ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಿ

Last Updated 17 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಎಂಥಾ ಮಗು! ಇಷ್ಟು ಚಿಕ್ಕ ವಯಸ್ಸಿಗೆ ಅದೆಂಥಾ ಸಂಸ್ಕಾರ, ಈಗಿನ ಕಾಲದಲ್ಲಿ ಇಷ್ಟೊಂದು ಸಕಾರಾತ್ಮಕತೆ, ಆತ್ಮವಿಶ್ವಾಸವಿರುವ ಮಕ್ಕಳನ್ನು ಕಾಣೋದು ತುಂಬಾ ಅಪರೂಪ. ನನ್ನ ಮೊಮ್ಮಗನೂ ಹೀಗೆ ಬೆಳಿಬಾರದಿತ್ತಾ ಅನ್ನಿಸುತ್ತೆ, ಆದರೆ ನನ್ನ ಕೈಲಿ ಯಾವುದೂ ಇಲ್ಲ ಎಲ್ಲಾ ಅವನ ಅಪ್ಪ ಅಮ್ಮನ ಕೈಲಿದೆ. ನಾನು ಬರಿ ಮೂಖ ಪ್ರೇಕ್ಷಕ’. ಸಮಾರಂಭದಲ್ಲಿ ಹೀಗೊಂದು ಹಿರಿಯರ ಚರ್ಚೆ ಅಚಾನಕ್ಕಾಗಿ ಕಿವಿಗೆ ಬಿತ್ತು.

ಇದು ಅವರೊಬ್ಬರ ಆಸೆಯಲ್ಲ, ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಂಡಿರುವ, ಸೋಲನ್ನೂ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬಲ್ಲ ಮಕ್ಕಳು ನಮ್ಮ ಹೆಮ್ಮೆಯಾಗಬೇಕೆನ್ನುವುದು ನಮ್ಮೆಲ್ಲರ ಆಶಯವೂ ಹೌದು. ಆಸೆಯೆಂಬ ಗಿಡ ನೆಟ್ಟರೆ ಸಾಲದು, ಅದರ ಆರೈಕೆ ಚಿಕ್ಕವರಿದ್ದಾಗಿನಿಂದಲೇ ಪ್ರಾರಂಭವಾದರೆ ಕನಸು ನನಸಾಗುವುದು ನಿಶ್ಚಿತ.

ನೀವೇ ರೋಲ್ ಮಾಡೆಲ್‌!
ಮಕ್ಕಳು ನಾವು ಹೇಳಿದ್ದನ್ನು ಕೇಳುವುದಕ್ಕಿಂತ ನಾವು ಮಾಡುವುದನ್ನ ಕಲಿಯುವುದೆ ಹೆಚ್ಚು. ತಂದೆ–ತಾಯಿ ಮತ್ತು ಶಿಕ್ಷಕರೇ ಅವರ ರೋಲ್ ಮಾಡೆಲ್‌ಗಳು. ಸುಳ್ಳೆಂದರೆ ಏನೆಂದೇ ತಿಳಿಯದ ಮಗುವಿಗೆ ಸುಳ್ಳು ಹೇಳಬಾರದೆಂದು ನೂರು ಬಾರಿ ಹೇಳಿ, ಮನೆಯಲ್ಲಿದ್ದುಕೊಂಡೆ ನಿಮ್ಮ ಸ್ನೇಹಿತರಿಗೆ ಫೋನಿನಲ್ಲಿ ಮನೆಯಲ್ಲಿಲ್ಲ ಎಂದಿರುತ್ತೀರಿ. ನಿಮಗರಿವಿಲ್ಲದೆಯೇ ನೀವೇ ಮಗುವಿಗೊಂದು ಉತ್ತಮ ಉದಾರಣೆಯಾಗಿರುತ್ತೀರಿ. ಮಗು ನೀವು ಹೇಳಿದ್ದನ್ನು ಬಿಟ್ಟು ನೀವು ಮಾಡಿದ್ದನ್ನೆ ಅನುಸರಿಸುತ್ತದೆ.

ಹಿರಿಯರನ್ನು, ಇತರರನ್ನು ಗೌರವದಿಂದ ಕಾಣಬೇಕೆನ್ನುವುದು ಹಾಗೆಯೇ. ನೀವು ಗೌರವಿಸಿದರೆ ಅವರೂ ಗೌರವಿಸುತ್ತಾರೆ. ಟ್ರಾಫಿಕ್‌ನಲ್ಲಿ ಪಕ್ಕದಲಿದ್ದವರು ಜೋರಾಗಿ ಹಾರ್ನ್‌ ಮಾಡಿದರೆಂದು ಕೋಪದಲ್ಲಿ ನೀವು ಬೈದರೆ ಮಗು ಅದನ್ನು ಮತ್ತೊಬ್ಬರ ಮೇಲೆ ಪ್ರಯೋಗಿಸದೆ ಇರದು. ಒತ್ತಡವನ್ನು ನಿಭಾಯಿಸುವುದೂ ಹೀಗೆಯೇ.

ದೂರುವುದನ್ನು ನಿಲ್ಲಿಸಿ
ತಪ್ಪು ಎಲ್ಲರಿಂದಲೂ ಆಗುವುದು ಸಹಜ. ಮಕ್ಕಳು ಅದರಿಂದ ಹೊರತಲ್ಲ. ಮಗು ಏನಾದರೂ ತಪ್ಪು ಮಾಡಿದರೆ ಅವರನ್ನು ದೂರುವುದರ ಬದಲು ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಿ. ದೂರಿದಷ್ಟೂ ಮಗು ನಿಮ್ಮಿಂದ ದೂರವೇ ಉಳಿಯುತ್ತದೆ. ಮಾಡಿದ್ದೆಲ್ಲವೂ ತಪ್ಪಾಗಬಹುದೇನೋ ಎಂಬ ಭಯಕ್ಕೆ ಏನೂ ಮಾಡದೆಯೇ ಉಳಿಯಬಹುದು. ತಪ್ಪಿಗೆ ಕಾರಣಗಳನ್ನು ಹುಡುಕಲು ಮಗುವಿಗೆ ಬಿಡಿ. ತಪ್ಪಿನ ಅವಲೋಕನ ಮಾಡಿಸಿ ಮತ್ತೆಂದೂ ಆಗದಂತೆ ಜಾಗ್ರತೆ ವಹಿಸಲು ತಿಳಿಸಿ.

ನೇರವಾಗಿ ಬೇಡ ಎನ್ನಬೇಡಿ
ಇಡೀ ದಿನದಲ್ಲಿ ಮಕ್ಕಳು ಹೆಚ್ಚಾಗಿ ಎದುರಿಸುವ ಒಂದೇ ಒಂದು ಪದ ‘ನೋ’ ಅಥವಾ ಬೇಡ. ಅದು ಶಾಲೆಯಲ್ಲಾಗಲಿ ಅಥವಾ ಮನೆಯಲ್ಲಾಗಲಿ. ಅದು ಮಾಡಬೇಡ, ಇದು ಮಾಡಬೇಡ, ನೆಗಿಬೇಡ, ಅಲ್ಲಿ ಕೂರಬೇಡ, ಡ್ರಾಯಿಂಗ್ ಬೇಡ.. ಹೀಗೆ ಬೇಡ ಎನ್ನುವ ಪಟ್ಟಿ ಮಗುವಿನಲ್ಲಿ ನಿರುತ್ಸಾಹವನ್ನು ಬೆಳೆಸುತ್ತದೆ. ಹಾಗಂತ ಮಗು ಮಾಡಿದ್ದನ್ನೆಲ್ಲ ಒಪ್ಪಬೇಕೆಂದಿಲ್ಲ. ನೇರವಾಗಿ ಬೇಡ ಎನ್ನುವುದರ ಬದಲು ಕೆಲವೊಂದು ಉಪಾಯಗಳನ್ನು ಬಳಸಬಹುದು. ಉದಾಹರಣೆಗೆ ಹೋಂವರ್ಕ್ ಮುಗಿದ ಮೇಲೆ ತುಂಬಾ ಸಮಯ ಡ್ರಾಯಿಂಗ್ ಮಾಡೋಣ.

ನರಶಾಸ್ತ್ರಜ್ಞರಾದ ಆಂಡ್ರ್ಯೂ ನೈಬರ್ಗ್ ತಮ್ಮ ಪುಸ್ತಕ ‘ವರ್ಡ್ಸ್ ದಟ್ ಚೇಂಜ್ ಯುವರ್ ಬ್ರೈನ್‌’ನಲ್ಲಿ ‘ನೋ’ ಎಂಬ ಪದದಿಂದ ಮಕ್ಕಳಲ್ಲಾಗುವ ಬದಲಾವಣೆಯನ್ನು ಹೀಗೆ ವಿವರಿಸುತ್ತಾರೆ. ಬೇಡ ಎನ್ನುವ ಪದ ಮಕ್ಕಳ ಕಿವಿಗೆ ಬಿದ್ದ ತಕ್ಷಣ ಅವರ ಮೆದುಳು ಸಾಕಷ್ಟು ಒತ್ತಡ ಉಂಟುಮಾಡುವ ಹಾರ್ಮೋನ್‌ಗಳನ್ನು ಉತ್ಪಾದಿಸುವುದರ ಜೊತೆಗೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಮಕ್ಕಳ ಮುಂದೆ ನೇರವಾಗಿ ಬೇಡ ಎನ್ನುವ ಬದಲು ಜಾಣ್ಮೆಯಿಂದ ಅವರ ಮನಸ್ಸನ್ನು ಬದಲಿಸುವುದು ಒಳ್ಳೆಯದು.

ಪ್ರೀತಿ ಮತ್ತು ಕ್ಷಮೆ
ಗೊತ್ತಿಲ್ಲದೆ ಆದ ಸಣ್ಣ ತಪ್ಪಿಗೆ ಸ್ನೇಹಿತನನ್ನೇ ಹೊಡೆದ ಹುಡುಗನನ್ನು ಶಿಕ್ಷಕರು ಕರೆದು ಮಾತನಾಡಿಸಿದರು. ಹುಡುಗನ ವರ್ತನೆಗೆ ಆತನ ಪೋಷಕರೆ ನೇರ ಕಾರಣ ಎಂಬುದು ತಿಳಿಯಿತು. ಮಗು ಮನೆಯಲ್ಲಿ ಮಾಡುವ ಸಣ್ಣಪುಟ್ಟ ತಪ್ಪಿಗೂ ಅದನ್ನು ಹೊಡೆಯುವುದು, ಬೈಯುವುದು ಮಗುವಿನ ಮನಸ್ಸಲ್ಲಿ ನಕಾರಾತ್ಮಕತೆಯನ್ನು ಬೇರೂರಿಸಿತ್ತು. ಹಾಗಾಗಿ ಇತರರನ್ನು ಪ್ರೀತಿಯಿಂದ ಕಾಣುವ, ಗೊತ್ತಿಲ್ಲದೆ ಆದ ತಪ್ಪನ್ನು ಕ್ಷಮಿಸುವ ಗುಣ ಮಕ್ಕಳಲ್ಲಿ ಬೆಳೆಸುವುದು ಅತಿಮುಖ್ಯ. ಮಗು ಮುಂದೆ ತಪ್ಪು ಮಾಡುವುದನ್ನು ಕಡಿಮೆ ಮಾಡುತ್ತದೆ.

ವಿಶೇಷವಾದದ್ದನ್ನು ಗುರುತಿಸಿ- ಪ್ರೋತ್ಸಾಹಿಸಿ
ಪ್ರತಿಯೊಂದು ಮಗುವೂ ವಿಶಿಷ್ಟ ಮತ್ತು ಅನನ್ಯ. ಮಗುವಿನಲ್ಲಿರುವ ನ್ಯೂನತೆಗಳನ್ನು ಒತ್ತಿ ಹೇಳುವುದರ ಬದಲು ಮಗುವಿನಲ್ಲಿರುವ ವಿಶೇಷತೆಯನ್ನು ಗುರುತಿಸಿ ಪ್ರೋತ್ಸಾಹಿಸಿ. ಇಂತಹ ಪ್ರೋತ್ಸಾಹ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಮತ್ತು ತಮ್ಮ ಯಶಸ್ಸನ್ನು ಗುರುತಿಸಿ ಸಂಭ್ರಮಿಸುವಲ್ಲಿ ಸಹಾಯ ಮಾಡುತ್ತದೆ. ‘ನಿನ್ನಿಂದಾಗದು’ ಎಂದು ನಿರ್ಬಂಧ ಹೇರಿದಾಗ ಮಗು ಹೊರಜಗತ್ತಿನ ಬಗ್ಗೆ ಆತಂಕಪಡುವುದರ ಜೊತೆಗೆ ಹಿಂಜರಿಕೆ ಮನೋಭಾವ ಬೆಳೆಸಿಕೊಳ್ಳುತ್ತದೆ. ಜಗತ್ತಿನ ಬಹಳಷ್ಟು ಸಾಧಕರು ನನ್ನಿಂದಾಗದು ಎಂದು ಕುಳಿತಿದ್ದರೆ ಏನಾಗುತ್ತಿತ್ತು ಎಂಬುದನ್ನು ಮಗುವಿಗೆ ತಿಳಿಸಲು ಪ್ರಯತ್ನಿಸಿ. ತಿದ್ದುವ ಕೆಲಸ ಒಂದಿಷ್ಟು ಬದಲಾವಣೆ ಮಾಡಿದರೆ, ಪ್ರೋತ್ಸಾಹ ಮಗದಷ್ಟನ್ನು ಅವರಿಂದಲೇ ಮಾಡಿಸುತ್ತದೆ.

ಮಗುವೇ ಜವಾಬ್ದಾರಿ ಹೊರಲಿ
ಎಲ್ಲದೂ ನಮ್ಮದೇ ಜವಾಬ್ದಾರಿ ಎನ್ನುವ ಬದಲು ಮಗುವಿನ ವಯಸ್ಸಿಗನುಗುಣವಾಗಿ ಸಣ್ಣಪುಟ್ಟ ಜವಾಬ್ದಾರಿಗಳನ್ನು ನೀಡಿ. ತನ್ನ ಪುಸ್ತಕಗಳ ಜೊತೆಗೆ ಕಬೋರ್ಡ್‌ಗಳನ್ನು ನೀಟಾಗಿಡುವುದು. ಆಟದ ಸಾಮಾನುಗಳನ್ನು ಜೋಪಾನವಾಗಿ ಎತ್ತಿಡುವುದು. ಇದರಿಂದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗೆ ಅಗತ್ಯವಾಗಿ ಬೇಕಿರುವ ಸ್ವಯಂ ಸಾಮರ್ಥ್ಯವನ್ನು ತುಂಬಿದಂತಾಗುತ್ತದೆ.

ನೈಜತೆಗೆ ಹತ್ತಿರವಾಗಿರಿ
ನಿಮ್ಮ ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಹುಸಿ ಆಶಯಗಳನ್ನು ತುಂಬಬೇಡಿ. ನೈಜತೆಗೆ ಸರಿಹೊಂದುವಂತೆ ಪ್ರೋತ್ಸಾಹಿಸುವುದು ಒಳಿತು. ಇದರಿಂದ ಮುಂದೆ ಬರುವ ಸವಾಲುಗಳಿಗೆ ಮಗು ತಾನೇ ತಯಾರಾಗುವುದನ್ನು ಕಲಿಯುವುದಲ್ಲದೆ ನಕಾರಾತ್ಮಕ ಅಡೆತಡೆಗಳನ್ನು ದಾಟಿ ಯಶಸ್ಸನ್ನು ಗಳಿಸುತ್ತದೆ.

ಮಕ್ಕಳ ಮಾತಿಗೆ ಓಗೊಡಿ
ಮಗು ಹೇಳುವುದನ್ನು ಸಮಾಧಾನದಿಂದ ಕೇಳಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ಮಗುವಿನಲ್ಲಿನ ಸಂವಹನ ಕೌಶಲವನ್ನು ಹೆಚ್ಚಿಸುವುದಲ್ಲದೆ ಆತ್ಮವಿಶ್ವಾಸವನ್ನೂ ಮೂಡಿಸುತ್ತದೆ.

ಲೇಖಕಿ ಉಪನ್ಯಾಸಕಿ, ವಿಶ್ವವಿದ್ಯಾಲಯ ಕಲಾ ಕಾಲೇಜು, ತುಮಕೂರು

**
ಸಕಾರಾತ್ಮಕ ಗುಣ ಹೆಚ್ಚಿಸಲು ಚಟುವಟಿಕೆಗಳು
ಗೆಲುವಿನ ರುಚಿ ತೋರಿಸಿ
: ಛತ್ರಪತಿ ಶಿವಾಜಿ ಮೊಘಲರ ವಿರುದ್ದ ಹೋರಾಡಲು ತನ್ನದೇ ತಂಡ ಕಟ್ಟಿದ್ದ. ತರಬೇತಿ ನೀಡುವಾಗ, ಎರಡು ತಂಡಗಳಾಗಿ ವಿಂಗಡಿಸಿ ಒಂದಕ್ಕೆ ಶಿವಾಜಿ ಮತ್ತೊಂದಕ್ಕೆ ಮೊಘಲ್‌ ಎಂದು ಹೆಸರಿಟ್ಟ. ಪ್ರತೀ ಬಾರಿಯೂ ಶಿವಾಜಿ ತಂಡವೇ ಗೆಲ್ಲುವಂಥ ಆಟಗಳನ್ನು ಆಡಿಸುತ್ತಿದ್ದ. ಇದರಿಂದ ಇಡೀ ತಂಡದಲ್ಲಿದ್ದ ಎಲ್ಲರ ಮನಸ್ಸಲ್ಲೂ ಶಿವಾಜಿ ತಂಡವೇ ಗೆಲ್ಲುವುದು ಎನ್ನುವ ಆತ್ಮವಿಶ್ವಾಸ ಬೇರೂರಿತ್ತು. ಅದರಂತೆಯೇ ಮೊಘಲರ ವಿರುದ್ದ ಶಿವಾಜಿ ಗೆದ್ದಿದ್ದ. ನಮ್ಮ ಮಗುವಿನ ಆತ್ಮವಿಶ್ವಾಸ ಹೆಚ್ಚಿಸಲು ನಾವೂ ಇದನ್ನು ಅಳವಡಿಸಿಕೊಳ್ಳಬಹುದು.

ಸಂತೋಷವೆಂಬ ನಿಧಿ: ಪಾರ್ಕ್ ಅಥವಾ ಮನೆಯಲ್ಲಿ ಸಂತೋಷ ನೀಡುವಂತಹ ವಿಚಾರ, ವಸ್ತುಗಳನ್ನು ಹುಡುಕುವ ವಿನೂತನ ಟಾಸ್ಕ್ ಅನ್ನು ನಿಮ್ಮ ಮಗುವಿಗೆ ನೀಡಿ. ವಿಚಾರಗಳು ಚಿಕ್ಕದೆನಿಸಿದರೂ ಅದರಿಂದ ಮಗು ಮುಂದೆ ತನ್ನ ಜೀವನದಲ್ಲಿ ಇರುವುದರಲ್ಲೇ ಸಂತೋಷವನ್ನು ಕಂಡುಕೊಳ್ಳುವುದನ್ನು ಕಲಿಯುತ್ತದೆ.

ಸಕಾರಾತ್ಮಕತೆಯ ಹುಂಡಿ: ಸಂತೋಷಕ್ಕಿಂತ ನೋವಿನ ವಿಚಾರಗಳು ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಉಳಿಯುವುದು ಮನುಷ್ಯ ಸಹಜ ಗುಣ. ಮನೆಯಲ್ಲಿ ಎಲ್ಲರೂ ಕೂಡ ಪ್ರತಿದಿನದ ಸಂತೋಷದ ವಿಚಾರಗಳನ್ನು ಒಂದು ಚೀಟಿಯಲ್ಲಿ ಬರೆದು ಅದರಲ್ಲಿ ಹಾಕುವುದನ್ನು ರೂಢಿಸಿ. ವಾರದಲ್ಲೊಮ್ಮೆ ಎಲ್ಲರ ಸಮ್ಮುಖದಲ್ಲಿ ಅವುಗಳನ್ನು ಓದುವುದರಿಂದ ಇಡೀ ವಾರದಲ್ಲಿ ಎಷ್ಟೊಂದು ಒಳ್ಳೆಯ ಕ್ಷಣಗಳಿಗಿರುವುದು ಅರಿವಿಗೆ ಬರುವುದು ಖಂಡಿತ.

ಕೃತಜ್ಞತೆಗೊಂದಿಷ್ಟು ಜಾಗವಿರಲಿ: ರಾತ್ರಿ ಊಟದ ನಂತರ ಕೃತಜ್ಞತೆಗಾಗಿ ಒಂದೈದು ನಿಮಿಷ ಕಾಲಾವಕಾಶ ನೀಡಿ. ಒಟ್ಟಾರೆ ದಿನದಲ್ಲಾದ ಆಗುಹೋಗುಗಳು, ಅದಕ್ಕೆ ಕಾರಣರಾದವರಿಗೆ ಕೃತಜ್ಞತೆಯನ್ನು ತಿಳಿಸಿ.

ನಾವು ಸದಾ ನಮ್ಮ ಮಕ್ಕಳನ್ನು ನಕಾರಾತ್ಮಕತೆ ಮತ್ತು ಸೋಲಿನ ದವಡೆಯಿಂದ ಕಾಪಾಡಲು ಸಾಧ್ಯವಾಗುವುದಿಲ್ಲ. ಆದರೆ ಸೋಲನ್ನೂ ಗೆಲುವಿನ ಮೆಟ್ಟಿಲಾಗಿಸಿಕೊಳ್ಳುವುದು ಹೇಗೆಂದು ಕಲಿಸಿ ಆತ್ಮವಿಶ್ವಾಸವನ್ನು ತುಂಬಬಹುದು. ಅದು ಜೀವನದುದ್ದಕ್ಕೂ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT