ಶನಿವಾರ, ಡಿಸೆಂಬರ್ 7, 2019
19 °C

ನಿಮ್ಮದು ಸಾಹಸ ಪ್ರವೃತ್ತಿಯೇ? ನೀವಾಗಬಹುದು ಅಡ್ವೆಂಚರ್ ಕನ್ಸಲ್ಟೆಂಟ್‌

Published:
Updated:
Prajavani

ನಿಮಗೆ ಸಾಹಸ ಎಂದರೆ ಇಷ್ಟವೇ? ಬೆಟ್ಟ-ಗುಡ್ಡ, ಕಾಡು–ಮೇಡು, ಪರ್ವತಗಳಲ್ಲಿ ಅಲೆಯುವುದು ನಿಮ್ಮ ನೆಚ್ಚಿನ ಹವ್ಯಾಸವೇ? ಬಿಡುವಿನ ಸಮಯ ಸಿಕ್ಕರೆ ಸಾಕು ಚಾರಣ ಮಾಡುವುದು, ಬೆಟ್ಟ– ಗುಡ್ಡ ಹತ್ತುವುದು, ದೋಣಿ ನಡೆಸು (ಕಯಾಕಿಂಗ್‌) ವಂತಹ ಸಾಹಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಾ? ಹಾಗಾದರೆ ನೀವು ‘ಅಡ್ವೆಂಚರ್ ಕನ್ಸಲ್ಟೆಂಟ್’ ಆಗಬಹುದು.

ಆದರೆ ವೃತ್ತಿ ಆರಂಭಿಸುವ ಮೊದಲು ಹೇಗೆ, ಎಲ್ಲಿಂದ ಆರಂಭಿಸಬೇಕು ಎಂಬುದರ ಕುರಿತು ಪೂರ್ವನಿರ್ಧಾರ ತುಂಬಾ ಮುಖ್ಯ. ದೂರದ ಬೆಟ್ಟ–ಗುಡ್ಡ, ಹಿಮ ಪ್ರದೇಶಗಳಿಗೆ ಹೋಗುವಾಗ ಹೇಗೆ ತಯಾರಿ ನಡೆಸಿಕೊಂಡಿರಬೇಕು, ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದೆಲ್ಲಾ ಮೊದಲೇ ತಿಳಿದುಕೊಂಡಿರಬೇಕು.

ವೃತ್ತಿ ಹೇಗಿರುತ್ತದೆ?

ಈ ವೃತ್ತಿಯಲ್ಲಿ ಯೋಜನೆ ಹಾಗೂ ತಯಾರಿ ತುಂಬಾ ಮುಖ್ಯ. ಸ್ಥಳೀಯರೊಂದಿಗೆ ವಿಚಾರ ವಿನಿಮಯ ಮಾಡುವುದು, ಖರ್ಚು–ವೆಚ್ಚ ನೋಡಿಕೊಳ್ಳುವುದು, ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದು, ಪ್ರಥಮ ಚಿಕಿತ್ಸಕ ಪೆಟ್ಟಿಗೆ ಸಿದ್ಧ ಮಾಡಿಕೊಳ್ಳುವುದು, ಮಾಧ್ಯಮಗಳ ಜೊತೆಗೆ ಸಂಪರ್ಕ ಹೊಂದುವುದು, ಪ್ರಾಯೋಜಕತ್ವ, ವಾಹನದ ವ್ಯವಸ್ಥೆ, ಭದ್ರತೆ ಒದಗಿಸುವುದು ಈ ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯವನ್ನು ಅಡ್ವೆಂಚರ್ ಕನ್ಸಲ್ಟೆಂಟ್ ಹೊಂದಿರಬೇಕು.

ಸವಾಲುಗಳು

ಎಲ್ಲಾ ಸಾಹಸವೃತ್ತಿಗಳಂತೆ ಈ ವೃತ್ತಿಯಲ್ಲೂ ಅಪಾಯ ಹಾಗೂ ಸವಾಲುಗಳಿವೆ. ಎಲ್ಲವನ್ನೂ ಸಮಯೋಚಿತವಾಗಿ ಹಾಗೂ ಧೈರ್ಯದಿಂದ ನಿಭಾಯಿಸುವ ಕಲೆ ತಿಳಿದಿರಬೇಕು. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕೈಯಿಂದ ಹಣ ಖರ್ಚಾಗುವ ಸಂದರ್ಭಗಳು ಎದುರಾಗಬಹುದು. ಅನೇಕ ಬಾರಿ ಜೀವಕ್ಕೆ ಅಪಾಯ ಆಗುವಂತಹ ಸವಾಲುಗಳು ಎದುರಾಗಬಹುದು. ಆ ಕಾರಣಕ್ಕೆ ಮೊದಲೇ ಎಲ್ಲವನ್ನೂ ಸುಸೂತ್ರವಾಗಿ ರೂಪಿಸಿಕೊಳ್ಳಬೇಕು. ಕೆಲವೊಮ್ಮೆ ಹಿಮ ಹಾಗೂ ಅತೀ ಎತ್ತರದ ಪ್ರದೇಶಗಳಿಗೆ ವ್ಯಕ್ತಿಗಳನ್ನು ಕರೆದೊಯ್ಯುವಾಗ ಅವರಿಗೆ ಉಸಿರಾಟದ ಸಮಸ್ಯೆಯಾಗಬಹುದು, ಎದೆನೋವು ಕಾಣಿಸಿಕೊಳ್ಳಬಹುದು. ಅಂತಹ ಸಮಯದಲ್ಲಿ ತಕ್ಷಣಕ್ಕೆ ನೀವೇ ಪ್ರಥಮ ಚಿಕಿತ್ಸಕರಾಗಬೇಕಾಗಬಹುದು.

ಬೆಟ್ಟ ಏರುವುದು, ಗುಡ್ಡಗಳಲ್ಲಿ ಬೈಕ್ ಓಡಿಸುವುದು, ತೀರ ಕಡಿದಾದ ಹಾದಿಗಳಲ್ಲಿ ಗಾಡಿ ಓಡಿಸುವುದು ಮುಂತಾದವುಗಳಲ್ಲಿ ಪರಿಣತಿ ಹೊಂದಿರಬೇಕು. ಅರಿಯದೇ ಬರುವ ದುರಂತಗಳನ್ನು ಎದುರಿಸಲು ಸಜ್ಜಾಗಿರಬೇಕು. ಜಿಪಿಎಸ್‌, ಸ್ಯಾಟಲೈಟ್ ಪೋನ್‌ಗಳನ್ನು ಹೊಂದಿರಬೇಕು.

ಈ ವೃತ್ತಿಯಲ್ಲಿ ಪಳಗಿದವರ ಅನುಭವದ ಪ್ರಕಾರ ಹೇಳುವುದಾದರೆ ಈ ವೃತ್ತಿಯನ್ನು ನಮ್ಮ ಮುಖ್ಯ ವೃತ್ತಿಯೊಂದಿಗೆ ಇದನ್ನು ಪ್ರವೃತ್ತಿಯನ್ನಾಗಿಸಿಕೊಳ್ಳುವುದು ಉತ್ತಮ.

ವಿದ್ಯಾರ್ಹತೆ

ಈ ವೃತ್ತಿಗೆ ವಿದ್ಯಾಭ್ಯಾಸಕ್ಕಿಂತ ಅನುಭವ ಮುಖ್ಯ. ಜೊತೆಗೆ ಕನಿಷ್ಠ ಮೂರು ಭಾಷೆಗಳನ್ನು ತಿಳಿದಿರುವುದು ಅನಿವಾರ್ಯ. ಸ್ಥಳೀಯ ಭಾಷೆಗಳಲ್ಲೂ ಹಿಡಿತ ಇದ್ದರೆ ಇನ್ನೂ ಉತ್ತಮ.

ಕೌಶಲಗಳು

ಈ ವೃತ್ತಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ತುಂಬಾ ಮುಖ್ಯ. ಅದರೊಂದಿಗೆ ಈ ವೃತ್ತಿಯಲ್ಲಿ ನೀವು ಯಶಸ್ಸು ಗಳಿಸಬೇಕು ಎಂದರೆ ಮೊದಲು ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ಇದು ಡಿಜಿಟಲ್ ಯುಗವಾದ ಕಾರಣ ಇಮೇಲ್ ಸಂವಹನದ ಕುರಿತು ತಿಳಿದಿರಬೇಕು.

ಉದ್ಯೋಗಾವಕಾಶಗಳು

ಸಾಹಸ ಕ್ಲಬ್‌ಗಳಲ್ಲಿ, ರೆಸಾರ್ಟ್ ಚಟುವಟಿಕೆಗಳಲ್ಲಿ, ಪ್ರವಾಸಿ ಕಂಪನಿಗಳಲ್ಲಿ, ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳಲ್ಲಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು