಂಬಳೆ (ವಿಜಯಪುರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಅಧ್ಯಯನ) ಇವರು ಸಂಶೋಧನಾ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

ಶಿಕ್ಷಣ ಪ್ರೇಮಿ, ಕಾಯಕಯೋಗಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂಗೈಕ್ಯ ಚೆನ್ನವೀರ ಶ್ರೀಗಳ ಕನಸು ಸಾಕಾರಗೊಳಿಸುವ ದಿಸೆಯಲ್ಲಿ ಸಂಸ್ಥೆಯ ಈಗಿನ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯರು ಕಾರ್ಯ ಪ್ರವೃತ್ತರಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !