ಭಾನುವಾರ, ಜನವರಿ 26, 2020
31 °C

ಶಿಕ್ಷಕ ವೃತ್ತಿಯಲ್ಲಿ ಗೊಂದಲ..

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

* ಸರ್, ನಾನು ಎಂ.ಬಿ.ಎ. ಮಾರ್ಕೆಟಿಂಗ್ ಮತ್ತು ಎಚ್.ಆರ್. ಸ್ನಾತಕೋತ್ತರ ಪದವೀಧರನಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಬೇಕು ಎಂಬುದು ನನ್ನ ಬಯಕೆ. ಅದಕ್ಕಾಗಿ ಈಗ ಖಾಸಗಿ ಪದವಿ ಕಾಲೇಜು ಒಂದರಲ್ಲಿ ಕಳೆದ ಒಂದು ವರ್ಷದಿಂದ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಕೇವಲ ಹನ್ನೆರಡು ಸಾವಿರ ಸಂಬಳ ಸಿಗುತ್ತಿದ್ದು, ಈ ಸಂಬಳದಲ್ಲಿ ಮುಂದೆ ಹೇಗೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬಹುದು ಎಂದು ಚಿಂತೆ ಆಗುತ್ತಿದೆ. ನನ್ನ ಎಲ್ಲಾ ಗೆಳೆಯರು ಉತ್ತಮ ವೇತನ ಕೊಡುವ ಕೆಲಸ ಮಾಡುತ್ತಿದ್ದಾರೆ. ನನಗೂ ಈಗ ಬ್ಯುಸಿನೆಸ್ ಡೆವಲೆಪ್‌ಮೆಂಟ್‌ನಲ್ಲಿ ಉತ್ತಮ ಅವಕಾಶಗಳು ಸಿಗುತ್ತಿದ್ದು ನನ್ನ ಇಷ್ಟದ ವೃತ್ತಿಯನ್ನು ಬಿಟ್ಟು ಹೋಗಬೇಕೆ ಅಥವಾ ಬೇಡವೇ ಎಂಬುದು ಗೊತ್ತಾಗುತ್ತಿಲ್ಲ. ಏನು ಮಾಡಲಿ ಹೇಳಿ?

ಹೆಸರು, ಊರು ಬೇಡ

ಇರುವ ಒಂದು ಜೀವನದಲ್ಲಿ ನಮಗೆ ಇಷ್ಟವಿರುವ ವೃತ್ತಿ ಮಾಡಬೇಕೆಂದು ಬಯಸುವುದು ಮತ್ತು ಆ ಪ್ರಕಾರ ಕೆಲಸ ಮಾಡುವುದು ಸಹಜವಾದದ್ದೆ. ಆದರೆ ಬದುಕು ಅನೇಕ ಸವಾಲುಗಳನ್ನು ನಮಗೆ ಒಡ್ಡುವುದರಿಂದ ಈ ಗೊಂದಲಗಳು ಸಾಮಾನ್ಯ. ಸ್ವಲ್ಪ ಸಮಯದವರೆಗೆ ಗೊಂದಲಗಳು ಇರುತ್ತವೆ. ನಂತರ ಅವು ನಿಧಾನಕ್ಕೆ ತಿಳಿಯಾಗಿ ಸ್ಪಷ್ಟವಾಗುತ್ತ ಬರುತ್ತವೆ.

ಮೊದಲಿಗೆ ನೀವು ನಿಮ್ಮ ಆದ್ಯತೆಯನ್ನು ಪರಿಶೀಲಿಸಿಕೊಳ್ಳಬೇಕು. ಅದಕ್ಕಾಗಿ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಿ. ವೃತ್ತಿ ಆಯ್ಕೆ ಮಾಡಿಕೊಳ್ಳುವಾಗ ಆಸಕ್ತಿ ಮತ್ತು ಸಂಬಳವನ್ನು ಪರಿಗಣಿಸಬೇಕು ಎಂದಾದಾಗ ಎರಡಕ್ಕೂ ಹತ್ತರಲ್ಲಿ ಎಷ್ಟು ಅಂಕ ಕೊಡುತ್ತಿರಿ? ಈಗ ನಿಮಗೆ ಆಸಕ್ತಿ ಅಥವಾ ಸಂಬಳ ಮುಖ್ಯವೆನಿಸಿದರೆ, 5 ವರ್ಷಗಳ ನಂತರ ಯಾವುದು ಮುಖ್ಯ ಎನಿಸಬಹುದು? ಆಗ ನಿಮ್ಮ ಗೆಳೆಯ/ ಗೆಳತಿಯರ ಸಾಧನೆ, ಕುಟುಂಬದ ನಿರೀಕ್ಷೆಗಳು.. ಇತ್ಯಾದಿ ಸೇರಿ ಬೇರೆಯದೇ ರೀತಿಯ ಒತ್ತಡ ಆಗಬಹುದು. ಅದಕ್ಕಾಗಿ ಇದನ್ನೆಲ್ಲ ಪರಿಗಣಿಸಿ ನೀವು ನಿರ್ಧಾರ ಮಾಡಬೇಕಾಗುತ್ತದೆ.

ಶಿಕ್ಷಕ ವೃತ್ತಿಯ ಕ್ಷೇತ್ರದಲ್ಲಿ ಉತ್ತಮ ವೇತನ ಮತ್ತು ಅಭಿವೃದ್ಧಿ ಸಾಧಿಸಲು ಒಳ್ಳೆಯ ಖಾಸಗಿ ಸಂಸ್ಥೆಗಳಲ್ಲಿ ಅಥವಾ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರುವುದು ಮುಖ್ಯ. ಅದಕ್ಕಾಗಿ ನೀವು ಯುಜಿಸಿ ನೆಟ್ ಅರ್ಹತೆಯ ಪರೀಕ್ಷೆಯನ್ನು ಬರೆಯಿರಿ. ಹಾಗೆಯೇ ಉತ್ತಮ ವಿಶ್ವವಿದ್ಯಾಲಯದಲ್ಲಿ ಅಥವಾ ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಎಚ್.ಡಿ. ಪಡೆಯಲು ಪ್ರಯತ್ನಿಸಿ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ.
ಇನ್ನು ನೀವು ಪಿಎಚ್.ಡಿ. ಮಾಡುವತನಕ ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಬಹುದು ಅಥವಾ ನಿಮ್ಮ ಪಿಎಚ್.ಡಿ. ಮತ್ತು ನೆಟ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವತ್ತ ನಿಮಗೆ ಈಗ ದೊರಕಿರುವ ಬ್ಯುಸಿನೆಸ್ ಡೆವಲೆಪ್‌ಮೆಂಟ್ ಉದ್ಯೋಗದ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಇದು ನಿಮಗೆ ನಿಮ್ಮ ಕಾರ್ಯಕ್ಷೇತ್ರದ ಹೆಚ್ಚು ಪ್ರಾಯೋಗಿಕ ಅನುಭವ, ಸದ್ಯದ ವಿದ್ಯಮಾನಗಳು, ತಂತ್ರಜ್ಞಾನಗಳ ಬಗ್ಗೆ ಕೌಶಲ ಮತ್ತು ಜ್ಞಾನವನ್ನು ಒದಗಿಸುತ್ತದೆ. ಜೀವನದಲ್ಲಿ ಇಂತಹ ಸವಾಲುಗಳನ್ನು ಸ್ವೀಕರಿಸಿ ಅನುಭವ ಪಡೆದಲ್ಲಿ ನಿಮ್ಮ ಅನುಭವ ಹೆಚ್ಚು ಸಮಗ್ರವಾಗುತ್ತದೆ. ನೀವು ನೀಡುವ ಉಪನ್ಯಾಸ ನೀರಸವಾಗಿರದೆ ಹೆಚ್ಚು ಪ್ರಾಯೋಗಿಕವಾಗಿ, ಅನುಭವ ಮತ್ತು ಜ್ಞಾನದಿಂದ ಹದವಾಗಿ ಬೆರೆತಿರುತ್ತದೆ. ನಿಮ್ಮ ಮುಖ್ಯ ಗುರಿಯಾದ ಉಪನ್ಯಾಸಕ ವೃತ್ತಿಗೆ ಬೇಕಾಗಿರುವ ತಯಾರಿ ಮಾಡಿಕೊಳ್ಳುತ್ತ , ಬೇರೆ ಆಯಾಮಗಳಲ್ಲೂ ಹೆಚ್ಚು ಅನುಭವ ಪಡೆಯುತ್ತ ಮುಂದುವರೆಯಿರಿ. ಶುಭಾಶಯ.

* ನಾನು ಬಿ.ಎಡ್‌. 3ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು ನನ್ನದು ಎಂ.ಎಸ್‌ಸಿ. (ರಸಾಯನಶಾಸ್ತ್ರ) ಆಗಿದೆ. ನನಗೆ ಉಪನ್ಯಾಸಕಿ ಆಗುವ ಆಸೆ. ನಾನು ಇನ್ನೂ ಯಾವ ಯಾವ ಪ್ರವೇಶ ಪರೀಕ್ಷೆ ಬರೆಯಬೇಕು? ಮತ್ತು 3ನೇ ಸೆಮಿಸ್ಟರ್‌ನಲ್ಲಿ ಇದ್ದುಕೊಂಡು ಯಾವ ಪರೀಕ್ಷೆ ಬರೆಯಬಹುದು? ನನ್ನದು ಎನ್‌ಇಟಿ, ಕೆ–ಸೆಟ್‌ ಯಾವುದೂ ಆಗಿಲ್ಲ.

- ಹೆಸರು, ಊರು ಇಲ್ಲ.

ನೀವು ಉಪನ್ಯಾಸಕರಾಗಲು ನಿರ್ಧರಿಸಿರುವುದರಿಂದ ಯಾವ ಹಂತದ ವಿದ್ಯಾರ್ಥಿಗಳಿಗೆ ನೀವು ಶಿಕ್ಷಕರಾಗಲು ಇಚ್ಚಿಸುತ್ತೀರಿ ಎಂದು ನಿರ್ಧರಿಸಿ ಮುಂದುವರೆಯಿರಿ. ನೀವು ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ, ಈಗ ಬಿ.ಎಡ್. ಪೂರ್ಣಗೊಳಿಸುವುದರಿಂದ ಅನೇಕ ಹಂತದ ವಿದ್ಯಾರ್ಥಿಗಳಿಗೆ ನೀವು ಬೋಧಿಸಬಹುದು. ಪದವಿ ಮತ್ತು ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಬೋಧಿಸಬಹುದು. ಅದಕ್ಕಾಗಿ ಯುಜಿಸಿ ಎನ್‌ಇಟಿ ಅಥವಾ ಪಿಎಚ್.ಡಿ. ಆಗಿರಬೇಕು. ಈ ನೇಮಕಾತಿಯು ಉನ್ನತ ಶಿಕ್ಷಣ ಇಲಾಖೆ ನಡೆಸುವ ನೇಮಕಾತಿ ಪರೀಕ್ಷೆಯ ಮುಖಾಂತರ ನಡೆಯುತ್ತದೆ. ಪಿ.ಯು.ಸಿ. ಹಂತದ ವಿದ್ಯಾರ್ಥಿಗಳಿಗೆ ಕೂಡ ಉಪನ್ಯಾಸಕರಾಗಿ ಬೋಧಿಸಬಹುದು. ಅದಕ್ಕಾಗಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್. ಪದವಿ ಕಡ್ಡಾಯವಾಗಿದ್ದು, ಶಿಕ್ಷಣ ಇಲಾಖೆ ನೇಮಕಾತಿಗೆ ಕರೆದಾಗ ಪರೀಕ್ಷೆ ಬರೆಯಬೇಕು. ನಿಮ್ಮ ಬಿ.ಎಸ್‌ಸಿ., ಬಿ.ಎಡ್. ಆಧಾರದ ಮೇಲೆ ಪ್ರೌಢಶಾಲಾ ಶಿಕ್ಷಕರಾಗಿಯೂ ನೇಮಕಗೊಳ್ಳಬಹುದು. ಈ ಪರೀಕ್ಷೆಗಳ ಹಿಂದಿನ ಅಧಿಸೂಚನೆಯನ್ನು ಪರಿಶೀಲಿಸಿ ಅವುಗಳ ವಿಷಯ ಮತ್ತು ರೂಪುರೇಷೆಯನ್ನು ಗಮನಿಸಿ ತಯಾರಿ ಮಾಡಿಕೊಳ್ಳಿ.

ಈ ಎಲ್ಲ ನೇಮಕಾತಿಗಳು ಸರ್ಕಾರದ ನಿಯಮಗಳ ಪ್ರಕಾರ ಆಗುವುದರಿಂದ ಇಂತಹ ಸಮಯದಲ್ಲೇ ಆಗುತ್ತದೆ ಎಂದು ಹೇಳುವುದು ಕಷ್ಟ. ಅದಕ್ಕಾಗಿ ಕಾಯುತ್ತ ಕುಳಿತರೆ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ನೀವು ಆ ಪರೀಕ್ಷೆಗಳಿಗೆ ತಯಾರಿ ಮಾಡುತ್ತಲೇ ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತ ಅನುಭವ ಮತ್ತು ಜ್ಞಾನ ಪಡೆಯುವುದು ಮುಖ್ಯ. ಶುಭಾಶಯ.

* ನಾನು ಪ್ರಸ್ತುತ ಬಿ.ಎಡ್‌. ಮಾಡುತ್ತಿದ್ದೇನೆ. ನಾನು ಕಳೆದ ವರ್ಷ ಬಿ.ಎಸ್‌ಸಿ. ಪದವಿಯನ್ನು ಮುಗಿಸಿರುತ್ತೇನೆ. ನಾನು ಎಸ್‌ಸಿ ವರ್ಗಕ್ಕೆ ಸೇರಿದವನಾಗಿದ್ದು. ಪದವಿಯಲ್ಲಿ ಭೌತಶಾಸ್ತ್ರ (57.12%), ರಸಾಯನಶಾಸ್ತ್ರ (58.37%), ಗಣಿತಶಾಸ್ತ್ರ (42.37%)  ಶೇಕಡಾವಾರು ಅಂಕಗಳನ್ನು ಪಡೆದಿರುತ್ತೇನೆ. ನಾನು ಟಿ.ಇ.ಟಿ ಮತ್ತು ಸಿ.ಇ.ಟಿ ಪರೀಕ್ಷೆ ಬರೆಯಲು ಅರ್ಹತೆಯನ್ನು ಹೊಂದಿದ್ದೇನೆಯೇ ಅಥವಾ ಇಲ್ಲವೇ ಎಂದು ತಿಳಿಸಿಕೊಡುವಿರಾ?

- ಹೆಸರು, ಊರು ಇಲ್ಲ

ಕರ್ನಾಟಕ ಸರ್ಕಾರದ ಮಾರ್ಚ್ 5, 2019ರ ನೇಮಕಾತಿ ಅಧಿಸೂಚನೆಯ ಪ್ರಕಾರ, ಉನ್ನತ ಪ್ರಾಥಮಿಕ ಅಥವಾ 5-8 ನೇ ತರಗತಿಯ ವಿಜ್ಞಾನ ಗಣಿತ ಶಿಕ್ಷಕರಾಗಲು ಟಿ.ಇ.ಟಿ. ಪರೀಕ್ಷೆಗೆ ಅರ್ಹತೆ ಗಳಿಸಲು ಪದವಿಯಲ್ಲಿ ಶೇ 50 ಅಂಕದೊಂದಿಗೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ವಿಷಯಗಳಲ್ಲೂ ತಲಾ ಶೇ 50 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು ಮತ್ತು ಬಿ.ಎಡ್. ಶಿಕ್ಷಣ ಮುಗಿಸಿರಬೇಕು ಅಥವಾ ಓದುತ್ತಿರಬೇಕು. ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ/ವರ್ಗ ಒಂದು ಮತ್ತು ವಿಶೇಷ ಸಾಮರ್ಥ್ಯದ ಅಭ್ಯರ್ಥಿಗಳು ಒಟ್ಟಾರೆ ಶೇ 45 ಅಂಕ ಮತ್ತು ಮೂರು ವಿಷಯಗಳಲ್ಲೂ ಶೇ 45 ಅಂಕಗಳೊಂದಿಗೆ ಪಾಸಾಗಿರಬೇಕು.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು