ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯನಿರ್ವಾಹಕ ತರಬೇತುದಾರ ಹುದ್ದೆಗೆ ಬೇಡಿಕೆ ಭರಪೂರ

Last Updated 8 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ತರಬೇತಿ ಎಂಬುದು ಕೇವಲ ಶೈಕ್ಷಣಿಕ ವಲಯಕ್ಕೆ ಅಥವಾ ಉದ್ಯೋಗ ಪಡೆಯಲು ಬೇಕಾದ ಕೌಶಲಗಳನ್ನು ರೂಢಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಹಾಗೆಯೇ ಒಬ್ಬ ಉದ್ಯೋಗಿ ತನ್ನ ಸ್ಥಾನದಿಂದ ಮೇಲ್ದರ್ಜೆಗೇರಲು ಅಥವಾ ಇನ್ನೊಂದು ಕಂಪನಿಯಲ್ಲಿ ಇನ್ನೂ ಉತ್ತಮವಾದ ಉದ್ಯೋಗವನ್ನು ಪಡೆಯುವುದಕ್ಕೆ ಬೇಕಾದ ಕೌಶಲಗಳಲ್ಲಿ ಪರಿಣತಿ ಪಡೆಯುವುದಕ್ಕೆ ಮಾತ್ರ ಎಂಬ ವ್ಯಾಖ್ಯಾನವೂ ಬೇಡ. ಇದೇನಿದ್ದರೂ ಒಂದು ಕಂಪನಿ ತನ್ನ ಉದ್ಯೋಗಿಗಳ ಬೆಳವಣಿಗೆಗೆ, ಅವರ ಕಾರ್ಯನಿರ್ವಹಣೆಗೆ ಬೇಕಾಗುವ ಸಾಫ್ಟ್‌ ಕೌಶಲಗಳನ್ನು ಬೆಳೆಸಲು ನೀಡುವ ತರಬೇತಿ. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಮಧ್ಯಮ ಹಂತದ ಉದ್ಯೋಗಿ ತನ್ನ ಸಾಮರ್ಥ್ಯಕ್ಕೆ ಪೂರಕವಾದ ತರಬೇತಿ ಸಿಕ್ಕರೆ ಮೇಲಿನ ಹಂತವನ್ನು ತಲುಪಬಹುದು. ಈ ಕೆಲಸವನ್ನು ಒಬ್ಬ ಕಾರ್ಯನಿರ್ವಾಹಕ (ಎಕ್ಸಿಕ್ಯುಟಿವ್‌) ತರಬೇತುದಾರ ಮಾಡಬಲ್ಲ.

ಒಂದು ಕಂಪನಿಯ ಲಾಭ ಅಥವಾ ನಷ್ಟ, ಮಾರುಕಟ್ಟೆಯಲ್ಲಿ ಅದರ ಸ್ಥಾನವು ಅದರ ಉದ್ಯೋಗಿಗಳ ಕಾರ್ಯನಿರ್ವಹಣೆ, ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಆ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ಅಥವಾ ತಂಡದ ನಾಯಕನ ದೂರದೃಷ್ಟಿ, ಆತ್ಮವಿಶ್ವಾಸ, ಕ್ಲಿಷ್ಟಕರ ಸಂದರ್ಭದಲ್ಲಿ ಉಳಿದವರನ್ನು ಮುನ್ನಡೆಸುವ ಸಾಮರ್ಥ್ಯ ಉಳಿದ ಉದ್ಯೋಗಿಗಳಿಗೆ ಆದರ್ಶಪ್ರಾಯ. ಇಂತಹ ಗುಣಗಳನ್ನು ಇತರ ಉದ್ಯೋಗಿಗಳಲ್ಲೂ ಮೂಡಿಸಲು, ಆ ಮೂಲಕ ಒಂದು ಸಂಸ್ಥೆಯ ಒಟ್ಟಾರೆ ಲಾಭ ಅಥವಾ ಯಶಸ್ಸನ್ನು ಖಾತ್ರಿಪಡಿಸಲು ಅವರಿಗೂ ತರಬೇತಿಯ ಅವಶ್ಯಕತೆಯಿದೆ.

ಯಾರ ಸೂಚನೆ ಅಥವಾ ಮಾರ್ಗದರ್ಶನವಿಲ್ಲದೇ ತಮ್ಮ ಜಾಣ್ಮೆಯನ್ನು ಬಳಸಿ ಸಮಸ್ಯೆಗಳನ್ನು ಪರಿಹರಿಸುವ, ಕಂಪನಿಯಲ್ಲಿ ಕಿರಿಯ ಸಹೋದ್ಯೋಗಿಗಳನ್ನು ಮುನ್ನಡೆಸುವ ಈ ಸಾಮರ್ಥ್ಯ ಉತ್ತಮವಾದ ತರಬೇತಿಯಿಂದ ಲಭಿಸಲು ಸಾಧ್ಯ. ಇದನ್ನೆಲ್ಲ ಕಾರ್ಯನಿರ್ವಾಹಕ ತರಬೇತುದಾರ ಮಾಡಬಲ್ಲ.

ಇಂತಹ ತರಬೇತುದಾರರಿಗೆ ಈಗ ಬಹಳಷ್ಟು ಬೇಡಿಕೆಯಿದ್ದು, ಕಾರ್ಪೊರೇಟ್‌ ಕಂಪನಿಗಳು ಇಂಥವರ ಸೇವೆ ಪಡೆದುಕೊಳ್ಳುತ್ತಿವೆ. ಈ ವೃತ್ತಿ ನಿರ್ವಹಿಸಲು ಯಾವ ರೀತಿಯ ಶೈಕ್ಷಣಿಕ ಅರ್ಹತೆ ಇರಬೇಕು ಎಂಬುದರ ಬಗ್ಗೆ ಅಂತಹ ನಿಯಮಗಳೇನೂ ಇಲ್ಲ. ಆದರೆ ಅಲ್ಪಾವಧಿ ತರಬೇತಿ ನೀಡುವ ಬಹಳಷ್ಟು ಸಂಸ್ಥೆಗಳಿವೆ. ಬೆಂಗಳೂರಿನಲ್ಲೂ ಇಂತಹ ಸಂಸ್ಥೆಗಳಿವೆ. ತರಬೇತಿ ಕುರಿತ ಕೆಲವು ತಾಂತ್ರಿಕ ಕೌಶಲಗಳಲ್ಲಿ ಪರಿಣತಿ ಪಡೆಯಲು ಇದು ಅಗತ್ಯ. ಜೊತೆಗೆ ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡಿದ ಅನುಭವವೂ ನೆರವಿಗೆ ಬರಬಲ್ಲದು. ಅದರಲ್ಲೂ ವಿಶೇಷವಾಗಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡಿದವರಿಗೆ ಸುಲಭ.

ಆದರೆ ಕಂಪನಿಯಲ್ಲಿ ಕಾಯಂ ಹುದ್ದೆ ಪಡೆಯುವಂತಹ ವಾತಾವರಣ ಭಾರತದಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಕಾರ್ಪೊರೇಟ್‌ ಸಂಸ್ಥೆಗಳು ಇಂತಹವರ ಸೇವೆಯನ್ನು ಪಡೆಯುತ್ತಿವೆ. ಅಂದರೆ ವಾರಕ್ಕೊಮ್ಮೆ 1–2 ಗಂಟೆ ಕಾಲ ತಮ್ಮ ಉದ್ಯೋಗಿಗಳಿಗೆ ತರಬೇತಿ ತರಗತಿಗಳನ್ನು ನಡೆಸಲು ಇಂಥವರ ಎರವಲು ಸೇವೆ ಪಡೆಯುತ್ತಿವೆ. ಹೀಗಾಗಿ ನೀವು ಗಂಟೆ ಲೆಕ್ಕದಲ್ಲಿ ಶುಲ್ಕ ಪಡೆಯಬಹುದು. ಗಂಟೆಗೆ 10 ಸಾವಿರ ಪಡೆಯುವವರೂ ಇದ್ದಾರೆ. ಅನುಭವದ ಆಧಾರದ ಮೇಲೆ ಇನ್ನೂ ಹೆಚ್ಚಿನ ಶುಲ್ಕವನ್ನು ನೀವು ನಿರೀಕ್ಷಿಸಬಹುದು.

ಆರಂಭದಲ್ಲಿ ಸಣ್ಣಪುಟ್ಟ ಉದ್ಯಮಗಳ, ನವೋದ್ಯಮಗಳ ಉದ್ಯೋಗಿಗಳಿಗೆ ಉಚಿತ ತರಬೇತಿ ನೀಡಿ ಅನುಭವ ಪಡೆಯಬಹುದು. ಶಿಬಿರಗಳನ್ನು ನಡೆಸಬಹುದು. ಒಮ್ಮೆ ನೀವು ಇದರಲ್ಲಿ ಪಳಗಿದರೆ, ದೊಡ್ಡ ಅವಕಾಶಗಳಿಗೆ ಕೈ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT