ಗುರುವಾರ , ಅಕ್ಟೋಬರ್ 1, 2020
21 °C
ಪರೀಕ್ಷೆ ಸಿದ್ಧತೆ ಆರಂಭಿಸಿದ ಮೈಸೂರು ವಿಶ್ವವಿದ್ಯಾಲಯ; ಆ.20ರೊಳಗೆ ವೇಳಾಪಟ್ಟಿ ಪ್ರಕಟ

ಸೆಪ್ಟೆಂಬರ್‌ನಲ್ಲಿ ಅಂತಿಮ ಸೆಮಿಸ್ಟರ್‌‌ ಪರೀಕ್ಷೆ ನಡೆಸಲು ಮೈಸೂರು ವಿವಿ ಸಿದ್ಧತೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪದವಿ, ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲೇ ಪರೀಕ್ಷೆ ನಡೆಸಲು ಮೈಸೂರು ವಿಶ್ವವಿದ್ಯಾಲಯ ಸಿದ್ಧತೆ ನಡೆಸಿದೆ.

ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ಕಾರ್ಯಾ ಚರಿಸುತ್ತಿದ್ದು, 1.11 ಲಕ್ಷ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದರೆ, 12 ಸಾವಿರದ ಆಸುಪಾಸು ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ.

‘ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ 35 ಸಾವಿರ ವಿದ್ಯಾರ್ಥಿಗಳಿದ್ದು, ಈ ಎಲ್ಲರಿಗೂ ಆಯಾ ಕಾಲೇಜಿನ ವ್ಯಾಪ್ತಿಯಲ್ಲೇ   ಕೋವಿಡ್ ಮುನ್ನೆಚ್ಚರಿಕೆ ಕ್ರಮ ಪಾಲಿಸಿ, ಪರೀಕ್ಷೆ ನಡೆಸಲಾಗು ವುದು. ಈಗಾಗಲೇ ಕಾಲೇಜಿನ ಪ್ರಾಂಶುಪಾಲರಿಗೆ ಈ ಸೂಚನೆಯನ್ನು ರವಾನಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ಸೇರಿದಂತೆ ಹಾಸನ, ಮಂಡ್ಯ, ಚಾಮರಾಜನಗರದ ಸ್ನಾತಕೋತ್ತರ ಕೇಂದ್ರಗಳು ಹಾಗೂ 40 ಸಂಯೋಜಿತ ಕಾಲೇಜುಗಳ ಸ್ನಾತಕೋತ್ತರ ಪದವಿ ಕೇಂದ್ರಗಳಲ್ಲಿ 6 ಸಾವಿರದಿಂದ 8 ಸಾವಿರ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ನಲ್ಲಿದ್ದಾರೆ. ಇವರಿಗೆ ಆಯಾ ಸ್ನಾತಕೋತ್ತರ ಪದವಿ ಕೇಂದ್ರಗಳಲ್ಲೇ ಪರೀಕ್ಷೆ ನಡೆಸಲು ಸಿದ್ಧತೆ ಆರಂಭಿಸಲಾಗಿದೆ’ ಎಂದರು.

ವಿಚಾರಣೆ ಇಂದು: ‘ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೂ ಸೂಚಿಸಿದೆ. ಇದನ್ನು ಪ್ರಶ್ನಿಸಿ ಕೆಲ ವಿಶ್ವವಿದ್ಯಾಲಯಗಳು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿವೆ. ವಿಪತ್ತು ನಿರ್ವಹಣೆ ಕಾಯ್ದೆಯಡಿ ಪರೀಕ್ಷೆ ನಡೆಸುವುದು ಬೇಡ ಎಂದು ಅರ್ಜಿ ಸಲ್ಲಿಸಿವೆ. ಇದರ ವಿಚಾರಣೆ ಆ.10ಕ್ಕೆ ನಡೆಯಬೇಕಿತ್ತು. 14ಕ್ಕೆ ಮುಂದೂಡಲಾಗಿದ್ದು, ಶುಕ್ರವಾರ ಇದರ ವಿಚಾರಣೆ ನಡೆಯಲಿದೆ’ ಎಂದು ಆರ್.ಶಿವಪ್ಪ ಮಾಹಿತಿ ನೀಡಿದರು.

‘ಪರೀಕ್ಷೆಯ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಸಿಂಡಿಕೇಟ್ ಸಭೆಯಲ್ಲೂ ಈ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗಿದೆ. ಮತ್ತೊಮ್ಮೆ ಸಭೆ ನಡೆಸಿ, ಆ.20ರೊಳಗೆ ವೇಳಾಪಟ್ಟಿ ಸಿದ್ಧಪಡಿಸ ಲಾಗುವುದು. ಇದನ್ನು ವಿಶ್ವವಿದ್ಯಾಲಯ ವೆಬ್‌ಸೈಟ್‌ನಲ್ಲೂ ಪ್ರಕಟಿಸ ಲಾಗುವುದು’ ಎಂದು ಹೇಳಿದರು.

‘ಪರೀಕ್ಷೆ ಬರೆಯಲೂ ಅವಕಾಶ’

‘ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಯಂತೆ ಅಂತಿಮ ಸೆಮಿಸ್ಟರ್ ಹೊರತುಪಡಿಸಿ, ಇನ್ನುಳಿದ ಎಲ್ಲ ಪದವಿ, ಸ್ನಾತಕೋತ್ತರ ‍ಪದವಿಯ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ಕೊಡಲಾಗುವುದು’ ಎಂದು ಕುಲಪತಿ ಹೇಮಂತ್‌ಕುಮಾರ್ ತಿಳಿಸಿದರು.

‘ಪ್ರತಿ ವಿದ್ಯಾರ್ಥಿಯ ಇಂಟರ್ನಲ್‌ ಅಸೆಸ್‌ಮೆಂಟ್‌ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಆತ ಗಳಿಸಿದ ಅಂಕವನ್ನು ಪರಿಗಣಿಸಿ ಬಡ್ತಿ ಕೊಡಲಾಗುವುದು. ಇದನ್ನು ಇಷ್ಟಪಡದ ವಿದ್ಯಾರ್ಥಿಗೆ, ಮುಂದೆ ಪರೀಕ್ಷೆ ಬರೆಯಲು ಅವಕಾಶ ಕೊಡುವ ಚಿಂತನೆಯನ್ನು ನಡೆಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು